Thursday, 12th December 2024

ನುಗ್ಗಿ ನಡೆ ಮುಂದೆ

ನಾಗೇಶ್ ಜೆ. ನಾಯಕ ಉಡಿಕೇರಿ

ಬದುಕಿನ ದಾರಿಯಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಒಮ್ಮೆ ಹೂವಿನ ರಾಶಿ ನಮ್ಮನ್ನು ಸ್ವಾಗತಿಸಿದರೆ, ಮಗದೊಮ್ಮೆ ಮುಳ್ಳುಗಳು ಬರಮಾಡಿಕೊಳ್ಳುತ್ತವೆ. ಒಮ್ಮೆ ನಗುವಿನ ಹಾಯಿ ದೋಣಿ ಹಗುರವಾಗಿ ತೇಲಿಸಿದರೆ, ಮಗದೊಮ್ಮೆ
ಅಳುವಿನ ಬಿರುಗಾಳಿ ರೊಯ್ಯನೆ ಹಾರಿಸಿ ಕೊಂಡು ಹೋಗಿ ಕೆಳಕ್ಕೆ ಕೆಡವಿ ಗಹಗಹಿಸುತ್ತದೆ. ಗೆಲುವು ಪದತಲದಲ್ಲಿ ಅಂಬರವನ್ನೇ ತಂದಿಟ್ಟರೂ, ಸೋಲು ಕಾಲ ಕೆಳಗಿನ ನೆಲಕ್ಕೆ ಕರೆದೊಯ್ಯುತ್ತದೆ.

ಇದಕ್ಕೆೆಲ್ಲ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಸೋತಾಗ ಬದುಕನ್ನು ತೆಗಳುತ್ತೇವೆ, ಶಪಿಸುತ್ತೇವೆ, ಹಣೆಬರಹವನ್ನು ಹಳಿದು ಕೊಳ್ಳುತ್ತೇವೆ. ಗೆದ್ದಾಗ ಬೀಗುತ್ತೇವೆ, ಗೆಲುವಿಗೆ ಮೆಟ್ಟಿಲಾದವರನ್ನು ಮರೆಯುತ್ತೇವೆ, ಗೆಲುವೇ ಸಿಗಲಿ ಎಂದು ಕೋರುತ್ತೇವೆ.
ನಮ್ಮೆಲ್ಲ ಕೋರಿಕೆಗಳಿಗೂ ಮೇಲಿನವ ಅಷ್ಟು ಸುಲಭವಾಗಿ ಅಸ್ತು ಅಂದುಬಿಡುವುದಿಲ್ಲ. ಬದುಕು ನಾವಂದುಕೊಂಡ ಹಾಗೆಯೇ ಸುಸೂತ್ರವಾಗಿ ನಡೆದಿದ್ದರೆ ಮೇಲಿನವನ ಜರೂರತ್ತು ನಮಗಿರುತ್ತಿರಲಿಲ್ಲ ಅಲ್ಲವೆ? ಇಲ್ಲ, ಹಾಗುವುದಿಲ್ಲವೆಂದೇ ನಾವು ಒಮ್ಮೆ ನಗುವಿನ ಮಡಿಲಿಗೆ ಬಿದ್ದು ನಿರಾಳವಾಗುತ್ತೇವೆ.

ಮರುಕ್ಷಣ ದುಃಖದ ತೆಕ್ಕೆಗಳಿಂದ ಕವುಚಿ ಕೊಂಡು ಕೆನ್ನೆ ತೋಯಿಸಿಕೊಳ್ಳುತ್ತೇವೆ. ಯಾವುದೂ ಶಾಶ್ವತವಲ್ಲವೆಂಬ ಕಹಿಸತ್ಯವನ್ನು ಮರೆಯುತ್ತೇವೆ. ಕವಿ ದೊಡ್ಡರಂಗೇಗೌಡ ತಮ್ಮ ಕವನದಲ್ಲಿ ಹೇಳುತ್ತಾರೆ.

ನೋವು-ನಲಿವು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ-ದುಃಖ ಕಾಡೋದೇನೆ
ಉಪ್ಪುು-ಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗಬೇಕಯ್ಯ ಓ
ಗೆಳೆಯಾ…

ಬಾಳು ಎಂದ ಬಳಿಕ ಅನೇಕ ಅಡೆ-ತಡೆಗಳು, ತವಕ-ತಲ್ಲಣಗಳು, ನೋವು-ನಿರಾಸೆಗಳು ಸಹಜವಾಗಿ ಬರುತ್ತವೆ. ನನಗೇ ಯಾಕೆ ಇವು ಕಾಡುತ್ತವೆ, ನಾನು ಅದೃಷ್ಟಹೀನ, ನನ್ನ ನಸೀಬು ಸರಿಯಲ್ಲವೆಂದುಕೊಂಡು ಹಳಹಳಿಸುತ್ತ, ಕೊರಗುತ್ತಾ ಕುಳಿತರೆ ಬಂದ ತಾಪತ್ರಯಗಳೆಲ್ಲ ಕರಗುತ್ತವೆಯೆಂದುಕೊಂಡಿರಾ? ಇಲ್ಲ, ಅವು ಯಾವುದಕ್ಕೂ ಜಗ್ಗುವುದಿಲ್ಲ. ಅತ್ತು ಕರೆದರೆ ಫಲವಿಲ್ಲ. ಅವುಗಳ
ಜೊತೆ ಕುಸ್ತಿಗಿಳಿದರೂ ಗಾಳಿ ಜೊತೆ ಗುದ್ದಾಡಿದಂತೆ.

ಹಾಗಿದ್ದರೆ ಏನು ಮಾಡುವುದೆಂದೀರಾ? ಸುಮ್ಮನೆ ನಕ್ಕು ತಾಳಿಕೊಳ್ಳುವುದೊಂದೇ ದಾರಿ. ತಾಳ್ಮೆಯೇ ನಮ್ಮನ್ನು ಗಟ್ಟಿಗೊಳಿಸು ತ್ತದೆ. ಬದುಕು ನಿರಾಯಾಸವಾಗಿ ಮುನ್ಸಾಗುತ್ತದೆ. ಸಾಲವಾಯಿತೆಂದು ಸಾವಿಗೆ ಶರಣಾಗುವವರು ಕೆಲವರಿದ್ದಾರೆ. ವ್ಯವಹಾರದಲ್ಲಿ ನಷ್ಟವಾಯಿತೆಂದು ಊರೇ ಬಿಟ್ಟು ತೆರಳುವವರಿದ್ದಾರೆ. ಅಂಕಗಳು ಕಡಿಮೆ ಬಂದವೆಂದು ಆತ್ಮಹತ್ಯೆೆಯನ್ನು ಅಪ್ಪಿಕೊಳ್ಳು ವವರಿದ್ದಾರೆ. ಅಂದುಕೊಂಡ ಗುರಿ ಗಳಿಸಲಾಗಲಿಲ್ಲವೆಂದು ಅಧೀರರಾಗುವ, ಸೋಲುಗಳೇ ಎದುರಾಗುತ್ತಿದ್ದಾವೆಂದು ಕೈಚೆಲ್ಲಿ ಕೂರುವ, ಜೀವವನ್ನೇ ಕೊನೆಗೊಳಿಸಿಕೊಳ್ಳುವ ಮಂದಿಗೆ ತಾಳ್ಮೆಯ, ಸಹನೆಯ ಪಾಠವನ್ನು ಕಲಿಸಬೇಕಿದೆ.

ಎಲ್ಲದಕ್ಕೂ ಎದೆಯೊಡ್ಡುವ ಎದೆಗಾರಿಕೆಯನ್ನು ಬೆಳೆಸಬೇಕಿದೆ. ದಾಸರು ಹೇಳಿದ ಹಾಗೆ, ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು ಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ ನಿರಾಶರಲ್ಲಿ ಆಸೆಯ ಕುಡಿ ಯೊಂದನ್ನು ಚಿಗುರಿಸಿ, ಸತತ ಸೋಲುವ ಹೆಜ್ಜೆಗಳಿಗೂ ಗೆಲುವಿನ ರುಚಿ ಹತ್ತಿಸಿ, ಕಮ್ಮನೆಯ ಕಣ್ಣುಗಳೊಳಗೆ ಹೊಂಗನಸನ್ನು ತೇಲಿಸಿ ಬದುಕಿನಲ್ಲಿ ಮುನ್ನುಗ್ಗುವ ಛಲವನ್ನು ಹಬ್ಬಿಸಬೇಕಾದ ಅವಶ್ಯಕತೆಯಿದೆ.

ಹೀಗಾದಲ್ಲಿ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಹಿಗ್ಗದೆಯೆ ಕುಗ್ಗದೆಯೆ ನುಗ್ಗಿಿ ನಡೆ ಮುಂದೆ ಎಂಬ ಕವಿತೆಯ ಸಾಲುಗಳಿಗೆ ಸಾರ್ಥಕತೆ ಸಿಗುತ್ತದೆ.