Sunday, 19th May 2024

ಐತಿಹಾಸಿಕ ಮಾಹೇಶ್ವರ್‌

ಮಂಜುನಾಥ್‌ ಡಿ.ಎಸ್

ಮಧ್ಯಪ್ರದೇಶದಲ್ಲಿರುವ ಈ ಪಟ್ಟಣವು ಐತಿಹಾಸಿಕ ಎನಿಸಿದ್ದು, ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಮಹಾರಾಣಿ ಅಹಲ್ಯಾ ಬಾಯಿ ಹೋಲ್ಕರ್ ಅವರ ರಾಜಾಶ್ರಯದಿಂದಾಗಿ, ಇದರ ಐತಿಹಾಸಿಕ ಹಿನ್ನೆೆಲೆ ಹೆಚ್ಚು ಪರಿಚಿತ. ಇಲ್ಲಿನ ಸೀರೆ ಗಳು ಪ್ರಸಿದ್ಧ.

ಮಾಹೇಶ್ವರ್ ಪಟ್ಟಣಕ್ಕೆ ಬಂದಿಳಿದ ನಾವು ಎರಡು ಕುಟುಂಬದವರು, ಮೊದಲು ನೋಡಲು ಹೊರಟದ್ದು ಕೋಟೆಯ ಪ್ರದೇಶ ವನ್ನು. ಅಹಲ್ಯಾ ದ್ವಾರದಿಂದ ಮಾಹೇಶ್ವರ್ ಕೋಟೆಯನ್ನು ಪ್ರವೇಶಿಸುತ್ತಿದ್ದಂತೆ ಗಮನ ಸೆಳೆದು ನಮ್ಮನ್ನು ಸ್ವಾಗತಿಸಿದ್ದು  ಎರಡಾಳು ಎತ್ತರದ ಮಹಾರಾಣಿ ಅಹಲ್ಯಾಬಾಯಿ ಪ್ರತಿಮೆ. ಎರಡೂ ಕೈಗಳಲ್ಲಿ ಶಿವಲಿಂಗವನ್ನು ಹಿಡಿದಿರುವ ಮಹಾರಾಣಿಯ ಮಂದಸ್ಮಿತ ವದನದಲ್ಲಿ ಅನಿರ್ವಚನೀಯ ಪ್ರಶಾಂತತೆಯಿತ್ತು. ಇದನ್ನು ನಿರ್ಮಿಸಿದ ಮುಂಬಯಿಯ ಶಿಲ್ಪಿಯ ಹೆಸರನ್ನು ಪೀಠದ ಮೇಲೆ ಉಲ್ಲೇಖಿಸಿ ದ್ದನ್ನು ಗಮನಿಸಿದೆವು. ಇಂತಹುದೇ ಪ್ರತಿಮೆಯನ್ನು ಇಂದೋರಿನ ವಿಮಾನ ನಿಲ್ದಾಣದಲ್ಲಿ ನೋಡಿದ ನೆನಪು ಮರುಕಳಿಸಿತು.

ಮಹಾರಾಣಿಯ ಅರಮನೆ
ಇದರ ಗುಂಗಿನಲ್ಲಿಯೇ, ಸನಿಹದಲ್ಲಿ ರಾಜವಾಡಕ್ಕೆ ಪಾದ ಬೆಳೆಸಿದೆವು. ಮರದಿಂದ ನಿರ್ಮಿಸಲ್ಪಟ್ಟ, ಎರಡಂತಸ್ತಿನ, ಸಾಂಪ್ರದಾ ಯಿಕ ಮರಾಠ ಶೈಲಿಯ, ಈ ದೊಡ್ಡ ಮನೆಯೇ ಅಹಲ್ಯಾಬಾಯಿಯವರ ಅರಮನೆಯಾಗಿತ್ತು. ದ್ವಾರದ ಬಳಿಯಿದ್ದ ಮರದ ಆನೆ ಮತ್ತು ಕುದುರೆಗಳು, ಹೋಲ್ಕರರ ಗಾಂಭೀರ್ಯ ಹಾಗು ಶೌರ್ಯಗಳನ್ನು ಪ್ರತಿನಿಧಿಸುವಂತಿದ್ದವು. ನಡುವಿನಲ್ಲಿ ಆಗಸಕ್ಕೆ ತೆರೆದು ಕೊಂಡ ಅಂಗಳದಲ್ಲಿ ಅಮೃತಶಿಲೆಯ ಹಲವಾರು ಸುಂದರ ಪ್ರತಿಮೆಗಳಿದ್ದವು. ನಾಲ್ಕೂ ಕಡೆ ಸಾಲುಗಂಬಗಳ ಹಜಾರಗಳಿದ್ದವು. ಎಡ ಪಾರ್ಶ್ವದಲ್ಲಿದ್ದ ರಾಜಗಾದಿಯ ಮೇಲೆ ಹಾಗು ಪಕ್ಕದಲ್ಲಿ ಮಹಾರಾಣಿ ಯವರ ಫೋಟೋಗಳನ್ನಿರಿಸಲಾಗಿತ್ತು. ಮಹಾರಾಜ ಛತ್ರಪತಿ ಯಶವಂತರಾವ್ ಹೋಲ್ಕರ್ ಅವರ ರೇಖಾಚಿತ್ರ ಹಾಗು ಪ್ರತಿಕೃತಿಗಳೂ ಇಲ್ಲಿದ್ದವು. ಗಾದಿಯ ಹಿಂಬದಿ ಯಲ್ಲಿ ರಾಣಿ ಅಹಲ್ಯಾಬಾಯಿಯವರ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು.

ಹಜಾರಗಳಲ್ಲಿ ಹಾಗು ಜಗಲಿಯಲ್ಲಿ ಅವರು ಬಳಸುತ್ತಿದ್ದ ಪಲ್ಲಕ್ಕಿ, ಯುದ್ಧ ಆಯುಧಗಳು, ರಾಜ್ಯ ಲಾಂಛನ, ಹೋಲ್ಕರ್ ವಂಶಸ್ಥರ ರೇಖಾಚಿತ್ರಗಳು, ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಅಪ್ರತಿಮ ಶಿವಭಕ್ತೆ ಅಹಲ್ಯಾಬಾಯಿಯವರು ನಮ್ಮ ದೇಶ
ದಾದ್ಯಂತ ಅನೇಕ ಶಿವಾಲಯಗಳ ನಿರ್ಮಾಣ, ನಿರ್ವಹಣೆ, ಪುನರುತ್ಥಾನಕ್ಕೆೆ ಅಪಾರ ಕೊಡುಗೆ ನೀಡಿದ್ದರು. ಹೃಷಿಕೇಶದಿಂದ ಹಿಡಿದು ರಾಮೇಶ್ವರದ ತನಕ ಹರಡಿರುವ ಈ ಮಂದಿರಗಳ ಪಟ್ಟಿಯೂ ಸಹ ಇಲ್ಲಿತ್ತು. ಕಾಶಿಯ ದೇವಾಲಯದ ಮರುನಿರ್ಮಾಣ ದಲ್ಲಿ ಅಹಲ್ಯಾಬಾಯಿಯವರ ಕೊಡುವೆ ಇದೆ. ಈ ಅರಮನೆಯು ರಾಣಿ ಅಹಿಲ್ಯಾ ಬಾಯಿಯವರ ಸರಳತೆಗೆ ಸಾಕ್ಷಿಯಂತಿತ್ತು.

ಅಹಲ್ಯಾಬಾಯಿಯವರ ಖಾಸಗಿ ಪೂಜಾಗೃಹ ನೋಡಲು ಎರಡು ಕಣ್ಣುಗಳು ಸಾಲದೆನಿಸಿತು! ನಾನಾ ಗಾತ್ರಗಳ ನೂರಾರು ಶಿವಲಿಂಗಗಳು ಭಕ್ತಿಭಾವ ಮೂಡಿಸಿದವು. ಅಮೂಲ್ಯ, ಅನುಪಮ ಪೂಜಾ ಪರಿಕರಗಳು ಬೆರಗುಗೊಳಿಸಿದವು. ಇಲ್ಲಿ ಛಾಯಾಚಿತ್ರ ಗಳನ್ನು ತೆಗೆಯಲು ಅನುಮತಿಯಿಲ್ಲದ್ದರಿಂದ ದೇವರ ಮನೆಯ ಚಿತ್ರವನ್ನು ಸ್ಮತಿಪಟಲದಲ್ಲಿಯೇ ದಾಖಲಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ನಂತರ, ಪೂರ್ವದಲ್ಲಿದ್ದ ಮೆಟ್ಟಿಲುಗಳನ್ನಿಳಿದು ವಿಶಾಲ ಸ್ಮಾರಕ ಸಂಕೀರ್ಣ ತಲುಪಿದೆವು. ಮೊಘಲ್ ಹಾಗು ರಜಪೂತ್ ವಾಸ್ತು ಶೈಲಿಯ ದೇಗುಲಗಳು ಹಾಗು ಛತ್ರಿಗಳೆಂದು ಕರೆಯಲ್ಪಡುವ ಸ್ಮಾರಕಗಳನ್ನು ಕಣ್ತುಂಬಿಸಿಕೊಂಡೆವು. ಐತಿಹಾಸಿಕ ಮಹತ್ವದ ರಾಜರಾಜೇಶ್ವರ ಸಹಸ್ರಾರ್ಜುನ ದೇವಾಲಯದಲ್ಲಿ ಪ್ರಜ್ವಲಿಸುತ್ತಿದ್ದ ಹನ್ನೊಂದು ಜ್ಯೋತಿಗಳನ್ನು ದರ್ಶಿಸಿದೆವು. ಗೋಡೆಗಳ ಮೇಲಿನ ದೇವರುಗಳ, ಗಾಯಕರ, ನರ್ತಕಿಯರ, ವಾದ್ಯ ವಾದಕರ, ಹಾಗು ಕಾವಲು ಭಟರ ಸುಂದರ ಶಿಲ್ಪಗಳು ಮನ ಸೆಳೆದವು.

ಮುಂದೆ ಸಾಗಿ, ಕಮಾನಿನಾಕಾರದ ಮಹಾದ್ವಾರದ ಮೂಲಕ ನರ್ಮದಾ ದಂಡೆಯನ್ನು ತಲುಪಿದೆವು. ನದೀತೀರದುದ್ದಕ್ಕೂ
ಅನೇಕ ಸಣ್ಣ ಸಣ್ಣ ಮಂದಿರಗಳು ಹಾಗು ಸ್ನಾನಘಟ್ಟಗಳಿದ್ದವು. ನದೀಪಾತ್ರವು ಆಕರ್ಷಕ ಕೆತ್ತನೆಯ ನೂರಾರು ನಂದಿ ವಿಗ್ರಹ ಗಳು ಹಾಗು ಶಿವಲಿಂಗಗಳಿಗೆ ಆಶ್ರಯತಾಣವಾಗಿತ್ತು. ಹಿಂದೆ ತಿರುಗಿ ನೋಡಿದಾಗ ಕಂಡ ಮಹಾದ್ವಾರದ ದೃಶ್ಯ ಅಪೂರ್ವ ವೆನಿಸಿತು. ವಿಶಾಲ ಪಾವಟಿಕೆಗಳು, ಕಮಾನುಗಳು, ಕುಸುರಿ ಕೆತ್ತನೆಗಳಿಂದ ಕೂಡಿದ ರಾಜಾಸ್ಥಾನಿ ಶೈಲಿಯ ಬಾಲ್ಕನಿ, ಹಿನ್ನೆಲೆ ಯಲ್ಲಿ ದೇಗುಲದ ಶಿಖರ, ಇವೆಲ್ಲದರ ಸಮಗ್ರ ನೋಟ ಅವಿಸ್ಮರಣೀಯ ಅನುಭವ ನೀಡಿತು. ಇಪ್ಪತ್ತು ವರ್ಷಗಳ ಹಿಂದೆ ಪಾರಂಪರಿಕ ಹೋಟೆಲಾಗಿ ಪರಿವರ್ತನೆಗೊಂಡ ಅರಮನೆಯ ಭಾಗವನ್ನೂ ನದಿಯ ದಂಡೆಯಿಂದ ವೀಕ್ಷಿಸಿದೆವು.  ಧರ್ಮಗ್ರಂಥ ಗಳಲ್ಲಿ ಮಹಿಷಮತಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ, ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆಯ ದೇಗುಲಗಳ ಪಟ್ಟಣ ಮಾಹೇಶ್ವರದ ನೆನಪು ಬಹುಕಾಲ ಮಾಸುವುದಿಲ್ಲ.

ಮಹಿಳಾ ಸಬಲೀಕರಣ
ಸುಮಾರು ಮೂರು ದಶಕಗಳ ಕಾಲ ಸಮರ್ಥವಾಗಿ ರಾಜ್ಯಭಾರ ನಡೆಸಿದ ಮಹಾರಾಣಿಯವರು ಮಹಿಳಾ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡಿ ಕೈಮಗ್ಗಗಳನ್ನು ಸ್ಥಾಪಿಸಿ ಸೀರೆ ಮತ್ತು ವಸ್ತ್ರಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದ್ದರು. ಇಲ್ಲಿನ ಗುಡಿ ಕೈಗಾರಿಕೆ ಗಳಲ್ಲಿ ಉತ್ಪಾದಿಸುವ ಸೀರೆಗಳ ಖ್ಯಾತಿ ಇಂದಿಗೂ ಕುಂದಿಲ್ಲವೆಂಬುದು ಗಮನಾರ್ಹ. ಮಾಹೇಶ್ವರಿ ಸೀರೆಗಳನ್ನು ಖರೀದಿಸದೆ ಮಾಹೇಶ್ವರ್ ಭೇಟಿ ಪೂರ್ಣಗೊಳ್ಳುವುದಿಲ್ಲ. ನಾವೂ ಸಹ ಈ ಸಂಪ್ರದಾಯವನ್ನು ಪಾಲಿಸಿದೆವು!

ದೇಶದ ಅತಿ ಉತ್ತಮ ಗುಣಮಟ್ಟದ ಸೀರೆಗಳ ತಯಾರಿಕೆಗೆ ಮಾಹೇಶ್ವರ್ ಹೆಸರಾಗಿದೆ. ಸುಮಾರು ಐದನೆಯ ಶತಮಾನದಿಂದಲೂ ಇಲ್ಲಿ ಸೀರೆಗಳೂ ತಯಾರಾಗಿ, ವಿವಿಧ ಸ್ಥಳಗಳಿಗೆ ರಫ್ತಾಗುತ್ತಿದ್ದವು. ಮಹಾರಾಣಿ ಅಹಲ್ಯಾ ಬಾಯಿಯವರ ಕಾಲದಲ್ಲಿ, ಇಲ್ಲಿನ
ಸೀರೆ ಉದ್ಯಮಕ್ಕೆ ವಿಶೇಷ ಪ್ರೋತ್ಸಾಹ ದೊರೆತು, ಸೂರತ್ ಮೊದಲಾದ ಪ್ರದೇಶಗಳಿಂದ ಕಲಾವಿದರು ಇಲ್ಲಿಗೆ ಬಂದು ಉತ್ತಮ ಸೀರೆಗಳನ್ನು ತಯಾರಿಸತೊಡಗಿದರು. ರಾಜಮನೆತನದ ಮಹಿಳೆಯರು ಈ ಸೀರೆಗಳನ್ನು ಧರಿಸಿದ್ದಲ್ಲದೆ, ಮಹಾರಾಣಿಯವರು ಉಡುಗೊರೆ ನೀಡಲು ಸಹ ಈ ಸೀರೆ ಗಳನ್ನು ಬಳಸುತ್ತಿದ್ದರು.

ಅತಿ ಪುರಾತನ ಹಿನ್ನೆಲೆ ಕಾರ್ತವೀರ್ಯ ಅರ್ಜುನನ ರಾಜಧಾನಿ ಎನಿಸಿದ್ದ, ನರ್ಮದಾ ನದಿಯ ದಂಡೆಯ ಮೇಲಿದ್ದ ಮಾಹಿಷ್ಮತಿ ಯು ಇಲ್ಲೇ ಇತ್ತು ಎಂದು ಹೇಳಲಾಗಿದೆ. ಇಲ್ಲಿನ ಮಹಿಳೆಯರು ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿದ್ದರು ಎಂಬ ಪೌರಾಣಿಕ ಕಥನಗಳಿವೆ. ಇದೇ ಸ್ಥಳವು ಹದಿನೆಂಟನೆಯ ಶತಮಾನದಲ್ಲಿ ಮಹಾರಾಣಿ ಅಹಲ್ಯ ದೇವಿ ಹೋಲ್ಕರ್ ಅವರ ರಾಜಧಾನಿ ಎನಿಸಿದ್ದು, ಇಲ್ಲಿ ನೂರಕ್ಕಿಂತಲೂ ಹೆಚ್ಚು ದೇಗುಲಗಳಿವೆ.

Leave a Reply

Your email address will not be published. Required fields are marked *

error: Content is protected !!