Thursday, 12th December 2024

ನಾನು ಎಂಬ ಅಹಂ

ಅಹಂಕಾರವನ್ನು ದೂರಮಾಡಿ ಬದುಕುವುದು ಮಾನವನ ಕರ್ತವ್ಯವೂ ಹೌದು.

ವಿಜಯಕುಮಾರ್ ಕಟ್ಟೆ

ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಬಲ್ಲಿರಿ? ಒಮ್ಮೆ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇಡುತ್ತಾರೆ. ಉತ್ತರ ಹೇಳುವ ಧೈರ್ಯ ಯಾರಿಗೂ ಇರುವುದಿಲ್ಲ. ಪ್ರಿಯ ಶಿಷ್ಯ ಕನಕದಾಸರನ್ನು ಕರೆದು ಕೇಳಿದಾಗ ಗುರುಗಳೇ, ‘ನಾನು  ಹೋದರೆ ಹೋದೇನು’ ಎಂದು ಉತ್ತರಿಸಿದಾಗ ಶಿಷ್ಯರೆಲ್ಲಾ ವ್ಯಂಗ್ಯಮಾಡಿದರು.

‘ನಾನು’ ಎಂಬ ಅಹಂಕಾರ, ಮಮಕಾರಗಳು ಎಂದು ಬಿಟ್ಟು ಹೋಗುವುದೋ ಆಗಲೇ ಎಲ್ಲ ಬಂಧನಗಳಿಂದ ಮುಕ್ತಿ ಎಂದು ಕನಕದಾಸರು ವಿವರಿಸಿದರು.
ಈ ‘ನಾನು’ ಅನ್ನುವ ಅಹಂಭಾವ ಹೊಕ್ಕುವುದು ಹೇಗೆ? ಅಧಿಕಾರವಿದೆ, ರೂಪವಿದೆ, ಪಾಂಡಿತ್ಯವಿದೆ, ವಿದ್ಯೆ ಇದೆ, ಹಣವಿದೆ, ಆಸ್ತಿ ಇದೆ, ರಾಜಕೀಯ ಬಲವಿದೆ,
ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಿವೆ ಎಂಬ ಕುಹಕ ಬೀಜಗಳು ವ್ಯಕ್ತಿಗೆ ಅಹಂಕಾರ ತರುವ ಸರಕುಗಳು. ಈ ‘ನಾನು ನನ್ನದು’ ಎಂಬ ಮನೋವಿಕಾರ ಒಂದು ಬಾರಿ ಆವರಿಸಿದರೆ ವಿವೇಕವನ್ನು ಹಾಳು ಮಾಡಿ ನಮ್ಮನ್ನು ನುಂಗಿ ಅಧೋಗತಿಗೆ ನೂಕುತ್ತದೆ. ಜೊತೆಗೆ ಹೆಮ್ಮರವಾಗಿ ಬೆಳೆದು ಬೇರುಗಳನ್ನು ಬಿಡುತ್ತದೆ. ಅದು ಬಂದಿದ್ದೆ ತಡ ತಾನೇ ಸರ್ವಶ್ರೇಷ್ಠ ಎನ್ನುವ ಬಾವಿಯೊಳಗಿನ ಕಪ್ಪೆಯಂತೆ ಆಗುತ್ತಾನೆ.

ತನಗೆ ಸಿಗುವ ಪ್ರಾಮುಖ್ಯತೆ ಸ್ವಲ್ಪ ಕಡಿಮೆಯಾದರೂ ಮನಸಿನ ಸ್ಥಿಮಿತ ಕಳೆದುಕೊಳ್ಳುವ ಮನ ಸ್ಥಿತಿ, ತನ್ನ ವಿಚಾರವೇ ದೊಡ್ಡದು ಅನ್ನುವ ಧೋರಣೆ. ಇಂತಹ
ಅಹಂಕಾರ ಜೀವಿಗಳು ಸಮಾಜದ ದೊಡ್ಡ ಶತ್ರುಗಳು. ಒಬ್ಬ ವ್ಯಕ್ತಿಯ ಜೀವನವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುವ ಅಹಂಕಾರವು ಬಲು ವಿಶಿಷ್ಟ. ಅದನ್ನು ತನ್ನ ಮೇಲೆ ಆವಾಹಿಸಿಕೊಂಡ ವ್ಯಕ್ತಿಗೆ, ತಾತ್ಕಾಲಿಕವಾಗಿ ಸಂತೋಷವಾಗುತ್ತದೆ. ಇದರ ಸಹಾಯದಿಂದ ತಾನು ಹೆಚ್ಚು ಗೌರವವನ್ನು ಗಳಿಸಬಲ್ಲೆ ಎಂದು ಆ ವ್ಯಕ್ತಿ ಅಂದುಕೊಳ್ಳುತ್ತಾನೆ.

ಅಹಂಕಾರವು ತನ್ನಲ್ಲಿದ್ದರೆ, ಅದರಿಂದ ತನಗೆ ಸಹಾಯವಾಗಬಹುದು ಎಂಬ ಭ್ರಮೆಯಲ್ಲಿ ವ್ಯಕ್ತಿ ಇರುತ್ತಾನೆ. ಆದರೆ ಅಹಂಕಾರ ಮಿತ್ರನಲ್ಲ, ಎಂದೆಂದಿಗೂ ಅದು
ಮಾನವನ ಪರಮಶತ್ರು. ಈ ಶತ್ರುವಿನಿಂದ ವ್ಯಕ್ತಿಗೂ ಸುಖವಲ್ಲ ಮತ್ತು ಸಮಾಜಕ್ಕೆ ಆಗುವ ಹಾನಿಯೇ ಹೆಚ್ಚು. ‘ನನ್ನದು’ ಎಂಬ ಭಾವನೆಗಳೇ ಜಗದ ಎಲ್ಲ ಮನಸ್ತಾಪ, ದುಃಖಗಳಿಗೆ ಮೂಲ. ಔಷಧಿಯು ಇಲ್ಲದ ಇಂತಹ ಖಳನಾಯಕನನ್ನು ಗಟ್ಟಿ ಮನಸ್ಸು ಮಾಡಿ ಮನದಾಳದಿಂದ ಕಿತ್ತು ಹಾಕುವುದೇ ಸರಿಯಾದ ದಾರಿ. ನಾಳೆಗಳ ಬಗ್ಗೆ ಯೋಚಿಸದೆ ವರ್ತಮಾನದಲ್ಲಿ ಬದುಕಲು ಪ್ರಾರಂಭ ಮಾಡಿದಾಗ ನಮ್ಮ ‘ಎಲ್ಲವೂ ಬೇಕು, ಸಕಲವೂ ಬೇಕು’  ಎಂಬ ದುರಾಸೆಯ ಬೇಡಿಕೆಗಳು ಕಡಿಮೆಯಾಗುತ್ತವೆ.

ಕನಕದಾಸರು ಹೇಳಿದಂತೆ ನಾನು ಎಂಬ ಭಾವ ಎಲ್ಲಿಯ ತನಕ ನಮ್ಮನ್ನು ಬಿಡದೆ ಕಾಡುತ್ತದೆಯೋ ಅಲ್ಲಿಯ ತನಕ ಅಹಂಕಾರದ ಕಡೆಗೆ ನಡೆಯುತ್ತಲೇ ಇರುತ್ತೇವೆ. ಪುರಂದರದಾಸರು ‘ನಾನು ಎಂಬುದ ಬಿಟ್ಟು ಜ್ಞಾನಿಗಳೊಳಗೂಡಿ, ಏನೆಲ್ಲಕೆ ದೇವ ಪ್ರೇರಣೆಯೆಂದು’ ಎನ್ನುತ್ತಾ, ನಾನು ಎನ್ನುವ ಭಾವವನ್ನು ತೊರೆದು, ನಮ್ಮ ಬದುಕು ದೇವರ ಅನುಗ್ರಹದಿಂದ ನಡೆಯುತ್ತದೆ ಎಂದು ನಂಬಬೇಕು ಎನ್ನುತ್ತಾರೆ. ಕನಕದಾಸರಂತಹ ಮಹಾಮಹಿಮರ ಜೀವನದ ಆದರ್ಶ ನಮಗೆ ಜೀವನದಲ್ಲಿ ಪ್ರೇರೇಪಣೆಯಾಗಿ ನಾನು ಎಂಬ ಅಹಂಕಾರದಿಂದ ಮುಕ್ತನಾಗಿ ಆನಂದದಿಂದ ಜೀವಿಸುವ ಮನಸು ನೀಡು ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ ನಮ್ಮ ಅಹಂಕಾರವನ್ನು ಕಳಚಿಕೊಂಡು ಉತ್ತಮ ಮಾರ್ಗಕ್ಕೆ ತೆರಳುವ ಒಂದು ಪ್ರಯತ್ನವೇ ನಾವು ಅವರಿಗೆ ತೋರಿಸುವ ಗೌರವ ಮತ್ತು ಭಕ್ತಿ.

ನಾನು ಎಂಬುದನ್ನು ತ್ಯಜಿಸಿ ಲೋಕಕಲ್ಯಾಣಕ್ಕಾಗಿ ಕಾರ್ಯಪ್ರವೃತ್ತರಾಗುವುದು ಮಾನವನ ಜೀವಿಯಾಗಿರುವ ನಮ್ಮೆಲ್ಲರ ಕರ್ತವ್ಯವೂ ಹೌದು.