Sunday, 15th December 2024

ಪರಿವರ್ತನೆಯೊಂದಿಗೆ ಪ್ರವಹಿಸೋಣ

ನಮ್ಮ ನಡೆ ನುಡಿಗಳು, ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಮನೋಧೋರಣೆಗಳ ನೆರಳು ನಮ್ಮನ್ನು ಪ್ರಭಾವಿಸಿ ದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅಗತ್ಯ ಎನಿಸಿದೆ.

ಮಹಾದೇವ ಬಸರಕೋಡ

ನಮ್ಮ ಮನಸ್ಸಿಗೆ ಒಪ್ಪಿದ ತೀರ್ಮಾನಗಳು ಯಾವಾಗಲೂ ನಮಗೆ ಪ್ರೀತಿ ಪಾತ್ರವಾಗಿರುವುದು ಸಹಜವೇ ಆಗಿದೆ. ನಾವು ಮೆಚ್ಚಿದ ಸಂಗತಿಗಳೇ ಸತ್ಯವಾಗಿಯೂ, ಉಳಿದೆಲ್ಲ ವಿಚಾರಗಳು ಅರ್ಥವಿಲ್ಲದವು ಮತ್ತು ಅಸತ್ಯವಾದವುಗಳು ಎಂಬುದಾಗಿ ತೋರುತ್ತವೆ. ನಾವು ಮೆಚ್ಚಿಕೊಂಡ ಅಥವಾ ನಮ್ಮನ್ನು ಪ್ರಭಾವಿಸಿದ ತೀರ್ಮಾನಗಳನ್ನು ಉದ್ವೇಗ ಭಾವದಿಂದ ವ್ಯಾಮೋಹಿಸುತ್ತೇವೆ.

ಓಬಿರಾಯನ ಕಾಲದ ನಂಬಿಕೆಗಳಲ್ಲಿಯೇ ಬಂಧಿತರಾಗಿಬಿಡುತ್ತೇವೆ. ಇದರಿಂದಾಗಿ ವರ್ತಮಾನದ ಆರ್ತನಾದ ನಮಗೆ ನೋವು, ಹತಾಶೆ, ಭಯ, ಆತಂಕಗಳನ್ನು ತಂದಿತ್ತು ಬದುಕಿನ ವಿಶಾಲತೆಯನ್ನು ವಾಸ್ತವಿಕತೆಯ ಸಂತಸವನ್ನು ಕಿರಿದುಗೊಳಿಸುತ್ತವೆ. ಝೆನ್ ಗುರುಗಳೊಬ್ಬರು ತಮ್ಮ ಆಶ್ರಮದಲ್ಲಿ ಸುಂದರವಾದ ಮುದ್ದಾದ ಬೆಕ್ಕೊಂದನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಬೆಕ್ಕು ಅತ್ತಿಂದಿತ್ತ ಸುತ್ತಾಡುತ್ತ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ಗುರುಗಳು ಪ್ರತಿ ದಿನ ಸತ್ಸಂಗ ನಡೆದಿರುವಾಗ ಅದು ಎಲ್ಲಿ ಬೇಕೆಂದರಲ್ಲಿ ಓಡಾಡುತ್ತ ಎಲ್ಲರ ಗಮನ ತನ್ನೆಡೆಗೆ ಸೆಳೆದು ಏಕಾಗ್ರತೆಗೆ ಭಂಗ ತರುತ್ತಿತ್ತು. ಇದರ ಕಾಟಕ್ಕೆ ಬೇಸತ್ತು ಗುರುಗಳು
ಪ್ರತಿ ದಿನ ಸತ್ಸಂಗ ನೆಡೆಯುವಾಗ ಬೆಕ್ಕನ್ನು ಒಂದೆಡೆ ಕಟ್ಟಿ ಹಾಕಲು ಹೇಳಿದರು.

ಅದರಂತೆಯೇ ಪ್ರತಿದಿನ ಸತ್ಸಂಗ ನಡೆಯುವ ಸಂದರ್ಭದಲ್ಲಿ ಬೆಕ್ಕನ್ನು ಕಟ್ಟಿಹಾಕುವುದು ಸಾಮಾನ್ಯವಾಗಿತ್ತು. ಕೆಲವು ವರ್ಷಗಳು ಗತಿಸಿದ ನಂತರ ಝೆನ್ ಗುರುಗಳು ತೀರಿಹೋದರು. ಅವರ ಶಿಷ್ಯರೊಬ್ಬರು ಸತ್ಸಂಗ ಮುಂದುವರೆಸಿಕೊಂಡು ಹೋಗುತ್ತಿದ್ದರು. ಆಗಲೂ ಸತ್ಸಂಗ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವುದು ಪದ್ಧತಿಯಾಗಿತ್ತು. ಕೆಲವು ದಿನಗಳ ನಂತರ ಆ ಬೆಕ್ಕು ಸತ್ತು ಹೋಯಿತು. ಆಗ ಶಿಷ್ಯರು ಮತ್ತೊಂದು ಬೆಕ್ಕನ್ನು ತಂದು ಸಾಕಿ ಸತ್ಸಂಗ ನಡೆಯುವಾಗ ಬೆಕ್ಕು ಕಟ್ಟುವ ಪದ್ಧತಿಯನ್ನು ಮುಂದು ವರಿಸಿದರು.

ಹೀಗೆ ನಾವು ಕೂಡ ಅನೇಕ ಬಾರಿ ಬದುಕಿನಲ್ಲಿ ವಾಸ್ತವಿಕತೆಯ ಅರಿವಿಲ್ಲದೆ, ಹಳೆಯದೆಲ್ಲ ಹೊನ್ನು ಎಂಬ ಭ್ರಾಮಕತೆಯಲ್ಲಿ ಪ್ರಾಚೀನ ಭಾವನೆಗಳ ಮೂಟೆಗಳನ್ನು ಹೊತ್ತು ತರುತ್ತೇವೆ. ಇದು ಒಮ್ಮೊಮ್ಮೆ ಪ್ರಗತಿಗೆ ಮಾರಕವಾಗಬಲ್ಲದು. ಇದಕ್ಕೆ ಹೊರತಾಗಿ ಬದುಕು ನಿರಂತರವಾಗಿ ಪರಿವರ್ತನೆಗೆ ಒಳಪಡುತ್ತಲೇ ಸಾಗುತ್ತದೆ ಎಂಬ ಸತ್ಯದ ಅರಿವು ನಮಗಾಗಬೇಕಿದೆ.
ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ!

ಸಸಿಗೆ ಹೊಸ ತಳಿರ ತಲೆಯಲಿ ಮುಡಿಸುವಂತೆ!!
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ!
ಪೊಸತಾಗಿಪುದು ಜಗವ ಮಂಕುತಿಮ್ಮ!!

ಕನ್ನಡದ ಖ್ಯಾತ ಕವಿ ಡಿ.ವಿ.ಜಿ. ಅವರು ಹೇಳೀದಂತೆ, ಹೊಸದೊಂದು ರಸ ಭೂಮಿಯಿಂದ ಬೇರಿಗೆ ಸಾಗಿ ಸಸಿಗೆ ಹೊಸ ತಳಿರು ತರುವಂತೆ ಹೊಸ ಸೃಷ್ಟಿ ಸತ್ತ್ವಗಳು ಪ್ರತಿದಿನ ಈ ಜಗತ್ತನ್ನು ಹೊಸದಾಗಿ ಮಾಡುತ್ತವೆ. ಬದುಕು ನಿಂತ ನೀರಲ್ಲ. ಅದು ನಿರಂತರ ಚಲನಶೀಲ. ಇದರಿಂದಾಗಿಯೇ ಅದು ನಿತ್ಯ ನೂತನ, ಅದಕ್ಕಿದೆ ಪಾವಿತ್ರ್ಯತೆಯ ಸಿಂಚನ.

ಹಾಗೆಯೇ ನಮ್ಮ ನಂಬಿಕೆಗಳು, ಮನೋಧೋರಣೆಗಳು, ಆಚಾರ ವಿಚಾರಗಳು, ಚಿಂತನೆಗಳು, ನಿಲುವುಗಳು ಸಾಂರ್ದಭಿಕವಾಗಿ
ಬದಲಾವಣೆಗೆ ಒಳಪಡಬೇಕು. ಪರಿರ್ವತನೆ ಜಗದ ನಿಯಮ. ಹಾಗಾಗಿಯೇ ನಾವು ಪರಿವರ್ತನೆಯೊಂದಿಗೆ ಪ್ರವಹಿಸಿ, ವಿವೇಕ
ಪ್ರಜ್ಞೆಯ ಬೆಳಕಿನಲ್ಲಿ ನಮ್ಮ ಸುತ್ತಣ ಸಮಾಜದ ಆಶೋತ್ತರಗಳನ್ನು, ಮಿಡಿತಗಳನ್ನು ಮತ್ತು ನಂಬಿಕೆಗಳನ್ನು ಒಳಹೊಕ್ಕು ನೋಡಬೇಕು. ಸಾಮಾಜಿಕ ಬದುಕನ್ನು, ಅದರ ವಿಸ್ತಾರ ಮತ್ತು ಸಮಗ್ರತೆಯೊಳಗೆ ಗ್ರಹಿಸುವ ಪ್ರಯತ್ನ ಮಾಡಬೇಕು. ಸಾಮಾಜಿಕ
ವಾಸ್ತವಗಳಿಗೆ ನಾವು ನಮ್ಮನ್ನು ಎಚ್ಚರಗೊಳಿಸಬೇಕು.

ಕಾಲಕ್ಕೆ ತಕ್ಕಂತೆ ಬದುಕಿನ ಆಚಾರ ವಿಚಾರಗಳು ಬದಲಾವಣೆಗಳಿಗೆ ಒಳಪಡುತ್ತಲೇ ಸಾಗಬೇಕು. ನಮ್ಮ ನಡೆ ನುಡಿಗಳು, ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಮನೋಧೋರಣೆಗಳ ನೆರಳು ನಮ್ಮನ್ನು ಪ್ರಭಾವಿಸಿದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅಗತ್ಯ ಎನಿಸಿದೆ. ಹಳೆಯದೆಲ್ಲವನ್ನೂ ಪ್ರಾತಃಸ್ಮರಣೀಯವೆಂದು, ಹೊನ್ನೆಂದು ಮತ್ತೆ ಮತ್ತೆ ಭಾವಿಸುವುದು ಸಮರ್ಥನೀಯವೆನಿಸುವುದಿಲ್ಲ. ಇದರಿಂದಾಗಿ ನಾವೆಲ್ಲ ಪರಿವರ್ತನೆಯೊಂದಿಗೆ ಪ್ರವಹಿಸಬೇಕಾದ ಅನಿವಾ ರ್ಯತೆ ನಮ್ಮ ಬದುಕಿನ ಮೊದಲ ಆದ್ಯತೆಯಾಗಬೇಕಿದೆ.