Thursday, 12th December 2024

ಶ್ರೀಗಳ ದರ್ಶನದ ಮಂಚದ ಕೆಳಗೆ ಮಲಗಿದ್ದೆವು !

ಡಾ.ಪರಮೇಶ್

ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ದಗಂಗಾ ಆಸ್ಪತ್ರೆ

ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಆಪ್ತ ವೈದ್ಯನಾಗಿ
ಅವರ ಸೇವೆ ಸಲ್ಲಿಸುವ ಸಮಯದಲ್ಲಿ ಡಾ. ಪರಮೇಶ್ ಅವರಿಗೆ, ಗುರುಗಳ ಆಶೀರ್ವಾದ, ಅವರ ದಾಸೋಹ ತತ್ವಗಳ ನಿತ್ಯಾನು ಷ್ಠಾನವನ್ನು ನೋಡುವ ಭಾಗ್ಯ ಸಿಕ್ಕಿತ್ತು. ಅವರ ದಿವ್ಯಾನುಭವದ ಒಂದಷ್ಟು ನೆನಪುಗಳನ್ನ ತುಂಬಿ ಬರೆದಿರುವ ‘ಮಹಾಬಯಲು’ ಪುಸ್ತಕ, ಈಗ ಸಂಚಿಕೆ ರೂಪದಲ್ಲಿ ‘ವಿಶ್ವವಾಣಿ’ ದಿನ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿದೆ.

೧೯೭೫ ರ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಸಮಯ. ಅಂದೂ ಕೂಡ ಇಡೀ ಮಠ ಜನರಿಂದ ತುಂಬಿ ತುಳುಕುತ್ತಿತ್ತು. ಪ್ರತಿಬಾರಿಯಂತೆ ಅಜ್ಜಿ ಮೊಮ್ಮಕ್ಕಳಾದ ನಮ್ಮನ್ನೆಲ್ಲಾ ಕರೆದು ಕೊಂಡು ಮಠಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಲ್ಲೇ ಇದ್ದ ನಮ್ಮ ಸಂಬಂದಿಕರ ಮನೆಗೆ ಹೋಗಬೇಕಿತ್ತು. ಆದರೆ ಅವತ್ತು ಹೋಗಲಿಕ್ಕೆ ಆಗಲಿಲ್ಲ. ತೀರಾ ತಡವಾಗಿತ್ತು. ಜೊತೆಗೆ ಭಾರೀ ಜನಗಳಿದ್ದ ಆ ಜಂಗುಳಿಯನ್ನ ಭೇದಿಸಿಕೊಂಡು ಹೊಗುವುದೇ ದುಸ್ತರವಾಗಿತ್ತು. ಇಡೀ ಮಠದ ತುಂಬೆಲ್ಲಾ ಜನ. ನಾವು ಬಹಳಷ್ಟು ಭಯ ಪಟ್ಟಿದ್ದೆವು. ಅಜ್ಜಿ ಒಬ್ಬರೇ ಆಗಿದ್ದರಿಂದ ಮಕ್ಕಳನ್ನ ಹೇಗೆ ಕರೆದುಕೊಂಡು ಹೋಗಲಿ ಎಂದು ಪ್ರಯಾಸ ಪಡುತ್ತಿದ್ದರು. ಅಜ್ಜಿಯ ಆತಂಕ ಸಮಯ ಆಗುತ್ತಿದ್ದಂತೆ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

ನಾವಂತೂ ಅಜ್ಜಿ ಮನೆಗೆ ಹೋಗೋಣ ಎಂದು ಹಠ ಹಿಡಿಯಲಿಕ್ಕೆ ಶುರುಮಾಡಿದೆವು. ಜಾತ್ರೆಯ ಸಂಭ್ರಮ ಸಮಯ ಕಳೆಯು ತ್ತಿದ್ದ ಹಾಗೆ ಮನೆಯ ನೆನಪನ್ನ ಜಾಸ್ತಿ ಮಾಡುತ್ತಿತ್ತು. ಮಠದಲ್ಲಿ ಇದ್ದ ಎಲ್ಲಾ ಕೊಠಡಿಗಳು ತುಂಬಿದ್ದವು. ತೀರಾ ಸಮಯ ವಾದ್ದರಿಂದ ಬಸ್ಸುಗಳೂ ಕೂಡ ಇರಲಿಲ್ಲ. ಮಕ್ಕಳು ಕೈ ಬಿಟ್ಟರೆ ಕಳೆದು ಹೋಗುತ್ತಾರೆ ಎನ್ನುವ ಭಯ, ಇನ್ನೊಂದೆಡೆ ಈ ರಾತ್ರಿ ಎಲ್ಲಿ ಕಳೆಯುವುದು ಎನ್ನುವ ಆತಂಕ. ನನ್ನ ತಮ್ಮನಂತೂ ನಿಂತ ಜಾಗದಲ್ಲಿಯೇ ನಿದ್ದೆ ಹೋಗುತ್ತಿದ್ದ ನಮಗೂ ನಿದ್ದೆಯ ಮಂಪರು.

ಜಾತ್ರೋತ್ಸವದ ಅಂದಿನ ಕಾರ್ಯಕ್ರಮ ಮುಗಿದು ಶ್ರೀಗಳು ತಮ್ಮ ಕಚೇರಿಯಲ್ಲಿ ಭಕ್ತರೊಂದಿಗೆ ನಾಳೆಯ ಕಾರ್ಯಕ್ರಮದ ಬಗ್ಗೆ
ಮಾತನಾಡುತ್ತಿದ್ದರು. ಸ್ವಾಮೀಜಿಯವರನ್ನ ಕಚೇರಿಯಲ್ಲಿ ಇದ್ದದ್ದನ್ನ ನೋಡಿ ಅಜ್ಜಿಗೆ ದೇವರೇ ಕಂಡ ಹಾಗಾಗಿತ್ತು. ಸೀದ ಶ್ರೀಗಳ ಬಳಿ ಹೋಗಿ ‘ಬುದ್ಧಿ ನಾಕು ಮಕ್ಕಳನ್ನ ಕರೆದುಕೊಂಡು ಬಂದಿದ್ದೇನೆ. ಉಳಿದುಕೊಳ್ಳಲು ಜಾಗವಿಲ್ಲ. ರೂಮುಗಳೆಲ್ಲಾ ಮುಗಿದಿವೆ. ಏನ್ ಮಾಡೋದು ಬುದ್ಧೊ’ ಎಂದು ಕೇಳಿದ್ದರು. ಶ್ರೀಗಳು ನಮ್ಮನ್ನ ನೋಡಿ ಮರು ಮಾತನಾಡದೆ ‘ಮಠದಲ್ಲಿ ರೂಮುಗಳು
ಖಾಲಿ ಇಲ್ಲ ತಾಯಿ. ನೋಡು ಅಲ್ಲಿ ಹೋಗು ಮಕ್ಕಳನ್ನ ಮಂಚದ ಕೆಳಗೆ (ಶ್ರೀಗಳು ದಿನನಿತ್ಯ ದರ್ಶನ ನೀಡಲು ಕುಳಿತು ಕೊಳ್ಳುತ್ತಿದ್ದ ಮಂಚ) ಮಲಗಿಸು ಎಂದರು.

ದೈವಾಂಶ ಸಂಭೂತರಾದ ಪೂಜ್ಯರ ‘ದರ್ಶನ ಮಂಚ’ದ ಕೆಳಗೆ ಮಕ್ಕಳನ್ನ ಮಲಗಿಸುವುದು ಆಶೀರ್ವಾದ ಮತ್ತು ಅಜ್ಜಿಗೆ ಆವರೆಗೂ ಇದ್ದ ಸಂಕಟ ತಪ್ಪಿಸಿ ಆನಂದ ಹೆಚ್ಚುವಂತೆ ಮಾಡಿತ್ತು. ಇಂದಿಗೂ ಇರುವ ಶ್ರೀಗಳು ಕುಳಿತುಕೊಳ್ಳುತ್ತಿದ್ದ ಮಂಚದ ಕೆಳಗೆ ಅಂದು ನಾನು ನನ್ನ ತಮ್ಮ ಹಾಗೂ ನನ್ನ ಅಕ್ಕತಂಗಿ ಮಲಗಿದ್ದು ನೆನಪಿದೆ. ಅಜ್ಜಿ ಇಡೀ ರಾತ್ರಿ ಮಂಚದ ಪಕ್ಕ ಕುಳಿತು ನಮ್ಮನ್ನ ಕಾದಿದ್ದರು. ಶ್ರೀಗಳು ನಿತ್ಯ ಸಾವಿರಾರು ಭಕ್ತರಿಗೆ ದರ್ಶನ ನೀಡುತ್ತಿದ್ದ ಅವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುತ್ತಿದ್ದ ಜಾಗದಲ್ಲಿನ ಮಂಚ ನಮಗೆ ಆಶ್ರಯ ನೀಡಿತ್ತು. ಸಾಕಷ್ಟು ಚಳಿಯಿದ್ದರೂ ತಾಯಿಯ ಮಡಿಲಿನಲ್ಲಿ ಬೆಚ್ಚಗೆ ಮಲಗಿದಂತೆ ಭಾಸವಾಗಿತ್ತು. ಶ್ರೀಗಳ ಅಭಯ ಹಸ್ತವೇ ಹೊದಿಕೆಯಾಗಿ ನಮ್ಮನ್ನ ಕಾಪಾಡಿತ್ತು. ಅದು ಜೀವನ ಪರ್ಯಂತ ನಮಗೆ ಆಶ್ರಯ ನೀಡುತ್ತೆ ನಮ್ಮ ಸಲಹುತ್ತೆ ಎಂದು ಮಾತ್ರ ನಮಗೆ ಗೊತ್ತಿರಲಿಲ್ಲ. ಇಂದು ಶ್ರೀಗಳ ಅನುಪಸ್ಥಿತಿಯಲ್ಲಿಯೂ ಆ ಮಂಚವನ್ನು
ನೋಡಿದಾಗ ಶ್ರೀಗಳ ಮಡಿಲ ಹಾಗೆಯೇ ಕಾಣುತ್ತದೆ.