ರವಿ ಮಡೋಡಿ ಬೆಂಗಳೂರು
ಜನಸಾಮಾನ್ಯರಿಗೆ ಭಗವದ್ಗೀತೆಯ ತಿರುಳನ್ನು ತಿಳಿಹೇಳುವುದು ಒಂದು ಸವಾಲಿನ ಕೆಲಸ. ದಿನ ನಿತ್ಯದ ಘಟನೆಗಳನ್ನು ಉದಾಹರಣೆಯನ್ನಾಗಿ ನೀಡುತ್ತಾ,
ಭಗವದ್ಗೀತೆಯ ತರಗತಿಗಳನ್ನು ನಡೆಸುವ ಶಿವಸ್ವಾಮಿಯವರ ಅಭಿಯಾನ ಅನನ್ಯ ಎನಿಸಿದೆ.
ಜಗತ್ತು ಹೆಚ್ಚು ಬೆಳೆದಂತೆ ಬದುಕಿನ ತಲ್ಲಣಗಳು, ಯಾಂತ್ರಿಕತೆಗಳು ತೀವ್ರವಾಗುತ್ತವೆ. ಇಚ್ಛಿಸಿದಂತೆ ಬದುಕಬೇಕೆಂಬ ಮನಸ್ಥಿತಿ ಹಾಗೂ ಎಲ್ಲವನ್ನು ಪಡೆಯ ಬೇಕೆಂಬ ಅಸಹಜವಾದ ವ್ಯಾಮೋಹಗಳು ಬದುಕಿನ ನೆಮ್ಮದಿಯನ್ನು ಹಾಳುಮಾಡುತ್ತವೆ. ಇವುಗಳು ಜೀವನದ ಅರ್ಥವನ್ನು ಕುಸಿಯುವಂತೆ ಮಾಡಿ ತಾನೇ ಗೆಲ್ಲಬೇಕು ಎನ್ನುವ ಮನೋದಾಷ್ಟ್ಯ ಸದ್ದಿಲ್ಲದೇ ಆವರಿಸಿಕೊಂಡಿರುತ್ತದೆ.
ವಿಕ್ಷಿಪ್ತವಾದ ಇಂತಹ ಮನೋಭಾವಗಳು ಬದುಕನ್ನು ಅಸ್ಥಿರವಾಗಿಸುವುದಲ್ಲದೇ ಭಯ, ಅಶಾಂತಿ ಯನ್ನು ಮೂಡಿಸುತ್ತವೆ. ಇಂತಹ ಮನೋವಿಕಾರವನ್ನು ಮೆಟ್ಟಿ ನಿಂತು ಸೌಶೀಲ್ಯವಾದ ಬದುಕನ್ನು ಉದಾತ್ತಗೊಳಿಸುವುದಕ್ಕೆ ಭಗವದ್ಗೀತೆ ಪೂರಕ. ಮನೋವಿಕಾಸನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಸಾಮಾನ್ಯರ ಜೀವನದ ಭಾಗವಾಗಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಇಬ್ಬ ನಿವೃತ್ತ ಅಧ್ಯಾಪಕರು ಹಲವು ವರುಷಗಳಿಂದ ಭಗವದ್ಗೀತೆ ಅಭಿಯಾನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಕ್ಷಾಂತರ ಮಂದಿಗೆ ಅದರ ಸಾರವನ್ನು ಉಣಬಡಿಸುತ್ತಿದ್ದಾರೆ.
ಅವರೇ ಶಿವಮೊಗ್ಗದ ಶಿವಸ್ವಾಮಿ ಕೆ.ವಿ.ಶಿವಸ್ವಾಮಿಯವರು ವಿದ್ಯಾರ್ಥಿದೆಸೆಯಲ್ಲಿರುವಾಗ ಶಾಲೆಯಲ್ಲಿ ಭಗವದ್ಗೀತೆಯನ್ನು ಅಭ್ಯಾಸಿಸಿದ್ದರು. ಮುಂದೆಯೂ ತಪ್ಪದೇ ಭಗವದ್ಗೀತೆಯ ನಿತ್ಯ ಪಾರಾಯಣವನ್ನು ಮಾಡುತ್ತಿದ್ದರು. ನಿವೃತ್ತ ಹೊಂದಿದ ನಂತರ, ಬೆಂಗಳೂರು ಸಮೀಪದ ಹೊಸೂರಿನ ಅನುಸೊನಿ ಆಶ್ರಮದ ವಿರಾಜೇಶ್ವರ ಸ್ವಾಮಿಜಿಯವರು ಗೀತಾ ಜಯಂತಿಯ ಅಂಗವಾಗಿ ಪ್ರಯುಕ್ತ ಶಿವಸ್ವಾಮಿಯರಿಗೆ ಭಗವದ್ಗೀತೆ ಉಪನ್ಯಾಸವನ್ನು ಮಾಡಲು ಅವಕಾಶ ದೊರಕಿತು. ಇವರ ಉಪನ್ಯಾಸವನ್ನು ಕೇಳಿದ ಸ್ವಾಮೀಜಿಯವರು ಭಗವದ್ಗೀತೆಯ ಅಭಿಯಾನದ ತರಗತಿಯನ್ನು ಆರಂಭಿಸುವಂತೆ ಸಲಹೆಯನ್ನು ನೀಡಿದರು. ಗುರುಗಳ ಸಲಹೆಯನ್ನು ಸ್ವೀಕರಿಸಿ ಶಿವಮೊಗ್ಗದ ತಮ್ಮ ಮನೆಯಲ್ಲಿಯೇ ತರಗತಿಗಳನ್ನು ಪ್ರಾರಂಭಿಸಿದರು.
ಒಂದರ ನಂತರ ಮತ್ತೊಂದು ತರಗತಿಯಂತೆ ಬೆಳೆಯುತ್ತ ಸಾಗಿದವು. ಕೇವಲ ಭಾರತ ಮಾತ್ರವಲ್ಲದೇ ಮುಂದೆ ಅಮೆರಿಕದ ಕೆಲವು ನಗರಗಳಲ್ಲಿಯೂ ಅವರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಭಗವದ್ಗೀತೆ ತರಗತಿಗಳನ್ನು ನಡೆಸಿದ್ದಾರೆ. ಸಾಮಾನ್ಯವಾಗಿ ಅವರ ತರಗತಿಗಳು ಮೂರು ತಿಂಗಳುಗಳ ಕಾಲ ನಡೆಯು ತ್ತದೆ. ಅವರ ತರಗತಿಯ ವೈಶಿಷ್ಟ್ಯವೆಂದರೆ ನಿಜ ಬದುಕಿನ ಉದಾಹರಣೆಗಳನ್ನು ನೀಡುತ್ತ ಇಡೀ ತರಗತಿಗಳನ್ನು ಆಪ್ತವಾಗಿ ನಡೆಸಿಕೊಡುತ್ತಾರೆ. ಎಷ್ಟೋ ಜನರು ಏನಿದು ಎಂದು ನೋಡುವುದಕ್ಕೆಂದು ಬಂದವರು ಇಡೀ ತರಗತಿಯನ್ನು ಪೂರೈಸಿದವರು ಇದ್ದಾರೆ. ಜೀವನವೇ ಸಾಕು ಎಂದು ಜಿಗುಪ್ಸೆಗೊಂಡವರು, ಆಕಸ್ಮಿಕ ವಾಗಿ ಇವರ ಉಪನ್ಯಾಸವನ್ನು ಕೇಳಿ ಮತ್ತೆ ಬದುಕನ್ನು ಒಪ್ಪಿಕೊಂಡು ಜೀವನ ಸಾಗಿಸಿರುವ ಉದಾಹರಣೆಯಿದೆ.
ಧರ್ಮದ ಪರಿಧಿಯಾಚೆ
ಸಾಮಾನ್ಯ ತಿಳುವಳಿಕೆಯಲ್ಲಿ ಭಗವದ್ಗೀತೆ ಎಂಬುದು ಒಂದು ಧರ್ಮಕ್ಕೆ, ಒಂದು ಮತಕ್ಕೆ ಸೀಮಿತವಾದುದು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ಶಿವಸ್ವಾಮಿಗಳ ಪ್ರಕಾರ ಭಗವದ್ಗೀತೆಯ ತತ್ವಗಳು ಧರ್ಮ, ಜಾತಿಯನ್ನು ಮೀರಿದ ಸಂಗತಿಯಾಗಿದೆ. ವ್ಯಕ್ತಿತ್ವ ವಿಕಾಸನವನ್ನು ಬಯಸುವವರು ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಯಶಸ್ಸು ಖಂಡಿತ. ಇಂದಿನ ಕಾಲಘಟ್ಟದಲ್ಲಿ ಕರೋನದಂತ ತಲ್ಲಣಗಳು ಬದುಕನ್ನು ಅತಂತ್ರ ಸ್ಥಿತಿಗೆ ನೂಕಿರುವುದು ಹೌದು. ಬದುಕೇ ಕಳೆಗುಂದಿರುವ ಈ ಸಮಯದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಆತ್ಮಸ್ಥೆರ್ಯವನ್ನು, ಆತ್ಮವಿಶ್ವಾಸವನ್ನು ಇದು ಮೂಡಿಸುತ್ತದೆ ಎನ್ನುವುದು ಉಪನ್ಯಾಸದಲ್ಲಿ ಪಾಲ್ಗೋಂಡವರ ಅಭಿಪ್ರಾಯವಾಗಿದೆ.
ಯುಟ್ಯೂಬ್ನಲ್ಲಿ ಈಚೆಗೆ ಯೂಟ್ಯೂಬ್ ನಲ್ಲಿ ಉಪನ್ಯಾಸಗಳನ್ನು ಬಿತ್ತರಿಸಿದ ಮೇಲೆ ಶಿವಸ್ವಾಮಿಯವರ ಭಗವದ್ಗೀತೆ ಅಭಿಯಾನವು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದೆ. ಹದಿನೆಂಟು ಅಧ್ಯಾಯಗಳ ಸುಮಾರು 19.5 ಗಂಟೆಗಳ ಉಪನ್ಯಾಸವನ್ನು ಸುಮಾರು 7 ಲಕ್ಷ ಮಂದಿ ಇಲ್ಲಿಯವರೆಗೆ ವೀಕ್ಷಿಸಿದ್ದಾರೆ. ತಂತ್ರಜ್ಞಾನದ ಹೊಸ ಸಾಧ್ಯತೆಗಳಿಂದ ಇಂತಹ ಜೀವನ ಧರ್ಮದ ವಿಷಯಗಳು ಜನರಿಗೆ ಹತ್ತಿರವಾಗುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ಕರೋನ ಕಾಲಘಟ್ಟದ ಈ ಅವಧಿಯಲ್ಲಿ ಸುಮಾರು 10 ತರಗತಿಗಳನ್ನು(3 ತಿಂಗಳ ಅವಧಿ) ಜೂಮ್ ಮೂಲಕ ನಡೆಸಿದ್ದಾರೆ.
ಪ್ರತಿ ತರಗತಿಗಳಲ್ಲಿ 100ಕ್ಕೂ ಅಧಿಕ ಮಂದಿ ಇರುತ್ತಾರೆ. ಹಲವು ದೇಶಗಳ ಭಗವದ್ಗೀತೆ ಆಸಕ್ತರು ಇದರಲ್ಲಿ ಪಾಲ್ಗೋಂಡಿದ್ದಾರೆ. ಶಿವಸ್ವಾಮಿಯವರು ಸೊಂದ ಸ್ವರ್ಣವಲ್ಲಿ ಸಂಸ್ಥಾನದ ಭಗವದ್ಗೀತೆ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರ ಜತೆ, ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆ ಬಗ್ಗೆ ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಶಿವಸ್ವಾಮಿಯವರ ಮುಂದಿನ ಯೋಜನೆಯಾಗಿ ಗಾಂಧಿ ಜಯಂತಿಯಿಂದ (ಅಕ್ಟೋಬರ್ 2) ಗೀತಾ ಜಯಂತಿ (ಡಿಸೆಂಬರ್ 14) ವರೆಗೆ, 70 ದಿನಗಳ ಕಾಲದವರೆಗೆ ದಿನಕ್ಕೆ ಹತ್ತು ಶ್ಲೋಕಗಳಂತೆ ಭಗವದ್ಗೀತೆ ಪಠನ ಅಭಿಯಾನವನ್ನು ಮಾಡಲು ಉದ್ದೇಶಿಸಿದ್ದಾರೆ.
ಅಂತರ್ಜಾಲದ ಮೂಲಕ ನಡೆಯುವ ಈ ತರಬೇತಿಯು ಎಲ್ಲರ ಆಯ್ಕೆಗೆ ಲಭ್ಯ. ಯಾವುದೇ ಅಪೇಕ್ಷೆಯಿಲ್ಲದೇ ಜನ ಸಾಮಾನ್ಯರಿಗೆ ಭಗವದ್ಗೀತೆಯ ಸಾರವನ್ನು ತಲುಪಿಸುತ್ತಿರುವ ಶಿವಸ್ವಾಮಿಯವರ ಕಾಯಕ ಶ್ಲಾಘನೀಯ.