Thursday, 12th December 2024

ಎದೆಬಾಗಿಲ ಬೆಲ್ ಒತ್ತಿದವಳೇ

ಲಕ್ಷ್ಮೀಕಾಂತ್ ಎಲ್ ವಿ

ನನ್ನೆದೆಯಲಿ ಪ್ರೀತಿಯ ಸಾಗರವನ್ನು ಹುಟ್ಟುಹಾಕಿದ ನಿನ್ನ ಆ ಒಂದು ನಗುವಿಗಾಗಿ ಕಾಯುತ್ತಲೇ ಇದ್ದೇನೆ.

ಮಳೆಗಾಲ ಶುರುವಾದ ಸಮಯ. ದಿನವಿಡೀ ನಿನ್ನ ಮೆಸೇಜಿಗೆ ಕಾಯುವುದೇ ಗೀಳಾಗಿಬಿಟ್ಟಿತ್ತು. ಫೋನನ್ನು ಎದುರಿನಲ್ಲಿಟ್ಟು ಕೊಂಡು ಕಾಯುತ್ತಿದ್ದರೂ ಒಂದೂ ಮಸೇಜಿನ ಸುಳಿವಿಲ್ಲ. ಆದರೆ ನಿನ್ನ ಆ ತುಂಟ ನಗು ಮಾತ್ರ ನನ್ನನ್ನು ಎಡಬಿಡದೆ ಕಾಡು ತ್ತಿದೆ. ಇನ್ನೊಮ್ಮೆ ಮತ್ತೊಮ್ಮೆ ಆ ನಗುವನ್ನು ನೋಡುವಾಸೆ ಗೆಳತಿ. ಈ ಕಣ್ಣಲಿ ತುಂಬಿರುವ ನಿನ್ನ ಅಂದ ಎಲ್ಲಿ ಕಣ್ಣೀರಾಗಿ ಹೋರಹೋಗುತ್ತದೆಯೋ ಏನೋ ಎಂದು ಅಳುವುದನ್ನು ಮರೆಯುತ್ತಿದ್ದೇನೆ.

ನನ್ನ ಎದೆಯಲ್ಲಿ ಪ್ರೇಮದ ಅಲೆಯನ್ನು ಎಬ್ಬಿಸಿದ ಆ ನಗುವ ಹೂವಿಗೆ ಅದೆಷ್ಟು ಪ್ರೀತಿ ಸುರಿದರೂ ಕಡಿಮೆಯೇ. ಪ್ರೇಮದ ಅರಿವಿಲ್ಲದ ಹೊತ್ತಲ್ಲಿ ನನ್ನ ಎದೆಯ ಬಾಗಿಲಿಗೆ ಬಂದು ಬೆಲ್ ಒತ್ತಿ ನಸು ನಕ್ಕ ಆ ಕ್ಷಣವನ್ನು ಬದುಕು ಎಂದಿಗೂ ಮರೆಯ ಲಾಗದು. ಅಂದಿನಿಂದ ಯಾರೂ ಕೊಡದಷ್ಟು ಪ್ರೀತಿಯನ್ನು ಧಾರೆಯೆರೆದೆ. ನನ್ನ ಕರಕಲು ಹೃದಯದಲ್ಲಿ ಬರಿ ನಿನ್ನದೆ ಹೆಸರು ಗೆಳತಿ. ಒಂದೇ ಕ್ಷಣದಲ್ಲಿ ಜೋಲಿ ಹೊಡೆದ ಈ ಹೃದಯ ಚೇತರಿಸಿಕೂಳ್ಳಲು ಬೇಕಿದೆ ನಿನ್ನ ಪ್ರೀತಿ ಬಿಸಿ ಉಸಿರು. ನೀನು ಅದೆಷ್ಟೇ ನೋವು ಕೊಟ್ಟರೂ ಅದು ನನಗೆ ನೀ ಕೊಟ್ಟ ಮುತ್ತಿನಂತೆ.

ಏಕೆಂದರೆ ಪ್ರೀತಿಯ ಸೋಮರಸ ಕುಡಿದವನಿಗೆ ಎಲ್ಲವೂ ಅಮಲು. ಆ ಚಂದ್ರ ಚಕ್ಕಿ ತಾರೆಗಳ ತಂದು ನಿನಗೆ ಕೊಡುವ ಆಸೆ ಗೆಳತಿ. ಆದರೆ ಅವುಗಳ ಮಿನುಗು ಕೇವಲ ರಾತ್ರಿಯಲ್ಲಿ. ಅದರಿಂದಾಗಿ ಆ ಚುಕ್ಕಿಗಳ ಬೆಳಕ ಹಾಲು ಬೆಳದಿಂಗಳಲ್ಲಿ ನಿನ್ನ ಮೊಗವ ನೋಡಿ ಖುಷಿ ಪಡುವವನು ನಾನು.

ಜೀವ ಕಳೆವ ಅಮೃತ
ಈ ನಡುವೆ ಅದೆಲ್ಲಿಂದ ಸುನಾಮಿ ಬಂತೋ ನಾನರಿಯೆ! ನಸು ನಕ್ಕಿದ್ದ ಹೂವು ಎದೆಬಾಗಿಲ ಒಳಗೆ ಬಾರದೆ ಮತ್ತೆ ಅಲ್ಲಿಂದ ಹೊರ ನಡೆದದ್ದು ತಿಳಿಯುವ ಹೊತ್ತಿಗೆ ಈ ಹೃದಯ ನೊಂದು ಬೆಂದು ಕರಕಲಾಗಿತ್ತು. ಈ ಸಮಯದಲ್ಲೇ ನೆನಪಾಗಿದ್ದು ‘ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ’ ಎಂದು. ಇಲ್ಲಾ ಕಣೆ.. ಜೀವ ಹೋಗುವ ಕ್ಷಣದಲ್ಲೂ ಮರಳಿ ಉಸಿರು ನೀಡುವ
ಶಕ್ತಿಯಿದೆ ಪ್ರೀತಿಗೆ. ನಿನ್ನನ್ನು ಮೋಸಗಾತಿ ಎಂದು ಕರೆಯವ ಮನಸ್ಸು ನನ್ನಿಂದಾಗದು. ಅದೇನೇ ಇದ್ದರೂ ಎಲ್ಲವೂ ಪ್ರೀತಿಗಾಗಿ ಬರೀ ಪ್ರೇಮಕ್ಕಾಗಿ ಅಷ್ಟೆ.

ಮನಸಿನ ಯಾವುದೋ ಪುಟದ ಮೇಲೆ ನೀ ರುಜು ಮಾಡಿ ಹೋಗಿದ್ದು ಇನ್ನೂ ಮಾಸದ ನೆನಪಾಗಿಯೇ ಉಳಿದಿದೆ. ನಿನ್ನ ಸುಳಿವೇ ಇಲ್ಲದಿದ್ದರೂ ಕೂಡ ಎದೆಬಾಗಿಲಿನ ಬೆಲ್ ಆಗಾಗ ಒತ್ತಿ ಸದ್ದು ಮಾಡುತ್ತಲೇ ಇರುತ್ತದೆ. ಬಹುಶಃ ಈ ಜೀವನ ಜಾತ್ರೆಯಲ್ಲಿ ನಿನ್ನ ಹೆಸರೇ ಕಳೆದುಹೋಗಿರಬಹುದು ಆದರೆ ಎದೆಯೊಳಗಿನ ಪುಟದಲ್ಲಿ ಮಾತ್ರ ಅಚ್ಚಾಗಿಯೇ ಉಳಿದಿದೆ. ನಿನಗೆ ನನ್ನ ನೆನಪು
ಯಾವಾಗಲಾದರೂ ಒಮ್ಮೆ ಬಿಸಿಲಲ್ಲಿ ಮಳೆಬೀಳುವ ರೀತಿ ಬರಬಹುದು ಎನ್ನುವ ಅತಿ ಆಸೆ ನನ್ನದು. ಈ ಹುಚ್ಚು ಆಸೆಯ ಪೂರೈಸಲು ಮತ್ತೊಮ್ಮೆ ಆ ದೇವರಿಗೆ ಅಪ್ಲಿಕೇಷನ್ ಸಲ್ಲಿಸಿರುವೆ. ನಿನ್ನ ಪ್ರೀತಿ ಮತ್ತೆ ಜೊತೆಯಾಗಬಹುದೆಂಬ ಹುಚ್ಚು ದೈರ್ಯ ದಿಂದ ಆ ಚಂದ್ರನಿಗೂಂದು ಧಮಿಕಿ ಹಾಕಿರುವೆ ಗೆಳತಿ.

ನನ್ನದೆಯಲ್ಲಿ ಕವಿದ ಕಾರ್ಮೋಡ ಕರಗಿಸಿ ಮನದಲ್ಲಿ ಪ್ರೀತಿಯ ಮಳೆ ಸುರಿಸಿ ಬಂಗಾರದ ಬದುಕಾಗಿಸಿ ನನ್ನ ಬಾಳಲ್ಲಿ ಪ್ರೇಮದ ಹೂವಲ್ಲಿ ಮತ್ತೆ ನಗುವಾಗಿಸಿ ಈ ಹೃದಯ ಸೇರಲು ನಿನ್ನ ಆಗಮನಕ್ಕಾಗಿ ಕಾಯುತ್ತಲೇ ಇರುವೆ. ಬೇಗನೆ ಬರುವೆಯಾ ಗೆಳತಿ! ನಿನ್ನ ಪ್ರೀತಿಯ ನೆನಪಿನಲ್ಲಿ ಏನೋ ನೆನಪಾಗಿ, ನಿನ್ನ ನೆನಪಲ್ಲಿ ಬರೆದ ನೆನಪಿನ ಓಲೆಯಿದು. ಓದುವೆಯೆಂಬ ನಂಬಿಕೆ ನನ್ನದು.
ದಿನವಿಡೀ ನಿನ್ನಿಂದ ಒಂದು ಫೋನಿನ ರಿಂಗಣಕ್ಕಾಗಿ, ಉತ್ತರದ ಮೆಸೇಜಿಗಾಗಿ ಕಾಯುತ್ತಿರುವೆ. ಒಮ್ಮೆ ಖಾಲಿ ಫೋನಿನ ಮೇಲೆ ನಿನ್ನ ಹೆಸರು ಮೂಡಿಸುವೆಯಾ…
ಇತಿ ನಿನ್ನ ಪ್ರೀತಿಸುವ ಹುಡುಗ.