ಗೆಳತಿಯರ ಗಂಡಂದಿರು ಅಡುಗೆ ಮಾಡಿದ್ದನ್ನು ವಾಟ್ಸಾಪ್‌ನಲ್ಲಿ ಹಾಕಿ ಹೊಟ್ಟೆ ಉರಿಸಿದರು. ನನ್ನ ಗಂಡನೂ ಅಡುಗೆ ಮನೆಯಲ್ಲಿ ಕೈಯಾಡಿಸಬಾರದಿತ್ತಾ ಎಂದೆನಿಸಿತು. ಒಂದು ದಿನ ಅವರಿಗೂ ಮನಸ್ಸು ಬಂದು ಅಡುಗೆಮನೆಗೆ ಕಾಲಿ ಟ್ಟರು. ಆಗೇನಾಯಿತು?
ಶ್ರೀರಂಜನಿ ಅಡಿಗ ಬೆಂಗಳೂರು
ನನ್ನ ವ್ಯಾಟ್ಸಾಪ್ ಗೆಳತಿಯೊಬ್ಬಳ ಸ್ಟೇಟಸನ್ನು ಕಂಡಾಗೆಲ್ಲಾ ಹೊಟ್ಟೆಯೊಳಗೆ ಮುಳ ಮುಳ, ಉರಿ ಉರಿ. ಅವಳ ಗಂಡ ವರ್ಕ್ ಫ್ರಂ ಹೋಂ ಮಾಡ್ತಾನೋ ಅಥವಾ ವರ್ಕ್ ಅಟ್ ಹೋಂ ಮಾಡ್ತಾನೋ ಅನ್ನೋ ಅನುಮಾನ. ‘ಗಂಡ ಮಾಡಿದ ಉಪ್ಪಿಟ್ಟು ಇದು, ಬಹಳ ರುಚಿಕರ’ ಎಂದೋ ‘ಇದರ ಬಣ್ಣ, ಆಕಾರ ನೋಡಬೇಡಿ, ರುಚಿ ಮಾತ್ರ ಅದ್ಭುತ’ ಎಂದೋ, ಸೊಟ್ಟಪಟ್ಟ ಆಕಾರದ ಹಸಿಬಿಸಿಯಾದ ಕಟ್ಲೆಟ್ಟುಳ ಮೇಲೆ ಒಂದಿಷ್ಟು ಸಾಸುಗಳನ್ನು ಹಾಕಿ ಡಿಸೈನ್ ಮಾಡಿದ ಫೋಟೋಗಳನ್ನು ಕಂಡಾಗ ನನ್ನೊಳಗೆ ಏನೋ ಹರಿದಾಡಿದಂಥ ಅನುಭವ. ಅಂಥ ಗಂಡನನ್ನು ಕೈಹಿಡಿದ ಅವಳು ಎಷ್ಟು ಪುಣ್ಯ ಮಾಡಿರುವಳು ಎಂಬ ಆಲೋಚನೆ ಆ ಕ್ಷಣದಲ್ಲಿ.
ಗಂಡ ಮಾಡಿದ ಮಿಲ್ಕ್ ಶೇಕು
ನನ್ನ ರಾಜಸ್ತಾನೀ ಗೆಳತಿಯೊಬ್ಬಳು ತೊಳೆದ ಫಳಫಳ ಹೊಳೆಯುವ ಪಾತ್ರೆಗಳ ಟ್ರೇಯ ಫೋಟೋ ಹಾಕಿ ‘ರಸೋಡ್ ಮೇಂ ಕೌನ್ ಥಾ?’, ಐ ಲವ್ ಯು ಹಬ್ಬೀ ಎಂದು, ಮುಖದ ಮೇಲೆ ಮೂರು ಮುತ್ತು ಗಳಿರುವ ಎಮೋಜಿ ಹಾಕಿರುವುದನ್ನು ನೋಡಿ ಸುಮ್ಮ ನಿರಲು ಸಾಧ್ಯವೇ? ನನ್ನ ಪದವಿ ಗೆಳೆಯರು ‘ನಾನು ಮಾಡಿದ ಐಸ್‌ಕ್ರೀಮು, ಮಿಲ್ಕ್ ಶೇಕು’, ‘ಹೆಣ್ತಿಗೆ ಇವತ್ತು ಬರ್ತ್ ಡೇ ಗಿಫ್ಟ್’ ಎಂದು ಪೋಸ್ಟು ಮಾಡಿರುವುನ್ನು ಕಂಡಾಗಲೆಲ್ಲಾ ಅಭಾವ ವೈರಾಗ್ಯ ನನಗೆ.
ಅದರಲ್ಲೂ ಒಬ್ಬಾತ ‘ಇವತ್ತು ನೆಂಜಿಕೊಳ್ಳಲು ಏನೂ ಇರಲಿಲ್ಲ. ಯುರೇಕಾ ಟೈಮ್ ಎನ್ನುತ್ತಾ ಫ್ರಿಜ್ಜಿನಲ್ಲಿಟ್ಟ ಹಸಿಮೆಣಸು ತೆಗೆದು ಹಾಗೇ ಉಪ್ಪು ನೀರಿನಲ್ಲಿ ಒಂಚೂರು ಬೇಯಿಸಿ, ಸೀದಾ ಬೆಂಕಿ ಮೇಲೆ ಸುಟ್ಟೆ. ಮೊಸರನ್ನದ ಜೊತೆ ಏನ್ ಕಾಂಬಿನೇಶನ್ ಆಗಿತ್ತು
ಗೊತ್ತಾ’ ಎಂದು ಹಸಿಮೆಣಸು + ಮೊಸರನ್ನದ ಫೋಟೋ ಹಾಕಿ ಮೀಸೆ ತಿರುವಿಕೊಂಡಿದ್ದ. ‘ಸುಮ್ನೆ ತಿಂದ್ ಹಾಳ್ ಮಾಡಿ ದ್ಯಲ್ಲೋ! ಅದಕ್ಕೆ ಒಂದು ಲಿಂಬೆಹಣ್ಣನ್ನು ಕಟ್ಟಿ ಕಾರಿನ ಕೆಳಗೆ ನೇತಾಡಿಸಿದ್ದರೆ ನಿನ್ ಟೈಮ್ ಇನ್ನೂ ಚೆನ್ನಾಗಿರುತ್ತಿತ್ತು’ ಎಂದು ಕಮೆಂಟ್ ಮಾಡೋಮಟ್ಟಿಗೆ ರೇಜಿಗೆ ಹುಟ್ಟಿತ್ತು.
ರಾಯರ ಮನಸ್ಸು ಬದಲಾದೀತೆ?
ಹೀಗೆ ಗಂಡಸರೆಲ್ಲಾ ಅಡುಗೆಮನೆಯಲ್ಲಿ ಸಹಾಯಕರಾಗುವ ಮತ್ತು ಹೆಂಡಂದಿರು ಅದನ್ನು ಜಗಜ್ಜಾಹೀರು ಮಾಡುವುದನ್ನು ಕಾಂಬ ಕರ್ಮ ನನ್ನದಾದ ಮೇಲೆ, ನಮ್ಮ ರಾಯರಿಗೂ ಏನಾದ್ರೂ ಮನಸ್ಸು ಬದಲಾವಣೆ ಆಗೋದಾದ್ರೆ ಆಗಲಿ ಎಂದು ಫೋನನ್ನು ಮುಖದೆದರು ಹಿಡಿದರೆ ‘ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯ ಅಲ್ಲ’ ಎಂದು ಪಲಾಯನ ಮಾರ್ಗ ತುಳಿಯಬೇಕೇ? ಕೋಪ ಬಾರದೇ ಇರುತ್ತದೆಯೇ? ನನ್ನ ಸಿಟ್ಟನ್ನು ಯಾರ ಮೇಲೆ ತೆಗೆಯಬೇಕು? ಧರ್ಮೇಚ ಅರ್ಥೇಚ ಕಾಮೇಚ ಎನ್ನುತ್ತಾ ಸಪ್ತಪದಿ ತುಳಿದವನ ಮೇಲೋಅಥವಾ ಸೌಟು ಹಿಡಿದು, ತಲೆಗೆ ರುಮಾಲು ಸುತ್ತಿ ಫೋಟೋ ಹಂಚಿಕೊಂಡ ನನ್ನ ಗೆಳತಿಯರ ಗಂಡಂದಿರೆನಿಸಿದ ವೀರಾಧಿವೀರರ ಮೇಲೋ? ಆದ್ರೂ, ಸುರಂಗದ ತುದಿಯಲ್ಲಿ ಬೆಳಕಿದ್ದೇ ಇದೆ ಅನ್ನೋ ಹಾಗೆ ಒಂದು ದಿನ ನಮ್ಮ ರಾಯರಿಗೆ ಏನಾಯಿತೋ ಗೊತ್ತಿಲ್ಲ.
ಊಟಕ್ಕೆ ಮಾತ್ರ ಅಡುಗೆಮನೆಗೆ ಕಾಲಿಡುವವರು ಆವತ್ತು, ‘ಅಡುಗೆ ಅಂದರೆ ರಾಕೆಟ್ ಸಯನ್ಸಾ, ಇವತ್ತಿನ ಸ್ನಾಕ್ಸ್ ನಂದು’ ಅಂತ ಚಾಲೆಂಜ್ ಹಾಕುತ್ತ ಅಡುಗೆಮನೆ ಹೊಕ್ಕರು. ಹದಿನೈದು ವರ್ಷಗಳ ಜೊತೆಯಲ್ಲಿ ಒಪ್ಪತ್ತಿನ ರಜೆಯಾದರೂ ಸಿಕ್ಕಿತಲ್ಲ ಎಂಬ
ಖುಷಿ ನನಗೆ. ಮಕ್ಕಳಿಗೆ ವಿಶ್ವದ ಎಂಟನೆಯ ಅದ್ಭುತ ಎನಿಸಿತು, ಅಪ್ಪನನ್ನು ಅಡುಗೆಮನೆಯಲ್ಲಿ ಕಂಡು! ಆದರೆ ಅಡುಗೆಮನೆ ಹೊಕ್ಕವರೇ ‘ಸಾಸಿವೆ ಎಲ್ಲಿದೆ? ಮೆಣಸಿನ ಪುಡಿ ಎಲ್ಲಿದೆ, ಉಪ್ಪು ಎಲ್ಲದೆ? ಈ ಸೌಟಿನ ಹಿಡಿ ಸರಿಯಿಲ್ಲ, ಒಗ್ಗರಣೆಗೆ ಏನು ಹಾಕಬೇಕು, ಈ ಪಾತ್ರೆ ಒಂಚೂರು ದೊಡ್ಡದು ಇರಬೇಕಿತ್ತು, ಹೀಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂಬ ಬಾಯಿರಗಳೆ ಕೇಳುವಷ್ಟರಲ್ಲಿ ನಾನೇ ಮಾಡಿದ್ದರೆ ಇಷ್ಟರೊಳಗೆ ಮುಗಿದೇ ಹೋಗುತ್ತಿತ್ತು ಎಂದು ಮೈಪರಚಿಕೊಂಡೆ.
ಉಪ್ಪು ಎಲ್ಲಿದೆ? ಸಾಸಿವೆ ಎಲ್ಲಿದೆ? ಜೀರಿಗೆ ಎಲ್ಲಿದೆ? ಸೌಟು ಎಲ್ಲಿದೆ? ಇವೆಲ್ಲಾ ಪತಿರಾಯರ ಪ್ರಶ್ನೆಗಳು.
ಪಾತ್ರೆ ತೊಳೆಯುವ ಸಾಹಸ
ಅವರ ಈ ಉಮೇದು ಇಷ್ಟಕ್ಕೇ ಮುಗಿಯಲಿಲ್ಲ, ಪಾತ್ರೆ ಕೂಡ ತಾನೇ ತೊಳೆಯುತ್ತೇನೆ ಎಂದರು. ನಲ್ಲಿ ನೀರನ್ನು ಜೋರಾಗಿ ಬಿಟ್ಟು ಅಡುಗೆ ಮನೆಯನ್ನು ಬಚ್ಚಲು ಮನೆ ಮಾಡಿ ‘ಪಾತ್ರೆ ತೊಳೆಯುವ ಚೆಂಡು ಸರಿಯಿಲ್ಲ, ಸೋಪ್ ಬದಲು ಲಿಕ್ವಿಡ್ ಇರಬೇಕಿತ್ತು’ ಎಂದು ಗೊಣಗುಟ್ಟುತ್ತಾ ಮೂರೂವರೆ ಪಾತ್ರೆ ತೊಳೆದು ಉಸ್ಸಪ್ಪಾ ಎನ್ನುತ್ತಾ, ಕೆಳಗೆ ಬಿದ್ದ ನೀರಿನಲ್ಲಿ ಜಾರದಂತೆ ನಿಧಾನವಾಗಿ ಕಾಲಿಟ್ಟು ಹೊರಬಂದರು. ಅವರೇ ಕಷ್ಟಪಟ್ಟು ಬಾಳೆಕಾಯಿ ಬೋಂಡ, ದಪ್ಪ ಮೆಣಸಿನಕಾಯಿ ಬಜ್ಜಿ ಮಾಡಿದ್ದನ್ನು ಮಕ್ಕಳು ಸುಮ್ಮನೆ ತಿಂದರು. ನಾನೂ ತಿಂದೆ. ಆದರೆ ರಾಯರಿಗೆ ಮಾತ್ರ ತಾವು ಮಾಡಿದ್ದು ತಮಗೇ ರುಚಿಯಾಗದೆ ‘ಇವತ್ಯಾಕೋ ಹಸಿವಿಲ್ಲ ಕಣೇ, ಖಾಲಿ ಮಾಡಿ, ನನಗೆ ಉಳಿಸಬೇಕಂತಿಲ್ಲ’ ಎಂದು ಕಾಲ್ಕಿತ್ತರು.
ಬಾಯಿಗಿಟ್ಟೊಡನೆ ನೂರೆಂಟು ಕಮೆಂಟುಗಳನ್ನು ಹೊರಡಿಸುವವರು ಆ ದಿನ ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದು
ಸದ್ದಿಲ್ಲದೆ ನುಣುಚಿಕೊಂಡರು. ರಾಯರಿಗೆ ಪಾಕಜ್ಞಾನ ಇಲ್ಲದಿದ್ದರೇನಂತೆ? ಅವರಂತೆ ಮಾಲುಗಳಲ್ಲಿ ಬಟ್ಟೆಗಳನ್ನು ಜೋಡಿಸುವ ಕಲೆ ನನಗೆ ಒಲಿದಿಲ್ಲ, ಅಕ್ಷಯಕುಮಾರನಿಗಿಂತ ಚೆನ್ನಾಗಿ ಹಾರ್ಪಿಕ್ ಹಾಕಿ ತಮ್ಮ ಬಚ್ಚಲುಮನೆಯನ್ನು ಪ್ರತೀವಾರ ಸ್ವಚ್ಛ ಮಾಡಿ ಕೊಳ್ಳುತ್ತಾರೆ. ಇಂಥ ಮಿಸ್ಟರ್ ಕ್ಲೀನ್‌ರನ್ನು ಹೇಗೆ ತಾನೆ ದೂಷಿಸುವುದು? ಶಾಂತಂ ಪಾಪಂ!