Sunday, 10th November 2024

ಶಂಕರ ಭಗವತ್ಪಾದರು

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಶಂಕರರು ದರ್ಶನಾಚಾರ್ಯರು. ಸ್ವತಂತ್ರ ವಿಚಾರಪರರು. ಜಗತ್ತಿನ ದಾರ್ಶನಿಕ ಕ್ಷೇತ್ರದಲ್ಲಿ ಶ್ರೇಷ್ಠ ಆಚಾರ್ಯರಲ್ಲಿ ಪ್ರಮುಖರು. ಚೈತನ್ಯ ಎನ್ನುವುದು ಇಡಿಯ ಸೃಷ್ಟಿಯ ಹಿಂದಿರುವ ಶಕ್ತಿ. ಈ ಶಕ್ತಿ ಎಲ್ಲೆಲ್ಲಿಯೂ ಇದೆ ಎಂಬ ಸತ್ಯವನ್ನು ಸ್ಥಾಪಿಸಿದವರು ಶ್ರೀ ಶಂಕರಾಚಾರ್ಯರು. ಜಗತ್ತು ಜೀವ ಮತ್ತು ಈಶ್ವರ ಈ ತತ್ತ್ವಗಳ ಸಾರವನ್ನು ಅವರ ಸಿದ್ಧಾಂತದಲ್ಲಿ ಕಾಣಬಹುದು. ಶ್ರೀ ಶಂಕರರು ಅದ್ವೈತ ಪ್ರವರ್ತಕರು. ಸೋತ್ರಗಳನ್ನು ಭಕ್ತಿ ಸಾಹಿತ್ಯವನ್ನು ತಾತ್ತ್ವಿಕ ಚಿಂತನೆ ಗಳನ್ನು ಸಂಸ್ಕೃತದಲ್ಲಿ ಅತಿ ರಮ್ಯವಾಗಿ ರಚಿಸಿ ಜನರಿಗೆ ಮುಟ್ಟಿಸಿದ ಈ ಸಂತರು ಅದ್ಭುತ ಕವಿಗಳೂ ಆಗಿರುವರು. ಅವರ ಜನ್ಮದಿನವನ್ನು ತತ್ತ್ವ ಶಾಸಜ್ಞರ ದಿನವನ್ನಾಗಿ ನಮ್ಮಲ್ಲಿ ಆಚರಿಸಲಾಗುತ್ತದೆ.

ಜೀವಲೋಕದ ಹಿತ ಕಾಯಲು ಭೂಮಿಗಿಳಿದ ಪರಶಿವನ ಪರಮಾರಾಧ್ಯಮೂರ್ತಿ ಶ್ರೀ ಶಂಕರ ಭಗವ ತ್ಪಾದರು. ಇಂತಹ ಕರುಣಾನಿಧಿ ಭಗವತ್ಪಾದರ ಜೀವನ ಮತ್ತು ಉಪದೇಶಗಳ ಅನುಸಂಧಾನದ ಮಹಾಪರ್ವ ಶಂಕರಪಂಚಮೀ. ಎಂಟನೇ ಶತಮಾನದಲ್ಲಿ ಕೇವಲ ೩೨ ವರ್ಷ ಬದುಕಿ, ತನ್ನ ಸೀಮಿತ
ಜೀವಿತಾವಧಿಯಲ್ಲಿ ಭರತಖಂಡದ ಹರಹಿನಲ್ಲಿ ಸಂಚರಿಸಿ, ಸನಾತನ ಧರ್ಮಕ್ಕೆ ಕಾಯಕಲ್ಪ ನೀಡಿದ ದಾರ್ಶನಿಕ ಶ್ರೀ ಶಂಕರಚಾರ‍್ಯರು ಇವತ್ತಿಗೂ ಭಾರತೀಯರ ಮಾನಸ ಲೋಕದಲ್ಲಿ ಅವತರಿಸುತ್ತಲೇ ಇರುತ್ತಾರೆ.

ಶಂಕರ ಪ್ರಣೀತ ಅದ್ವೈತ ಸಿದ್ಧಾಂತದ ಬಗ್ಗೆ ಆಚಾರ ನಿಷ್ಠರಿಗೆ ಭಕ್ತಿಯಿದೆ, ವಿಚಾರವಾದಿಗಳಿಗೆ ಆಸ್ಥೆಯಿದೆ, ಅನ್ಯರಿಗೆ ತಾಟಸ್ಥ್ಯದ ಜತೆಗೆ ಆಸಕ್ತಿಯೂ ಇದೆ. ಮನುಕುಲ ಇರುವಷ್ಟು ಕಾಲ ಸ್ಥಿರವಾಗಿ ಉಳಿಯಲಿರುವ ಶಂಕರ ತತ್ತ್ವದ ವಿಚಾರ ಲಹರಿ. ಪುಣ್ಯ ಭೂಮಿಯಾದ ಭರತವರ್ಷದ ದಿವ್ಯಾಕಾಶದಲ್ಲಿ
ಯತಿಪರಂಪರೆಯೆಂಬ ನಕ್ಷತ್ರ ಮಂಡಲದೊಳಗೆ ಶ್ರೀ ಶಂಕರರು ಧ್ರುವ ನಕ್ಷತ್ರದಂತೆ ಬೆಳಗುತ್ತಿರುವವರು. ಅವರು ಪರಮೋಚ್ಛ ಕೋಟಿಯ ಸಾಧಕರು, ಸಂತರು ; ಭಕ್ತರು, ಜ್ಞಾನಿಗಳು, ಕವಿಗಳು, ದಾರ್ಶನಿಕರು. ತಮ್ಮ ಪರಿಮಿತಾ ಯುಷ್ಯದಲ್ಲಿಯೇ ಅಪರಿಮಿತವಾದುದನ್ನು ಅವರು ಸಾಧಿಸಿದ್ದರು.

ಬ್ರಹ್ಮದೃಷ್ಟಿಯಿಂದ ಸಮಾಜದ ಒಳಿತಿಗೆ ವ್ಯಾಪಕವಾಗಿ ಒತ್ತು ಕೊಟ್ಟವರು ಶಂಕರರು. ಆಚಾರ್ಯ ಶಂಕರರು ಲೋಕ ಸಂಗ್ರಹಕ್ಕಾಗಿಯೇ ಅವತರಿಸಿ ದವರು. ಆಸ್ತಿಕ್ಯವನ್ನೂ ಸನಾತನ ಧರ್ಮವನ್ನೂ ಉದ್ಧರಿಸಲೆಂದು ಸಾಕ್ಷಾತ್ ಪರಮೇಶ್ವರನೇ ಬ್ರಹ್ಮ ಇಂದ್ರಾದಿ ದೇವತೆಗಳೊಂದಿಗೆ ವಿಚಾರಮಾಡಿ ಕೇರಳ ಪ್ರಾಂತ್ಯದಲ್ಲಿ ಶಂಕರರಾಗಿ ಅವತರಿಸಿ ದನೆಂದು ತಿಳಿಯುವುದು. ಆಚಾರ್ಯ ಶಂಕರರು ಬಹುಮುಖ ವ್ಯಕ್ತಿತ್ವ. ಅವರು ಏಕಕಾಲದಲ್ಲಿ ಯೋಗಿ, ಜ್ಞಾನಿ, ಭಕ್ತ, ಧರ್ಮೋಪದೇಶಕ, ಸಮಾಜ ಸುಧಾರಕ, ಕವಿ ಮತ್ತು ವ್ಯಾಖ್ಯಾತ ಇವೆಲ್ಲ ಶಕ್ತಿಗಳನ್ನು ಅವರು ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ವಾಕ್ಯದಂತೆ, ತನಗಾಗಿ ಮಾತ್ರವೆಂದು ತಿಳಿಯದೇ ಲೋಕಹಿತಕ್ಕಾಗಿಯೂ ಬಳಸಿದರು. ಅವರು ಸಾಧಕರಾಗಿಯೂ ಉಪದೇಶಕರಾಗಿಯೂ ಎಂದೂ ಅಂಧಶ್ರದ್ಧೆಯನ್ನು ಹಿಡಿದವರಲ್ಲ, ಬೋಧಿ ಸಿದವರಲ್ಲ.

ವಿವೇಚನೆಗೆ, ಯುಕ್ತಿಗೆ ಒಪ್ಪದ ಆಚಾರ ವಿಚಾರಗಳನ್ನು ತಿರಸ್ಕರಿಸುವುದರಲ್ಲಿ ಅಧೈರ್ಯದಿಂದ ಹಿಂಜರಿದವರಲ್ಲ, ಆಗ್ರಹ ಪಡಿಸಿದವರಲ್ಲ.  ಲೋಕ ಹಿತ ದಲ್ಲಿ ಆಸಕ್ತನಾದವನಿಗೆ ಸ್ವಂತ ಸುಖದ ಚಿಂತೆಯೇ ಇರುವುದಿಲ್ಲ. ಅವನು ಪ್ರೇಮ, ತ್ಯಾಗ ದಯೆ, ವಾತ್ಸಲ್ಯಗಳ ಚಿರಂತನ ಮೂರ್ತಿ ಯಾಗಿರುತ್ತಾನೆ. ಇದಕ್ಕೆ ಆಚಾರ್ಯ ಶಂಕರರು ಉಜ್ವಲ ನಿದರ್ಶನವೆನ್ನಬೇಕು.

? ಒಣಗಿದ ನೆಲ್ಲಿಕಾಯಿಯನ್ನು ಭಿಕ್ಷೆಯಾಗಿ ನೀಡಿದ ಬ್ರಾಹ್ಮಣತಿಯ ವಿಷಯದಲ್ಲಿ ಆಚಾರ್ಯ ಶಂಕರರಿಗೆ ಉಂಟಾದುದು ಉದಾಸೀನವಲ್ಲ, ತಿರಸ್ಕಾರ ವಲ್ಲ, ದಯೆ.

? ಅಶಕ್ತಳಾದ ತಾಯಿಗೆ ನದಿಯ ಸ್ನಾನ ಕಷ್ಟವಾದಾಗ, ಆಚಾರ್ಯ ಶಂಕರರಿಗೆ ಹುಟ್ಟಿದ್ದು ಬೇಸರವಲ್ಲ, ಮರುಕ.
? ಮಂದಮತಿಯಾದ ಶಿಷ್ಯ ಗಿರಿಯ ಶ್ರೇಯಸ್ಸಿನಲ್ಲಿಯೂ ಇವರು ವಹಿಸಿದ ಮಿಗಿಲಾದ ಆಸಕ್ತಿಗೆ ಮೂಲಸೆಲೆ ಪ್ರೇಮವಲ್ಲದೆ ಅನ್ಯಥಾ ಅಲ್ಲ.
? ನರಳುತ್ತಿದ್ದ ಕುಷ್ಠರೋಗಿಯನ್ನು ಮೈಮುಟ್ಟಿ ಉಪಚರಿಸುವುದರಲ್ಲಿ ಅವರಿಗೆ ಯಾವ ಅಸಹ್ಯವೂ ಹುಟ್ಟಲಿಲ್ಲ.

? ಶ್ರೀ ಶೈಲ ಕ್ಷೇತ್ರದಲ್ಲಿ ಸುರಾಪಾನಾಸಕ್ತರಾಗಿದ್ದ ಕಪಾಲಿಕರನ್ನು ಕಂಡು, ಸುರಾಪಾನವು ಬುದ್ಧಿಯ ಸಮತೋಲನವನ್ನು ಕೆಡಿಸಿ ಮನುಷ್ಯರಿಂದ ನೀಚ ಕಾರ್ಯವನ್ನು ಮಾಡಿಸುವುದೆಂದೂ ದೃಷ್ಟಾಂತ ಕಥೆಯ ಮೂಲಕ ಅವರು ತಿಳಿಯ ಹೇಳಿದರಲ್ಲದೆ, ಅವರನ್ನು ಪರಿವರ್ತಿಸುವಲ್ಲಿಯೂ ಯಶಸ್ವಿ ಯಾದರು.
? ಕೊಲ್ಲೂರು ಮೂಕಾಂಬಿಕೆಯ ಹತ್ತಿರ, ನಿರ್ವಿಣ್ಣರಾಗಿದ್ದ ತಂದೆ ತಾಯಿಗಳಿಗೆ ಸತ್ತ ಮಗುವನ್ನು ಆಚಾರ್ಯ ಶಂಕರರು ಬದುಕಿಸಿಕೊಟ್ಟರೆಂಬ ಐತಿಹ್ಯದ ಜತೆ, ಅಂತಹ ಒಂದು ದಾರುಣ ಸನ್ನಿವೇಶದಲ್ಲಿ ಆ ತಂದೆ ತಾಯಿಗೆ ದುಃಖ ಶಮನವಾಗುವಂತೆ ವಾತ್ಸಲ್ಯ ವರ್ಷವನ್ನು ಕರೆದು, ಅವರಿಗೆ ದೇಹಾ ನಿತ್ಯತೆ ಯನ್ನೂ ಆತ್ಮದ ಶಾಶ್ವತತೆಯನ್ನೂ ಮನವರಿಕೆ ಮಾಡಿಕೊಟ್ಟಿದ್ದರು.

ಈ ಎಲ್ಲಾ ಸಂಧರ್ಭಗಳಲ್ಲಿಯೂ ಅವರು ‘ಶ್ರುತಿ ಸ್ಮತಿಪುರಾಣಾಮಾಲಯಂ ಕರುಣಾಲಯಂ’ ಎಂಬ ವರ್ಣನೆಗೆ ತಕ್ಕವರಾದರು. ಶಂಕರರು ತಾವು ವೈಯಕ್ತಿಕವಾಗಿ ನಡೆಸಿದ ಚಿಂತನ ಮಂಥನಗಳಿಂದ, ವೇದೋಪನಿಷತ್ತುಗಳು ಅನ್ವೇಷಿಸಿದ ಹಾಗೂ ಪ್ರತಿಪಾದಿಸಿದ ಸತ್ಯ ಎನ್ನುವುದು ಅದ್ವೈತವಲ್ಲದೆ ಅನ್ಯಥಾ ಅಲ್ಲ ಎಂಬುದನ್ನು ಮೊದಲು ಮನಗಂಡರು ಎನ್ನುವುದಕ್ಕೆ ಸ್ವಾನುಭವ ಪಡೆದರು ಎಂದೇಅರ್ಥ. ತಾವು ದರ್ಶಿಸಿದ ಆ ಅದ್ವೈತವನ್ನು ಭರತ ಖಂಡದ ಸಕಲರಿಗೂ ಅನುಷ್ಠಾನಯೋಗ್ಯವಾಗಬೇಕೆಂದು ಬಯಸಿ, ತಮ್ಮ ಆಪ್ತ ಶಿಷ್ಯರ ಮೂಲಕ ಅದರ ಪ್ರಚಾರಕ್ಕೆ ತೊಡಗಿದರು. ತಮ್ಮ ದೇಹಸ್ಥಿತಿ ಯನ್ನು ಗಣಿಸದೆ, ದೇಶವನ್ನು ಹಲವು ಸಲ ಸಂಚರಿಸಿದರು.

ವಾದಗಳ, ಸಂವಾದಗಳ ವಿಚಾರ, ವಿಮರ್ಶೆಗಳ, ಉಪದೇಶಗಳ, ಪ್ರವಚನಗಳ ಮೂಲಕ ತಾವು ಕಂಡ ಸತ್ಯವನ್ನು, ತತ್ತ್ವವನ್ನು, ಸಂದೇಶವನ್ನು ಸಕಲ ರಿಗೂ ಪ್ರಚಾರ ಮಾಡಿದರು. ಪ್ರಸ್ಥಾನತ್ರಯಗಳಿಗೆ ಭಾಷ್ಯಗಳನ್ನು ಬರೆದರು. ಪ್ರಕರಣ ಗ್ರಂಥಗಳನ್ನು ರಚಿಸಿದರು, ಭಾವನಿರ್ಭರಗಳಾದ ದೇವತಾ
ಸ್ತೋತ್ರಗಳನ್ನು ಹಾಡಿದರು. ಶಂಕರರ ಆಧ್ಯಾತ್ಮ ವ್ಮಾಯರಾಶಿ ಅಕ್ಷಯತೈಲ ಕುಂಭಗಳಾಗಿ ಒದಗಿ, ಇಂದಿಗೂ ಈಪ್ಸಿತರ ಸಲುವಾಗಿ ಜ್ಞಾನಮಯ
ಪ್ರದೀಪಗಳನ್ನು ಬೆಳಗುತ್ತಿದೆ, ಅವರು ಆಸೇತು ಹಿಮಾಚಲವೂ ಸನಾತನಧರ್ಮದ ಪ್ರಚಾರಕ್ಕೆ, ಸದಾಚಾರ ಪಾಲನೆಗೆ ಎಂದು ಧರ್ಮದರ್ಶಿಗಳನ್ನು ನಿಯಮಿಸಲೋ ಎಂಬಂತೆ ಚತುರಾಮ್ನಾಯಪೀಠಗಳನ್ನು ಸ್ಥಾಪಿಸಿದರು. ಲೋಕಾನುವರ್ತನೆಗೆ ಪೂಜಾಮೂರ್ತಿಗಳನ್ನು ಅನುಗ್ರಹಿಸಿ, ದೈವ ಶ್ರದ್ಧೆಗೆ
ಆಕೃತಿಯನ್ನು ನಿರ್ಮಿಸಿದರು.

ಭಾವ ಲಯ ರಸೋಲ್ಲಾಸ ಶ್ರೀ ಶಂಕರ

ಶ್ರೀ ಶಂಕರರು ಭರತಖಂಡದ ಧರ್ಮಭೂಮಿಕೆಯ ಮೇಲೆ ಕಾಣಿಸಿಕೊಂಡ ಕಾಲ ಒಂದು ಸಂಧಿಕಾಲವಾಗಿತ್ತು. ಲೋಕಾಯುತರು ನಾಸ್ತಿಕ್ಯವನ್ನು ಹರಡುತ್ತಿದ್ದರು. ಆತ್ಮದ ಅನೇಕತ್ವವನ್ನು ಪ್ರತಿಪಾದಿಸಿದ ಸಾಂಖ್ಯರು ಪರಮಾತ್ಮನನ್ನೇ ನಿರಾಕರಿಸಿದ್ದರು. ಕರ್ಮದ ಪ್ರಾಶಸ್ತ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಮೀಮಾಂಸಕರು, ನೈರಾತ್ಮ್ಯವಾದವನ್ನೂ ಶೂನ್ಯ ವಾದವನ್ನೂ ಪ್ರಚಾರ ಮಾಡುತ್ತಿದ್ದರು. ಬೌದ್ಧರು, ಸಪ್ತಭಂಗೀಯದ ಮೂಲಕ ಸತ್ಯದ ಸ್ವರೂಪವನ್ನು ಗೊಂದಲದಲ್ಲಿ ಕೆಡವಿ, ದೇವಾಸ್ತಕ್ಯವನ್ನು ನಿರಾಕರಿಸಿದ್ದರು.

ಜೈನರು, ಜೊತೆಗೆ ರಕ್ತಗಂಧಾನುಲೇಪನಾಸಕ್ತಶಾಕ್ತರು, ಮದ್ಯಪಿಗಳಾದ ಕಾಪಾಲಿಕರು, ತಪ್ತಚಿಹ್ನ ಧಾರಕರಾದ ಶೈವರು ಮತ್ತು ವೈಷ್ಣವರು ಹಿತಕರವಲ್ಲದ ಆಚಾರ ವಿಚಾರಗಳಲ್ಲಿ ಸಿಕ್ಕಿಕೊಂಡು ತೊಳಲುತ್ತಿದ್ದರು. ಇದರಿಂದ ಸನಾತನ ವೈದಿಕ ಧರ್ಮದ ಬೇರುಗಳು ಸಡಿಲಗೊಂಡು, ಜನರ
ಶ್ರದ್ಧಾಸ್ತಿಗಳು ಕಲಕಿ ಹೋಗಿದ್ದವು. ಸಾತ್ತ್ವಿಕವಾದ ಪೂಜೆ ಪುರಸ್ಕಾರಗಳ ಸ್ಥಾನದಲ್ಲಿ ಅಸಭ್ಯ ಬಹಿರಾಚರಣೆಗಳೂ, ನರಬಲಿ, ಪಶುಬಲಿಗಳಂತಹ ದುಷ್ಟ ಪೂಜಾವಿಧಾನಗಳೂ ಅಂದು ಪ್ರಚಲಿಸಿದ್ದವು. ಶಂಕರರು ಸನಾತನಧರ್ಮದ ತಿರುಳನ್ನು ಜ್ಞಾನಮಾರ್ಗದಿಂದ ಗುರುತಿಸಬೇಕೆಂಬ ಉಪಾಯವನ್ನು ತೋರಿಸಿ, ಸಾಧನೆಯ ಪಥದಲ್ಲಿ ನಡೆಯುವವರಿಗೆ ನೆರವಾಗುವಂತೆ ಸಾತ್ತ್ವಿಕ ಪೂಜಾ ಕ್ರಮವನ್ನು ನಿಯಮಿಸಿದರು.

ಅದ್ವೈತ ಸಿದ್ಧಾಂತ
ಶಂಕರರು ಹಿಂದೂಧರ್ಮದ, ತತ್ಪೂರ್ವದ ಎಲ್ಲ ಸಂಪ್ರದಾಯಗಳನ್ನೂ ಗಮನಿಸಿದರು, ಶೋಧಿಸಿದರು. ಅವುಗಳಲ್ಲಿ ಅಂಧಶ್ರದ್ಧೆಯ ಅಂಶಗಳನ್ನೂ ಅಸದಾಚರಣೆಗಳನ್ನೂ ಸೋಸಿ, ಅವುಗಳ ನಡುವೆ ಐಕ್ಯ ಸಾಮರಸ್ಯಗಳನ್ನು ಬೆಸೆದರು. ಅದ್ವೈತವೆಂಬ ಸ್ವರ್ಣಸಾರಣೆಯಲ್ಲಿ ಸೋಸಿದ ಮೇಲೆ ತೇಲಿದ
ಒಳ್ಳೆಯದೆಲ್ಲವನ್ನೂ ಒಗ್ಗೂಡಿಸಿದರು. ಇದರಿಂದಾಗಿ ದೇವತಾ ಭೇದ ಆಚಾರ್ಯಭೇದ ಅಭಿಪ್ರಾಯಭೇದಗಳನ್ನು ಒಂದು ಸಹಾನುಭೂತಿಯ, ಸಹಿಷ್ಣುತೆಯು, ಸಮಾನತೆಯ ದೃಷ್ಟಿಯಿಂದ ಕಾಣುವುದು ಸಾಧ್ಯವಾಯಿತು. ಇದರಿಂದಾಗಿಯೇ ಶಂಕರರು ತೋರಿಸಿದ ದಾರಿ, ಅದ್ವೈತದ ದಾರಿ, ತುಂಬ
ಉದಾರವೂ ಉದಾತ್ತವೂ ಆಗಿ ಅನುಷ್ಠಾನ ವೇದಾಂತವಾಗುವುದು ಸಾಧ್ಯವಾಯಿತು. ಹಿಂದೂಧರ್ಮದ ಮೂಲಸೂತ್ರ ಸಮನ್ವಯ, ಸರ್ವಹಿತಾಸಕ್ತಿ ಎನ್ನುವಂತಾಯಿತು.

ಅನಾದಿಯೆಂದು ಆಸ್ತಿಕ್ಯರು ಭಾವಿಸುವ ಉಪನಿಷತ್ತುಗಳು ಪ್ರತಿಪಾದಿಸುವುದು ತಾತ್ಪರ್ಯವಾಗಿ ಅದ್ವೈತವನ್ನೇ ಎಂಬುದನ್ನು ಶಂಕರರು ಉಪನಿಷತ್ತು ಬ್ರಹ್ಮಸೂತ್ರ ಭಗವದ್ಗೀತೆಗಳನ್ನು ಅರ್ಥೈಸುವುದರ ಮೂಲಕವೂ ಸ್ಥಿರ ಪಡಿಸಿದರು. ಅವರ ಅವತಾರದೊಂದಿಗೆ ಅವ್ಯವಸ್ಥಿತ ವೈದಿಕ ಅವೈದಿಕ ದರ್ಶನ ಗಳೆಲ್ಲ ಕಣ್ಮರೆಯಾಗಿ ‘ಔಪನಿಷದಂ ಮತಂ’ ಎಂದು ಹೇಳಬಹುದಾದ ಅದ್ವೈತ ಸಿದ್ಧಾಂತ ಸ್ಥಾಪಿತವಾಯಿತು.

ಆಚಾರ‍್ಯರು ಭಾಷ್ಯಗಳನ್ನು ರಚಿಸಿ, ಶಿಷ್ಯರನ್ನು ಸಜ್ಜುಗೊಳಿಸಿ, ತಮ್ಮ ಕೃತಕಾರ್ಯರಾದುದಾಗಿ ತಿಳಿಯಲಿಲ್ಲ. ದೇಶ ಪರ್ಯಟನೆಯನ್ನು ಮಾಡಿ ಸಮಾಜದ ನಾನಾಸ್ತರಗಳ ಜನರನ್ನು ಭೇಟಿಯಾದರು. ತಮ್ಮ ವಿಚಾರಗಳನ್ನು ಅವರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಅವರಿಗೆ ಮನವರಿಕೆ
ಮಾಡಿದರು. ಅಲ್ಲಲ್ಲಿ ದೇವತಾಸಾನಿಧ್ಯಗಳನ್ನು ಏರ್ಪಡಿಸಿದರು.

ಇಂದಿಗೂ ನಮ್ಮಲ್ಲಿ ವ್ರತಪೂಜೆಗಳೆಂಬುವು ಸಾಮಾಜಿಕ ಸಮಾರಂಭಗಳಾಗಿ, ಸನೇಹ ಸಂಪರ್ಕಗಳ ಸಾಧನೆಗಳಾಗಿ ಉಳಿದುಕೊಂಡು ಬಂದಿರುವುದು ಇಂತಹ ಏರ್ಪಾಡುಗಳಿಂದಲೇ,ಅಂದು ಧಾರ್ಮಿಕ ಕ್ಷೇತ್ರದಲ್ಲಿ ಅರಾಜಕತೆ ತಾಂಡವಾಡುತ್ತಿತ್ತು. ಅಂಧಾನುಕರಣೆ ಹಾಗೂ ಮೂಢನಂಬಿಕೆಗೆ ಬಲಿಯಾಗಿದ್ದ ಜನಸಮುದಾಯ ಕಣ್ಣಿದ್ದೂ ಕುರುಡರಂತಾಯಿತು.

ಸಮಾಜದಲ್ಲಿ ಜಾತಿ, ವರ್ಗ ಭೇದಗಳು ಕ್ಲಿಷ್ಟವಾಗಿದ್ದವು. ದೈವವನ್ನು ತಮ್ಮ ಸಂಕುಚಿತ ಮನೋಭಾವನೆಗಳಿಗೆ ತಕ್ಕಂತೆ ಕಲ್ಪಿಸಿಕೊಂಡು ತಮ್ಮ ದೇವರೇ ಶ್ರೇಷ್ಠ ಎಂಬ ಪ್ರವೃತ್ತಿ ಗಾಢವಾಗಿತ್ತು. ಅಂತಹ ಸಂದಿಗ್ಧ ಸಮಯದಲ್ಲಿ ಅವತರಿಸಿದ ಶಂಕರಾಚಾರ್ಯರು ಎಲ್ಲ ಅವ್ಯವಸ್ಥೆಗಳನ್ನು ಹತ್ತಿಕ್ಕಿ ವೈದಿಕ
ಧರ್ಮೊದ್ಧಾರ ಮಾಡಿ ಸನ್ಮಾರ್ಗ ಪ್ರವರ್ತಕರಾದರು.

ನಾಲ್ಕು ಮಠಗಳ ಸ್ಥಾಪನೆ
ಆಚಾರ್ಯ ಶಂಕರ ಭಗವತ್ಪಾದರು ಬಾಲ್ಯದಲ್ಲಿಯೇ ಸರ್ವಜ್ಞರಾಗಿ ತಮ್ಮ ಸ್ವಾರ್ಥವನ್ನು ತೊರೆದು ಸನ್ಯಾಸಿಯಾಗಿ ರಾಷ್ಟ್ರಕ್ಕೆ ತಮ್ಮನ್ನು ಅರ್ಪಿಸಿ ಕೊಂಡಿದ್ದು ಸಮಾಜದ ಉದ್ದಾರಕ್ಕಾಗಿ. ಭಾರತದಾದ್ಯಂತ ಯೋಗಿಯಾಗಿ ಸಂಚರಿಸಿ ನಾನಾ ಮತಗಳ ಗೊಂದಲಗಳಿಂದ ಜನರನ್ನು ಪಾರು ಮಾಡಿ ಸಕಲ ಧರ್ಮಗಳೂ ಏಕೋದ್ದೇಶ್ಯದಿಂದಿರತಕ್ಕದ್ದು ಎಂಬ ಅದ್ವೈತ ತತ್ತ್ವವನ್ನು ಸಾರಿದ್ದೂ ಒಂದು ಸಾಮಾಜಿಕ ಸೇವೆ. ಭಾರತದಾದ್ಯಂತ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಶಂಕರ ಮಠಗಳನ್ನು ಸ್ಥಾಪಿಸಿದರು ಮತ್ತು ಅವು ಇಂದಿನವರೆಗೂ ಧರ್ಮಸೇವಾತತ್ಪರವಾಗಿವೆ.

ಶಾರದೆಯನ್ನು ತಂದವರು
ವಿದ್ಯಾಧಿದೇವತೆಯಾದ ಕಾಶ್ಮೀರಪುರವಾಸಿನಿ ಶಾರದಾದೇವಿಯನ್ನು ಭಕ್ತಿಯಿಂದ ತಮ್ಮೊಡನೆ ತಂದು ನಮ್ಮ ಕನ್ನಡನಾಡಿನ ಶೃಂಗೇರಿಯಲ್ಲಿ ಪ್ರತಿಷ್ಠೆ
ಮಾಡಿದುದು ಒಂದು ದೊಡ್ಡ ಸಾಧನೆ. ಇಂದು ಕನ್ನಡನಾಡು ಸಂಸ್ಕೃತ ಭಾಷೆಗೆ ಮುಖ್ಯ ಆಗರವಾಗಿರುವುದು ಇವರ ಈ ಕಾರ್ಯದ ಮಹಿಮೆಯಿಂದ.
ಪಾದಪೂಜೆ ಮುಂತಾದ ವೈಯಕ್ತಿಕ ಕಾರ‍್ಯಗಳಿಗೆ ಅವಕಾಶವಾಗದಂತೆ ಸರ್ವಸುಲಭ ಪೂಜೆಗಾಗಿ ತಮ್ಮ ದಿವ್ಯ ಪಾದುಕೆಗಳನ್ನು ಶೃಂಗೇರಿಯಲ್ಲಿ ಸ್ಥಾಪಿಸಿ ದರು.

ಚಕ್ರ ಯಂತ್ರ ಸ್ಥಾಪನೆ
ಅನೇಕ ಕ್ಷೇತ್ರಗಳಲ್ಲಿ ಶ್ರೀ ಚಕ್ರ ಯಂತ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಆಯಾ ಕ್ಷೇತ್ರಗಳ ಐಶ್ವರ‍್ಯ ಸಮೃದ್ಧಿಗಳನ್ನು ರಕ್ಷಿಸಿದುದು. ನಮ್ಮ ದೇಶದ ಹಲವು ಕಡೆ ಅವರು ಸ್ಥಾಪಿಸಿದ ಶ್ರೀಚಕ್ರ ಯಂತ್ರಗಳು ಇಂದಿಗೂ ಇವೆ. ಸ್ತ್ರೀ ಶೂದ್ರ ಚಂಡಾಲ ಬಹಿಷ್ಕೃತ ಕರ್ಮಠ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಎಂಬ ಭೇದವನ್ನು ಪರಿಗಣಿಸದೇ ಬ್ರಾಹ್ಮೀಸ್ಥಿತಿಯ ಒಂದು ಜ್ಞಾನಮಾರ್ಗವನ್ನು ಭಾರತದಾದ್ಯಂತ ಸಮಾಜಕ್ಕೆ ತೋರಿಸಿ ಕೊಟ್ಟಿರುವುದು ಶಂಕರರ ವಿಶೇಷ ಸಾಧನೆ.