ಮಹಾ ಬಯಲು- ೧೫
ಡಾ.ಪರಮೇಶ್
ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ
ನ್ಯುಮೋನಿಯಾ ಸಮಸ್ಯೆ ಶುರುವಾಗಿ ಶ್ರೀಗಳ ಮನವೊಲಿಸಿ ಚಿಕಿತ್ಸೆಯೇನೋ ನೀಡಿದ್ದಾಯ್ತು. ಆನಂತರ ಅವರನ್ನ ತುಂಬಾ ಜಾಗರೂಕವಾಗಿ ನೋಡಿಕೊಳ್ಳುವ ಸನ್ನಿವೇಶ ಎದುರಾಯಿತು. ಒಬ್ಬರು ವಯಸ್ಕರನ್ನ ಮನೆಯಲ್ಲಿ ನೋಡಿಕೊಳ್ಳುವುದು ಸುಲಭ. ಆದರೆ ಒಬ್ಬರು ದೈವಾಂಶ ಸಂಭೂತರಾದ ಶ್ರಿಗಳನ್ನ ಮಠದಲ್ಲಿ ಜಾಗೃತಿಯಿಂದ ನೋಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು.
ಕಾರಣ ಶ್ರಿಗಳು ಹಾಗೂ ಭಕ್ತರ ನಡುವೆ ಇದ್ದ ಗುರು ಶಿಷ್ಯ ಸಂಬಂಧ. ಭಕ್ತರನ್ನ ಹಾಗೂ ಮಕ್ಕಳನ್ನ ಶ್ರಿಗಳು ಹೆಚ್ಚಿನದಾಗಿ ಹಚ್ಚಿಕೊಂಡಿದ್ದರು. ಜೊತೆಗೆ ಶ್ರಿಗಳು ತಮ್ಮ ಬಹುಪಾಲು ಜೀವನವನ್ನ ಭಕ್ತರು ಹಾಗೂ ಮಕ್ಕಳೊಟ್ಟಿಗೆ ಸವೆಸಿದ್ದರು. ಅವರ ಒಳ್ಳೆಯ ಬದುಕಿಗೆ ಆಶೀರ್ವಾದ ಮಾಡಿದ್ದರು. ಈ ನಡುವೆ
ಶ್ರಿಗಳಿಗೆ ನಾವು ಕೊಠಡಿಯಿಂದ ಹೊರಬರಬೇಡಿ ಎಂದು ಹೇಗೆ ಹೇಳಲಿಕ್ಕೆ ಆಗುತ್ತದೆ. ಆದರೆ ಅವರ ಮನವೊಲಿಕೆಯನ್ನ ಮಾಡಿ ಕೊಠಡಿಯಲ್ಲೇ ವಿಶ್ರಮಿಸುವಂತೆ ಹೇಳಿದ್ದೆವು. ಆದರೆ ಶ್ರಿಗಳು ಹೆಚ್ಚು ದಿನ ಕೊಠಡಿಯಲ್ಲಿ ಕೂರಲಿಲ್ಲ.
ಸದಾ ಪಾದರಸದಂತೆ ಪುಟಿಯುವ ಶ್ರಿಗಳಿಗೆ ಇದೊಂದು ಕಷ್ಟದ ಕೆಲಸವಾಗಿತ್ತು. ಒಂದೆಡೆ ಹಳೆಯ ಮಠಕ್ಕೆ ಬಂದು ಬುದ್ದಿಯವರ ದರ್ಶನ ಇಲ್ಲದೆ ವಾಪಸ್ಸಾಗುತ್ತಿದ್ದ ಭಕ್ತರು. ಭಕ್ತರಿಗಾಗಿ ಹಂಬಲಿಸಿ ಮಠದ ಕೊಠಡಿ ಯೊಳಗಿದ್ದ ಶ್ರಿಗಳು. ಈ ಬಾಂಧವ್ಯಕ್ಕೆ ಆನಾರೋಗ್ಯ ವಿಚಾರದಲ್ಲಿ ಎಷ್ಟು ದಿನ
ತಡೆಯಬಹುದು ಹೇಳಿ? ಕೊನೆಗೆ ಶ್ರಿಗಳು ಭಕ್ತರನ್ನ ಕರೆಸಿ ಅವರು ದೂರದೂರುಗಳಿಂದ ಬಂದಿದ್ದಾರೆ ನನಗೆ ಭೇಟಿ ಮಾಡಿಸಿ ಹಾಗೆ ಹೋಗೋದು ಬೇಡ ಎಂದು ಹೇಳುವುದಕ್ಕೆ ಶುರುಮಾಡಿದರು. ನಾವು ಪಾದುಕೆಗಳನ್ನ ಇಟ್ಟು ‘ಅದರಿಂದ ನಿಮ್ಮ ಆಶೀರ್ವಾದ ಪಡೆದುಕೊಂಡು ನಿಮ್ಮನ್ನ ದೂರದಿಂದ ನೋಡಿಕೊಂಡು ಹೋಗುವ ಅವಕಾಶ ಮಾಡುತ್ತೇವೆ’ ಎಂದು ಹೇಳಿದಾಗ ಸಿಟ್ಟಾದರು.
‘ಭಕ್ತರಿಗೆ ಹಸಿವು ಪ್ರಸಾದ ಹೊಟ್ಟೆ ತುಂಬಿದ ತಕ್ಷಣ ಹೋಗುತ್ತದೆ. ಆದರೆ ಮಾನಸಿಕವಾದ ನೋವು ಅವರು ಯಾರ ಬಳಿ ಹೇಳಿಕೊಳ್ತಾರೆ. ದೂರದಿಂದಲೇ ಅವರನ್ನ ಕಳುಹಿಸೋದಾದ್ರೆ ಗುರುವಿನ ಪೀಠದಲ್ಲಿದ್ದ ನನಗೆ ಏನು ಕೆಲಸ? ನನಗೆ ಭಕ್ತರ ಕಷ್ಟ ಕೇಳುವುದೇ ಕೆಲಸ’ ಎನ್ನಲಿಕ್ಕೆ ಶುರು ಮಾಡಿದರು. ಹೇಗೆ ಜಲ ಗಂಗೆಯನ್ನ ಸೇರಿದೊಡನೆ ಗಂಗಾಜಲವಾಗುತ್ತದೆಯೋ ಹಾಗೆ ಜನರ ಕಷ್ಟ ಗುರುಗಳ ಕಿವಿಗೆ ಬಿದ್ದರೆ, ಕಷ್ಟವೂ ಪರಿಹಾರದ ರೂಪ ಹೊಂದುವುದು ಎನ್ನುವುದು ಶ್ರಿಗಳ ವಿಚಾರವಾಗಿತ್ತು. ಕೊನೆಗೆ ಮೂರು ತಿಂಗಳ ಕಾಲ ಭಕ್ತರನ್ನ ನಿಯಂತ್ರಿಸಿದ್ದೆ ದೊಡ್ಡ ವಿಚಾರ, ಆಶೀರ್ವಾದ ಎಂದು ಸಮಾಧಾನ ಪಟ್ಟುಕೊಂಡು ಕೊನೆಗೆ ಭಕ್ತರಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು.
ಅದೊಂದು ಅವಿಸ್ಮರಣೀಯ ಕ್ಷಣ! ಹಸುವಿನ ಬಳಿ, ಕೊರಳ ಹಗ್ಗ ಕಳಚಿದ ತಕ್ಷಣ ನೊರೆಹಾಲಿಗಾಗಿ ಹೇಗೆ ಕರುವು ಓಡಿ ಬರುವುದೋ, ಹಾಗೆ ಪರಮ ಪುಣ್ಯಪುರುಷರಾದ ಶ್ರಿಗಳ ಅಮೃತವೆನ್ನುವ ಆಶೀರ್ವಾದ ಪಡೆಯಲು ಭಕ್ತರು ಓಡೋಡಿ ಬಂದರು. ಶ್ರಿಗಳ ಪಾದಗಳನ್ನು ಹಣೆಯಿಂದ ಮುಟ್ಟಿಸಿದರು.
‘ಹೇಗಿದ್ದಿರಾ ಬುದ್ದೀ?’ ಎಂದು ಕೇಳಿದರು, ತಮ್ಮ ಸಂಕಟ ಹೇಳಿಕೊಂಡು ಕಣ್ಣೀರಾದರು. ಭಕ್ತರನ್ನ ನೋಡಿ ಶ್ರಿಗಳ ಕಣ್ಣಿನಲ್ಲಿ ಅದೇನು ಸಂಭ್ರಮ!
ನಾನಂತೂ ಶ್ರಿಗಳ ಈ ಸಂತಸ ನೋಡಿ ಮೂಕ ವಿಸ್ಮಿತನಾದೆ ಯಾವುದೇ ಭಕ್ತರು ಬರಲಿ ಅವರೊಂದಿಗೆ ಶ್ರಿಗಳು ಮಾತನಾಡುತ್ತಿದ್ದರು.
‘ಎಲ್ಲಿಂದ ಬಂದ್ರಿ, ಮಳೆ ಹೇಗಿದೆ, ಬೆಳೆ ಕೊಯ್ಲು ಮಾಡಿದ್ದಾಯ್ತಾ?’ ಎಂದು ಗಂಡಸರಿಗೆ, ‘ಹೇಗಿದ್ಯಮ್ಮ ಗಂಡ ಚೆನ್ನಾಗಿ ನೋಡ್ಕತಿದ್ದಾನಾ, ಮಕ್ಕಳನ್ನ
ಚೆನ್ನಾಗಿ ನೋಡ್ಕೋತಿ ದ್ದೀಯಾ?’ ಎಂದು ಹೆಂಗಸರಿಗೆ, ‘ಹೇಗಿದ್ಯ ಮಗೂ ಏನ್ ಓದ್ತಿದೀಯಾ?’ ಎಂದು ಪುಟಾಣಿ ಮಕ್ಕಳಿಗೆ ಕೇಳುತ್ತಾ ಅವರೊಟ್ಟಿಗೆ ಪುಟ್ಟ ಸಂಭಾಷಣೆಯಲ್ಲಿ ತೊಡಗುತ್ತಿದ್ದರು. ಶ್ರಿಗಳ ಮೊಗದಲ್ಲಿ ತೇಜಸ್ಸು ಮಿನುಗುತ್ತಿತ್ತು. ಭಕ್ತರ ಪ್ರತಿ ಸಂಕಟದ ಉಸಿರು ಅವರಿಗೆ ತಾಕುತ್ತಿತ್ತು. ಮಠದ ಮಂಚದ
ಮೇಲೆ ಕುಳಿತು ಭಕ್ತರ ಮಾತುಗಳನ್ನಾಲಿಸುತ್ತಾ, ಮಕ್ಕಳೊಂದಿಗೆ ನಲಿಯುತ್ತಾ ಶ್ರಿಗಳು ತಮ್ಮಷ್ಟಕ್ಕೆ ತಾವು ಎನ್ನುವಂತಿದ್ದರು.
ಶ್ರಿಗಳ ಮುಂದೆ ಭಕ್ತರಲ್ಲಿ ದೊಡ್ಡವರು ಚಿಕ್ಕವರು ಎನ್ನುವ ಭೇದ ಇರಲಿಲ್ಲ. ತಾಯಿಗೆ ತನಗೆಷ್ಟೇ ಮಕ್ಕಳಿದ್ದರೂ ಭೇದ ಮಾಡುವುದಿಲ್ಲವಲ್ಲ ಆ ರೀತಿ ಇತ್ತು ಶ್ರಿಗಳ ಭಾವನೆ. ಶ್ರಿಗಳು ಭಕ್ತರ ಭೇಟಿಯ ಜೊತೆ ಜೊತೆಗೆ ತುಮಕೂರಿನ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಹೋಗಲಿಕ್ಕೆ ಶುರುಮಾಡಿದರು. ದೂರ ಪ್ರಯಾಣ
ಖಡ್ಡಾಯವಾಗಿ ಮಿತಿಯಾಗಿದ್ದರೂ ತೀರಾ ಭಕ್ತರ ಒತ್ತಡಕ್ಕೆ ಶ್ರಿಗಳು ಹೋಗಲೇಬೇಕಾಯಿತು.
ಶ್ರಿಗಳ ಆಹಾರದಲ್ಲಿ ಹೆಚ್ಚಿನ ಬದಲಾವಣೆಯಾಯಿತು. ಬೆಳಗ್ಗೆಯ ಶಿವಪೂಜೆಯನ್ನ ಸ್ವಲ್ಪ ತಡವಾಗಿ ಅಂದರೆ ೫ ಗಂಟೆಯಿಂದ ಶುರುಮಾಡಿಸಲಾಯಿತು. ೮ ಗಂಟೆಯ ನಂತರ ಭಕ್ತರ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಶ್ರಿಗಳ ಶಿಷ್ಯರ ಜೊತೆಗೆ ವೈದ್ಯರಾಗಿ ಸದಾಕಾಲವೂ ಕಾಳಜಿ ವಹಿಸುವಂತೆ ನಾವು ಏರ್ಪಾಡು ಮಾಡಿಕೊಂಡೆವು. ಮುಪ್ಪಿಲ್ಲದಂತೆ ಸದಾ ಜೀವನೋತ್ಸಾಹ ತುಂಬಿಕೊಂಡಿದ್ದ ಶ್ರಿಗಳಿಗೆ ನ್ಯುಮೋನಿಯಾ ಬಳಲಿಕೆಯ ನಂತರ ಕೊಂಚ ಕೊಂಚವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಯಿತು. ನಾವು ಎಷ್ಟೇ ಕಾಳಜಿ ಮಾಡಿದರೂ ಶ್ರಿಗಳ ತ್ರಿಕಾಲನಿಷ್ಠ ಸ್ನಾನ ಪೂಜೆ, ಗಂಟೆಗಳ ಕಾಲ ಶಿವಪೂಜೆ, ಭಕ್ತರ ಜೊತೆಗೆ ಗಂಟೆಗಳ ಕಾಲ ಮಾತುಕತೆ ಶ್ರಿಗಳಿಗೆ ವಿಶ್ರಾಂತಿಯ ಅಗತ್ಯತೆಯನ್ನ ಹೆಚ್ಚು ತೋರಿಸುತ್ತಿತ್ತು.
ಆದರೆ ಶ್ರಿಗಳಿಗೆ ಭಕ್ತರು, ಮಕ್ಕಳು ಇವೆರಡೇ ಅವರ ಜೀವನದ ಪ್ರಮುಖ ಗುರಿಗಳಾಗಿದ್ದರಿಂದ ಅದನ್ನ ಹೊರತು ಪಡಿಸಿ ಅವರಿಗೆ ವಿಶ್ರಾಂತಿ ಹೇಳಲು ಎಲ್ಲಾ ಸಮಯಕ್ಕೂ ನಮಗೆ ಸಾಧ್ಯವಾಗುತ್ತಿರಲಿಲ್ಲ.