Friday, 22nd November 2024

ಇತಿಹಾಸ ವರ್ತಮಾನಗಳ ಸಮ್ಮಿಲನ

ಶಶಿಧರ ಹಾಲಾಡಿ

ನಮ್ಮ ರಾಜ್ಯದ ಕರಾವಳಿಯ ಪುರಾತನ ಸಂಸ್ಕೃತಿಯ ಕಥನಗಳನ್ನು ಹಂದರವಾಗಿರಿಸಿಕೊಂಡು, ವರ್ತಮಾನ ಸಮಾಜದ ಸಾಂದರ್ಭಿಕ ಶಿಶುವಾಗಿರುವ ಮನುಷ್ಯನ ವರ್ತನೆಯನ್ನು ಪ್ರಾಮಾಣಿಕವಾಗಿ ಸಂಶೋಧಿಸಲು ಪ್ರಯತ್ನಿಸುವ ‘ಬೂಬರಾಜ ಸಾಮ್ರಾಜ್ಯ’ ಒಂದು ವಿಶಿಷ್ಟ ಕಾದಂಬರಿ.

ಲೇಖಕ ಬಿ.ಜನಾರ್ಧನ ಭಟ್ ಅವರ ಐತಿಹಾಸಿಕ ಸಂಶೋಧನ ಮತ್ತು ಜಾನಪದ ಸಂಸ್ಕೃತಿಯ ಒಳನೋಟಗಳನ್ನು ತನ್ನಲ್ಲಿ ಅಂತರ್ಗತಗೊಳಿಸಿಕೊಂಡು, ಪ್ರಸ್ತುತ ಸಮಾಜದ ಸನ್ನಿವೇಶಗಳೊಂದಿಗೆ ಮೇಳೈಸುವುದು ಮತ್ತು ಆ ಮೂಲಕ ಈ ಕಾದಂಬರಿ ಕಥನಕ್ಕೆ ಅರ್ಥಪೂರ್ಣ ಚೌಕಟ್ಟನ್ನು ಒದಗಿಸಿಕೊಟ್ಟಿರುವುದು ಇಲ್ಲಿ ಗಮನ ಸೆಳೆಯುತ್ತದೆ. ಲೇಖಕರೇ ಹೇಳಿಕೊಂಡಂತೆ, ‘ಮುಖ್ಯ ನೆಲೆಯಲ್ಲಿ ನಮ್ಮ ಕಾಲದ ಸಮಾಜ, ಇದರಲ್ಲಿರುವ ಸ್ವಾರ್ಥ, ಭ್ರಷ್ಟಾಚಾರ, ಉದಾತ್ತತೆ, ಪರೋಪಕಾರ ಗುಣಗಳನ್ನು ಚಿತ್ರಿಸುವ’ ಒಂದು ಕಥಾನಕವಿದೆ.

ತುಳುನಾಡಿನ ದೈವಗಳೂ, ಐತಿಹ್ಯಗಳೂ, ಇಂದಿಗೂ ಅಲ್ಲಿನ ದೈವ ಭೂತಗಳೂ ಜನರ ಮೈಮೇಲೆ ಆವಾಹನೆಯಾಗಿ, ವರ್ತಮಾನ ಬದುಕಿನ ಒಂದು ಭಾಗವಾಗುವ ವಿಸ್ಮಯಕಾರಿ ವಿದ್ಯಮಾನಗಳನ್ನು ಈ ಕಾದಂಬರಿಯಲ್ಲಿ ದುಡಿಸಿಕೊಂಡಿರುವ ಕಾದಂಬರಿ ಕಾರರು, ಆ ಚೌಕಟ್ಟಿನಲ್ಲೇ ಪ್ರಸ್ತುತ ಸಮಾಜದ ತಲ್ಲಣಗಳನ್ನು, ಮನುಷ್ಯನೆಂಬ ಪ್ರಾಣಿಯಲ್ಲಿ ಹುದುಗಿರುವ ದ್ವೇಷಾಸೂಯೆ ಗಳೆಂಬ ರಾಗಗಳೂ ಪ್ರವಹಿಸುವ ಪ್ರಕ್ರಿಯೆಯನ್ನು ಮನೋಜ್ಞವಾಗಿ ಹಿಡಿದುಕೊಟ್ಟಿದ್ದಾರೆ.

‘ಬೂಬರಾಜ ಸಾಮ್ರಾಜ್ಯ’ ಕಾದಂಬರಿಯಲ್ಲಿ ಸಮಾನಾಂತರವಾಗಿ ಎರಡು ಕಥೆಗಳು ಬೆಳೆದುಕೊಳ್ಳುತ್ತಾ ಬಂದು, ಕೊನೆಯಲ್ಲಿ
ಒಂದಕ್ಕೊಂದು ತಳುಕು ಹಾಕಿಕೊಂಡು, ಕಾದಂಬರಿಗೆ ಒಂದು ವಿಶಿಷ್ಟ ಪ್ರಭಾವಳಿಯನ್ನು ನೀಡುವ ರೀತಿ ಗಮನ ಸೆಳೆಯುತ್ತದೆ.
ಮಾವಿನ ಹಣ್ಣು ತಿಂದದಕ್ಕೆ ಮರಣದಂಡನೆ ಕೋಶರ ವಂಶದ ಚಂದ್ರಭಾಗಿ ಎಂಭ ಯುವತಿ ಅಪ್ರತಿಮ ಸುಂದರಿ. ಆಕೆಯನ್ನು ವರಿಸಲು ಮೂವರು ಪುರುಷರು ಪ್ರಯತ್ನಿಸುತ್ತಿದ್ದರೂ, ಬುದ್ಧಿವಂತೆಯಾಗಿದ್ದ ಆಕೆ ಅವರನ್ನು ಮಾತಿನಲ್ಲೇ ಸಿಕ್ಕಿ ಹಾಕಿಸಿ, ತನ್ನ ಪ್ರೌಢಿಮೆಯನ್ನು ಮೆರೆಯುತ್ತಾಳೆ.

ಇವರ ಜತೆ, ರಾಜನಾದ 45 ವರ್ಷ ಪ್ರಾಯದ ಭೂವರಾಹ ಪಾಂಡ್ಯ ಸಹ, ಒಮ್ಮೆ ಆಕೆಯ ಸೌಂದರ್ಯವನ್ನು ಕಂಡು, ನಿಬ್ಬೆರ ಗಾಗಿ, ಆಕೆಯನ್ನು ಸುಖಿಸುವ ಆಸೆಪಟ್ಟಿದ್ದ. ಆದರೆ ಅದಾಗಲಿಲ್ಲ. ಈ ನಡುವೆ ರಾಜ ಪರಿವಾರ ಮಾತ್ರ ಸೇವಿಸಬಹುದಾಗಿದ್ದ, ಅಪೂರ್ವ ಎನಿಸುವ ಮಾವಿನ ಹಣ್ಣೊಂದು ನೀರಿನಲ್ಲಿ ತೇಲಿಬಂದಾಗ, ಅರಿಯದೇ ಚಂದ್ರಭಾಗಿ ಅದನ್ನು ತಿಂದದ್ದೇ ಆ ರಾಜ್ಯದಲ್ಲಿ ಮಹಾಪರಾಧ ಎನಿಸಿತು. ಅಲ್ಲಿನ ಕಾನೂನಿನ ಪ್ರಕಾರ ಅದೊಂದು ಘೋರ ಅಪರಾಧ ಎನಿಸಿದ್ದು, ಭೂವರಾಹ
ಪಾಂಡ್ಯನು ಆಕೆಗೆ ಮರಣದಂಡನೆಯ ಶಿಕ್ಷೆ ವಿಧಿಸಿಬಿಟ್ಟ.

ಚಂದ್ರಭಾಗಿಯ ಬಳಗದವರಾದ ಕೋಶರರು ಅಲ್ಲಿನ ಪ್ರಮುಖ ಮತ್ತು ಬಲಾಢ್ಯ ಜನಾಂಗ ಎನಿಸಿದ್ದರೂ, ಅವರೆಲ್ಲರೂ ಒಗ್ಗಟ್ಟಾಗಿ ಭೂವರಾಹ ಪಾಂಡ್ಯನ ಬಳಿ ಬಂದು ಚಿನ್ನ ಮತ್ತು 99 ಆನೆಗಳನ್ನು ತಪ್ಪು ಕಾಣಿಕೆಯಾಗಿ ಕೊಡುವ ಆಮಿಷ ಒಡ್ಡಿದರೂ, ರಾಜ ತನ್ನ ಪಟ್ಟು ಸಡಿಲಿಸಲಿಲ್ಲ, ಆ ಅಪ್ರತಿಮ ಸುಂದರಿಯ ಮರಣದಂಡನೆಯನ್ನು ತಡೆಯಲಾಗಲಿಲ್ಲ. ಈ ಐತಿಹಾಸಿಕ ಕಥಾನಕ ವನ್ನು ವರ್ತಮಾನದ ರಾಜಕೀಯ, ದ್ವೇಷ, ಮನುಷ್ಯನ ಕ್ಷುಲ್ಲಕತನಗಳೊಂದಿಗೆ ಮೇಳೈಸುವಂತೆ ಮಾಡಲು ಕಾದಂಬರಿಯಲ್ಲಿ ಬಳಸಿದ ತಂತ್ರ ತುಸು ವಿಶಿಷ್ಟ. ಅಧ್ಯಾಪಕ ಕೃಷ್ಣಚಂದ್ರ ಎಂಬುವವರು ಬರೆಯುತ್ತಿರುವ ಒಂದು ಸಂಶೋಧನಾ ಪ್ರಬಂಧದ ಭಾಗವಾಗಿ, ಈ ಐತಿಹಾಸಿಕ ಕಥನಾವಳಿಯು ಹಂತಹಂತವಾಗಿ ಓದುಗರಿಗೆ ತಿಳಿಯುತ್ತಾ ಹೋಗುತ್ತದೆ.

ಜತೆಯಲ್ಲೇ ಕೃಷ್ಣಚಂದ್ರರು ಸನ್ನಿವೇಶದ ತಿರುವುಗಳಲ್ಲಿ ಸಿಕ್ಕಿ ಹಾಕಿಕೊಂಡು, ನರಳಿ, ಮತ್ತೆ ಶಕ್ತಿಯನ್ನು ಕುದುರಿಸಿಕೊಂಡು, ತನಗಾದ ಅನ್ಯಾಯದ ವಿರುದ್ಧ ತಿರುಗಿಬಿದ್ದು ಯಶಸ್ವಿಯಾಗಿ ಹೋರಾಡುವ ವಿದ್ಯಮಾನವೂ ನಡೆಯುತ್ತದೆ. ಕೃಷ್ಣಚಂದ್ರರು ಬೂಬಾವರದಲ್ಲಿ ವೃತ್ತಿ ನಿರ್ವಹಿಸುತ್ತಿರುವ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮತ್ತು ಇನ್ನೋರ್ವ ಸಹೋದ್ಯೋಗಿ ಒಡಗೂಡಿ, ಕೃಷ್ಣಚಂದ್ರರನ್ನು ದೊಡ್ಡೊದೊಂದು ವ್ಯೂಹದೊಳಗೆ ಕೆಡಹುತ್ತಾರೆ. ಅವರ ಆ ಕುಟಿಲಮಾರ್ಗದಲ್ಲಿ ಈ ಯುಗಮಾನದ ಹಲವು ಕುತಂತ್ರಗಳು ಅನಾವರಣಗೊಂಡು, ವರ್ತಮಾನದ ಸನ್ನಿವೇಶದ ವಿಶ್ಲೇಷಣೆಗೆ ಪ್ರಮುಖ ಎನಿಸುವ ಒಂದು ಆಯಾಮವನ್ನು ಕಟ್ಟಿಕೊಡುತ್ತದೆ.

ಅಧ್ಯಾಪಕ ಕೃಷ್ಣಚಂದ್ರರ ಮನೆಗೆ ನೋಟ್‌ಸ್‌ ಪಡೆಯಲು ಬರುವ ಅಮಾಯಕ ವಿದ್ಯಾರ್ಥಿನಿಯ ಫೋಟೋ ತೆಗೆದು, ದುರುದ್ದೇಶ ದಿಂದ, ಸುಳ್ಳು ವ್ಯಾಖ್ಯಾನದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಸಹೋದ್ಯೋಗಿ, ಅದರಿಂದ ಅವಮಾನಿತ ಳಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಆ ವಿದ್ಯಾರ್ಥಿನಿ, ಆತ್ಮಹತ್ಯೆಗೆ ಕಾರಣ ಎನಿಸುವ ಸೈಬರ್ ಅಪರಾಧ ಎಸಗಿದ್ದಕ್ಕಾಗಿ ಬಂಧನಕ್ಕೆ ಒಳಗಾಗುವ ಸಹ್ಯೋದ್ಯೋಗಿ ಮೊದಲಾದ ಬೆಳವಣಿಗೆಗಳು ಮನೋಜ್ಞ ಮತ್ತು ಪ್ರಸ್ತುತ ಸಮಾಜದ ಕೊಳಕುಗಳನ್ನು ಎತ್ತಿತೋರು ತ್ತವೆ.

ಈ ನಡುವೆ ಗೇಟ್ ಭಾರತಿ ಎಂಬ ವಿಚ್ಛೇದನ ಬಯಸುವ ಮಹಿಳೆಯೊಬ್ಬಳ ಕಥೆಯ ಮೂಲಕ, ಈಗಿನ ಮನುಷ್ಯ ಮನುಷ್ಯ
ನಡುವಿನ ಸಂಬಂಧಗಳನ್ನು ನಿಕೃಷ್ಟಕ್ಕೆ ಒಡ್ಡು ಪ್ರಯತ್ನವನ್ನು ಸಹ ಕಾದಂಬರಿ ಮಾಡುತ್ತದೆ. ಬೂಬರಾಜನ ಕಥೆಯನ್ನು ಸಂಶೋಧಿಸಿ, ಪ್ರಬಂಧವೊಂದನ್ನು ತಯಾರಿಸಿದರೂ, ಕೃಷ್ಣಚಂದ್ರ ಅದನ್ನು ಒಮ್ಮೆಗೇ ಪ್ರಕಟಿಸಲು ಹೋಗುವುದಿಲ್ಲ. ತುಳು ನಾಡಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಪದ್ಧತಿಯಂತೆ, ದೈವಸನ್ನಿಧಿಯಲ್ಲಿ ಸೀರಿಯಲ್ ಸಂಖ್ಯೆ ಪಡೆದು, ಮೂರನೆ ಯವರ ಮಧ್ಯಸ್ಥಿಕೆಯಲ್ಲಿ, ಹಣ್ಣುಕಾಯಿ ಹಿಡಿದು ವಿನೀತರಾಗಿ ನಿಂತು, ಕೃಷ್ಣಚಂದ್ರರು ದೈವವನ್ನು ಆವಾಹಿಸಿಕೊಂಡು ವ್ಯಕ್ತಿಯೆದುರು ನಿಂತು, ಆ ದೈವದ ಕಥೆಯನ್ನು ಬರೆದು, ಪ್ರಕಟಿಸಲು ಅನುಮತಿ ಬೇಡುವುದರೊಂದಿಗೆ ಕಾದಂಬರಿ ಮಕ್ತಾಯ ವಾಗುತ್ತದೆ.

ದೈವದ ಕಥೆಯನ್ನು ಬರೆದು, ಪ್ರಕಟಿಸಲು, ಅದೇ ದೈವದ ಅನುಮತಿ ಪಡೆಯುವ ವಿದ್ಯಮಾನವು ಕಾದಂಬರಿಗೆ ಹೊಸ ಅರ್ಥ ಗಳನ್ನು ಹೊಳಹಿಸುವುದೂ ನಿಜ. ಐತಿಹಾಸಿಕ ಘಟನೆಗಳ ಹಂದರ, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿರುವ ಕ್ಷುಲ್ಲಕ ರಾಜಕೀಯ ಮತ್ತು ತುಳುನಾಡಿನ ಪುರಾತನ ದೈವಗಳು ಇಂದಿಗೂ ಅಲ್ಲಿನ ಜನಜೀವನದ ಮೇಲೆ ನೇರ ಪ್ರಭಾವ ಬೀರುತ್ತಿರುವ ವಿಶಿಷ್ಟ ವಿದ್ಯಮಾನ – ಈ ಸ್ತರಗಳ ಕಥನಗಳನ್ನು ಸೂಕ್ತವೆನಿಸುವಂತೆ ಬಳಸಿಕೊಂಡಿರುವ ಈ ಕಾದಂಬರಿ, ಹಲವು ಕಾರಣಗಳಿಗೆ ಗಮನ ಸೆಳೆಯುವ ಕೃತಿ. ಈಚಿನ ದಿನಗಳಲ್ಲಿ ಹೊರಬಂದಿರುವ ಪ್ರಮುಖ ಕಾದಂಬರಿಗಳಲ್ಲಿ ‘ಬೂಬರಾಜ ಸಾಮ್ರಾಜ್ಯ’ವೂ ಒಂದೆಂಬ ಹಿನ್ನೆಲೆಯಲ್ಲಿ, ಓದುಗರು ಈ ಕೃತಿಯನ್ನು ಓದಲು ಕೈಗೆತ್ತಿಕೊಳ್ಳಬಹುದು.