Sunday, 15th December 2024

ಮದುವೆಗೆ ಹೊರಟ್ರಾ ?

ಶ್ರೀರಂಜಿನಿ ಅಡಿಗ

ಈಗ ಮದುವೆಗಳು ಒಂದೊಂದೇ ನೆರವೇರಲು ಆರಂಭವಾಗಿವೆ. ಬಹಳ ದಿನಗಳಿಂದ ಕಪಾಟಿನಲ್ಲಿಟ್ಟಿದ್ದ ಹೊಸ ರೇಷ್ಮೆ ಸೀರೆ ಉಡುವ ಅದೃಷ್ಟ ಕೂಡಿ ಬಂದಿದೆ. ಆ ಸೀರೆಗೆ ಸರಿಹೊಂದುವ ಮ್ಯಾಚಿಂಗ್ ಮಾಸ್ಕ್ ಧರಿಸುವುದೂ ಇಂದಿನ ಮದುವೆ ಸಂಭ್ರಮ ದಲ್ಲಿ ಸೇರಿದೆ! ಏಕೆಂದರೆ, ಮದುವೆಗೆ ಬಂದವರೆಲ್ಲಾ ಹೊಸ ಸೀರೆಯ ಡಿಸೈನ್ ನೋಡುವ ಜತೆಗೇ, ಮ್ಯಾಚಿಂಗ್ ಮಾಸ್ಕ್ ಅ‌‌ನ್ನೂ ನೋಡ್ತಾರೆ!

ಈಗ ನೋಡಿದ್ರೆ, ಲಾಕ್ ಡೌನ್‌ನಲ್ಲೇ ಮದುವೆ ಮಾಡಿ ಮುಗಿಸಿದೋರು ನಿಜಕ್ಕೂ ಗೆದ್ದರು ಅನ್ನಿಸೋಲ್ವಾ? ನೂರಾರು ಕಾನೂನು ಗಳ ಮಧ್ಯೆ, ಯಾರ್‌ಯಾರ್ದ್ದೋ ಕೈಕಾಲು ಹಿಡ್ದು, ಪರ್ಮಿಶನ್ ತಗೊಂಡು ಹತ್ತೋ ಇಪ್ಪತ್ತೋ ಜನರನ್ನು ಮಾತ್ರ ಸೇರಿಸಿ, ಮದುವೆ ಮುಗಿಸಿದ್ರು ಅಂದ್ರೆ ಸುಮ್ನೇನೇ? ಜನ ಕಮ್ಮಿಯಾಗಿದ್ದರಿಂದ ಎಷ್ಟೊಂದು ದುಡ್ಡು ಉಳಿತಾಯ ಆಯ್ತು.

‘ನಮ್ಮನ್ಯಾರನ್ನೂ ಮದುವೆಗೆ ಕರೀಲೀ ಇಲ್ಲ’ ಅನ್ನೋ ದೂರನ್ನಂತೂ ಯಾರೂ ಕೂಡಾ ಹೇಳೋ ಹಾಗಿಲ್ಲ. ‘ನಿಮ್ಮ ಆತ್ಮೀಯ ಹತ್ತು ಜನರ ಒಳಗೆ ನಾವಿಲ್ಲ’ ಎಂಬ ವ್ಯಾಟ್ಸಾಪ್ ಜೋಕು ಮದುವೆ ಮಾಡುವವರನ್ನು ಆಡ್ಕೊಂಡು, ಗೋಳು ಹೊಯ್ಕೊಂಡು ಪಾಪ ಉಭಯ ಸಂಕಟಕ್ಕೆ ತಳ್ಳಿದ್ರೂ, ಹೇಳೋರು ಹೇಳ್ಕೊಳ್ಳಿ ಅಂತ ಮದ್ವೆ ಮುಗಿಸಿಯೇ ಬಿಟ್ಟಿದ್ದು ಈಗ ಇತಿಹಾಸ.

ಆಗ ನಿಂತ ಅದ್ಧೂರಿ ಮದುವೆಗಳು ಈಗ ನಿಧಾನವಾಗಿ ಮತ್ತೊಮ್ಮೆ ನಡೆಯಲು ಆರಂಭಿಸಿವೆ. ಮದುವೆ ಛತ್ರಗಳು ನಿಧಾನಕ್ಕೆ ತೋರಣ ಕಟ್ಟಿಕೊಂಡು ಝಗ ಮಗಿಸಲಾರಂಭಿಸಿವೆ. ‘ನಿಮ್ಮ ಹೆಸರು ನಮ್ಮ ಹೃದಯದಲ್ಲಿದೆ’ ಎಂದು ಮುದ್ರಣಗೊಂಡಿರುವ ವಿಳಾಸ ಹೊಂದಿರುವ ಒಂದೊಂದು ಕರೆಯೋಲೆಗಳು ಬರಲಾರಂಭಿಸಿವೆ. ಈ ಕೋವಿಡ್ ಕಾಲದಲ್ಲೂ ನಮ್ಮನ್ನ ನೆನಪಿಸಿಕೊಂಡು ಕರೆದರಲ್ಲ ಎಂದುಕೊಂಡು ಹೋಗೋಕೆ ಆಸೆ ಏನೋ ಇದೆ. ಕಳೆದ ಯುಗಾದಿಗೆಂದು ಡಿಸ್ಕೌಂಟ್ ಸೇಲ್‌ನಲ್ಲಿ ಕೊಂಡ ಸೀರೆ ಇನ್ನೂ ಮಡಿಕೆ ಕೂಡಾ ಬಿಚ್ಚಿಕೊಳ್ಳದೆ ಹಾಗೇ ಬೀರುವಿನಲ್ಲಿ ನಾಫ್ತಲೀನ್ ಗುಳಿಗೆಯನ್ನು ಮೂಸಿಕೊಂಡೇ ಇದೆ.

ಎಲ್ಲ ಹಬ್ಬಗಳೂ ಮುಗಿದು ಹೊಸ ವರ್ಷ ಹತ್ತಿರ ಬರ್ತಾ ಇದ್ದರೂ ಆ ಸೀರೆಯನ್ನು ತೊಡುವ ಭಾಗ್ಯ ಬಂದಿಲ್ಲ. ಆಗ ನಡೆಯ ಬೇಕಿದ್ದ ಮದುವೆಗೆ ಸಂಬಂಧಿಕರು ಕೊಟ್ಟ ಸೀರೆಯನ್ನು, ಕೊಟ್ಟಾಗ ನೋಡಿದ್ದು ಬಿಟ್ಟರೆ ಮತ್ತೆ ನೋಡೋಕೆ ಹೋಗ್ಲೇ ಇಲ್ಲ. (ಆ ಮದುವೆ ಲಾಕ್ ಡೌನ್‌ನಲ್ಲಿಯೇ ಮುಗಿದು ಹೋಗಿದ್ದರಿಂದ, ಸೀಮಂತಕ್ಕೆ ಕರೆದರೆ ಉಡೋ ಭಾಗ್ಯ ಬರಬಹುದೇನೋ ಎಂದು ನನ್ನವ ತುಂಟತನದಿಂದ ಹೇಳುತ್ತಿದ್ದಾನೆ!) ಹೀಗಾಗಿ ಏಳೆಂಟು ತಿಂಗಳಿಂದ ಸಿಗದ ಅವಕಾಶ, ಈಗ ಸಿಕ್ಕಿದ್ದರಿಂದ, ಹೊಸಾ ಸೀರೆ ಉಟ್ಕೊಳ್ಳೋ ಖುಷಿಗಾದ್ರೂ ಮದುವೆಗೆ ಹೊರಡಬೇಕಷ್ಟೇ!

ಹೊಸ ಸೀರೆ ಉಡುವ ಅದೃಷ್ಟ
ಅಂತೂ, ಆ ಹೊಸ ಸೀರೆ ಉಡಲು ಅದೃಷ್ಟ ಕೂಡಿ ಬಂತು. ತುಂಬಾ ದಿನಗಳ ಮೇಲೆ ಸೀರೆ ಉಟ್ಕೊಂಡು, ಅಲಂಕಾರ ಮಾಡಿ ಕೊಂಡ ಖುಷೀಲಿ ಎರಡೆರಡು ಸಲಿ ಕನ್ನಡಿಯಲ್ಲಿ ಮುಖ ನೋಡಿಕೊಂಡು ಹೊರಡುವಾಗ, ‘ಮುಖಗವಸು ಮರೆಯದೇ ಹಾಕ್ಕೊಂಡು ಬನ್ನಿ’ ಎಂಬ ಒಕ್ಕಣಿಕೆ ಇನ್ವಿಟೇಶನ್ನಿನ ಕೊನೇಲಿ ಪ್ರಿಂಟಾಗಿದ್ದು ನೆನಪಾಗುತ್ತದೆ. ಮ್ಯಾಚಿಂಗ್ ಮಾಸ್ಕ್‌‌‌ಗಾಗಿ ಮತ್ತೊಮ್ಮೆ ತಲೆ ಕೆಡಿಸಿಕೊಳ್ಳುವಷ್ಟರಲ್ಲಿ ‘ಆಯ್ತೇನೇ ಆಯ್ತೇನೇ’ ಎಂದು ಅರ್ಧ ಗಂಟೆಯಿಂದ
ಕಾಯುತ್ತಿದ್ದ ಗಂಡನ ದನಿ ಕೇಳುತ್ತದೆ. ಇದ್ದುದರಲ್ಲಿ ಸರಿಯಾದ ಮ್ಯಾಚಿಂಗ್ ಇದೇ ಎಂದು ಒಂದು ಮಾಸ್ಕ್‌‌ನ್ನು ಕಟ್ಟಿಕೊಂಡರೆ ‘ಎಲ್ಲಾ ಬಣ್ಣ ಮಸಿ ನುಂಗ್ತು’ ಅನ್ನೋ ಹಾಗೆ ಕೆನ್ನೆಯ ಮೇಕಪ್ಪು, ತುಟಿಯ ಲಿಪ್ ಸ್ಟಿಕ್ಕು ಎಲ್ಲವೂ ಮಾಸ್ಕೊಳಗೆ!

ಮಹಿಳೆಯರ ಕಣ್ಣು ಮಾಸ್ಕ್‌ ಮೇಲೆ!
ಮಾಸ್ಕಿನ ಕತೆ ಇಷ್ಟಕ್ಕೇ ಮುಗಿಯುವುದಿಲ್ಲ. ಮದುವೆ ಮನೇಲಿ ಎಷ್ಟು ಚಂದದ ಸೀರೆ ಉಟ್ಕೊಂಡಿದ್ದರೂ ಎಲ್ಲರ ಕಣ್ಣೂ ಇಪ್ಪತ್ತು
ರೂಪಾಯಿಯ ಮಾಸ್ಕ್‌‌ನ ಕಂಪೆನಿ, ಬಣ್ಣ, ಡಿಸೈನಿನ ಮೇಲೆ ಇರುತ್ತೆ ಹೊರತು ಆಸೆ ಪಟ್ಟು ಉಟ್ಟ ಹತ್ತು ಸಾವಿರ ಬೆಲೆಯ
ರೇಷಿಮೆ ಸೀರೆ ಮೇಲೆ ಕಣ್ಣು ಹೋಗೋದೇ ಇಲ್ಲ.

ಮದುಮಗಳ ಕತೇನೂ ಅಷ್ಟೇ! ಅವಳು ಹೇರಿಕೊಂಡ ಚಿನ್ನ, ಮಾಡಿಕೊಂಡ ಮೇಕಪ್ಪಿಕ್ಕಿಂತ ಅವಳ ಮಾಸ್ಕನ್ನು ಯಾವ ಡಿಸೈನರ್ ಹೇಗೆ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ. ಮದುವೆಗೆ ಬಂದವರು ಸಂಬಂಧಿಕರೇ ಆಗಿದ್ದರೂ ಎಲ್ಲರೂ
ಕೋರೋನಾದ ಪ್ರತಿನಿಧಿಗಳಂತೆಯೆ ಕಂಡು, ಸೋಷಿಯಲ್ ಡಿಸ್ಟೆೆನ್ಸಿಂಗ್ ಅಂತ ಅವರ ಹತ್ತಿರ ಅಂತರ ಕಾಯೋ ಹಾಗೂ
ಇಲ್ಲ, ಎಷ್ಟೋ ದಿನಗಳ ಮೇಲೆ ಸಿಕ್ಕಿದ್ದು ಎಂದು ಕೈಕುಲುಕಿ, ಅಪ್ಪಿಕೊಳ್ಳೋ ಹಾಗೂ ಇಲ್ಲ.

ಊಟ ಮುಗಿಸಿ ಮನೆ ಸೇರಿದ ಮೇಲೆ ಹೊಸ ಸೀರೆ ಮೇಲೆ ಯಾರು ಆಕ್ಷೀ ಮಾಡಿದ್ದರೋ, ಒರಗಿ ನಿಂತ ಗೋಡೆಯ ಮೇಲೆ ಯಾರ ಎಂಜಲು ಬಿದ್ದಿದೆಯೋ ಎಂಬ ಭಯ ಹುಟ್ಟಿ, ‘ಕರೋನಾ ವೈರಸ್ಸೇ, ಏನು ನಿನ್ನ ಹನಿಗಳ ಲೀಲೆ’ ಎಂದು ಗೋಳಾಡುವಂತಾಗು ತ್ತದೆ. ಕೊನೆಗೆ ಹೊಚ್ಚ ಹೊಸ ಸೀರೆಯನ್ನು ಉಟ್ಟ ಒಂದು ಘಳಿಗೆಗಾಗಿ ಒಗೆಯೋ ಕರ್ಮ ಬಂತಲ್ಲ ಎನ್ನುವಂತಾಗಿ ಈ ಚಂದಕ್ಕೆ ಮದುವೆನೂ ಬೇಡ, ಸೀರೆ ಒಗೆಯೋ ದರ್ದೂ ಬೇಡ ಅನ್ನೋ ಸಂತಾಪ ಮೂಡಿಬಿಡುತ್ತದೆ. ಅದಕ್ಕೆ ಈ ದಿನಗಳಲ್ಲಿ ಯುದ್ಧಕ್ಕೆ ಹೋಗುವ ರೀತಿಯಲ್ಲೇ, ಮದುವೆಗೆ ಹೋಗೋಕೂ ಎಂಟೆದೆ ಬೇಕು.