ಪುಸ್ತಕ ಪರಿಚಯ
ಶಶಿಧರ ಹಾಲಾಡಿ
ಇಪ್ಪತ್ತೊಂದನೆಯ ಶತಮಾನದ ಗ್ರಾಮೀಣ ಜನರು ಹಳ್ಳಿಯ ಬೇಗುದಿ ತಾಳಲಾರದೆ ಬೆಂಗಳೂರಿನಂತಹ ಮಹಾನಗರಕ್ಕೆ
ಗುಳೆ ಬಂದು, ಇಲ್ಲಿ ಬೆಂಕಿಯಲ್ಲಿ ಬೇಯುವ ನೋವನ್ನು ಹಿಡಿದುಕೊಡುವ ‘ಕಾಲಯಾತ್ರೆ’ ಕಾದಂಬರಿಯು, ಒಂದು ಅಪರೂಪದ
ಕೃತಿಯಾಗಿ ಮೂಡಿಬಂದಿದೆ.
ನಗರದಲ್ಲಿ ಹುಟ್ಟಿ ಬೆಳೆದವರು ಕನಸಿನಲ್ಲೂ ಊಹಿಸಲಾಗದ ಕಥಾ ಹಂದರವನ್ನು ಹೊಂದಿರುವ ‘ಕಾಲಯಾತ್ರೆ’, ಭಾರತದ ಪುರಾತನ ಜಾನಪದ ತಳಪಾಯವನ್ನು ಸೀಳಿ ಬೆಳೆದು ನಿಂತ ಕಠಿಣ ದೇಹದ ಗಿಡದಂತೆ, ತನ್ನ ವಸ್ತು ವಿನ್ಯಾಸದಿಂದ ಗಮನ ಸೆಳೆಯುತ್ತದೆ. ದಶಕಗಳ ಕಾಲ ಜಾನಪದ ಸಂಶೋಧನೆಯಲ್ಲಿ, ಹುಡುಕಾಟದಲ್ಲಿ ತೊಡಗಿಕೊಂಡಿರುವ ಲೇಖಕ ಕೃಷ್ಣಮೂರ್ತಿ ಹನೂರು ಅವರ ಇಷ್ಟು ವರ್ಷದ ಅಧ್ಯಯನದ ರಸಪಾಕದ ಮೂಸೆಯಲ್ಲಿ ರೂಪುಗೊಂಡ ‘ಕಾಲಯಾತ್ರೆ’ ತನ್ನ ಅನನ್ಯತೆ ಯಿಂದಾಗಿ ಓದುಗರನ್ನು ಕಾಡುತ್ತದೆ.
ಬೆಂಗಳೂರಿನ ಪೀಣ್ಯದಲ್ಲೋ, ಹರಿಶ್ಚಂದ್ರ ಘಾಟ್‌ನಲ್ಲೋ ನಿನ್ನೆ ತಾನೆ ನಡೆದ ಕಥೆಯಿದು ಎಂಬಷ್ಟು ತಾಜಾತನ ಹೊಂದಿರುವ ಕಾದಂಬರಿಯು, ಅಂತಹ ಅಪ್ಪಟ ತಾಜಾ ಕಥನದಿಂದಾಗಿಯೇ ಓದುಗರ ಮನ ತಟ್ಟುವುದು ನಿಜ. ಸುರುಪುರ ಸಾಮ್ರಾಜ್ಯದಲ್ಲಿ ಬೇರುಗಳನ್ನು ಹೊಂದಿರುವ ಮಾರುತಿಯು, ತನ್ನೂರಿನ ಅನಿಶ್ಚಿತ ಜೀವನದ ವಿಷಣ್ಣತೆಯಿಂದ ತಪ್ಪಿಸಿಕೊಳ್ಳಲು, ಸಂಸಾರದ ಜತೆ ಮತ್ತು ಪಕ್ಕದ ಮನೆಯ ಲಗಾಟಿ ಎಂಬ ಅರೆಬುದ್ಧಿಮಾಂದ್ಯ ಸಹಾಯಕನೊಂದಿಗೆ ಬೆಂಗಳೂರಿಗೆ ಬಂದಾಗ, ಆ ಕುಟುಂಬವನ್ನು ತನ್ನ ಚಕ್ರವ್ಯೂಹದೊಳಗೆ ಸೆಳೆದುಕೊಳ್ಳುವ ಈ ಮಹಾನಗರವು, ಆತನನ್ನು ಅಂತರಾಜ್ಯ ಲಾರಿ ಡ್ರೈವರನ್ನಾಗಿ ರೂಪಿಸುತ್ತದೆ.
ಒಮ್ಮೆ ಲಾರಿ ಹತ್ತಿದರೆ, ತಿಂಗಳಾನುಗಟ್ಟಲೆ ಲಾರಿಯಲ್ಲೇ ಸಂಚರಿಸುತ್ತಾ, ಆಗೊಮ್ಮೆ ಈಗೊಮ್ಮೆ ಮನೆಗೆ ಬರುತ್ತಿದ್ದುದರಿಂದ, ಆತನ ಹೆಂಡತಿಯು ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾಳೆ. ಅವಳಿಗೆ ಆಗ ಸಿಗುವುದು ಸ್ಮಶಾನದಲ್ಲಿ ಗುಂಡಿ ತೋಡುವ ಕೆಲಸ. ಪುಟ್ಟ ಮಗಳು ಸರಸಿ ಮತ್ತು ಸಹಾಯಕ ಲಗಾಟಿಯೊಂದಿಗೆ ಸ್ಮಶಾನ ಸೇರುವ ಲಕ್ಷ್ಮಮ್ಮನಿಗೆ ಅಲ್ಲಿದ್ದ ತಗಡಿನ ಷೆಡ್ಡು ವಾಸದ ಮನೆ. ಆ ಷೆಡ್‌ನ ಮಣ್ಣಿನ ಗೋಡೆಗ ಚಾಮುಂಡೇಶ್ವರಿ ಫೋಟೋ ಸಿಕ್ಕಿಸಿ, ನೆಲಕ್ಕೆ ಸಗಣಿ ಬಳಿದು ಚೊಕ್ಕಟಗೊಳಿಸಿ ವಾಸಿಸುವ
ಆಕೆಯ ಜೀವನ ಪ್ರೀತಿ ಅಪರೂಪದ್ದು.
ಅವರ ಜತೆಯಲ್ಲಿರುವ ನಾಯಿ ಸಿಂಗನು, ಕಾದಂಬರಿಯಲ್ಲೊಂದು ಪಾತ್ರವಾಗಿ ಮೂಡಿ ಬರುವ ಪರಿ, ತನ್ನ ಸ್ವಗತ ಕಥನ ಮತ್ತು ಸ್ವಾಮಿನಿಷ್ಠೆಯಿಂದಾಗಿ, ‘ಕಾಲಯಾತ್ರೆ’ಗೆ ಒಂದು ವಿಭಿನ್ನ ಆಯಾಮವನ್ನು ತಂದುಕೊಡುತ್ತದೆ. ಜಾನಪದ ಕಥನಗಳ
ಪರಿಣಿತರಾದ ಕೃಷ್ಣಮೂರ್ತಿ ಹನೂರು ಅವರು, ಆ ಪಾತಳಿಯಲ್ಲಿ ನಾಯಿ ಸಿಂಗನನ್ನು ಕಟ್ಟಿ, ಬೆಳೆಸಿ ಸಶಕ್ತ ಪಾತ್ರವನ್ನಾಗಿ ರೂಪಿಸಿರುವುದು ಬೆರಗು ಹುಟ್ಟಿಸುತ್ತದೆ.
ಹೆಣ ಕದ್ದ ಪ್ರಕರಣ
ಸ್ಮಶಾನದಲ್ಲೇ ಮನೆ, ಅಲ್ಲೇ ಅಡುಗೆ, ಅಲ್ಲೇ ಊಟ, ಸ್ಮಶಾನದ ಕತ್ತಲಲ್ಲೇ ನಿದ್ದೆ ಮಾಡುವ ಆ ಕುಟುಂಬವು, ಹೆಣವೊಂದರ ಕಳ್ಳತನದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿ, ಪಡಬಾರದ ಕಷ್ಟಗಳನ್ನು ಪಡುತ್ತದೆ. ಆ ಮೂಲಕ ಇಂದಿನ ರಾಜಕೀಯದ ಟೊಳ್ಳುಗಳನ್ನು ಕಾದಂಬರಿ ತೆರೆದಿಡುವ ಪರಿ ಮಾರ್ಮಿಕ.
ಪೊಲೀಸು ದಬ್ಬಾಳಿಕೆ, ಸುಳ್ಳು ಸಾಕ್ಷಿ, ಕಪಟ ತನಿಖೆ, ರಾಜಕೀಯ ನಾಯಕರು ಮತ್ತು ವೈದ್ಯಕೀಯ ಕಾಲೇಜು ನಡೆಸುವ ಸ್ವಾಮಿ ಗಳ ಕೃತಕ ಸ್ನೇಹ, ಈ ಎಲ್ಲಾ ಸನ್ನಿವೇಶಗಳಲ್ಲಿ ಪ್ರಸ್ತುತ ಸಮಾಜವನ್ನು ವ್ಯಂಗ್ಯಕ್ಕೆ ಒಳಗುಮಾಡುವ ಕಾದಂಬರಿ, ಒಟ್ಟಾರೆ ಕಥನವನ್ನು ಕಟ್ಟಿ ಕೊಡುವ ರೀತಿ ವಿಶಿಷ್ಟ, ಸಿದ್ಧಶೈಲಿಗಿಂತ ವಿಭಿನ್ನ.
ಈ ನಡುವೆ ಕಾದಂಬರಿಯುದ್ದಕ್ಕೂ ಕಾಣುವ ತಳಸಮುದಾಯದ ಬಡವರ ಕಷ್ಟಗಳ ವಿವರ, ನಾಯಿ ಮತ್ತು ಕಸಸಂಗ್ರಹಿಸುವ ವ್ಯಕ್ತಿಯ ಸ್ನೇಹ, ವೃದ್ಧಾಶ್ರಮ ಸೇರುವ ಶ್ರೀಮಂತ ಮಹಿಳೆಯ ಕಥನ, ಜೈಲಿನಲ್ಲಿದ್ದರೂ ಹಳ್ಳಿಯಲ್ಲಿ ಕಲಿತ ಬಯಲಾಟವನ್ನು ಗಟ್ಟಿಯಾಗಿ ಹೇಳಿಕೊಂಡು ನೆಮ್ಮದಿ ಕಂಡುಕೊಳ್ಳುವ ಮಾರುತಿ ಮತ್ತು ಲಗಾಟಿ ಎಲ್ಲವೂ ಕಾದಂಬರಿಯ ಓದನ್ನು ಕುತೂಹಲಕಾರಿಯನ್ನಾಗಿಸುತ್ತದೆ.
ಜಾನಪದ ಕಥನದ ದಟ್ಟಛಾಯೆಯನ್ನು ಮೈಗೂಡಿಸಿಕೊಂಡಿರುವ ಕಾಲಯಾತ್ರೆ ಕಾದಂಬರಿಯು, ಈ ಆಧುನಿಕ ಯುಗದಲ್ಲಿ ತಳಸಮುದಾಯದವರು ಅನುಭವಿಸುವ ತಲ್ಲಣಗಳನ್ನು ಹಿಡಿದಿಡುವ ಪರಿ ಅನನ್ಯ. ಸ್ಮಶಾನದಲ್ಲಿ ಗುಂಡಿ ತೋಡುತ್ತಾ ಜೀವನ
ನಡೆಸುವ ಆ ಬಡಕುಟುಂಬದಕ್ಕೆ ತಪ್ಪಲೆ ತುಂಬಾ ಅನ್ನ ಮಾಡುವ ಸಂಭ್ರಮ ಕೂಡಿ ಬಂದದ್ದು, ಯಜಮಾನ ಮಾರುತಿಯು ಕೆಲಸ ಕಳೆದುಕೊಂಡ ದಿನ – ಹೆಣ ಕದ್ದ ಕೇಸಿನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರಿಂದಾಗಿ, ಡ್ರೈವರ್ ಕೆಲಸ ಕಳೆದುಕೊಂಡ ಮಾರುತಿಗೆ, ಒಂದು ತಿಂಗಳ ಸಂಬಳವನ್ನು ನೀಡಿ ಮನೆಗೆ ಕಳುಹಿಸಿದಾಗ, ಆ ದುಡ್ಡಿನಲ್ಲಿ ಜಾಸ್ತಿ ಅನ್ನ ಮಾಡಿ ತಿನ್ನುವ ಆ ಕುಟುಂಬ, ನೋವಿನಲ್ಲೂ ಸಂತಸ ಕಾಣುವ ಪರಿ ಮಾರ್ಮಿಕ.
ಮಾರುತಿಯ ಪತ್ನಿ ಲಕ್ಷ್ಮಮ್ಮನ ಪಾತ್ರಪೋಷಣೆ ಪರಿಣಾಮಕಾರಿ. ಕೃಷ್ಣಮೂರ್ತಿ ಹನೂರು ಅವರ ‘ಕಾಲಯಾತ್ರೆ’ ಕಾದಂಬರಿಯು ಇನ್ನೂ ಒಂದು ಕಾರಣಕ್ಕೆ ಗಮನ ಸೆಳೆಯುತ್ತದೆ. ಆ ಸ್ಮಶಾನವಾಸಿ ಕುಟುಂಬದ ಪುಟ್ಟ ಹುಡುಗಿ ಸರಸಿಯನ್ನು ಆಕೆಯ ತಾಯಿ ಲಕ್ಷ್ಮಮ್ಮನು ಅಕ್ಷರ ಕಲಿಸಲು ಹಚ್ಚಿ, ಅದನ್ನೇ ನೀನು ಮುಂದುವರಿಸು ಎಂದು ತಾಕೀತು ಮಾಡುವ ಸನ್ನಿವೇಶವು, ಸಮಸ್ತ ತಳಸಮುದಾಯದ ಭರವಸೆಯ ಭವಿಷ್ಯದ ಪ್ರತೀಕವಾಗಿ ಕಾಣುತ್ತದೆ. ಡ್ರೈವರ್ ಮಾರುತಿ ಅದೆಲ್ಲಿಂದಲೋ ಹೊತ್ತು ತರುವ ಭಾರವಾದ ಟ್ರಂಕಿನಲ್ಲಿ ಮುತ್ತು, ರತ್ನ ಇರಬಹುದೆಂದು ಬಹು ಆಸೆಯಿಂದ ಸರಸಿ ಹುಡುಕಿದಾಗ ಸಿಗುವ ಪುಸ್ತಕದ ಒಂದೊಂದೇ
ಪುಟವನ್ನು ಓದಲು ಪ್ರಯತ್ನಿಸುವ ಆ ಪುಟ್ಟ ಹುಡುಗಿ ಸರಸಿಯ ಚಿತ್ರಣದೊಂದಿಗೆ ಕಾದಂಬರಿ ಮುಗಿಯುತ್ತದೆ.
ಸರಸಿಯ ಎದೆಗೆ ಬಿದ್ದ ಅಕ್ಷರವು ಗಿಡವಾಗಿ, ಮರವಾಗಿ ಬೆಳೆದು ಫಲ ನೀಡುತ್ತದೆಂಬ ಆಶಾಭಾವನೆ ಅರ್ಥಪೂರ್ಣ. ಕಾದಂಬರಿ ಯೊಂದು ಓದುಗನಲ್ಲಿ ಸಕಾರಾತ್ಮಕ ಆಶಯವನ್ನು ಉದ್ದೀಪಿಸುವುದು ಹೀಗೆಯೇ ಅಲ್ಲವೆ!