Thursday, 12th December 2024

ನಾನು ಕಂಡ ಮೊದಲ ಚಮತ್ಕಾರ !

ಮಹಾ ಬಯಲು – ೧೩

ಡಾ.ಪರಮೇಶ್
ಶ್ರೀಗಳ ಆಪ್ತ ವೈದ್ಯರು
ಹಾಗೂ ನಿರ್ದೇಶಕರು,
ಸಿದ್ಧಗಂಗಾ ಆಸ್ಪತ್ರೆ

ನ್ಯುಮೋನಿಯಾದಂತಹ ಸಮಸ್ಯೆಯಾದಾಗ ಅವರಿಗೆ ತಕ್ಷಣಕ್ಕೆ ಚಿಕಿತ್ಸೆ ಅವಶ್ಯಕತೆ ಇತ್ತು. ಅವರನ್ನ ಒಪ್ಪಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಕೊನೆಗೆ ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಅಂದಿನ ಮುಖ ಮಂತ್ರಿ ಗಳಾದ ಯಡಿಯೂರಪ್ಪನವರು ಹಾಗು ಸೊಗಡು ಶಿವಣ್ಣ ನವರು, ನಾವು ಎಲ್ಲರೂ ಸೇರಿ ಅವರ ಮನವೊಲಿಸಲು ಯಶಸ್ವಿಯಾದೆವು.

ಶ್ರೀಗಳಿಗೆ ‘ಕೇವಲ ಪರೀಕ್ಷೆ ಮಾಡಿಸಿಕೊಂಡು ಬರುತ್ತೇವೆ. ಬೆಳಗ್ಗೆ ಹೋಗಿ ಸಂಜೆ ಬರೋಣ’ ಎನ್ನೋದಾಗಿ ಹೇಳಿ, ವಿನಂತಿಸಿಕೊಂಡು ನಾವು ಮನವೊಲಿಸಿ ದ್ದೆವು. ಶ್ರೀಗಳು ಒಪ್ಪಿಗೆ ಸೂಚಿಸಿದ ತಕ್ಷಣ ಹೊರಟು, ಕೇವಲ ಒಂದೂವರೆ ಗಂಟೆಯಲ್ಲಿ ನಾವು ಬೆಂಗಳೂರಿನಲ್ಲಿದ್ದೆವು! ಆನಂತರ ಅಲ್ಲಿ ಶ್ರೀಗಳಿಗೆ ಪಲ್ಮನಾಲಜಿಸ್ಟ್ ಡಾ.ಸತೀಶ್ ಚಿಕಿತ್ಸೆ ನೀಡಿದರು. ಪ್ರಾಥಮಿಕ ಪರೀಕ್ಷೆಗಳ ನಂತರ ಶ್ರೀಗಳು ‘ಸರಿ ಇನ್ನು ಹೊರಡೋಣವೇ?’ ಎಂದರು! ಅವರು ಹಾಗೆ ಅಂದ ತಕ್ಷಣ ತಬ್ಬಿಬ್ಬಾಗುವ ಪರಿಸ್ಥಿತಿ ನಮ್ಮದು.

ನಾವು ಮಠದಲ್ಲಿ ಕೇವಲ ಪರೀಕ್ಷೆಗೆಂದು ಕರೆದುಕೊಂಡು ಹೋಗ್ತಿದ್ದೇವೆ ಎಂದೆವು ‘ಪರೀಕ್ಷೆಯಾಯ್ತಲ್ಲ ಹೊರಡೋಣ’ ಎನ್ನೋದು ಶ್ರೀಗಳ ಅರಿಕೆ ಯಾಗಿತ್ತು. ಕೊನೆಗೆ ಮತ್ತೊಂದು ಸುತ್ತಿನ ಮನವೊಲಿಕೆ ಆರಂಭವಾಯ್ತು. ಕೊನೆಗೆ ಶ್ರೀಗಳು ಚಿಕಿತ್ಸೆಗೆ ಒಪ್ಪಿಕೊಂಡರು. ಚಿಕಿತ್ಸೆ ಆರಂಭವಾಯ್ತು. ನ್ಯುಮೋನಿಯಾ ಸಮಸ್ಯೆ ಶ್ರೀಗಳಿಗೆ ಇತ್ತು ಎನ್ನುವ ಮಟ್ಟಿಗೆ ಕೇವಲ ಒಂದೇ ದಿನದಲ್ಲಿ ಶ್ವಾಸಕೋಶದಲ್ಲಿದ್ದ ವೈಟ್ ಪ್ಯಾಚಸ್ ಕಡಿಮೆಯಾಗಿತ್ತು. ಇದು ನಾನು ಕಂಡ ಮೊದಲ ಚಮತ್ಕಾರ!

ಮಾರನೇ ದಿನ ಶ್ರೀಗಳಿಗೆ ಶಿವಪೂಜೆಯಾಗದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು. ಜೊತೆಗೆ ಅದು ಕೋಪಕ್ಕೂ ತಿರುಗುತ್ತಿತ್ತು. ಇದನ್ನರಿತ ನಾವು ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ಶ್ಯಾಮನೂರು ಶಿವಶಂಕರಪ್ಪನವರ ಅಳಿಯ ಶಿವಶಂಕರ್ ಅವರ ಮನೆಯಲ್ಲಿ ಪೂಜೆಯ ವ್ಯವಸ್ಥೆ ಮಾಡಿದೆವು. ಆದರೆ
ಶ್ರೀಗಳು ಅದಕ್ಕೂ ಒಪ್ಪಲಿಲ್ಲ. ಮುಂಚಿತವಾಗಿ ಕರೆದರೆ ಮಾತ್ರ ಅವರು ಹೋಗುವುದು ಅವರ ನಿಶ್ಚಯವಾಗಿತ್ತು. ಕೊನೆಗೆ ಮಣಿಪಾಲದಲ್ಲೇ ಇದ್ದ ಧಾರ್ಮಿಕ ಕೇಂದ್ರದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ ನಾಲ್ಕರಿಂದ ಐದು ದಿನ ಚಿಕಿತ್ಸೆ ನೀಡಿದರು. ಚಿಕಿತ್ಸೆಯ ಕುರಿತಾಗಿ ಇನ್ನೂ ಎರಡು ದಿನ ಇರಬೇಕಿತ್ತು.

ಇನ್ನು ಶ್ರೀಗಳಿಗೆ ಈ ಬಗ್ಗೆ ಹೇಳಿದರೆ ಅವರು ಬಿಲ್ಕುಲ್ ಒಪ್ಪಲಿಲ್ಲ. ಕೊನೆಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡಿ ಮಠಕ್ಕೆ
ಕರೆದುಕೊಂಡು ಬಂದೆವು. ಇಲ್ಲಿಯೂ ಅವರಿಗೆ ಚಿಕಿತ್ಸೆ ಮುಂದುವರೆಸಬೇಕಿತ್ತು. ಆದರೆ ಶ್ರೀಗಳು ಸ್ಪಂದಿಸುತ್ತಿರಲಿಲ್ಲ. ಮೇಲೆ ಹೇಳಿದ ಹಾಗೆ ಶಿವಪೂಜೆ, ಮಕ್ಕಳು, ಭಕ್ತರು ಇವರಿಗೆಲ್ಲಾ ಅವರ ಮನಸ್ಸೋ ಇಚ್ಛೆ ಸಮಯ ನೀಡಿ, ಉಳಿದ ಸಮಯದಲ್ಲೇ ನಮ್ಮ ಚಿಕಿತ್ಸೆಗೆ ಸಮಯ ಕೊಡುತ್ತಿದ್ದರು. ಆನಂತರ ಹೇಗೋ ಅವರ ಮನವೊಲಿಸಿ ಎರಡು ದಿನ ಚಿಕಿತ್ಸೆ ನೀಡಿದೆವು. ಆನಂತರ ಅವರಲ್ಲಿ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ.

ಬಹುದೂರ ಪ್ರಯಾಣ ಮಾಡುವುದನ್ನ ಮೊಟಕುಗೊಳಿಸಬೇಕಾಯ್ತು. ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದ್ದದ್ದರಿಂದ ಅದು ಅನಿವಾರ್ಯವೂ ಆಗಿತ್ತು.
ನ್ಯುಮೋನಿಯಾ ಬಳಲಿಕೆಯಿಂದ ಶ್ರೀಗಳು ಆದಷ್ಟು ಬೇಗ ಗುಣಮುಖರಾದರು. ಆನಂತರದ ವರ್ಷಗಳಲ್ಲಿ ಚಳಿಗಾಲದಲ್ಲಿ ಅವರಿಗೆ ಸಣ್ಣಪುಟ್ಟ ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿತ್ತು. ಅಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲೂ ಕೂಡ ನಾವು ಅವರ ಒಪ್ಪಿಗೆಗಾಗಿ ಕಾಯುತ್ತಿದ್ದೆವು. ‘ಚಿಕಿತ್ಸೆ ಆಮೇಲೆ ತಗೋತಿನಿ, ಸಂಜೆ ತಗೋತಿನಿ, ಬೆಳಗ್ಗೆ ನೋಡೋಣ’ ಈ ರೀತಿಯ ಮಾತುಗಳು ಶ್ರೀಗಳಿಂದ ಬರುತ್ತಲೇ ಇತ್ತು. ನಾವು ಮರುಮಾತಾಡದೆ ಸುಮ್ಮನಿದ್ದು, ಅವರು ಒಪ್ಪುವ ಸಮಯಕ್ಕೆ ಸರಿಯಾಗಿ ಹೋಗಿ ಮಾತ್ರೆ ನೀಡುತ್ತಿದ್ದೆವು.