ಡಾ. ಉಮಾಮಹೇಶ್ವರಿ. ಎನ್.
ನರನಾಡಿಗಳಲ್ಲಿ ನವಚೇತನ ತುಂಬುವ ಚಹಾದ ಕಥೆ ಎಂದರೆ ‘ಆಹ್, ಚಹಾ!’
ಕಮಿಲಿಯ ಸಿನೆನ್ಸಿಸ್ ಎಂಬ ಸಸ್ಯದ ಚಿಗುರೆಲೆಗಳೇ ಚಹಾದ ಮೂಲ ಪದಾರ್ಥ. ಭಾರತದ ಬೆಟ್ಟ ಪ್ರದೇಶಗಳಿಗೆ ಹೋದಾಗ ಎತ್ತ ನೋಡಿದರೂ ಕಾಣುವ ಹಸಿರು ಚಹಾತೋಟಗಳ ಸೌಂದರ್ಯ ಮನ ಸೆಳೆಯುತ್ತದೆ. ನಮ್ಮ ರಾಜ್ಯದ ಸಹ್ಯಾದ್ರಿಯಲ್ಲೂ ಚಹ
ತೋಟಗಳಿವೆ.
ಈಚೆಗೆ ಊಟಿಗೆ ಭೇಟಿ ಇತ್ತಾಗ ಚಹಾ ಕಾರ್ಖಾನೆಯ ಚಟುವಟಿಕೆ ನೋಡುವಲ್ಲಿ ಸಂತಸ ಕಂಡಿತು. ಹಸಿರೆಲೆಯೊಂದು ನಮಗೆ ಚೇತನ ನೀಡುವ ಪುಡಿಯಂತಾಗಿ ರೂಪುಗೊಳ್ಳುವುದೇ ಒಂದು ವಿಸ್ಮಯ. ಆಗ ತಾನೇ ಕಿತ್ತ ಚಹಾ ಗಿಡದ ಚಿಗುರೆ ಲೆಯು, ಚಹಾ ಪುಡಿ ಯಾಗುವ ಹಂತಗಳು ಸಂಕೀರ್ಣ ಹಾಗೂ ಕ್ಲಿಷ್ಟ.
ಎಲೆಗಳ ಕೀಳುವಿಕೆ: ಚಹಾತೋಟಗಳಲ್ಲಿ ಗಿಡದ ಚಿಗುರಿನ ಎರಡು ಅಥವಾ ಮೂರು ಎಲೆಗಳನ್ನು ಕೀಳಲಾಗುತ್ತದೆ. ಇದು ಮಹಿಳೆಯರ ಕೌಶಲ್ಯ. 5-8 ದಿನಗಳಿಗೊಮ್ಮೆ ಗಿಡ ಮತ್ತೆ ಚಿಗುರಿ ಎಲೆಕೀಳಲು ತಯಾರಾಗುತ್ತದೆ. ಎಲೆ ಗಳನ್ನು ತಾಜಾ ಇರುವಾಗಲೇ ಕಾರ್ಖಾನೆಗೆ ಸಾಗಿಸಲಾಗುತ್ತದೆ.
ಬಾಡಿಸುವುದು: ಕಾರ್ಖಾನೆಗೆ ಬಂದ ಚಿಗುರೆಲೆಯನ್ನು ಜಾಲರಿಗಳಿರುವ ಕಬ್ಬಿಣದ ಟ್ರೇಗಳಲ್ಲಿ ಹಾಕಿ, ಬಿಸಿ ಹಾಗೂ ತಣ್ಣಗಿನ ಗಾಳಿಯನ್ನು ನಿಗದಿತ ಪ್ರಮಾಣದಲ್ಲಿ ಈ ಎಲೆಗಳ ನಡುವೆ ಹೋಗುವಂತೆ ಹಾಯಿಸುತ್ತಾರೆ. ಇದು ಎಲೆಗಳ ಮೇಲಿರುವ ನೀರಿನ ಅಂಶವನ್ನು ಒಣಗಿಸುವುದಲ್ಲದೆ ಎಲೆಗಳೊಳಗಿನ ಚಹಾದ ಅಂಶ ಸಾಂದ್ರಗೊಳ್ಳಲು ಸಹಾಯವಾಗುತ್ತದೆ. ಹತ್ತರಿಂದ ಹದಿನಾಲ್ಕು ಗಂಟೆಗಳಲ್ಲಿ ಎಲೆಗಳು ಮಿದುವಾಗುತ್ತವೆ.
ಒತ್ತುವುದು ಅಥವಾ ರುಬ್ಬುವುದು: ಬಾಡಿದ ಎಲೆಗಳನ್ನು ಒತ್ತುವ ಯಂತ್ರದಲ್ಲಿ ಹಾಕಿ ಒತ್ತುತ್ತಾರೆ. ಹೀಗೆ ಒತ್ತುವಾಗ
ತಿರುಚಲ್ಪಡುವ ಎಲೆಗಳ ಜೀವಕೋಶಗಳು ಒಡೆದು ಒಳಗಿನ ದ್ರವ ಹೊರ ಬರುತ್ತದೆ. ಈ ಪ್ರಕ್ರಿಯೆಗೆ 20-30 ನಿಮಿಷಗಳು
ತಗಲುತ್ತವೆ. ಸ್ವಯಂಚಾಲಿತವಾಗಿ ಎಲೆಗಳು ಜಾಲಿಸಲ್ಪಡುತ್ತವೆ. ಅಪ್ಪಚ್ಚಿಯಾಗದೇ ಉಳಿದ ಎಲೆಗಳು ಮತ್ತೆ ಯಂತ್ರಕ್ಕೆ ತಳ್ಳಲ್ಪಡುತ್ತವೆ. ಜಜ್ಜಿದ ಎಲೆಗಳು ಮುಂದಿನ ಹಂತಕ್ಕೆ ಹೋಗುತ್ತವೆ.
ಹುಳಿ ಬರಿಸುವಿಕೆ: ರುಬ್ಬಲ್ಪಟ್ಟ ಎಲೆಗಳ ದ್ರವವು ಹುಳಿಬರುವಂತೆ ಮಾಡುವುದು ಚಹಾದ ಸ್ವಾದ ಸರಿಯಾಗಿ ಬರುವಂತೆ
ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲೆಗಳ ದ್ರವದಲ್ಲಿರುವ ಕಿಣ್ವಗಳು ವಾತಾವರಣದ ಆಮ್ಲಜನಕದೊಂದಿಗೆ ಬೆರೆತು ಸ್ವಾದ-ಘಮಗಳು ಸರಿಯಾದ ಹಂತಕ್ಕೆ ಬರುವಂತೆ ಮಾಡುತ್ತದೆ. ಹಸುರಾಗಿದ್ದ ಜಜ್ಜಿದ ಎಲೆಗಳು ಹುಳಿಬರಿಸುವ ಪ್ರಕ್ರಿಯೆಯ ನಂತರ ಕಂದು ಬಣ್ಣಕ್ಕೆ ತಿರುಗಿ ಹಿತವಾದ ಕಂಪನ್ನು ಸೂಸತೊಡಗುತ್ತದೆ. ಗಾಜಿನ ಅಥವಾ ಟೈಲ್ಗಳ ಮೇಲೆ ರುಬ್ಬಿದ ಎಲೆ ಗಳನ್ನು ಹುಳಿ ಬರಿಸಲು ಹಾಕುತ್ತಾರೆ.
ಒಣಗಿಸುವಿಕೆ: ಸುಮಾರು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ 20-25 ನಿಮಿಷಗಳ ಕಾಲ ಒಣಗಿಸಲಾಗುತ್ತದೆ. ಇದಕ್ಕಾಗಿ ಸ್ವಯಂಚಾಲಿತ ಯಂತ್ರಗಳಿವೆ. ಕಂದು ಬಣ್ಣವಿದ್ದ ಚಹಾಪುಡಿ ಒಣಗಿಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಜರಡಿ ಹಿಡಿಯುವುದು: ಒಣಗಿಸಿದ ಪುಡಿ ತಣ್ಣಗಾದ ನಂತರ ಯಂತ್ರಗಳ ಸಹಾಯದಿಂದ ಬೇರೆ ಬೇರೆ ಜಾಲರಿಗಳಲ್ಲಿ ಜರಡಿ
ಹಿಡಿಯಲಾಗುತ್ತದೆ. ಎಲೆಯ ಪುಡಿಯ ಗಾತ್ರ ಮತ್ತು ಆಕಾರದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ.
ಪ್ಯಾಕಿಂಗ್: ಚಹಾಪುಡಿ ಬೇಗನೇ ವಾತಾವರಣದ ನೀರಿನಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಅಲ್ಯೂಮಿನಿಯಂ ಫಾಯಿಲ್ನ ಒಳಪದರವಿರುವ ರಟ್ಟಿನ ಪೆಟ್ಟಿಗೆಗಳಲ್ಲಿ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಸೀಲ್ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತದೆ.
ಕಪ್ಪು, ಕಂದು, ಹಸಿರು, ಬಿಳಿ ಬಣ್ಣದ ಚಹಾಗಳು, ಚಹಾ ಡಸ್ಟ್, ಚಹಾ ಲೀ- ಹೀಗೆ ಹಲವಾರು ವಿಧದ ಚಹಾಗಳು ಮಾರುಕಟ್ಟೆ ಯಲ್ಲಿ ಸಿಗುತ್ತವೆ. ಇವೆಲ್ಲವೂ ಒಂದೇ ತರಹದ ಎಲೆಗಳಿಂದ ತಯಾರಾಗುತ್ತವೆ.
ಒಣಗಿಸುವಾಗ ಬಳಸುವ ಶಾಖ, ಒಣಗಿಸುವ ಸಮಯವನ್ನು ಅವಲಂಬಿಸಿ ಬೇರೆ ಬೇರೆ ತರಹದ ಚಹಾಪುಡಿಗಳು ತಯಾರಾಗುತ್ತವೆ. ಬೇರೆ ಬೇರೆ ಗಾತ್ರ ಮತ್ತು ಆಕಾರಗಳ ಚಹಾಪುಡಿಗಳ ರುಚಿಗಳೂ ವಿಭಿನ್ನವಾಗಿರುತ್ತವೆ. ಅಸ್ಸಾಂ ಮೊದಲಾದ ಕೆಲವು ತೋಟಗಳ ನೆಲದ ಗುಣ ಅವಲಂಬಿಸಿ, ವಿಶಿಷ್ಟ ರುಚಿಯ ಚಹಾ ಪುಡಿ ಸಹ ರೂಪುಗೊಳ್ಳುತ್ತದೆ. ದೇಹದಲ್ಲ ಚೇತನ ತುಂಬಿ, ಹೊಸ ಹೊಸ ಕೆಲಸಗಳಿಗೆ ಸ್ಫೂರ್ತಿ ತುಂಬುವ ಚಹಾದ ಕಥೆ ನಿಜಕ್ಕೂ ಕುತೂಹಲಕಾರಿ.