Sunday, 15th December 2024

ಕೊಡುಗೆ ಅರ್ಥಪೂರ್ಣವಾಗಿರಲಿ

ಡಾ.ಮಾನಾಸ ಕೀಳಂಬಿ

ಇನ್ನೇನು ನವರಾತ್ರಿ ಆರಂಭವಾಗುತ್ತಿದೆ. ಹಬ್ಬಗಳೆಂದರೆ ಹೆಣ್ಣುಮಕ್ಕಳಿಗೆ ಸಂಭ್ರಮ. ಈ ಸಮಯದಲ್ಲಿ ಶಾಪಿಂಗ್ ಜೋರು. ಸದ್ಯ ವೈರಸ್ ಸೋಂಕಿನ ಸಾಧ್ಯತೆಯಿಂದಾಗಿ ಮಾರುಕಟ್ಟೆಗೆ ಹೋಗಲು ಭಯವಿದೆ. ಆದರೆ, ಮಿತಿಯೇ ಇಲ್ಲದ ಆನ್‌ಲೈನ್ ಮಾರುಕಟ್ಟೆ, ಮನೆಯೊಳಗೆ ಲಗ್ಗೆೆಯಿಟ್ಟಿದೆ. ಮೊಬೈಲಿನೊಳಗೇ ಅಂಗಡಿ ತೆರೆದು, ರಿಯಾಯಿತಿಗಳನ್ನು ಘೋಷಿಸಿ, ಅಗತ್ಯವಿರುವ, ಇಲ್ಲದಿರುವ ವಸ್ತುಗಳನ್ನೆಲ್ಲಾ ಖರೀದಿಸುವಂತೆ ಆಮಿಷ ಒಡ್ಡುತ್ತಿದೆ.

ಇತ್ತೀಚಿನ ಒಲವಿನಂತೆ ಅರಿಸಿನ- ಕುಂಕುಮಗಳ ಜೊತೆಗೆ ನೀಡುವ ಗಿಫ್‌ಟ್‌ ಐಟಂಗಳು ಕಣ್ಣು ಕುಕ್ಕುತ್ತಾ, ಹೆಂಗೆಳೆಯರ ಶಾಪಿಂಗಿಗೆ ಬಣ್ಣತುಂಬುತ್ತಿವೆ. ಪರ್ಸುಗಳು, ಬ್ಯಾಗುಗಳು, ವಿವಿಧ ಆಕಾರದ ಡಬ್ಬಿಗಳು, ಅಲಂಕಾರದ ವಸ್ತುಗಳು, ಕಲಾತ್ಮಕ ವಸ್ತುಗಳು, ಜ್ಯುಯಲರಿ ಬಾಕ್ಸುಗಳು, ಮೇಕಪ್ ಕಿಟ್‌ಗಳು, ಕೃತಕ ಆಭರಣಗಳು, ದೇವರ ಫೋಟೋಗಳು, ಮೂರ್ತಿಗಳು ಹೀಗೆ ಪ್ರತಿಬಾರಿಯೂ ಹೊಸ ನಮೂನೆಯ ಗಿಫ್ಟ್‌ ಗಳನ್ನು ಕೊಡುವುದು, ಅಲಿಖಿತ ನಿಯಮವಾಗಿ ಮಾರ್ಪಟ್ಟಿದೆ. ಒಬ್ಬರು ಕೊಡುತ್ತಾರೆಂದು, ಕೆಲವರು ಮುಲಾಜಿಗೆ ಬಿದ್ದು, ಸ್ಪರ್ಧೆಗೆ ಇಳಿದು, ಉಳಿದವರು ಅನಿವಾರ್ಯವಾಗಿ ಈ ವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಭಾರತೀಯ ಸಂಪ್ರದಾಯದಲ್ಲಿ ಕೊಡುಗೆಗಳನ್ನು ಕೊಡುವುದು, ಹೊಸದೂ ಅಲ್ಲ, ನಿಷಿದ್ಧವೂ ಅಲ್ಲ. ಜೀವನಾವಶ್ಯಕ ವಸ್ತು ಗಳನ್ನು ದಾನರೂಪವಾಗಿ ಕೊಡುವ ಕ್ರಮ, ಅನಾದಿಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೆ, ಇತ್ತೀಚೆಗೆ ದಾನರೂಪವಾಗಿ ಕೊಡುವ ವಸ್ತುಗಳು, ಹೆಚ್ಚಾನುಹೆಚ್ಚು ಅನುಪಯುಕ್ತ ವಸ್ತುಗಳೇ ಆಗುತ್ತಿರುವುದನ್ನು ಗಮನಿಸಬಹುದು. ಹೀಗೇಕಾಗಿದೆ? ಉತ್ತರ
ಸರಳವಿದೆ. ಅವರವರ ಅಭಿರುಚಿಗೆ ತಕ್ಕಂಥ ವಸ್ತುಗಳನ್ನು ಅವರೇ ಕೊಂಡುಕೊಳ್ಳುವುದರಿಂದ, ಇನ್ನೊಬ್ಬರು ಕೊಡುವ ವಸ್ತು ಗಳು ಹೆಚ್ಚಿನವರಿಗೆ ಮೆಚ್ಚಿಗೆಯಾಗುವುದಿಲ್ಲ.

ಮನೆಗೆ ಬೇಕಾದ ವಸ್ತುಗಳೂ ’ಸೆಟ್’ ರೂಪದಲ್ಲಿ ಮನೆತುಂಬುವುದರಿಂದ, ಬಿಡಿಬಿಡಿಯಾಗಿ ದೊರೆಯುವ ವಸ್ತುಗಳು ಉಪಯೋ ಗಕ್ಕೆ ಬರುವುದು ಅಪರೂಪ. ಒಂದು ಕಾಲದಲ್ಲಿ ಅಮೂಲ್ಯ ಮತ್ತು ಪವಿತ್ರ ಕೊಡುಗೆಯಾದ ರವಿಕೆ ಬಟ್ಟೆ, ಇಂದು ಒಬ್ಬರಿಂದೊ ಬ್ಬರಿಗೆ ದಾಟಿಸುವ, ಉಪಯೋಗಕ್ಕೆ ಬರದ ವಸ್ತುವಾಗಿರುವುದು ನಂಬಲೇಬೇಕಾದ ಸತ್ಯ. ರವಕೆ ಪೀಸ್ ಉಡುಗೊರೆ ಬಂದರೆ, ಅದನ್ನು ಮನೆಯಲ್ಲೇ ಇಟ್ಟುಕೊಂಡು ಇನ್ನೊಬ್ಬರಿಗೆ ಅದನ್ನೇ ಉಡುಗೊರೆಯಾಗಿ ನೀಡುವ ಪದ್ಧತಿಯು ಈಚಿನ ವರ್ಷಗಳಲ್ಲಿ ನಮ್ಮಲ್ಲಿ ಚಾಲ್ತಿಗೆ ಬಂದಿರುವ ವಿದ್ಯಮಾನವನ್ನು ಇನ್ನೇನೆಂದು ವಿವರಿಸಲು ಸಾಧ್ಯ. ಅಂತೆಯೇ, ನಾವು ಗಿಫ್ಟುಗಳ ಹೆಸರಲ್ಲಿ ನೀಡುತ್ತಿರುವ ವಸ್ತುಗಳೂ ಯಾವ ಉಪಯೋಗಕ್ಕೆ ಬರದ, ಮೂಟೆಕಟ್ಟಿ ಮೂಲೆಯಲ್ಲಿಡುವ ’ವೇಸ್ಟ್’ಗಳಾಗುತ್ತಿವೆ. ಉಡುಗೊರೆ ಉಪಯೋಗಕ್ಕೆ ಬರಲಿ ಹಾಗಾದರೆ, ನಾವೇನನ್ನು ಕೊಡಬಹುದು? ನಾವು ಕೊಡುವ ವಸ್ತುಗಳು ಸದುಪಯೋಗವಾಗ ಬೇಕಾದರೆ, ಅದು ಜನರಿಗೆ ಸಹಾಯ ಮಾಡುವಂತಿರಬೇಕು.

ನಮ್ಮ ಸಂಪ್ರದಾಯವನ್ನೂ ಒಳಗೊಂಡು, ತೆಗೆದುಕೊಳ್ಳುವವರಿಗೂ ಉಪಯೋಗವಾಗುವಂಥ ವಸ್ತುಗಳೆಂದರೆ, ಆಹಾರ
ಪದಾರ್ಥಗಳು ಮತ್ತು ಹಣ ಮಾತ್ರ. ಇದನ್ನೇ ’ದಾನ-ದಕ್ಷಿಣೆ’ ಎನ್ನಬಹುದೇನೋ. ಅರಿಸಿನ ಕುಂಕುಮಗಳ ಜೊತೆಗೆ, ಅಕ್ಕಿ, ತೆಂಗಿನ ಕಾಯಿ, ಬೇಳೆಕಾಳುಗಳು, ಹಣ್ಣುಗಳೇ ಮುಂತಾದ ಆಹಾರ ಪದಾರ್ಥಗಳು ಮತ್ತು ಕೈಲಾದಷ್ಟು ಹಣ ನೀಡಿದರೆ, ಅವರ ಅಗತ್ಯದ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ.

ದೀರ್ಘ ಕಾಲ ಬಾಳಿಕೆ ಬರುವ ಆಹಾರ ಪದಾರ್ಥಗಳನ್ನು ಉಡುಗೊರೆಯ ರೀತಿಯಲ್ಲಿ ಪ್ರೀತಿಯಿಂದ ನೀಡಿದರೆ, ಅದನ್ನು ಪಡೆದ ಮನೆಯವರು ಖಂಡಿತವಾಗಿಯೂ ಅದನ್ನು ಉಪಯೋಗಿಸುತ್ತಾರೆ. ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಅನುಕೂಲ ಎನಿಸಿರುವ ಸಿರಿಧಾನ್ಯ, ಸಿ ವಿಟಮಿನ್ ಹೊಂದಿರುವ ಹಣ್ಣುಗಳು, ಡ್ರೈಫ್ರುಟ್‌ಗಳನ್ನು ಸಹ ಕೊಡುಗೆಯಾಗಿ ನೀಡಬಹುದು. ಮನೆಯವರಿಗೂ, ಮಕ್ಕಳಿಗೂ ಉಪಯೋಗವಾಗುವ ಇವು, ಅದನ್ನು ಸೇವಿಸಿದವರ ಆರೋಗ್ಯವನ್ನು ಉತ್ತಮ ಪಡಿಸುತ್ತವೆ!

ಉಪಯೋಗವಿಲ್ಲದ ವಸ್ತುಗಳಿಂದಾಗುವ ಪ್ರಕೃತಿಯ ನಾಶವೂ ಉಳಿಯುತ್ತದೆ. ಕೊಟ್ಟ ದಾನವು ವ್ಯರ್ಥವಾದರೆ ಫಲವೇನು? ಯೋಚಿಸಬಹುದಲ್ಲವೇ?