Thursday, 12th December 2024

ಹಿರೋಷಿಮಾ ಯಾತ್ರೆ

ಕುಸುಮ್‌ ಗೋಪಿನಾಥ್‌

ಪ್ರವಾಸದ ಅನುಭವವು ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವುದು ಸಾಧ್ಯವೆ? ಅಣು ಬಾಂಬ್ ದಾಳಿಗೆ ಒಳಗಾಗಿ, ಮರುನಿರ್ಮಾಣಗೊಂಡ ಹಿರೋಷಿಮಾದಲ್ಲಿ ಅಂತಹ ಅನುಭವ ದೊರೆಯಬಲ್ಲದು.

ಯಾತ್ರೆ ಎನ್ನುವ ಪದ ಪುಣ್ಯಕ್ಷೇತ್ರಗಳಿಗೆ ಹೋಗುವುದು ಎಂಬ ಸಾಮಾನ್ಯ ಕಲ್ಪನೆಯನ್ನು ಕೊಡುತ್ತದೆ. ಎರಡನೇ ಮಹಾಯುದ್ಧ ದಲ್ಲಿ, ಅಮೆರಿಕದ ಪರಮಾಣು ಬಾಂಬ್ (ಲಿಟ್ಲ್ ಬಾಯ್) ದಾಳಿಗೆ ತುತ್ತಾಗಿ ಸುಟ್ಟು ಬೂದಿಯಾದ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ್ದು, ನನಗೆ ಒಂದು ಪವಿತ್ರ ಯಾತ್ರೆಯಂತೆ ಭಾಸವಾಯಿತು.

ಒಬ್ಬ ಮನುಷ್ಯ ಪುಣ್ಯಕ್ಷೇತ್ರಗಳ ದರ್ಶನದಿಂದ ಮೊದಲಿಗಿಂತ ಹೃದಯವಂತ ಅಥವಾ ಪುಣ್ಯವಂತನಾಗುತ್ತಾನೋ ಬಿಡು ತ್ತಾನೋ ಗೊತ್ತಿಲ್ಲ. ಆದರೆ ಹಿರೋ ಷಿಮಾದ ಅನುಭವಗಳು ನಮ್ಮನ್ನು ಖಂಡಿತ ಮೊದಲಿಗಿಂತ ಹೃದಯವಂತ ರಾಗುವಂತೆ ಪ್ರೇರೇಪಿಸುವುದಂತೂ ನಿಜ.

ಸುಮಾರು 40 ವರ್ಷಗಳ ಹಿಂದೆ, ನೀನಾಸಮ್ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ನೋಡಿದ, ಫ್ರೆಂಚ್ ನಿರ್ದೇಶಕ ಎಲಿಯನ್ ರೆಸ್ನಾಯಿಸ್ (1959) ನಿರ್ದೇಶಿಸಿದ ‘ಹಿರೋಶೀಮಾ ಮೋನ್ ಅಮುರ್’ ಎಂಬ ಸಿನೇಮಾ ನೋಡಿದ ಮೇಲೆ ಬಹಳ ವರ್ಷಗಳ ವರೆಗೆ ಅದು ನನ್ನನ್ನು ಕಾಡುತ್ತಿತ್ತು. ಕಾರಣ ಅಲ್ಲಿನ ನಾಯಕಿ, ಹಿರೋಷಿಮಾದ ಪೀಸ್ ಮ್ಯೂಸಿಯಮ್‌ನಲ್ಲಿ ಪ್ರದರ್ಶಿಸಲಾದ, ಅಣುಬಾಂಬ್ ದಾಳಿಯ ದಾರುಣ ಕತೆಗಳನ್ನು ಹೇಳುವ ಫೋಟೊಗಳನ್ನು ನೋಡಿ, ಒಂದೊಂದಾಗಿ ನೆನಪಿಸಿ ಕೊಂಡು ನಂತರ ತನ್ನ ಜೀವನದ ದೃಷ್ಟಿಕೋನವನ್ನೇ ಬದಲಿಸಿಕೊಳ್ಳುವಷ್ಟು ವ್ಯಾಕುಲಳಾಗುತ್ತಾಳೆ.

ಹಿರೋಷಿಮಾ ಅಂದೊಡನೆ ನನಗೆ ನೆನಪಾಗಿದ್ದು ಈ ಚಲನಚಿತ್ರ ಮತ್ತು ಅದರಲ್ಲಿ ಕಂಡ ಬಾಂಬಿಂಗ್ ನೆನಪುಗಳು. ಟೋಕಿಯೊ, ಕ್ಯೋಟೊ, ಓಸಾಕಾ ನಗರಗಳ ಆಧುನಿಕತೆಗೆ ಬೆರಗಾಗುತ್ತ, ಜಪಾನೀಯರ ವಿನಯವಂತಿಕೆಗೆ ಮಾರುಹೋಗುತ್ತ, ಅವರ ಶಿಸ್ತು ಸಂಯಮವನ್ನು ಸ್ವಲ್ಪ ಮಟ್ಟಿಗೆ ರೂಢಿಸಿಕೊಳ್ಳುತ್ತ, ಬುಲೆಟ್ ಟ್ರೇನ್‌ನಲ್ಲಿ ಕುಳಿತು ಒಸಾಕಾದಿಂದ 330 ಕಿ.ಮಿ. ದೂರ ವಿರುವ ಹಿರೋಷಿಮಾವನ್ನು 1 ಗಂಟೆ 20 ನಿಮಿಷದಲ್ಲಿ ತಲುಪಿದೆವು.

ನನ್ನ ಕಲ್ಪನೆಗೂ ಮೀರಿ, ಹಿರೋಷಿಮಾದ ನಿಲ್ದಾಣ ಟೋಕಿಯೋ ಅಥವಾ ಜಪಾನಿನ ಇತರ ನಗರಗಳ ರೇಲ್ವೆ ನಿಲ್ದಾಣಗಳಷ್ಟೇ ಆಧುನಿಕವಾಗಿತ್ತು. ಹೊರಬಂದು ಸುತ್ತಮುತ್ತ ಕಣ್ಣಾಡಿಸಿ ದಾಗ ‘ಇದು 1945 ರಲ್ಲಿ ಸರ್ವನಾಶವಾದ ಹಿರೋಷಿಮಾವೇ?’ ಎಂಬ ಸಂಶಯ ಬಂದಿತು. ಅತ್ಯಾಧುನಿಕ ಬಹುಮಹಡಿ ಕಟ್ಟಡಗಳು, ಸುಂದರ ವಿನ್ಯಾಸದ ಸ್ಟಾರ್ ಹೋಟೆಲ್‌ಗಳು/ಬಿಸಿನೆಸ್ ಸೆಂಟರ್‌ ಗಳು, ಶಾಪಿಂಗ್ ಮಾಲ್‌ಗಳು ಎಲ್ಲವೂ ಸ್ಟೇಟ್ ಆಫ್ ಆರ್ಟ್!

ಪಾಶ್ಚಿಮಾತ್ಯ ಉಡುಗೆ ತೊಟ್ಟ, ಮಂದಹಾಸ ಬೀರಿ ಸರಸರನೆ ಸರಿದು ಹೋಗುವ ಲಲನೆಯರು, ಟಿಪ್ ಟಾಪ್ ಸೂಟ್ ಧರಿಸಿ ಎಸ್ಕಲೇಟರ್‌ಗಳಲ್ಲಿ ಭರಭರನೆ ಹತ್ತಿ ಇಳಿಯುತ್ತಿರುವ ಗಂಡಸರು, ಈ ಎಲ್ಲ ದೃಶ್ಯಗಳು ನನ್ನ ಹಿರೋಷಿಮಾದ ಕಲ್ಪನೆಗಿಂತ ಭಿನ್ನವಾಗಿದ್ದವು. ಓ! ಇವರ್ಯಾರಿಗೂ ಹಿಂದಿನ ನಪೇ ಇಲ್ಲವೇನೋ ಅಥವ ಸುಟ್ಟು ಮತ್ತೆ ಬೂದಿಯಿಂದ ಎದ್ದು ಬಂದ ಫೀನಿಕ್ಸ್‌ನಂತೆ ಈ ಹಿರೋಷಿಮಾ ತನ್ನೆಲ್ಲ ನೋವನ್ನು ಕೊಡವಿಕೊಂಡು ಪುನಹ ಎದ್ದು ನಿಂತು ಬಿಟ್ಟಿದೆಯಲ್ಲ! ಸುಟ್ಟು ಕರಕ ಲಾದ ಹಿರೋಷಿಮಾವನ್ನು ಮತ್ತೆ ಕಟ್ಟಿ ನಿಲ್ಲಿಸಿ ಬಿಟ್ಟಿದ್ದಾರೆ ಈ ಜಪಾನೀಯರು!

ಆಟೋಮಿಕ್‌ ಬಾಂಬ್‌ ಡೋಮ್‌

ಹಿರೋಷಿಮಾದಲ್ಲಿ ನಮ್ಮ ಮೊದಲ ಭೇಟಿಯೆ ಅಲ್ಲಿನ ಇತಿಹಾಸವನ್ನು ಬಿಚ್ಚಿಡುವ ಪೀಸ್ ಪಾರ್ಕಗೆ. ಅಲ್ಲಿಗೆ ಪ್ರವಾಸಿಗರನ್ನು ಕೊಂಡಯ್ಯಲು ಸದಾ ಹಾಪ್ ಆನ್ ಹಾಪ್ ಆಫ್ ಬಸ್ಸುಗಳು ರೆಡಿಯಾಗಿರುತ್ತವೆ. 1945 ರ ಕರಾಳ ಘಟನೆಯನ್ನು ತನ್ನಲ್ಲಿ ಹಿಡಿ ದಿಟ್ಟುಕೊಂಡ, ಅಣುಬಾಂಬಿನ ದುರಂತಕ್ಕೆ ಸಾಕ್ಷೀಯಾದ ಕಟ್ಟಡ ಆಟೋಮಿಕ್ ಬಾಂಬ್ ಡೋಮ್.

ಈ ಕಟ್ಟಡಕ್ಕೆ ಜಪಾನಿಯರು ‘ಗೆನ್ ಬಾಕು’ ಅಂದರೆ ಆಟಮ್ ಬಾಂಬ್’ ಎಂದು ಕರೆಯುತ್ತಾರೆ. ಇದು 1935 ರಲ್ಲಿ ಕಟ್ಟಲ್ಪ ಟ್ಟಿದ್ದು, ಇಂಡಸ್ಟ್ರಿಯಲ್ ಪ್ರಮೋಷನ್ ಎಕ್ಸಿಬಿಷನ್ ಹಾಲ್‌ಆಗಿತ್ತು. ಬ್ರಿಟಿಷ್ ಮಾದರಿಯ ಡೋಮ್ ಇದ್ದ ಈ ಕಟ್ಟಡದಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದರು. ಈ ಕಟ್ಟಡದ ಅಡಿಪಾಯ ಎಷ್ಟು ಬಲಿಷ್ಟವಾಗಿತ್ತೆಂದರೆ , ಬಾಂಬ್ ದಾಳಿಯಲ್ಲಿ ಸುಮಾರು 600 ಚದುರ ಮೀಟರ್ ಅಂತರದ ಎಲ್ಲಾ ಕಟ್ಟಡಗಳು ನೆಲಸಮವಾಗಿದ್ದರೂ ಕೂಡ ‘ಗೆನ್ ಬಾಕು’ ಪೂರ್ತಿ ನಾಶ ವಾಗಿಲ್ಲ.

ಸುಟ್ಟು ಕರಕಲಾಗಿ ನಿಂತಿದೆ. ಹಿರೋಷಿಮ ನಗರವನ್ನು ಪುನಹ ಕಟ್ಟುವಾಗ ಇದನ್ನು ಹಾಗೆಯೆ ಉಳಿಸಲಾಗಿದೆ. ಡೋಮ್ ನ ಕಬ್ಬಿಣದ ಡೋಮ್‌ಗಳು ನೇತುಹಾಕಿದ ಅಸ್ಥಿಪಂಜರದ ಎಲುಬಿನ ಹಂದರದಂತೆ ಗಾಳಿಗೆ ತೂಗುತ್ತಿವೆ. ಬಾಂಬ್ ಬಿದ್ದಾಗ ಇಲ್ಲಿ ಕೆಲಸ ಮಾಡುತ್ತಿದ್ದ ಯಾರೂ ಬದುಕಿ ಉಳಿದಿಲ್ಲ.

ಪೀಸ್ ಮೆಮೋರಿಯಲ್ ಮ್ಯೂಸಿಯಮ್

1945 ರ ಬೆಳಿಗ್ಗೆ 8:15 ಮಕ್ಕಳು ಶಾಲೆಗೆ ಹೋಗುವ ಸಮಯ. ಅಣು ಬಾಂಬ್ ಆಕಾಶದಿಂದ ಎರಗಿದಾಗ, ಆ ಕ್ಷಣದಲ್ಲೆ
ಸುಮಾರು ಎಪ್ಪತ್ತು ಸಾವಿರ ಜನ ಸುಟ್ಟು ಭಸ್ಮವಾದರು, ಇನ್ನುಳಿದ ಸುಮಾರು ಎಪ್ಪತೈದು ಸಾವಿರ ಜನ ಸುಟ್ಟಗಾಯಗಳಿಂದ ನರಳಿ, ವಿಕಿರಣದ ಪರಿಣಾಮದಿಂದ ಬೆಂದು, ನಂತರದಲ್ಲಿ ಪ್ರಾಣಬಿಟ್ಟರು.

ಆ ಪ್ರಾಂತ್ಯದ ಎಲ್ಲಾ ಆಸ್ಪತ್ರೆಗಳು, ಶಾಲೆಗಳು, ಮನೆಗಳು, ಅಂಗಡಿಗಳು ಎಲ್ಲವೂ ಕ್ಷಣಾರ್ದದಲ್ಲಿ ಸುಟ್ಟು ಭಸ್ಮವಾಗಿದ್ದವು. ಬಾಂಬ್ ಅಪ್ಪಳಿಸಿದ ಜಾಗದಿಂದ 13 ಚದುರ ಕಿಲೋಮೀಟರ್‌ಗಳಷ್ಟು ದೂರದ ತನಕ ಬೆಂಕಿಯ ಜ್ವಾಲೆಗಳು ಪಸರಿಸಿದ್ದವಂತೆ. ಮನುಷ್ಯ ನಿರ್ಮಿತ ಕಟ್ಟಡಗಳ ಜತೆ, ಮರ, ಗಿಡ, ಪ್ರಾಣಿ , ಸಕಲ ಚರಾಚರ ಜೀವ ಸಂಕುಲ ಗಳೆಲ್ಲಾ ಬರ ಬರನೆ ಹೊತ್ತಿ ಉರಿದು
ಚುರುಟಿಕೊಂಡವು.

ಬಾಂಬ್ ದಾಳಿಯಲ್ಲಿ ಬದುಕುಳಿದು, ನರಳುತ್ತಿದ್ದ ಜನರಿಗೆ ಸಹಾಯ ಮಾಡಲು ಬಂದ ಹತ್ತಿರದ ನಗರಗಳ ಆಸ್ಪತ್ರೆ ಸಿಬ್ಬಂದಿಗಳು, ಸಂಬಂಧಿಕರು , ಸ್ನೇಹಿತರು ವಿಕಿರಣದ ಪರಿಣಾಮವಾಗಿ ನರಳಿ ಸತ್ತರು. ಆ ರಾಕ್ಷಸ ಬಾಂಬ್ ನ ಪೈಶಾಚಿಕ ಶಕ್ತಿ, ವರುಷಕಳೆದರೂ, ಜನರನ್ನು ನಾನಾ ತರದ ಭೀಕರ ಖಾಯಿಲೆಗಳಿಂದ ಸಾಯುವಂತೆ ಮಾಡಿತು. ನಂತರ ಹುಟ್ಟಿದ ಮಕ್ಕಳು ಅಂಗವಿಕಲರಾಗಿ, ಮೆದುಳೇ ಇಲ್ಲದೆ, ಕಣ್ಣಿಲ್ಲದೆ, ಬುದ್ದಿ ಮಾಂದ್ಯರಾಗಿ ಹುಟ್ಟಿದರು. ಈ ನಗರವನ್ನು ಸುತ್ತುವರೆದ ಎರಡು ನದಿಗಳು ಮೋಟೊ ಯಾಸು ಮತ್ತು ಹೊನಕಾವಾ ಸತ್ತ, ಅರೆಬೆಂದ ದೇಹಗಳಿಂದ ತುಂಬಿ ಹೋಗಿತ್ತಂತೆ.

ನೋವು, ಉರಿಬಾಧೆ ತಾಳಲಾರದೆ ನೀರಿಗೆ ಹಾರಿದವರೆಷ್ಟೊ ಮಂದಿ ಅಲ್ಲಿಯೇ ಸತ್ತು ತೇಲಿದರಂತೆ. ಈ ಎಲ್ಲಾ ವಿವರಗಳು ಸಿಗುವುದು ಈ ಪೀಸ್ ಮ್ಯೂಸಿಯಂನ ಫೋಟೊ ಎಕ್ಸಿಬಿಷನ್ ನಲ್ಲಿ. ಪ್ರತಿಯೊಂದು ಫೋಟೊದ ಕೆಳಗೆ ಬರೆದ ವಿವರಣೆಗಳಿಂದ ಹಾಗೂ ನಮಗೆ ಒದಗಿಸಿದ ಆಡಿಯೋ ಫೋನ್ ನಿಂದ.

ಹಳೆಯ ಫೋಟೋಗಳು

ಪಾರ್ಕ್‌ನ ಮಧ್ಯದಲ್ಲಿರುವ ಮ್ಯೂಸಿಯಂನಲ್ಲಿ ಆಧುನಿಕ ತಂತ್ರಜ್ಞಾನದಿಂದ ಜಪಾನೀಯರು ಇತಿಹಾಸವನ್ನೇ ಪುನರ್
ನಿರ್ಮಿಸಿದ್ದಾರೆ. ಹಿರೋಷಿಮಾ ನಗರವು 1945 ಆಗಷ್ಟ್ 6 ರ ಮೊದಲು ಹಾಗೂ ಆಮೇಲೆ ಮತ್ತು ಇವತ್ತು ಹೇಗಿದೆ ಎಂಬ
ಚಿತ್ರಣ ಇಲ್ಲಿ ಸಿಗುತ್ತದೆ.

ಜನರು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿಟ್ಟಿರುವ ಸಾವಿರಾರು ಫೋಟೋಗಳು ಇಲ್ಲಿವೆ. ಆಸೋಟನೆಯಿಂದ ಜನಿತವಾದ ಕಣ್ಣು ಕುಕ್ಕುವ ಬೆಳಕು, ಬೆಂಕಿಯುಂಡೆಗಳು ಹಾಗೂ ಗಗನಕ್ಕೇರಿದ ಬೃಹತ್ ನಾಯಿಕೊಡೆಯನ್ನು ಹೋಲುವ ಕಪ್ಪನೆಯ ಹೊಗೆ, ನೂರಾರು ಜನರು ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರುತ್ತಿರುವ ದೃಶ್ಯ, ಸಾವಿರಾರು ಹೆಣಗಳನ್ನು ಏಳೆದು ಕೊಂಡು ತಡವರಿಸಿ, ತಡವರಿಸಿ ಹರಿಯುತ್ತಿರುವ ನದಿ, ಸಾವಿರಾರು ಮಕ್ಕಳ ಸುಟ್ಟ ಮೈಮೇಲಿನ ಅಂಟಿಕೊಂಡು ಜೋಲಾಡು ತ್ತಿರುವ ಬಟ್ಟೆಗಳು, ಅಲ್ಲಲ್ಲಿ ಬಿಳಿ ವಸ್ತ್ರಧಾರಿ ದಾದಿಯರು ದೇವದೂತರಂತೆ ಶುಶ್ರೂಶೆ ಮಾಡುತ್ತಿರುವುದು , ಈ ರೀತಿ ಒಂದೊಂದು ಫೋಟೊವೂ ತಮ್ಮ ತಮ್ಮ ಕತೆ ಹೇಳತೊಡಗುತ್ತವೆ.

ಸಾವಿರಾರು ಬ್ಲ್ಯಾಕ್ ಎಂಡ್ ವೈಟ್ ಫೋಟೊಗಳು ಬಾಂಬ್ ದಾಳಿಯ ನಂತರದ ಭೀಕರ, ನರಕಸದೃಶವಾದ ಪರಿಣಾಮಗಳನ್ನು
ಚಿತ್ರಿಸುತ್ತವೆ. ಇವೆಲ್ಲವನ್ನೂ ನೋಡಿ ಹೊರಗಡೆ ಬಂದ ಮೇಲೂ ನಾವೆಲ್ಲರೂ ಗರಬಡಿದವರಂತೆ, ನಗದೇ ಮಾತಾಡದೇ ಸೂತಕದ ಮನೆಯಿಂದ ಹೊರಬಂದವರಂತೆ ಮೌನವಾಗಿ ಅಲ್ಲಿರುವ ಲೌಂಜ್‌ನಲ್ಲಿ ಕುಳಿತುಬಿಟ್ಟೆವು.

ಮಾನವ ನಿರ್ಮಿತ ಈ ಭೀಕರ ಘಟನೆಯು ಇಷ್ಟು ವರ್ಷಗಳ ನಂತರವೂ, ಪ್ರವಾಸಿಗರಾದ ನಮ್ಮ ಮನಸ್ಸನ್ನು ಕಲಕಿಬಿಟ್ಟಿತ್ತು! ಹಿರೋಷಿಮಾದ ಆ ಅಸಹಾಯಕ ಲಕ್ಷಕ್ಕೂ ಮೀರಿದ ಜೀವಗಳ ನೋವು ನಮ್ಮನ್ನೂ ಆ ಕ್ಷಣದಲ್ಲಿ ದಿಗ್ರ್ಭಮೆಗೆ ಒಳಪಡಿಸಿದ್ದು ಸುಳ್ಳಲ್ಲ.

(ಮುಂದುವರಿಯುವುದು)