ಹಂಪೆಯ ವಿರೂಪಾಕ್ಷ ದೇಗುಲದ ರಂಗಮಂಟಪದಲ್ಲಿರುವ ಹಲವು ವರ್ಣಚಿತ್ರಗಳು ಇಂದಿಗೂ ಉಳಿದುಕೊಂಡು ಬಂದಿವೆ. 1565ರಲ್ಲಿ ಹಂಪೆಯ ಪತನಾನಂತರ, ದೇಗುಲದ ಜೀರ್ಣೋದ್ಧಾರ ನಡೆದು, ಆ ಸಮಯದಲ್ಲಿ ಈ ಚಿತ್ರ ಗಳನ್ನು ರಚಿಸಲಾಯಿತು ಎಂದು ವಿದ್ವಾಂಸರು ನಿರ್ಣಯಿಸಿದ್ದಾರೆ. ಈ ಚಿತ್ರಗಳಲ್ಲಿ, ನಮ್ಮ ನಾಡಿನ ಪುರಾಣದ ಕಥೆ ಗಳಿವೆ. ಅವುಗಳ ನಡುವೆ, ನವಗುಂಜರ ಎಂಬ ಕಾಲ್ಪನಿಕ ಪ್ರಾಣಿಯ ಚಿತ್ರವೂ ಇದೆ ಎಂದು ಮೊದಲಬಾರಿಗೆ ಈ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ಒಡಿಶಾದ ‘ಸರಲ ಭಾರತ’ದಲ್ಲಿ ವರ್ಣನೆಗೊಂಡಿರುವ ನವಗುಂಜರವು, ಹಂಪೆಯ ನಾಡಿನ ಭಿತ್ತಿ ಚಿತ್ರಗಳಲ್ಲಿ ಮೂಡಿಬಂದಿರುವುದು ಬಹಳ ಕುತೂಹಲಕಾರಿ ವಿಷಯ. ಈ ಕುರಿತು ಹೆಚ್ಚಿನ ಸಂಶೋಧನೆ, ಚರ್ಚೆಗಳಿಗೆ ಅವಕಾಶವಿದೆ. ಈ ಹೊಸ ಸಂಶೋಧನೆಯ ಕುರಿತು ಓದಿ ನಿಮಗೇನನ್ನಿಸಿತು? ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
ವಸುಂಧರಾ ದೇಸಾಯಿ
ನವಗುಂಜರ ಎಂಬುದು ಬಹಳ ಅಪರೂಪದ, ಹೆಚ್ಚಿನವರಿಗೆ ಅಪರಿಚಿತ ಪದ. 8.11.2020 ರಂದು ‘ವಿಶ್ವವಾಣಿ’ ಪತ್ರಿಕೆಯ ತಿಳಿರು
ತೋರಣ ಅಂಕಣದಲ್ಲಿ, ಶ್ರೀವತ್ಸ ಜೋಷಿಯವರು ಇದರ ಬಗ್ಗೆ ಬರೆದ ಮೇಲೆ, ಈ ಕುರಿತು ಸಾಕಷ್ಟು ಕುತೂಹಲ ಕೆರಳಿತು.
ನವಗುಂಜರ ಎಂದರೆ ಒಂಬತ್ತು ಪ್ರಾಣಿ ಅಥವಾ ಪಕ್ಷಿಗಳ ಅಂಗವನ್ನು ಸೇರಿಸಿಕೊಂಡು ಆಗಿರುವ ಒಂದು ವಿಶಿಷ್ಟ ಜೀವಿ. ಕೋಳಿ, ನವಿಲು, ಹಾವು, ಸಿಂಹ, ಹುಲಿ, ಆನೆ, ಎತ್ತು, ಕುದುರೆಗಳಿಂದಾದ ದೇಹಕ್ಕೆ ಬಲಗೈ ಮಾನವನದು. ಆ ಕೈಯಲ್ಲಿ ಒಂದು ಕಮಲ, ಎದುರಿನಲ್ಲಿ ಕೈಮುಗಿದು ನಿಂತ ಮನುಷ್ಯ.
‘ಕೈಯಲ್ಲಿ ಕಮಲ’ ಎಂದೊಡನೆ ನೀವು ಸುಲಭವಾಗಿ ಊಹಿಸಿರಬಹುದು, ಇದು ಶ್ರೀ ಕೃಷ್ಣನಿಗೆ ಸಂಬಂಧಿಸಿದ್ದೆಂದು. ಹೌದು, ನವಗುಂಜ ಶ್ರೀಕೃಷ್ಣನ ಮತ್ತೊಂದು ಅವತಾರ. ಆದರೆ ಇದರ ಉಲ್ಲೇಖ ಮಹಾಭಾರತದಲ್ಲೋ, ವಿಷ್ಣು ಪುರಾಣದಲ್ಲೋ ಇಲ್ಲ. ಈ ಪ್ರಸಂಗ ಬರುವುದು ಒಡಿಶಾದ ಸರಲದಾಸ ಎಂಬ ಕವಿ ಒಡಿಯಾ ಭಾಷೆಯಲ್ಲಿ ಬರೆದ ‘ಸರಲ ಭಾರತ’ ಎಂಬ ಕಾವ್ಯದಲ್ಲಿ ಮಾತ್ರ. ಆ ಸಂದರ್ಭ ಹೀಗಿದೆ.
ದ್ರೌಪದಿ, ಯುಧಿಷ್ಠಿರ ಏಕಾಂತದಲ್ಲಿದ್ದಾಗ ಪ್ರವೇಶಿಸಿದ ತಪ್ಪಿಗೆ, ಪ್ರಾಯಶ್ಚಿತ್ತವಾಗಿ ಅರ್ಜುನ, ಮಣಿಭದ್ರ ಪರ್ವತದಲ್ಲಿ ತಪಸ್ಸಿಗೆ ಕುಳಿತಿರುತ್ತಾನೆ. ಅವನನ್ನು ಪರೀಕ್ಷಿಸಲೆಂದು ಕೃಷ್ಣನು ಈ ನವಗುಂಜರದ ರೂಪದಲ್ಲಿ ಬರುತ್ತಾನೆ. ಆ ವಿಚಿತ್ರ ರೂಪವನ್ನು
ಕಂಡು ಬೆದರಿದ ಅರ್ಜುನ, ಅದನ್ನು ಕೊಲ್ಲಲೆಂದು ಬಾಣಕ್ಕೆ ಕೈ ಹಾಕುತ್ತಾನೆ. ಅಶರೀರವಾಣಿಯಾಗಿ, ಅದು ಶ್ರೀ ಕೃಷ್ಣನ ಲೀಲೆ
ಎಂದು ತಿಳಿಯುತ್ತದೆ. ಅರ್ಜುನ ಶರಣಾಗುತ್ತಾನೆ.
ಖಾಂಡವವನ ದಹನದ ಸಂದರ್ಭ ಒಡಿಶಾ ವಿದ್ವಾಂಸರ ಪ್ರಕಾರ, ನವಗುಂಜರದ ವಿಶ್ಲೇಷಣೆ ಹೀಗಿದೆ. ಖಾಂಡವವನ ದಹನದ ಸಂದರ್ಭದಲ್ಲಿ ಆ ವನದ ಪ್ರಾಣಿಗಳೆಲ್ಲ ಅಸುನೀಗುತ್ತವೆ. ಅದನ್ನು ತಪ್ಪಿಸಲು ಇಂದ್ರೆ ಮಳೆ ಸುರಿಸಿದರೂ, ಅರ್ಜುನ ಬಾಣಗಳ ಚಪ್ಪರ ನಿರ್ಮಿಸಿ ಮಳೆಯನ್ನು ತಡೆಯುತ್ತಾನೆ. ಪ್ರಾಣಿ ಪಕ್ಷಿಗಳೆಲ್ಲವೂ ತಮ್ಮನ್ನು ಉಳಿಸೆಂದು ಶ್ರೀಕೃಷ್ಣನ ಮೊರೆ ಹೋಗುತ್ತವೆ. ಆಗ ಕೃಷ್ಣ ಅವುಗಳೆಲ್ಲವುದರ ಒಂದೊಂದು ಅಂಗದಿಂದಾದ ರೂಪ ಧರಿಸಿ ಅರ್ಜುನನ ಮುಂದೆ ಹೋದಾಗ, ಅವನ ಇಂಗಿತ ಅರಿತ ಅರ್ಜುನ ಶರಣಾಗಿ, ದಹನ ತಡೆಯುತ್ತಾನೆ. ಈ ಪ್ರಸಂಗವೇ ನವಗುಂಜರ.
ಸರಲದಾಸ ಕವಿಯ ಈ ಸುಂದರ ಕಲ್ಪನೆಯು, ಶಿಲ್ಪಿ ಕಲಾವಿದರಿಗೂ ಮೆಚ್ಚುಗೆಯಾಗಿ, ಅವರು ಪುರಿ ಜಗನ್ನಾಥ ಮಂದಿರದ
ಒಡಿಯಾ ಭಿತ್ತಿ, ಗೋಪುರಗಳ ಮೇಲೆ ವರ್ಣ ಚಿತ್ರಗಳಲ್ಲಿ ಇದನ್ನು ದಾಖಲಿಸಿದರು. ಮುಂದೆ ಒಡಿಯಾ ಕಲಾವಿದರು ಇದನ್ನು ಪಟ ಚಿತ್ರಗಳಲ್ಲಿ ಚಿತ್ರಿಸಿದರು. ಅದ ಒಡಿಶಾಕ್ಕಷ್ಟೇ ಸೀಮಿತವಾಗಲಿಲ್ಲ. ಆ ಪಟಚಿತ್ರಗಳನ್ನು ವಿದೇಶೀಯರು ಕೊಂಡೊಯ್ದರು. ಅಮೆರಿಕದ ಪ್ರತಿಷ್ಠಿತ ಆರ್ಟ್ ಮ್ಯೂಸಿಯಂ ಎನಿಸಿರುವ ನ್ಯೂಯಾರ್ಕ್ ಮೆಟ್ರೊಪಾಲಿಟನ್ ಮ್ಯೂಸಿಯಂನಲ್ಲೂ ಇದು ಸ್ಥಾನ ಪಡೆದಿದೆ. 2014ರಲ್ಲಿ ಸ್ವೀಡನ್‌ನಲ್ಲಿ ನಡೆದ ಯುರೋಪಿಯನ್ ಎಸೋಸಿಯೇಷನ್ ಫಾರ್ ಸೌತ್ ಏಷ್ಯನ್ ಆರ್ಕಿಯಾಲಜಿ ಅಂಡ ಆರ್ಟ್ ಸಂಸ್ಥೆಯ 22ನೆಯ ಅಧಿವೇಶನದಲ್ಲಿ ‘ಫ್ರಂ ದ ಹರಪ್ಪನ್ ಕಿಮೇರಾಸ್ ಟು ನವಗುಂಜರ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವೂ ನಡೆದಿತ್ತು.
ಪಾಶ್ಚಾತ್ಯ ಸಂಗೀತಗಾರನೊಬ್ಬ ತನ್ನ ಆಲ್ಬಂನ ಒಂದು ಟ್ರಾಕ್‌ಗೆ ‘ನವಗುಂಜರ’ ಎಂದೇ ಹೆಸರನ್ನಿಟ್ಟಿದ್ದಾನೆ. ವಿದೇಶೀಯರೆಲ್ಲ ಇಷ್ಟು ಮೆಚ್ಚುತ್ತಿರುವ ನವಗುಂಜರದ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲದೇ ಇರುವುದು ವಿಪಾರ್ಯಾಸ. ಹೋಗಲಿ, ನೂರು ನೂರೈವತ್ತು ವರ್ಷಗಳಿಂದ ವಿದೇಶಿಯರ ಕುತೂಹಲ, ಮೆಚ್ಚುಗೆಗೆ ಪಾತ್ರವಾಗಿರುವ ಈ ನವಗುಂಜರದ ಒಂದು ಚಿತ್ರ, ನಮ್ಮ ಹಂಪಿಯಲ್ಲೂ ಇದೆ ಎಂಬುದನ್ನು ಇದುವರೆಗೂ ಯಾರೂ ಗಮನಿಸಿದೇ ಇರುವುದು ಇನ್ನೂ ದೊಡ್ಡ ವಿಪರ್ಯಾಸ.
ವರ್ಣ ಚಿತ್ರಗಳು
ವಿರೂಪಾಕ್ಷೇಶ್ವರ ಗುಡಿಯ ರಂಗ ಮಂಟಪದ ಮೇಲ್ಛಾವಣಿಯಲ್ಲಿ ಉತ್ಕೃಷ್ಟವಾದ ನೈಸರ್ಗಿಕ ಬಣ್ಣಗಳಿಂದ ರಚಿಸಿರುವ ವರ್ಣ ಚಿತ್ರಗಳಿರುವುದನ್ನು ನೀವೆಲ್ಲರೂ ಗಮನಿಸಿರಬಹುದು. ಮುಖ್ಯವಾದ ಚಿತ್ರಗಳು ಪುರಾಣ, ರಾಮಾಯಣ, ಮಹಾ ಭಾರತದ ಪ್ರಸಂಗಗಳನ್ನು ಚಿತ್ರಿಸಿವೆ. ಉದಾ: ಕಾಮ ದಹನ, ಗಿರಿಜಾ ಕಲ್ಯಾಣ, ಮತ್ಸ್ಯ ಯಂತ್ರ ಭೇದನ, ಶಿವ ಧನಸ್ಸು ಮುರಿದ ಪ್ರಕರಣ, ವಿದ್ಯಾರಣ್ಯರ ಪಲ್ಲಕ್ಕಿ ಮೆರವಣಿಗೆ ಮೊದಲಾದ ಚಿತ್ರಗಳಿವೆ.
ಈ ವರ್ಣ ಚಿತ್ರಗಳನ್ನು ವಿಶ್ವದ ಹಲವು ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಸೈನಿಕರ ವೇಷಭೂಷಣ, ಅವರು ಹಿಡಿದಿರುವ ಗನ್ ಸ್ವರೂಪದ ಆಯುಧ, ಕೆಲವು ಕಡೆ ಮುಸ್ಲಿಂ ಉಡುಗೆ ಮುಂತಾದವುಗಳನ್ನು ಗಮನಿಸಿ, ಈ ವರ್ಣಚಿತ್ರಗಳೂ ಕೂಡ ವಿಜಯ ನಗರ ಸಾಮ್ರಾಜ್ಯ ಪತನಾನಂತರದ ನಿರ್ಮಿತಿಗಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನನ್ನ ‘ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು’ ಸಂಶೋಧನೆಯಲ್ಲಿ ಈ ವರ್ಣಚಿತ್ರಗಳೂ, ಬಿಷ್ಟಪ್ಪಯ್ಯನವರ ಕಾಲದಲ್ಲೇ ರಚನೆಗೊಂಡವೆಂದು ತಿಳಿದು ಬಂದಿತು. ಇವು ಕ್ರಿ.ಶ. 1660-1694ರ ಅವಧಿಯಲ್ಲೇ ಆದವುಗಳು. ಈಗ ತುಸು ಹಿನ್ನೆಲೆ ಅರಿಯೋಣ.
ಸಾಮಾನ್ಯವಾಗಿ ಮುಸ್ಲಿಂ ಅರಸರು ಯುದ್ಧದಲ್ಲಿ ಗೆದ್ದ ತಕ್ಷಣ, ದೇಗುಲಗಳನ್ನು ಮತ್ತು ವಾಸ್ತು ನಿರ್ಮಿತಿಗಳನ್ನು ನಾಶ ಮಾಡಿ,
ಅದರ ಪಕ್ಕದಲ್ಲೇ ಮಸೀದಿಯನ್ನು ನಿರ್ಮಿಸುತ್ತಿದ್ದರು. ಆಗಲೇ ಆ ರಾಜನನ್ನು ಪೂರ್ತಿ ಸೋಲಿಸಿದಂತೆ ಎಂಬುದು ಆಗಿನ ಅವರ
ರೀತಿ. ಕಾಶಿ, ಮಥುರಾ, ಆಗ್ರಾ ಎಲ್ಲೆಡೆ ಇದರ ಉದಾಹರಣೆ ನೋಡಬಹುದು. ಹಾಗಾದರೆ, ಇಡೀ ವಿಶ್ವವೇ ಬೆರಗಿನಿಂದ ನೋಡು ವಂತೆ ಮೆರೆದಿದ್ದ ವಿಜಯನಗರದ ರಾಜಧಾನಿ ಹಂಪಿಯಲ್ಲಿ ಹಾಗೇಕೆ ಆಗಲಿಲ್ಲ? ಸಾಮ್ರಾಜ್ಯ ಪತನಾನಂತರ ಪೆನುಕೊಂಡೆ ಯಲ್ಲಿದ್ದ ರಾಜರು, ಸಂಪೂರ್ಣ ಅಸ್ತಿತ್ವ ಕಳೆದುಕೊಂಡ ಮೇಲೆ, ಆ ಭಾಗದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದ್ದ ಗುರು ಬಿಷ್ಟಪ್ಪಯ್ಯನವರು ವಿರೂಪಾಕ್ಷನ ರಕ್ಷಣೆಗೆ ನಿಂತರು.
ಇಡೀ ಸಮಾಜವೇ ಜಾತಿ ಬೇಧ ಮರೆತು ಅವರಿಗೆ ಕೈಜೋಡಿಸಿತು. ಅಳಿದ ಸಾಮ್ರಾಜ್ಯದ ರಾಜಧಾನಿಯಲ್ಲಿ ಮತ್ತೆ ಮುಗಿಲೆತ್ತರದ ಗೋಪುರ ತಲೆ ಎತ್ತತೊಡಗಿತು. ಇದು ಸಹಜವಾಗಿಯೇ ಶತ್ರುಗಳ ಕೆಂಗಣ್ಣಿಗೆ ಗುರಿಯಾಯಿತು. ಯೋಗಿಯ ಮೇಲೆ ಹಲವು ಬಾರಿ
ದಾಳಿಗಳಾದವು. ಅವರು ತಮ್ಮ ಶಕ್ತಿಯಿಂದಾಗಿ, ಪ್ರಭಾವಶಾಲಿ ವ್ಯಕ್ತಿತ್ವದಿಂದಾಗಿ ಆ ದಾಳಿಗಳಿಂದ ತಪ್ಪಿಸಿಕೊಂಡರು. (ಮುಂದೆ
ಅವರ ಮಗ ಶಿವಪ್ಪಯ್ಯನವರು ಮುಸ್ಲಿಂ ದಾಳಿಯಲ್ಲೇ ಹತರಾದರು.) ತಮ್ಮ ಸಂಕಲ್ಪದಂತೆ ಏಕಾದಶ ರುದ್ರರ ಸಂಕೇತವಾಗಿ ವಿರೂಪಾಕ್ಷ ದೇಗುಲದ ಎದುರು ಹನ್ನೊಂದು ಅಂತಸ್ತುಗಳ ಮಹಾಗೋಪುರ ನಿರ್ಮಿಸಿ, ಕೃಷ್ಣದೇವರಾಯ ನಿರ್ಮಿಸಿದ್ದ ಎರಡ ನೆಯ ಚಿಕ್ಕ ಗೋಪುರ, ರಂಗಮಂಟಪಗಳ ಜೀರ್ಣೋದ್ಧಾರದೊಂದಿಗೆ ಇಡೀ ಗುಡಿಯ ಆವರಣವನ್ನು ಭದ್ರಗೊಳಿಸಿದರು.
ಹಾಗೆ ರಂಗಮಂಟಪವನ್ನು ಜೀರ್ಣೋದ್ಧಾರಗೊಳಿಸಿದ ಸಂದರ್ಭದಲ್ಲಿಯೇ ಸ್ವತಃ ರಸಸಿದ್ಧರಾಗಿದ್ದ ಬಿಷ್ಟಪ್ಪಯ್ಯನವರು ಈ ವರ್ಣಚಿತ್ರಗಳನ್ನು ಚಿತ್ರಿಸಿರಬಹುದೆಂದು ತರ್ಕಬದ್ಧ ಊಹೆಗೆ ನಿಲುಕುವ ಸಂಗತಿ. ಇದು ಬರೀ ತರ್ಕಬದ್ಧ ಊಹೆಯಷ್ಟೇ ಅಲ್ಲ, ಗಟ್ಟಿ ಪುರಾವೆಗಳೂ ಇವೆ. ದೊಡ್ಡ ದಾರ್ಶನಿಕರಾಗಿದ್ದ ಗುರು ಬಿಷ್ಟಪ್ಪಯ್ಯನವರು ತಂತ್ರ, ಶಾಕ್ತ, ನಾಥಪಂಥಗಳನ್ನು, ಅವುಗಳ ಅಂಗಗಳಾದ ರಸಶಾಸ್ತ್ರ, ಆಯುರ್ವೇದ, ವಾಸ್ತು ಶಿಲ್ಪ, ಖಗೋಲ ಶಾಸ್ತ್ರ, ಆಗಮ, ಯೋಗ, ಅಧ್ಯಾತ್ಮ ಮುಂತಾದ ಎಲ್ಲಾ ವಿಷಯಗಳಲ್ಲೂ ಪಾಂಡಿತ್ಯ ಹೊಂದಿದ್ದ ಮಹಾಪುರುಷರು. ಅವರು ತಮ್ಮ ಎಲ್ಲಾ ನಿರ್ಮಿತಿಗಳಲ್ಲಿ ಅಕ್ಷರಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿಲ್ಲ.
ಆದರೆ, ತಂತ್ರ, ರಸಶಾಸ್ತ್ರಜ್ಞರ ಆರಾಧ್ಯ ದೈವ ಎನಿಸಿರುವ ಷಣ್ಮುಖ ಮತ್ತು ನವಿಲನ್ನು ತಮ್ಮ ಲಾಂಛನವಾಗಿಸಿಕೊಂಡು, ಪ್ರತಿ ಯೊಂದು ನಿರ್ಮಿತಿಯಲ್ಲೂ ಅದನ್ನು ದಾಖಲಿಸಿದ್ದಾರೆ. ಅಂತೆಯೇ ಈ ವರ್ಣಚಿತ್ರಗಳಲ್ಲೂ. ರಂಗಮಂಟಪದ ವರ್ಣಚಿತ್ರ ಗಳು ವಿಶ್ವದಾದ್ಯಂತ ವಿದ್ವಾಂಸರಿಂದ ಮೆಚ್ಚುಗೆ ಪಡೆದು ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವ ಹಂಪೆಯ ಈ ವರ್ಣಚಿತ್ರಗಳು ಅದ್ಭುತವಾದ ಕಲಾಸೌಂದರ್ಯದಿಂದ ಕೂಡಿವೆ.
ಪ್ರತಿ ಚಿತ್ರದ ಸೂಕ್ಷ್ಮ ಅಂಶವೂ ಬೆರಗು ಹುಟ್ಟಿಸುವಂತಹದ್ದು. ಉದಾಹರಣೆಗೆ ಕಾಮದಹನದ ಸಂದರ್ಭದಲ್ಲಿನ ತಪೋನಿರತ ಶಿವನ ರೂಪ ಬಹು ವಿಶಿಷ್ಟವಾಗಿದ್ದು, ಅಲ್ಲಿ ಆತನಿಗೆ ಫ್ರೆಂಚ್ ಮಾದರಿಯ ಗಡ್ಡ ಮೀಸೆಗಳಿವೆ! ಮತ್ತೊಂದು ಚಿತ್ರದಲ್ಲಿ ಎಡ, ಬಲಗಳಲ್ಲಿ ವಿಷ್ಣು ಮತ್ತು ಬ್ರಹ್ಮರು ಇರುವ ಶಿವನಿಗೆ ಸುಂದರವಾದ ಗಿರಿಜಾ ಮೀಸೆ ಇದ್ದು, ವಿಷ್ಣುವಿಗೆ ಮೀಸೆ ಇಲ್ಲ. ಗಿರಿಜಾ ಕಲ್ಯಾಣದಲ್ಲಿ ಶಿವನಿಗೆ ಚಿಕ್ಕದಾಗಿ ಟ್ರಿಮ್ ಮಾಡಿದ ಗಡ್ಡ, ಮದುವೆಗೆ ಬಂದ ವಿಷ್ಣುವಿಗೆ ಸುಂದರವಾದ ಮೀಸೆ.
ತ್ರಿಪುರಾಸುರ ಸಂಹಾರದ ಚಿತ್ರವಂತೂ ವಿಶೇಷ. ಶಿವನಿಗೆ ಆ ಸಂದರ್ಭದಲ್ಲಿ ಎಲ್ಲಾ ದೇವತೆಗಳೂ ಶಕ್ತಿ ತುಂಬಿದ್ದರೆನ್ನುವ
ಸಂಕೇತವಾಗಿ ಶಿವನ ರಥಕ್ಕೆೆ ಸೂರ್ಯ ಚಂದ್ರರ ಗಾಲಿಗಳು, ಪಂಚ ಮಹಾಭೂತಗಳೇ ಕುದುರೆಗಳೂ, ಶೇಷನಾಗನ ಲಗಾಮು, ಸಾರಥಿಯಾದ ಬ್ರಹ್ಮ, ಆಕಾಶದ ಬಿಲ್ಲು, ಸ್ವತಃ ವಿಷ್ಣುವೇ ಬಾಣವಾಗಿದ್ದು ಸುಂದರವಾಗಿ ಮೂಡಿಬಂದಿದೆ.
ಇಂತಹ ಮುಖ್ಯವಾದ ಚಿತ್ರಗಳಷ್ಟೇ ಮತ್ತೆ ಮತ್ತೆ ಚರ್ಚೆಗೆ ಒಳಪಟ್ಟಿವೆ. ಈ ಚಿತ್ರಗಳು ಗುರು ಬಿಷ್ಟಪ್ಪಯ್ಯ ನಿರ್ಮಿತಿಗಳೆನ್ನು ವುದಕ್ಕೆ ಪುರಾವೆಗಳಿವೆ.
1. ವಿರೂಪಾಕ್ಷನಿಗೆದುರಾಗಿ, ಅವರು ನಿರ್ಮಿಸಿದ ಗೋಪುರದ ಚಿತ್ರವಿದೆ.
2. ತಾನು ವಿರೂಪಾಕ್ಷೇಶ್ವರನಿಗೆ ಕಾಣಿಕೆ ನೀಡಿದ ಚಿನ್ನದ ಮುಖವಾಡದ ಚಿತ್ರವಿದೆ.
3. ಈಗ ವಿರೂಪಾಕ್ಷೇಶ್ವರನಿಗೆ ಮುಖಮಾಡಿ ನಿಂತು ಬಲಬದಿಯ ಬೋದಿಗೆಯ ಬಳಿ ನೋಡಿ. ಮೊದಲ ಚಿತ್ರವೇ ಮಯೂರ ವಾಹನ.
4. ಅದರ ಬದಿಯ ಎರಡನೆಯ ಚಿತ್ರವೇ ಈ ಲೇಖನದ ವಿಷಯ ಎನಿಸಿದ ನವಗುಂಜರ.
ಒಡಿಶಾದ ನವಗುಂಜರನಿಗೆ ಕೋಳಿಯ ಮುಖ ಇದ್ದರೆ, ಹಂಪೆಯಲ್ಲಿ ಬಿಷ್ಟಪ್ಪಯ್ಯನವರ ಸಂಕೇತ ಎನಿಸಿದ ನವಿಲಿನ ಮುಖ ವಿದೆ. ಅಲ್ಲಿ ಎದುರಿಗೆ ಅರ್ಜುನ ನಿಂತಿದ್ದರೆ, ಇಲ್ಲಿ ಮುಸ್ಲಿಮರ ಚಲ್ಲಣ ಧರಿಸಿದಂತಿರುವ ವ್ಯಕ್ತಿ ಇದ್ದಾನೆ. ಬಹುಷಃ ಬಿಷ್ಟಪ್ಪಯ್ಯ ನವರು ಮುಸ್ಲಿಂ ಸೈನಿಕರ ದಾಳಿಯನ್ನೆದುರಿಸಿ, ಅವರನ್ನು ನಿಗ್ರಹಿಸಿದ ಈ ಎಲ್ಲಾ ಜೀರ್ಣೋದ್ಧಾರ ಕಾರ್ಯ ಮಾಡಿದ್ದರ ಸಂಕೇತ ವಾಗಿ ಈ ರೀತಿ ಚಿತ್ರಿಸಿರಬೇಕು.
ಬೇರೆ ಬೇರೆ ಪ್ರಾಣಿಗಳ ಅಂಗಾಂಗಗಳನ್ನು ಜೋಡಿಸಿಕೊಂಡು ಹೊಸ ರೂಪ ಧರಿಸಿದ ಜೀವಿಗಳ ಉದಾಹರಣೆಗಳು ನಮ್ಮ
ಪುರಾಣಗಳಲ್ಲಿ ಬಹಳಷ್ಟಿವೆ. ಗಣೇಶ, ನರಸಿಂಹ, ಶರಭ ದೇವತೆಗಳಾದರೆ, ದೇವಾಲಯಗಳಲ್ಲಿ ಕಂಡು ಬರುವ ಯಾಳಿ ಅಥವಾ ವ್ಯಾಳಿ ಒಂದು ಮಹತ್ವದ ದೃಷ್ಟಾಂತ. ಅಂತೆಯೇ ‘ನವನಾರಿ ಕುಂಜರ’ ಎಂದರೆ ಒಂಬತ್ತು ಮಹಿಳೆಯರಿಂದಾದ ಆನೆಯ ಮೇಲೆ ಮಹಿಳೆಯರಿಂದಾದ ಕುದುರೆಯ ಮೇಲೆ ರತಿ ಮುಖಾಮುಖಿಯಾಗಿರುವ ಚಿತ್ರಗಳೂ ಇವೆ. ಈ ‘ನವನಾರಿ ಕುಂಜರ’ದ ಮೇಲೆ ಕೃಷ್ಣ, ಅಷ್ಟೇಕೆ ಮೊಗಲ್ ದೊರೆ ಸವಾರಿ ಮಾಡುತ್ತಿರುವ ಚಿತ್ರಗಳೂ ಸಹ ಇವೆ.
ಈ ಪರಿಕಲ್ಪನೆಯನ್ನಾಧರಿಸಿಯೇ ಸರಲದಾಸ ಕವಿ ಶ್ರೀಕೃಷ್ಣನ ಅವತಾರದ ನವಗುಂಜರವನ್ನು ಸೃಷ್ಟಿಸಿರಬೇಕು. ಚಿತ್ರಕಾರರು,
ಶಿಲ್ಪಿಗಳು ಅದನ್ನು ಬಳಸಿದ್ದರಿಂದ ಅದು ವಿಶ್ವವ್ಯಾಪಿ ಎನಿಸಿತು. ಅಚ್ಚರಿ ಎಂದರೆ, ಕೃಷ್ಣಾವತಾರದ ನವಗುಂಜರದ ಮುಂದೆ
ಅರ್ಜುನ ನಮಸ್ಕರಿಸಿ ನಿಂತಿರುವಂತಹದ್ದೇ ಚಿತ್ರವನ್ನು ಯೋಗಿ ಬಿಷ್ಟಪ್ಪಯ್ಯನವರು ತನ್ನ ಹಿನ್ನೆಲೆಯೊಡನೆ ಹಂಪಿಯ
ಗುಡಿಯಲ್ಲಿ ಚಿತ್ರಿಸಿದ್ದು. ಅಂದರೆ, ಗುರು ಬಿಷ್ಟಪ್ಪಯ್ಯನವರಿಗೆ ‘ಸರಲ ಭಾರತ’ದ ಕುರಿತು ಮಾಹಿತಿ ಇತ್ತೆ? ಪುರಿ ದೇಗುಲದಲ್ಲಿ
ನೋಡಿ ಬಂದಿದ್ದರೆ? ಆ ಕವಿಗೆ ಹೊಳೆದ ಪರಿಕಲ್ಪನೆಯೇ ಇವರಿಗೂ ಹೊಳೆಯಿತೆ? ಅಥವಾ ಅವರ ಕಣ್ಣಿಗೆ ಬೀಳುವಂತೆ
ಮತ್ತೆಲ್ಲಾದರೂ ಇಂಥ ಚಿತ್ರ, ಶಿಲ್ಪಗಳಿವೆಯೇ? ಇದು ಒಂದು ಅಧ್ಯಯನಯೋಗ್ಯವಾದ ಮತ್ತು ಕುತೂಹಲಕಾರಿ ವಿಷಯ.
ವಿದ್ವಾಂಸರು ಹಂಪೆಯ ಮುಖ್ಯ ಚಿತ್ರಗಳನ್ನು ಮತ್ತೆ ಮತ್ತೆ ಅಧ್ಯಯನ ಮಾಡುವುದರ ಜತೆಯಲ್ಲೇ, ಇಂತಹ ಸಣ್ಣದೆನಿಸುವ
ಚಿತ್ರಗಳನ್ನೂ ಅಧ್ಯಯನ ಮಾಡಿದರೆ, ಇತಿಹಾಸದ ಕುರಿತು ಮತ್ತಷ್ಟು ಸುಳಿವು, ಹೊಳಹು ಸಿಗುವುದರಲ್ಲಿ ಅನುಮಾನವಿಲ್ಲ.
(ಪ್ರತಿಕ್ರಿಯಿಸಿ : viramapost@gmail.com)
ಮದನಾರಿ ಶಿವ
ಈಗ ‘ಮದನಾರಿ ಶಿವ’ನನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸೋಣ. ಇಲ್ಲಿ ಆತನಿಗೆ ಹಣೆಗಣ್ಣು ಇಲ್ಲ. ಮುಡಿಯಲ್ಲಿ ಚಂದ್ರನಿಲ್ಲ. ಶಿವ ಯಾವಾಗಲೂ ವ್ಯಾಘ್ರ ಅಥವಾ ಗಜ ಚರ್ಮಾಂಬರನಷ್ಟೇ? ಕೌಪೀನಧಾರಿ ಶಿವ ಬಹುಶಃ ನಮಗೆಲ್ಲೂ ಕಾಣಸಿಗನು. ಆದರೆ ಇಲ್ಲಿ ಆತ ಕೌಪೀನಧಾರಿ. ಎಡಗೈಯಲ್ಲಿ ಲಿಂಗ, ಬಲಗೈಯಲ್ಲಿ ಸರ್ವಶೀರ್ಷಾ ಮುದ್ರೆ. ಎದುರಲ್ಲಿ ನಂದಿ, ಕಪಾಲಗಳೂ, ಸರ್ಪಗಳು ಮತ್ತು ನವಿಲುಗಳೇ ಪ್ರಧಾನವಾಗಿ ಇತರ ಪಕ್ಷಿಗಳೂ ಸುತ್ತುವರಿದಿವೆ.
ಎದುರಿನಲ್ಲಿ ಪುಷ್ಪ ಬಾಣ ಹೂಡಿದ ಕಾಮನಿಲ್ಲದಿದ್ದಲ್ಲಿ, ಈ ಚಿತ್ರವನ್ನು ಸುಲಭವಾಗಿ ತಪೋನಿರತ ಯತಿ ಎಂದು ಭಾವಿಸ ಬಹುದಷ್ಟೇ. ಹಾಗಾಗಿ ಶಿವನ ಈ ರೂಪ ತುಸು ವಿಚಿತ್ರ, ಅಸಾಮಾನ್ಯ ಎಂದೂ ಅನಿಸದಿರದು. ಈಚೆಗೆ ಸಾಮಾಜಿಕ ಲತಾಣದಲ್ಲಿ
ನಾನು ಈ ವರ್ಣಚಿತ್ರಗಳ ಬಗ್ಗೆೆ, ಶಿವನ ವೈಶಿಷ್ಟ್ಯದ ಬಗ್ಗೆ ಬರೆಹ ಹಾಕಿದ್ದೆ. ಹಿರಿಯ ವಿದ್ವಾಂಸರಾದ ಡಾ. ವಸುಂಧರಾ
ಫಿಲಿಯೋಝಾ ಅವರು ‘ತಾವು ಇಷ್ಟು ದಿನಗಳಿಂದ ಆ ವರ್ಣಚಿತ್ರಗಳನ್ನು ಅಧ್ಯಯನ ಮಾಡಿದ್ದರೂ, ಶಿವನ ಈ ಚಿತ್ರವನ್ನು ಇಷ್ಟು ಸೂಕ್ಷ್ಮವಾಗಿ ಗಮನಿಸಿರಲಿಲ್ಲ’ ಎಂದು ಹೇಳಿ, ಆ ಚಿತ್ರದ ಮೇಲ್ಕಂಡ ವಿವರಗಳನ್ನು ಅವರೇ ನೀಡಿದರು.
ಮತ್ತು ಈಗ ಈ ಶಿವನನ್ನು ಹೊಸ ಅರ್ಥದೊಂದಿಗೆ ವಿಶ್ಲೇಷಿಸಬೇಕಾದ ಅಗತ್ಯತೆ ಇದೆ ಎಂದೂ ಅಭಿಪ್ರಾಯಪಟ್ಟರು. ವಿಶ್ಲೇಷಣೆ ನೀಡಿದ ಡಾ. ಫಿಲಿಯೋಝಾ ದಂಪತಿಗಳಿಗೆ ವಂದನೆಗಳು.ಗುರು ಬಿಷ್ಟಪ್ಪಯ್ಯನವರ ಹಿನ್ನೆಲೆಯಲ್ಲಿ ನಾವು ಈ ಶಿವನ ಚಿತ್ರವನ್ನು ಹೀಗೆ ವಿಶ್ಲೇಷಿಸಬಹುದು. ಗುರು ಬಿಷ್ಟಪ್ಪಯ್ಯನವರು ತಂತ್ರ, ಶಾಕ್ತ ಮತ್ತು ನಾಥಪಂಥದ ಅನುಯಾಯಿ. ಇವರು ಆತ್ಮಜ್ಞಾನ ಪಡೆಯಲೆಂದು ಮಾಡಿದ ಹನ್ನೆರಡು ವರ್ಷಗಳ ಕಠಿಣ ತಪಸ್ಸು ಸೇರಿದಂತೆ, ತಮ್ಮ ಜೀವಿತಾವಧಿಯಲ್ಲಿ ಐದು ಸಲ ಗಂಭೀರ ತಪಸ್ಸು ಮಾಡಿದ್ದಾರೆ.
ಆಗ ಅವರು ಅಲ್ಲಿ ಸ್ಥಾಪಿಸಿಕೊಂಡಿರುವ ಲಿಂಗಗಳೂ ಈಗ ಅವರ ಹೆಸರಿನಲ್ಲಿಯೇ ಅರ್ಚಿಸಲ್ಪಡುತ್ತಿವೆ. ತತ್ಕಾಲೀನ ಶೃಂಗೇರಿ
ಸ್ವಾಮಿಗಳೂ ಸೇರಿದಂತೆ, ಇಡೀ ಸಮಾಜವೇ ಅವರನ್ನು ‘ಸಾಕ್ಷಾತ್ ವಿರೂಪಾಕ್ಷೇಶ್ವರಾವತಾರ’ ಎಂದು ಗೌರವಿಸಿ ಪೂಜಿಸಿತು. ಇನ್ನೂ ವಿಶಾಲ ಅರ್ಥದಲ್ಲಿ ಯೋಚಿಸಿದರೆ, ಈ ಯೋಗಿಯು ಶ್ರೀ ಶಂಕರರ ಪುನರವತಾರ ಎಂದೇ ಪರಿಗಣಿಸಲ್ಪಟ್ಟಿದ್ದ ಗುರು ವಿದ್ಯಾರಣ್ಯರ ಪರಂಪರೆಯಲ್ಲಿಯೇ ಬಂದಿರುವ ಶುದ್ಧ ಅದ್ವೈತಿ. ಶ್ರೀ ಶಂಕರರ ‘ಶಿವೋಹಂ’ ‘ಸೋಹಂ’ ತತ್ತ್ವಗಳನ್ನು ಅನುಸರಿಸಿ, ಸಾಕ್ಷಾತ್ ಅನುಭವಿಸಿದವರು. ಅದರ ಸಂಕೇತವಾಗಿಯೇ ತನ್ನನ್ನು ವಿರೂಪಾಕ್ಷನೊಂದಿಗೆ ಸಮೀಕರಿಸಿಕೊಂಡು, ಈ ರೀತಿಯಲ್ಲಿ ಚಿತ್ರಿಸಿರಬಹುದು. ಸುತ್ತಲೂ ಹಾರಾಡುತ್ತಿರುವ ಪಕ್ಷಿಗಳಲ್ಲಿ ನವಿಲು ಪ್ರಧಾನವಾಗಿವೆ.