ಲಕ್ಷ್ಮೀಕಾಂತ್ ಎಲ್ ವಿ
ಆಸೆ ಸಹಜ. ಅದರಿಂದ ಜೀವನದಲ್ಲಿ ಒಂದು ಮಟ್ಟದ ಆಸಕ್ತಿ ಬೆಳೆಯುತ್ತದೆ. ಆದರೆ ದುರಾಸೆಗೆ ಮನುಷ್ಯ ಬಲಿಯಾ ದರೆ, ಜೀವನ ನಿರಂತರ ನರಕ.
ಈ ಪಯಣದಲ್ಲಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಆಸೆ ಇರುತ್ತದೆ, ಇರಬೇಕು ಕೂಡ. ಆಸೆ ಇಲ್ಲದ
ಮನುಷ್ಯನ ಬದುಕು ನಶ್ವರ. ಆಸೆಯು ಜೀವನ ಪ್ರೀತಿಯನ್ನೂ ರೂಪಿಸಬಲ್ಲದು. ಆದರೆ ದುರಾಸೆ ಇರಕೂಡದು.
ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಶುದ್ಧವಾದ ಮನಸ್ಸು ಮತ್ತು ಏಕಾಗ್ರತೆ ಅವಶ್ಯ. ಆದರೆ ಮನುಷ್ಯ ಇಂದು ಜಾಗತಿಕ
ಬೆಳವಣಿಗೆಯಿಂದಾಗಿ ಕೇವಲ ಸಮಯ ಮತ್ತು ಹಣಕ್ಕೆ ಪ್ರಾಮುಖ್ಯತೆ ನೀಡುತ್ತಾ ಅದರ ಹಿಂದೆ ಓಡುತ್ತಿದ್ದಾನೆ. ಇದರಿಂದಾಗಿ ಮಾನಸಿಕ ನೆಮ್ಮದಿ, ಸಂತೋಷ ಆತನಿಂದ ದೂರ ದೂರ ಸಾಗುತ್ತಿದೆ. ಮಾನವೀಯತೆ ಕೂಡ ಮರೆಯಾಗುತ್ತಿದೆ. ದುರಾಸೆ,
ಅಸೂಯೆ, ದ್ವೇಷದ ದಳ್ಳುರಿಯಲ್ಲಿ ಬೇಯುತ್ತಾ ತನ್ನ ಅತಿಯಾಸೆಯಿಂದ ಬದುಕನ್ನೇ ನಾಶ ಮಾಡಿಕೊಳ್ಳಲು ನಾಂದಿ ಹಾಡು ತ್ತಿದ್ದಾನೆ.
ಮನುಷ್ಯನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು. ಎಂದು ಮನುಷ್ಯ ತಾಯ್ನಾಡನ್ನು ಪ್ರೀತಿಸುವುದರೊಂದಿಗೆ ನಡೆ ನುಡಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತಾನೋ ಆಗ ಬದುಕಿನ ಬಂಡಿ ಸರಾಗವಾಗಿ ಸಾಗುತ್ತಾ ಸಂಸಾರ ಆನಂದಸಾಗರವಾಗುತ್ತದೆ.
ಅಲ್ಲಮಮಪ್ರಭು ಒಂದು ಕಡೆ ಈ ರೀತಿ ಹೇಳುತ್ತಾರೆ.
ಕಾಲುಗಳೆರಡು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ…
ಮನುಷ್ಯನ ದೇಹ ಆತ್ಮ ಮತ್ತು ಮನಸ್ಸಿನ ಸಂಬಂಧಗಳು ಎಷ್ಟು ಚಂಚಲ ಮತ್ತು ಹೊಂದಾಣಿಕೆ ಇಲ್ಲದಂತಾಗಿದೆ ಎಂದು ವಚನಕಾರ ಅಲ್ಲಮಪ್ರಭು ವಿವರಿಸುತ್ತಾರೆ. ‘ಎನ್ನ ಕಾಲೇ ಕಂಬ’ ಎಂದು ಬಸವಣ್ಣ ದೇಹವನ್ನು ದೇವಾಲಯಕ್ಕೆ ಹೋಲಿಸಿದ ರೀತಿ ಇಲ್ಲಿ ಅಲ್ಲಮಪ್ರಭು ದೇಹವನ್ನು ಬಂಡಿಗೆ ಹೋಲಿಸುತ್ತಾ ಕಾಲುಗಳನ್ನು ಬಂಡಿಯ ಗಾಲಿ ಎಂದು ಹೇಳುತ್ತಾರೆ.
ನಮ್ಮ ಈ ದೇಹವೆಂಬ ಬಂಡಿಗೆ ಆತ್ಮ ಯಜಮಾನನಾದರೆ ಅದನ್ನು ಹೊಡೆಯುವವರು ಐದು ಜನ ಮಾನಿಸರು. ಅಂದರೆ ಪಂಚೇಂದ್ರಿಯಗಳು. ಈ ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲ. ಎಲ್ಲವೂ ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ. ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತವೆ.
‘ಅದರಿಚ್ಚೆಯನರಿದು ಹೊಡೆಯದಿರ್ದಡೆ’ ಅಂದರೆ ಆತ್ಮದ ಇಚ್ಛೆಯನ್ನು ಅರಿಯದೆ ಈ ಇಂದ್ರಿಯಗಳು ಮುನ್ನಡೆಯುತ್ತವೆ; ಆಗ ‘ಅದರಚ್ಚು ಮುರಿದಿತ್ತು’ ಅಂದರೆ ಬಂಡಿಯ ಆಧಾರವಾದ ಅಚ್ಚು ಕಳಚಿ ಬೀಳುತ್ತದೆ ಎಂದು ವಿವರಿಸುತ್ತಾರೆ. ಆಧಾರವೇ ಇಲ್ಲದಿದ್ದರೆ ಬಂಡಿಯು ಕೂಡ ಬಿದ್ದ ಹಾಗೆ. ಅಂದರೆ ಇಲ್ಲಿ ಮನುಷ್ಯ ತನ್ನ ಆತ್ಮ ಸುಖವನ್ನು ಮರೆತು ಕೇವಲ ಇಂದ್ರಿಯಗಳು ಬಯಸುವ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯೆಂಬ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂಬುದೇ ಅರ್ಥ.
ನಿಜ, ಜೀವನದಲ್ಲಿ ಮನುಷ್ಯನಿಗೂ ಎಲ್ಲವೂ ಬೇಕು. ಎಲ್ಲದರ ಮೇಲೂ ಆಸೆ. ಕಣ್ಣು ಏನನ್ನು ಬಯಸುತ್ತದೆಯೋ ಅದೆಲ್ಲವನ್ನೂ ಪಡೆದೇ ತೀರಬೇಕೆಂಬ ಅತಿಯಾಸೆ ಮನುಷ್ಯನದ್ದು. ಹೀಗೆ ತನ್ನ ಅತಿಯಾಸೆಯಿಂದಾಗಿ ಮನುಷ್ಯನ ಬದುಕು ನಾಶ ಮಾಡಿ ಕೊಳ್ಳುತ್ತಿದ್ದಾನೆ. ಆತ್ಮ ಸುಖವನ್ನು ಬಯಸದೆ ಕೇವಲ ಬಾಹ್ಯ ಸುಖವನ್ನು ಇಂದ್ರಿಯಗಳ ಆಕರ್ಷಣೆಯಿಂದ ಪಡೆದು ಕ್ಷಣಿಕ ಸುಖದ ಆಮಿಷಕ್ಕೆ ಒಳಗಾಗಿ ಆತ್ಮಸುಖವನ್ನು ದೂರ ಮಾಡಿಕೊಳ್ಳುತ್ತಿದ್ದಾನೆ.
ಕಷ್ಟ ಸುಖ, ನೋವು ನಲಿವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನುಷ್ಯನ ಮನಸ್ಥಿತಿ ಬದಲಾಗುತ್ತಾ ಸಾಗುತ್ತಿದೆ. ಕೇವಲ ಸುಖ, ನಲಿವುಗಳನ್ನು ಮಾತ್ರ ಬಯಸುತ್ತಾ ದುರಾಸೆಗೆ ಬಲಿಯಾಗಿ ತನ್ನ ಬದುಕಿನ ಹಾದಿಯನ್ನೇ ಬದಲಿಸಿಕೊಂಡ ಮನುಷ್ಯ ನಿಜಕ್ಕೂ ಎತ್ತ ಸಾಗುತ್ತಿದ್ದಾನೆ ಎಂದೆನಿಸಿದಿರದು.
ಆಸೆ ಮರೆತಾಗ ಮಾತ್ರ ಬದುಕು ಸುಖವಾಗುತ್ತದೆ; ಇಲ್ಲವಾದಲ್ಲಿ ಬದುದು ದುಃಖದಲ್ಲಿ ಮುಳುಗುತ್ತದೆ. ಈ ಜಗತ್ತಿನಲ್ಲಿ ಎಲ್ಲರ ಆಸೆ ಪೂರೈಸಲು ಎಲ್ಲವೂ ಸಾಕಷ್ಟು ಇದೆ. ಆದರೆ ಮನುಷ್ಯನ ದುರಾಸೆಯನ್ನು ತಣಿಸಲು ಮಾತ್ರ ಈ ಜಗತ್ತಿನ ಸಂಪತ್ತೆಲ್ಲಾ ಸಾಲದು.
ಜೀವನ ಸಾಗಿಸಲು ಬೇಕಾದ ಅರಿವು ಕೇವಲ ಲೌಕಿಕಕ್ಕೆ ಸಾಧನವಷ್ಟೆ. ಆದರೆ ಜಗತ್ತನ್ನು ಅರಿಯುವ ಪಾರಮಾರ್ಥಿಕ ಜ್ಞಾನವನ್ನು ಪಡೆದು ಲೌಕಿಕದ ಬದುಕನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿಕೊಂಡು, ಒಂದು ತೃಪ್ತ, ಸಾರ್ಥಕ ಬದುಕನ್ನು ನಡೆಸುವುದೇ ನಿಜವಾದ ಬದುಕು.
ಅಂತಹ ಬದುಕನ್ನು ನಾವು ಸಾಧಿಸಿದರೆ ಬದುಕಿನ ಬೇಧಗಳೆಲ್ಲ ನಶಿಸಿ, ಮುಕ್ತ ಭಾವ ಮನದಲ್ಲಿ ಮೂಡಿ ನಾವು ಬದುಕನ್ನು
ನೋಡುವ ಪರಿಯೇ ಬದಲಾಗಿ ಜಗತ್ತೆಲ್ಲ ನಮಗೆ ಸುಂದರವಾಗಿ ತೋರುತ್ತದೆ. ಆತ್ಮಸಂತೋಷ ಕೂಡ ದಕ್ಕುತ್ತದೆ. ನಮ್ಮ ಬದುಕು ಕತ್ತಲೆಯಲ್ಲಿ ಆಡೋ ಚದುರಂಗದಂತೆ; ಈ ಜಗವೆಲ್ಲಾ ಯಾರಿಗೆ ಯಾರೂ ಕಾಣದಂಥಾ ಕುರುಡು ತುಂಬಿದೆ. ಇಂತಹ ಜಗದಲ್ಲಿ ಏನೇ ಆದರೂ ಕೂಡ ನಾವು ನಗುತ್ತಿರಬೇಕು. ಎಲ್ಲದಕ್ಕೂ ಕಾರಣಗಳನ್ನು ಹುಡುಕಿ ಪ್ರತಿಯೊಂದಕ್ಕೂ ನೆಪಗಳೊಡ್ಡಿ ನಗುವು ದನ್ನು ಮರೆತುಬಿಟ್ಟರೆ ನಮ್ಮ ಕಣ್ಣುಗಳು ಬದುಕನ್ನು ಸುಂದರವಾಗಿ ಕಾಣುವುದನ್ನೇ ಮರೆತು ಬಿಡುತ್ತವೆ.
ಬದುಕು ಬರಿದಾಯ್ತೆಂದು ಅಳುವುದನ್ನು ಕಲಿತರೆ ದುಡಿಯೋ ಕೈಗಳು ದುಡಿಯೋಕೆ ಅಣಿಯಾಗೋ ಮುಂಚೆಯೇ ಸೋತು ಸೊರಗಿಬಿಡುತ್ತವೆ. ಆದ ಕಾರಣ ನೆಪಗಳೇನೇ ಇರಲಿ ಅದೆಲ್ಲವನ್ನು ಬದಿಗೊತ್ತಿ ನಗುತಿದ್ದರಷ್ಟೇ ಬದುಕು. ನಗುವುದನ್ನು ಮರೆತರೆ ಬದುಕು ನಮ್ಮನ್ನು ಮರೆತುಬಿಡುತ್ತದೆ. ಎಲ್ಲಿ ನಗುವಿರುತ್ತದೆಯೋ ಅಲ್ಲಿ ಆತ್ಮಸಂತೋಷ ಕೂಡ ಮನೆ ಮಾಡುತ್ತದೆ. ಆಸೆಯನ್ನು
ಮರೆತು ಆತ್ಮಸಖ್ಯವನ್ನು ಬಯಸಿದರೆ ಕಾಣೋ ಬದುಕು ಸುಂದರವಾಗುವುದಲ್ಲದೆ ಅಂತಹ ಬದುಕಿನಲ್ಲಿ ನಿಮ್ಮ ಯಾನವೂ ನಿರಂತರವಾಗಿರುತ್ತದೆ.