Tuesday, 28th May 2024

ಹಳೆಯ ಮಠದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಸಹಿಸುತ್ತಿರಲಿಲ್ಲ !

ಮಹಾ ಬಯಲು- ೧೪

ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ಶ್ರೀಗಳಿದ್ದ ಹಳೆಯ ಮಠದಲ್ಲಿ ಅನೇಕ ಬದಲಾವಣೆ ಮಾಡಬೇಕಾಯಿತು. ಯಾಕೆಂದರೆ ತುಂಬಾ ಹಳೆಯದ್ದು ಸದೃಢವಾಗಿದ್ದ ಮಠದಲ್ಲಿ ಶ್ರೀಗಳ ಆರೋಗ್ಯ ದೃಷ್ಟಿಯಿಂದ ಅನೇಕ ಬದಲಾವಣೆ ಆಗಲೇಬೇಕು ಎಂದು ಬೇರೆ ಬೇರೆ ವೈದ್ಯರು ಕೂಡ ಸಲಹೆ ನೀಡಿದ್ದರು. ಪ್ರಮುಖವಾಗಿ ಅವರ ಅಡುಗೆ
ಕೋಣೆಯಲ್ಲಿ ಸೌದೆ ಒಲೆಯನ್ನ ಬದಲಾಯಿಸಿದೆವು. ಶ್ರೀಗಳ ನೂರನೇ ವಯಸ್ಸಿನವರೆಗೂ ಒಲೆಯಿಂದ ತಯಾರಿಸಿದ ಅಹಾರ ತಯಾರಿಸಬೇಕಿತ್ತು. ಆ ಜಾಗಕ್ಕೆ ಸ್ಟೌವ್ ಹಾಕಿಸಿದೆವು. ಶ್ರೀಗಳ ವಿಶ್ರಾಂತಿ ಕೊಠಡಿಯನ್ನು ಮೂಲ ಕಟ್ಟಡ ವಿನ್ಯಾಸಕ್ಕೆ ಹಾನಿಯಾಗದಂತೆ ಆಧುನೀಕರಣಗೊಳಿಸಿದೆವು. ಇವೆಲ್ಲಾ ಮಾಡಲಿಕ್ಕೆ ಎರಡರಿಂದ ಮೂರು ತಿಂಗಳು ಬೇಕಾಯ್ತು. ಏಕೆಂದರೆ ಶ್ರೀಗಳು ಪ್ರತಿಯೊಂದನ್ನೂ ಬಹಳ ಸೂಕ್ಷ್ಮವಾಗಿ ಗಮನಿಸಿ ಒಪ್ಪಿಗೆ ನೀಡುತ್ತಿದ್ದರು.

ಏನಾದ್ರು ಬದಲಾವಣೆ ಮಾಡೋದಾದ್ರೆ ಅದಕ್ಕೆ ಎಷ್ಟು ಖರ್ಚಾಗುತ್ತೆ ಎನ್ನುವುದನ್ನೂ ಕೇಳುತ್ತಿದ್ದರು. ನಾವು ಪ್ರತಿಯೊಂದಕ್ಕೂ ತಾಳ್ಮೆಯಿಂದ ಉತ್ತರಿಸಿ ಬದಲಾವಣೆ ಮಾಡಿದೆವು. ಗುರುಗಳಿಗೆ ಅವರ ಒಪ್ಪಿಗೆ ಇಲ್ಲದೆ ಯಾವುದಾದರೂ ಕೆಲಸವಾದರೆ ಅಥವಾ ಯಾರಾದ್ರು ತಪ್ಪು ಮಾಡಿದರೆ ಶ್ರೀಗಳಿಗೆ ಕೋಪ ಬರುತ್ತಿತ್ತು. ಆದರೆ ಆ ಕೋಪವನ್ನ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ತಮ್ಮೊಳಗೆ ಆ ಕೋಪವನ್ನ ಅದುಮಿಟ್ಟುಕೊಳ್ಳುತ್ತಿದ್ದರು. ಅದರ ಪರಿಣಾಮ ಅವರ ದಿನಚರಿಯ ಮೇಲಾಗುತ್ತಿತ್ತು. ಹಳೆಯ ಮಠದಲ್ಲಿ ಒಂದು ಕಡ್ಡಿ ಮುರಿದರೂ ಅವರು ಅದನ್ನ ಸಹಿಸುತ್ತಿರಲಿಲ್ಲ. ಆ ಕೋಪಕ್ಕೆ ಅವರು ಶಿವಪೂಜೆ ನಡೆಸಿದ ನಂತರ ತಾವು ಪ್ರಸಾದವನ್ನೇ ಸ್ವೀಕರಿಸುತ್ತಿರಲಿಲ್ಲ. ಮತ್ತಷ್ಟು ಮೌನಿಯಾಗುತ್ತಿದ್ದರು.

ಯಾರೊಂದಿಗೂ ಹೀಗಾಗಿದೆ ಎಂದು ಹೇಳಿಕೊಳ್ಳುತ್ತಲೇ ಇರಲಿಲ್ಲ. ಶ್ರೀಗಳ ಮೌನವನ್ನ ನೋಡಿ ನಾವೇ ಅರ್ಥ ಮಾಡಿಕೊಂಡು ಕ್ಷಮೆ ಕೇಳಬೇಕಿತ್ತು
ಹೊರತು ಅವರಾಗೇ ತಮಗಾದ ನೋವನ್ನ ಅಥವಾ ತಾವು ಕಂಡ ತಪ್ಪನ್ನು ಹೇಳಿಕೊಳ್ಳುತ್ತಿರಲಿಲ್ಲ.

ಶ್ರೀಗಳಿಗೆ ನೀರು ಪೋಲಾಗುವಂತಿರಲಿಲ್ಲ. ಟ್ಯಾಪ್‌ನಲ್ಲಿ ನೀರು ಹರಿದು ಹೋಗುತ್ತಿದ್ದರೆ ಸಿಡಿಮಿಡಿಗೊಳ್ಳುತ್ತಿದ್ದರು. ಮಕ್ಕಳಲ್ಲೂ ಅಷ್ಟೇ ನೀರಿನ ವಿಚಾರ
ದಲ್ಲಿ ಬಹಳ ಜಾಗರೂಕವಾಗಿರುವಂತೆ ಹೇಳುತ್ತಿದ್ದರು. ವಿದ್ಯುತ್ ಸುಮ್ಮನೆ ಉರಿಸುವಂತಿರಲಿಲ್ಲ. ಅವರು ಹಳೆಯ ಮಠಕ್ಕೆ ಬಂದ ತಕ್ಷಣ ಮಿಕ್ಕೆಲ್ಲಾ ಲೈಟ್
ಬಂದ್ ಆಗಬೇಕಿತ್ತು. ನೀವು ಒಂದು ತೊಟ್ಟು ನೀರು ಉಳಿಸಿದರೂ ಅದನ್ನ ನಿಮ್ಮ ಮಕ್ಕಳು ಭವಿಷ್ಯದಲ್ಲಿ ಕುಡಿಯುತ್ತಾರೆ ಎಂದು ಸದಾ ಹೇಳುತ್ತಿದ್ದರು.
ಇಡೀ ಮಠದಲ್ಲಿ ಶ್ರೀಗಳು ಸಂಚಾರಕ್ಕೆ ಹೋದಾಗ ಪ್ರತಿಯೊಂದು ಟ್ಯಾಪ್ ಕೂಡ ಗಮನಿಸುತ್ತಿದ್ದರು. ಅದರಲ್ಲಿ ಒಂದು ತೊಟ್ಟು ನೀರು ವ್ಯರ್ಥವಾಗಿ
ಹೋಗುತ್ತಿದ್ದರೂ ಬಂದ್ ಮಾಡುವಂತೆ ಹೇಳುತ್ತಿದ್ದರು. ಅನವಶ್ಯಕವಾಗಿ ವಿದ್ಯುತ್ ಉರಿಯುವಂತಿರಲಿಲ್ಲ. ಶ್ರೀಗಳು ವಿಶ್ರಾಂತಿಗೆ ಹೋದ ನಂತರ ಭಕ್ತರು
ಹೋಗೋವರೆಗೂ ಮಠದಲ್ಲಿ ವಿದ್ಯುತ್ ಉರಿಯಬೇಕಿತ್ತು.

ಒಮ್ಮೆ ಭಕ್ತರು ಹೋದರೆ ತಕ್ಷಣವೇ ವಿದ್ಯುತ್ ಬಂದ್ ಆಗಬೇಕಿತ್ತು. ಇಲ್ಲವಾದರೆ ಕೋಪಗೊಳ್ಳುತ್ತಿದ್ದರು. ಜೊತೆಗೆ ತಮ್ಮ ನೂರನೇ ವಯಸ್ಸಿನಲ್ಲೂ ಶ್ರೀಗಳು ಮಠದ ಪ್ರತಿಯೊಂದು ಲೆಕ್ಕವನ್ನು ಗಮನಿಸುತ್ತಿದ್ದರು. ಅವರಿಗೆ ಒಂದು ರೂಪಾಯಿ ಕೂಡ ಕಾರಣವಿಲ್ಲದೆ ನಷ್ಟವಾಗುವುದು ಇಷ್ಟವಿರಲಿಲ್ಲ. ಮಠಕ್ಕೆ ಕೊಳ್ಳುವ ಪ್ರತಿಯೊಂದು ವಸ್ತು ಅಂದ್ರೆ ಒಂದು ಕಸ ಎತ್ತಲು ಬೇಕಿರುವ ಮಂಕರಿಯನ್ನ ಕೊಳ್ಳಬೇಕಿದ್ದರೂ ಶ್ರೀಗಳ ಗಮನಕ್ಕೆ ತಂದೇ ತಗೋ ಬೇಕಿತ್ತು. ಅದನ್ನ ಅವರು ಪರೀಕ್ಷೆ ಮಾಡಿ ಇದಕ್ಕೆಷ್ಟು ಎಂದು ವಿಚಾರಿಸಿ ಅದು ರೈತರು ತಂದಿದ್ದರೆ ಅವರು ಕೇಳಿದ ಹಣ ಕೊಡಿಸುತ್ತಿದ್ದರು. ಜೊತೆಗೆ ಆಹಾರದಲ್ಲಿಯೂ ಅಷ್ಟೆ ಎಲ್ಲರಿಗೂ ಒಂದೇ ರೀತಿಯ ಆಹಾರ ಕೊಡಬೇಕಿತ್ತು. ಭಕ್ತರಿಗೆ ವಿಐಪಿ ಹಾಗೂ ವಿವಿಐಪಿಗಳಿಗೂ ಒಟ್ಟಿಗೆ ಅಡುಗೆಯಾಗಬೇಕಿತ್ತು.

ಇನ್ನು ಮಠದಲ್ಲಿ ಏನಾದರೂ ಕಳ್ಳತನವಾದರೆ. ಕಳ್ಳತನ ಮಾಡಿದವನು ಯಾರು ಎಂದು ಗೊತ್ತಾದರೆ ಆತನನ್ನ ಶಿಕ್ಷಿಸುತ್ತಿರಲಿಲ್ಲ. ಕೆಲವೊಮ್ಮೆ ಮಠದಲ್ಲಿ
ತರಕಾರಿಗಳು ಕಾಣೆಯಾಗುತ್ತಿದ್ದವು, ಭಕ್ತರು ಕೊಟ್ಟಿದ್ದ ಅನೇಕ ವಸ್ತುಗಳು ಕಾಣೆಯಾಗುತ್ತಿದ್ದವು, ಗೋಡಂಬಿ, ದ್ರಾಕ್ಷಿ ಮೂಟೆಗಳ ಲೆಕ್ಕದಲ್ಲಿ ಕಾಣೆಯಾ ಗಿತ್ತು. ಆಗೆಲ್ಲಾ ಕಳ್ಳ ಯಾರು ಎಂದು ಪತ್ತೆಯಾದರೂ, ಶ್ರೀಗಳು ಆತನನ್ನ ಬಿಟ್ಟುಬಿಡಿ ಎನ್ನುತ್ತಿದ್ದರು. ಆತ ಹೊಟ್ಟೆಪಾಡಿಗೆ ಮಾಡಿರಬಹುದು ಇಲ್ಲ ಅತಿಯಾದ ಆಸೆಯಿಂದ ಮಾಡಿರಬಹುದು ಎರಡೂ ಕೂಡ ಆತ ತನ್ನಲ್ಲೇ ತಾನು ಮಾಡಿದ್ದು ಸರಿಯಾ ಎಂದು ಕೇಳುವಂತೆ ಮಾಡುತ್ತದೆ. ಆತ್ಮಸಾಕ್ಷಿಗಿಂತ ಪ್ರಬಲವಾದ ಗುರು ಮತ್ತೊಬ್ಬರಿಲ್ಲ. ಆತನನ್ನ ಬಿಡಿ ಅವನ ತಪ್ಪಿಗೆ ಅವನೇ ಶಿಕ್ಷೆ ಅನುಭವಿಸುತ್ತಾನೆ ಎನ್ನುತ್ತಿದ್ದರು. ಕೆಲವೊಮ್ಮೆ ಕದ್ದವರು ಮಾನಸಿಕ ತೊಳಲಾಟ ತಾಳಲಾರದೆ ‘ತಪ್ಪಾಯ್ತು ಬುದ್ಧಿ’ ಎಂದು ಬಂದು ಶ್ರೀಗಳ ಮುಂದೆ ಬಿದ್ದು ಬೇಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!