ಶಶಿಧರ ಹಾಲಾಡಿ
ಶಿವನ ಪರಿಕಲ್ಪನೆ ಅದೆಷ್ಟು ಪುರಾತನ? ಮನುಷ್ಯನು ಶಿವನನ್ನು ಆರಾಧಿಸಲು ತೊಡಗಿ ಎಷ್ಟು ಸಾವಿರ ವರ್ಷಗಳಾ ದವು? ನಮ್ಮ ಉಪಖಂಡದ ಉದ್ದಗಲಕ್ಕೂ, ಅಷ್ಟೇಕೆ ಬಾಲಿ, ಇಂಡೋನೇಷ್ಯಾ, ಕಾಂಬೋಡಿಯಾ ಮೊದಲಾದ ಪ್ರಾಚ್ಯ ದೇಶಗಳಲ್ಲಿ ಬೇರೂರಿರುವ ಶಿವನ ಆರಾಧನೆಯನ್ನು ಕಂಡರೆ, ಆತನಿಗಿರುವ ಜನಪ್ರಿಯತೆ ಗಮನಿಸಿದರೆ, ಶಿವನಿಗೆ ವಿಶ್ವ Sವ್ಯಾಪಿ ಸ್ವರೂಪ ವೇದ್ಯವಾಗುತ್ತದೆ.
ನಮ್ಮ ದೇಶದಾದ್ಯಂತ ಭಕ್ತಿಯಿಂದ ಆರಾಧಿಸಲ್ಪಡುತ್ತಿರುವ ಶಿವನಿಗೆ ಮೀಸಲಾಗಿರುವ ಶಿವರಾತ್ರಿ ಆಚರಣೆಯು ಒಂದು ರೀತಿಯಲ್ಲಿ ನಾಡಿನ ಹಬ್ಬ, ಗ್ರಾಮೀಣರ ಹಬ್ಬ, ಎಲ್ಲರ ಹಬ್ಬ. ರಾತ್ರಿಯಿಡೀ ಶಿವನ ಧ್ಯಾನ ಮಾಡುತ್ತಾ, ಆ ಆದಿಯೋಗಿ ಯನ್ನು ಮನಸ್ಸಿನಲ್ಲಿ ಆವಾಹಿಸಿ ಕೊಂಡು ಭಕ್ತಿಯ ಸಾಗರದಲ್ಲಿ ಮಿಂದೇಳುವ ಶಿವರಾತ್ರಿಯ ಆಚರಣೆ ವಿಶಿಷ್ಟ, ಅರ್ಥ ಪೂರ್ಣ. ಸಾವಿರಾರು ವರ್ಷಗಳಿಂದಲೂ ಶಿವನನ್ನು ಪೂಜಿಸುವ ಪದ್ಧತಿ ಬೆಳೆದುಬಂದಿದ್ದು, ಅಂತಹದ್ದೊಂದು ಪುರಾತನ ಆಚರಣೆಯ ಅಂಗವಾಗಿ ಬಹು ಹಿಂದಿನಿಂದಲೇ ಶಿವರಾತ್ರಿ ಜಾಗರಣೆ ರೂಪುಗೊಂಡಿರಬೇಕು.
ಶಿವನ ಆರಾಧನೆಯೇ ಇಷ್ಟೊಂದು ಪುರಾತನ ಎಂದಮೇಲೆ, ಶಿವನು ಜನಪ್ರಿಯ ದೇವತೆಯ ಸ್ಥಾನವನ್ನು ಪಡೆದು ಕೊಂಡದ್ದು ಇನ್ನಷ್ಟು ಹಿಂದಿನ ಕಾಲದಲ್ಲೆಂಬುದರಲ್ಲಿ ಅನುಮಾನ ವಿಲ್ಲ. ನಾಡಿನಾದ್ಯಂತ ಇಂದು ಆಚರಿಸುತ್ತಿರುವ ಶಿವರಾತ್ರಿಯ ಸಮಯದಲ್ಲಿ ಶುಭಾಶಯ ಗಳನ್ನು ಹೇಳುತ್ತಾ, ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯು ಶಿವನನ್ನು ಹೇಗೆ ಗುರುತಿಸಿದೆ, ಚಿತ್ರ, ಶಿಲ್ಪಗಳಲ್ಲಿ ಹೇಗೆ ಕಂಡರಿಸಿದೆ ಎಂಬುದರ ಕುರಿತು ಪುಟ್ಟ ಅವಲೋಕನ ಇಲ್ಲಿದೆ.
ವಿಶ್ವದಲ್ಲೇ ಅತಿ ಎತ್ತರವಾದ ಶಿವನ ಮುಖವನ್ನು 2017ರಲ್ಲಿ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸ್ಥಾಪಿಸಲಾಯಿತು. ಕಬ್ಬಿಣದಿಂದ ನಿರ್ಮಿಸಲಾಗಿರುವ ಈ ಮೂರ್ತಿಯು 112 ಅಡಿ ಎತ್ತರ, 147 ಅಡಿ ಉದ್ದ ಮತ್ತು 82 ಅಡಿ ಅಗಲವಿದ್ದು, ಶಿವನನ್ನು
ಆದಿಯೋಗಿ ರೂಪದಲ್ಲಿ ಬಿಂಬಿಸುವ ಕಲಾಕೃತಿ ಇದು.
ತಿರುಪತಿಯಿಂದ 23 ಕಿಮೀ ದೂರದಲ್ಲಿರುವ ಗುಡಿಮಲ್ಲಂ ದೇವಾಲಯದಲ್ಲಿರುವ ಶಿವನ ಕೆತ್ತನೆಯು, ಇಡೀ ಭಾರತದಲ್ಲಿ, ಅಷ್ಟೇಕೆ ವಿಶ್ವದಲ್ಲೇ ವಿಶಿಷ್ಟ. ಆ ಶಿವನ ಆಕೃತಿಯ ಸ್ವರೂಪ ಸಹ ಬಹು ಅಪರೂಪದ್ದು.
ಗುಡಿಮಲ್ಲಂ ಶಿವ
ಇಂದು ಪುಟ್ಟ ಗ್ರಾಮವಾಗಿರುವ ಗುಡಿಮಲ್ಲಂನಲ್ಲಿರುವ ಪರಶುರಾಮೇಶ್ವರ ದೇವಾಲಯದಲ್ಲಿರುವ ಈ ಲಿಂಗವು, ದಕ್ಷಿಣ ಭಾರತದ ಮೊತ್ತ ಮೊದಲ ಶಿಲಾವಿಗ್ರಹ ಎನಿಸಿದ್ದು, ತನ್ನ ಪ್ರಾಚೀನತೆ ಮತ್ತು ಸ್ವರೂಪದಿಂದ ವಿಸ್ಮಯ ಮೂಡಿಸುತ್ತದೆ.
ಕಾಲ: ಗುಡಿಮಲ್ಲಂ ಶಿವನ ವಿಗ್ರಹವು ಸುಮಾರು ಇಂದಿಗೆ 2,200 ವರ್ಷಗಳಿಗೂ ಮುಂಚೆ ನಿರ್ಮಾಣಗೊಂಡಿದೆ. ಕೆಲವು ಅಧ್ಯಯನಗಳು ಇದರ ಕಾಲವನ್ನು ಸಾ.ಶ. 200 ಎಂದರೂ, ಆ ದೇಗುಲವಿರುವ ತಳಪಾಯದಲ್ಲಿ ದೊರಕಿರುವ ಇಟ್ಟಿಗೆಗಳು 2,300 ವರ್ಷ ಪುರಾತನ ಎಂದು ಗಮನಿಸಿದಾಗ, ಅಷ್ಟು ಹಿಂದೆಯೇ ಇಲ್ಲೊಂದು ದೇಗುಲದ ಸ್ವರೂಪದ ಕಟ್ಟಡವಿತ್ತು ಎನ್ನಬಹುದು. ಈಗ ಇರುವ ದೇಗುಲವನ್ನು ವಿಜಯನಗರ ಕಾಲದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಜೀರ್ಣೋದ್ಧಾರ
ಮಾಡಲಾಗಿದ್ದು, ದೇಗುಲದ ಹಳೆಯ ಭಾಗಗಳು ಇನ್ನೂ ಅಲ್ಲಲ್ಲಿ ಉಳಿದುಕೊಂಡಿವೆ.
ಸ್ವರೂಪ: ಸುಮಾರು 5 ಅಡಿ ಎತ್ತರವಿರುವ ಈ ಲಿಂಗವನ್ನು ಸ್ಥಳೀಯವಾಗಿ ದೊರೆಯುವ ಕಲ್ಲಿನಿಂದ ಕೆತ್ತಲಾಗಿದೆ. ಇಲ್ಲಿ
ಶಿವನನ್ನು ‘ಸ್ಥಾನಕ’ ಭಂಗಿಯಲ್ಲಿ, ಅಂದರೆ ನಿಂತಿರುವ ಭಂಗಿಯಲ್ಲಿ ಕೆತ್ತನೆ ಮಾಡಲಾಗಿದೆ. ವಿಶೇಷ ಎಂದರೆ, ಈತನ
ಕಾಲಿನ ಅಡಿ, ಅಪಸ್ಮಾಾರ ಪುರುಷ ಅಥವಾ ಕುಬ್ಜವ್ಯಕ್ತಿಯೊಬ್ಬನನ್ನು ಶಿಲೆಯಿಂದ ಕೆತ್ತಲಾಗಿದ್ದು, ಅದರ ಮುಖವು
ರೌದ್ರವಾಗಿದೆ.
ಶಿವನು ಇಲ್ಲಿ ಒಬ್ಬ ಬೇಡನ ಸ್ವರೂಪ ಪಡೆದಿದ್ದಾನೆ. ತನ್ನ ಒಂದು ಕೈಯಲ್ಲಿ ಬೇಟೆಯಾಡಿವ ಮೃಗವೊಂದನ್ನು ಹಿಡಿದಿದ್ದಾನೆ, ಇನ್ನೊಂದು ಕೈಯಲ್ಲಿ ಕೊಡಲಿ ಅಥವಾ ಪರಶು ಹಿಡಿದಿದ್ದಾನೆ. ಈಗ ತಾನೆ ಬೇಟೆ ಮುಗಿಸಿ ಬಂದಂತೆ ಕಾಣುವ ಭಂಗಿ. ಕಿವಿಯಲ್ಲಿ ಹಲವು ಓಲೆ, ಸುಂದರ ವಿನ್ಯಾಸದ ಕಂಠಾಭರಣ, ಕೈಯಲ್ಲಿ ಕಡಗಗಳು, ಉಂಗುರಗಳು ಕಾಣಿಸುತ್ತವೆ. ಐದು ಅಡಿ ಎತ್ತರದ ಈ ಶಿಲಾ ವಿಗ್ರಹದಲ್ಲಿ ಧೋತಿಯನ್ನು ಧರಿಸಿದ ವಿನ್ಯಾಸವನ್ನು ಕೆತ್ತಲಾಗಿದ್ದು, ಸೊಂಟದ ಭಾಗದಲ್ಲಿ ಲಿಂಗವು ಕಾಣಿಸುವಂತೆ ಸ್ಪಷ್ಟವಾಗಿ ಚಿತ್ರಿಸಲಾಗಿದೆ.
ಇಡೀ ವಿಗ್ರಹವನ್ನು ಲಿಂಗವೊಂದರಿಂದ ಒಡಮೂಡಿದಂತೆ ಕೆತ್ತಲಾಗಿದ್ದು, ಇಂತಹ ಶಿಲಾಮೂರ್ತಿ ಭಾರತದಲ್ಲಿ ಇನ್ನೊಂದಿಲ್ಲ.
ಗುಡಿಮಲ್ಲಂ ಶಿವನ ವಿಗ್ರಹವಿರುವ ದೇಗುಲವು ಹಲವು ಬಾರಿ ಜೀರ್ಣೋದ್ಧಾರಕ್ಕೆ ಒಳಗಾಗಿದ್ದರೂ, ಮೂಲ ಸ್ವರೂಪವನ್ನು ಇನ್ನೂ ಉಳಿಸಿಕೊಂಡಿದೆ. ಈ ದೇವಾಲಯದ ಕೆಳಭಾಗದಲ್ಲಿ ಸುರಂಗ ಇದೆ ಎಂಬ ಸ್ಥಳೀಯ ನಂಬಿಕೆ ಮತ್ತು ಇದು ತಿರುಪತಿಗೆ ಸಾಕಷ್ಟು ಸನಿಹದಲ್ಲಿರುವ ಭೌಗೋಳಿಕ ಅಂಶವು, ಈ ದೇಗುಲದ ನಿಗೂಢತೆಯನ್ನು ಹೆಚ್ಚಿಸಿದೆ.
ತ್ರಿಮೂರ್ತಿ ವಿಗ್ರಹ
ಮುಂಬಯಿ ಮಹಾನಗರದ ಸಮೀಪದಲ್ಲಿ, ಸಮುದ್ರದ ಮಧ್ಯೆ ಇರುವ ಎಲಿಫೆಂಟಾ ಗುಹೆಗಳಲ್ಲಿರುವ ತ್ರಿಮೂರ್ತಿ ವಿಗ್ರಹವು
ನಮ್ಮ ದೇಶದ ಒಂದು ವಿಸ್ಮಯ, ಅದ್ಭುತ. ಸಾ.ಶ.550 ಸುಮಾರಿಗೆ ನಿರ್ಮಾಣಗೊಂಡ ಎಲಿಫೆಂಟಾ ಗುಹೆಗಳ ಹಲವು ಶಿಲ್ಪಗಳ ಪೈಕಿ, ತ್ರಿಮೂರ್ತಿ ಶಿಲ್ಪವು ಎಲ್ಲಕ್ಕಿಂತ ದೊಡ್ಡದು ಮತ್ತು ತನ್ನ ಮುಖಭಾವ ಮತ್ತು ವಿನ್ಯಾಸಗಳಿಂದ ಹೆಸರುವಾಸಿ.
ಇದನ್ನು ಸದಾಶಿವ, ಮಹೇಶ ಮೂರ್ತಿ ಎಂದೂ ಕರೆಯಲಾಗುತ್ತಿದೆ. ಮೂರು ಮುಖಗಳನ್ನು ಹೊತ್ತಿರುವ ಈ ವಿಗ್ರಹವು, ಪಂಚಮುಖ ಶಿವನನ್ನು ಪ್ರತಿನಿಧಿಸುತ್ತದೆ. ಈ ವಿಗ್ರಹದ ಮೂರು ಮುಖಗಳು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಬಿಂಬಿಸುತ್ತಿದ್ದು, ಬೆಳಕು ಬಿದ್ದಾಗ ಆ ಮೂರು ಭಾವಗಳನ್ನು ಆ ಮುಖಗಳು ತೋರುವುದು ಒಂದು ವಾಸ್ತು ವಿಸ್ಮಯ. ಬಲಭಾಗದ ಮುಖವು ಸೃಷ್ಟಿಗೆ
ಕಾರಣ ಎನಿಸಿದ ಬ್ರಹ್ಮನನ್ನು ಅಥವಾ ಉಮಾ ಅಥವಾ ವಾಮದೇವನನ್ನು ಪ್ರತಿನಿಧಿಸುತ್ತದೆ. ಎಡಭಾಗಕ್ಕೆ ತಿರುಗಿಕೊಂಡಿರುವ ಮುಖವು ಸಾಕಷ್ಟು ಯುವ ಛಾಯೆಗಳನ್ನು ಹೊಂದಿದ್ದು, ಅಘೋರ ಅಥವಾ ಭೈರವನನ್ನು ಸೂಚಿಸುತ್ತದೆ.
ಲಯಕಾರಿ ಶಕ್ತಿ ಹೊಂದಿರುವ ಈ ಮುಖವನ್ನು ರುದ್ರ ಶಿವ ಎಂದೂ ಕರೆಯಲಾಗಿದೆ. ಗುಹೆಯನ್ನು ಪ್ರವೇಶಿಸಿದಾಗ ಎದುರಿನಿಂದ ಕಾಣಿಸುವ ಮುಖವನ್ನು ತತ್ಪುರುಷ ಎನ್ನಲಾಗಿದ್ದು, ಇದು ವಿಷ್ಣುವನ್ನು ಸಹ ಪ್ರತಿನಿಧಿಸುತ್ತದೆ. ಈ ಮುಖವು ಶಾಂತ ಸ್ವರೂಪದ್ದು, ಲೋಕಶಾಂತಿಯನ್ನು ಪೊರೆಯುವ ಭಾವವನ್ನು ವ್ಯಕ್ತಪಡಿಸುತ್ತದೆ.
ಎಲಿಫೆಂಟಾ ಗುಹೆಯಲ್ಲಿರುವ ಈ ತ್ರಿಮೂರ್ತಿ ವಿಗ್ರಹದ ಕುರಿತು ಹೆಸರಾಂತ ತಜ್ಞರು, ತತ್ವಜ್ಞಾನಿಗಳು, ಮೀಮಾಂಸಕರು
ಸಾಕಷ್ಟು ವ್ಯಾಖ್ಯಾನ ನೀಡಿದ್ದಾರೆ. ಆ ಶಿಲಾಮುಖಗಳು ಬಿಂಬಿಸುವ ಭಾವಗಳಿಗೆ ಹೋಲಿಸುವಂತಹ ಭಾವಗಳನ್ನು ಬಿಂಬಿಸುವ ಇನ್ನೊಂದು ಶಿಲ್ಪ ಇಡೀ ವಿಶ್ವದಲ್ಲೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಿಪಡಿಸಿದವರೂ ಇದ್ದಾರೆ. ಇಂದಿಗೆ ಸುಮಾರು 1,500 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಮೂರ್ತಿ ಮತ್ತು ಅಲ್ಲಿನ ಗುಹಾಲಯಗಳು, ಅಂದು ವ್ಯಾಪಕವಾಗಿದ್ದ ಶಿವನ ಆರಾಧನೆಯ ಪ್ರತೀಕಗಳು. ಇಲ್ಲಿರುವ ಗುಹೆಗಳು, ಅಲ್ಲಿನ ಶಿಲ್ಪಗಳು ಸಾಕಷ್ಟು ಹಾನಿಗೊಳಗಾಗಿದ್ದರೂ, ತ್ರಿಮೂರ್ತಿ
ವಿಗ್ರಹವು ತಕ್ಕಮಟ್ಟಿಗೆ ಉತ್ತಮ ಸ್ಥಿತಿಯಲ್ಲಿರುವುದನ್ನು ಕಾಣಬಹುದು.
ಪಶುಪತಿ ಮುದ್ರೆ
ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳು ದೊರೆತ ಪ್ರಮುಖ ಸ್ಥಳಗಳಲ್ಲಿ ಒಂದಾದ ಮೊಹೆಂಜೊದಾರೋವಿನಲ್ಲಿ ಸಿಕ್ಕಿದ ಪಶುಪತಿ ಮುದ್ರೆಯು, ಶಿವನ ಪುರಾತನ ಚಿತ್ರಿಕೆಗಳಲ್ಲಿ ಒಂದು. ಇಂದಿಗೆ ಸುಮಾರು 4350 ವರ್ಷ ಹಿಂದಿನ ಕಾಲಮಾನದ ಈ ಮುದ್ರೆಯಲ್ಲಿ ಚಿತ್ರಿಸಲಾಗಿರುವ ಈ ವ್ಯಕ್ತಿಯನ್ನು ಮತ್ತು ಆತನ ಸುತ್ತಲೂ ಹರಡಿ ನಿಂತಿರುವ ಪಶುಗಳನ್ನು ಕಂಡು, ಅವನ್ನು ಪಶುಪತಿ ಎಂದು ಸಂಶೋಧಕ ಜಾನ್ ಮಾರ್ಷಲ್ ಕರೆದರು. ಆ ಮೊಹರಿನಲ್ಲಿರುವ ವ್ಯಕ್ತಿಯು ಯೋಗ ಮುದ್ರೆಯ ಭಂಗಿಯಲ್ಲಿ ಕುಳಿತಿದೆ.
1928-29ರ ಅವಧಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಾನ್ ಮಾರ್ಷಲ್, ಯೋಗಮುದ್ರೆಯಲ್ಲಿರುವ ಈ ವ್ಯಕ್ತಿಯನ್ನು ತಾನೇಕೆ ಪಶುಪತಿ ಎಂದು ಗುರುತಿಸಿದೆ ಎಂಬುದಕ್ಕೆ ನಾಲ್ಕು ಕಾರಣ ನೀಡಿದ್ದಾರೆ.
1. ಆ ವ್ಯಕ್ತಿಗೆ ಮೂರು ಮುಖಗಳಿವೆ.
2. ವ್ಯಕ್ತಿಯ ತಲೆಯ ಮೇಲೆ ಎತ್ತಿನಕೊಂಬುಗಳಿದ್ದು, ತ್ರಿಶೂಲದ ಸ್ವರೂಪ ಹೊಂದಿದೆ.
3. ವ್ಯಕ್ತಿಯು ಯೋಗ ಮುದ್ರೆಯಲ್ಲಿ ಕುಳಿತಿದ್ದು ಆದಿಯೋಗಿ ಎಂದೇ ಗುರುತಿಸಲಾಗಿರುವ ಶಿವನನ್ನು ಹೋಲುತ್ತದೆ.
4. ಶಿವನು ಪಶುಪತಿ. ಈ ಮೊಹರಿನಲ್ಲಿ ವಿವಿಧ ರೀತಿಯ ಪ್ರಾಣಿಗಳಿದ್ದು, ಪಶುಪತಿ ಎಂಬ ಹೆಸರಿಗೆ ಹೊಂದುತ್ತದೆ.
ಈ ಮೊಹರಿನಲ್ಲಿರುವ ವ್ಯಕ್ತಿ ಕುಳಿತಿರುವ ಯೋಗ ಮುದ್ರೆಯನ್ನು, ‘ಮೂಲಬಂಧಾಸನ’ ಎಂದು ಇತರ ತಜ್ಞರು ಹೆಸರಿಸಿದ್ದಾರೆ.
ಇದೇ ರೀತಿಯ ಯೋಗಾಸನವನ್ನು ಬಿಂಬಿಸುವ ಇತರ ಮೊಹರುಗಳು ಸಹ ಸಿಂಧೂ ಕಣಿವೆಯ ಇತರ ಅವಶೇಷಗಳಲ್ಲಿ ಹಲವು ಕಡೆ ದೊರೆತಿವೆ. ಮೊಹೆಂಜೊದಾರೊದ ಈ ಮೊಹರನ್ನು ‘ಪಶುಪತಿ’ ಎಂದು ಜಾನ್ ಮಾರ್ಷಲ್ ಕರೆದದ್ದನ್ನು ಹೆಚ್ಚಿನ ತಜ್ಞರು ಒಪ್ಪಿದ್ದರೂ, ಈಚಿನ ಕೆಲವು ದಶಕಗಳಲ್ಲಿ ಈ ಮುದ್ರೆಗೆ ಬೇರೆ ಅರ್ಥ ನೀಡುವ ಪ್ರಯತ್ನವೂ ನಡೆದಿದೆ. ಅದೇನಿದ್ದರೂ,
ಪಶುಪತಿ ಮುದ್ರೆ ಎಂದೇ ಹೆಸರಾಗಿರುವ ಈ ಮುದ್ರೆಯ ಪ್ರಾಚೀನತೆಯು, ಶಿವನ ವ್ಯಾಪಕತೆ ಸ್ವರೂಪವನ್ನು ಸೂಚಿಸುತ್ತದೆ.
ಕೈಲಾಸನಾಥ ದೇಗುಲ
ಶಿವನ ಪ್ರಾಚೀನ ದೇಗುಲಗಳಲ್ಲಿ ಎಲ್ಲೋರಾದಲ್ಲಿರುವ ಕೈಲಾಸ ದೇಗುಲಕ್ಕೆ ವಿಶಿಷ್ಟ ಸ್ಥಾನ. ಒಂದೇ ಕಲ್ಲಿನಲ್ಲಿ ಕೊರೆದು ಮಾಡಿದ ಈ ದೇಗುಲವು ಅಂದಿನ ಕಾಲದ ವಿಸ್ಮಯ, ಇಂದಿನ ಜನರಿಗೆ ಒಂದು ಅದ್ಭುತ. ನಮ್ಮ ದೇಶದ ಶಿಲಾವಾಸ್ತುವಿನ ಅತ್ಯುನ್ನತ ಉದಾಹರಣೆ ಇದು ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಇಂತಹದೊಂದು ದೇಗುಲವನ್ನು ಕೊರೆದು ನಿರ್ಮಿಸಲು ಅಗತ್ಯ ಎನಿಸುವ ತಂತ್ರಜ್ಞಾನ ಅಂದಿನ ಶಿಲ್ಪಿಗಳಿಗೆ ಹೇಗೆ ಲಭ್ಯವಾಯಿತು ಎಂದು ವಿಸ್ಮಯ ವ್ಯಕ್ತಿಪಡಿಸಿದವರೂ ಇದ್ದಾರೆ.
ರಾಷ್ಟ್ರಕೂಟ ರಾಜನಾದ ಕೃಷ್ಣ (ಸಾ. ಶ.756-773)ನ ಕಾಲದಲ್ಲಿ ನಿರ್ಮಾಣ ಗೊಂಡ ಈ ದೇಗುಲವು ಪಲ್ಲವ ಮತ್ತು ಚಾಲುಕ್ಯ ಶೈಲಿಯಲ್ಲಿ ರೂಪುಗೊಂಡಿದೆ. ಎಲ್ಲೋರಾದಲ್ಲಿರುವ 34 ಗುಹಾಲಯಗಳ ಸಾಲಿನಲ್ಲೇ ಒಡಮೂಡಿರುವ ಈ ದೇಗುಲವು, ಬಯಲಿನಲ್ಲಿ ಕಟ್ಟಿದ ಪ್ರತ್ಯೇಕ ಶಿಲಾ ದೇಗುಲವನ್ನು ಹೋಲುವುದು ವಿಶೇಷ. ಏಕಶಿಲಾ ನಿರ್ಮಿತಿ ಎನಿಸಿರುವ ಈ ದೇಗುಲದಲ್ಲಿ ಕೆಲವು ಚಿತ್ರಗಳನ್ನು ಸಹ ರಚಿಸಿಲಾಗಿದ್ದರೂ, ಇಂದು ಅವು ಲಭ್ಯವಿಲ್ಲ.
ಬೃಹತ್ ಬಂಡೆಯನ್ನು ಮೇಲಿನಿಂದ ಕೆಳಗೆ ಕೊರೆಯುತ್ತಾ ಹೋಗುವ ವಿಧಾನದಿಂದ ಈ ಅಸಾಮಾನ್ಯ ವಾಸ್ತುಕಲಾಕೃತಿ
ಯನ್ನು ನಿರ್ಮಿಸಲಾಗಿದೆ ಎಂದು ತಜ್ಞರು ಗುರುತಿಸಿದ್ದಾರೆ. ಮುಂಭಾಗದಿಂದ ಕೊರೆಯುತ್ತಾ ಹೊರಟರೆ ಇಂತಹ ಸ್ವರೂಪವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರ ಪ್ರಧಾನ ಶಿಲ್ಪಿಯ ಹೆಸರು ಕೋಕಸ. ಈ ದೇಗುಲವನ್ನು ಏಕಶಿಲೆಯಲ್ಲೇ ನಿರ್ಮಿಸಿದ್ದಕ್ಕೆ ಒಂದು ಸ್ಥಳೀಯ ಕಥೆಯಿದೆ.
ಸ್ಥಳೀಯ ರಾಜನು ಅನಾರೋಗ್ಯ ಪೀಡಿತನಾದಾಗ, ಆತ ಗುಣವಾದರೆ ದೇಗುಲ ಕಟ್ಟಿಸುವುದಾಗಿ ರಾಣಿಯು ಹರಕೆ ಹೊರುತ್ತಾಳೆ. ರಾಜ ಗುಣಮುಖನಾಗುತ್ತಾನೆ. ಆಗ ರಾಣಿಯು ದೇಗುಲ ನಿರ್ಮಾಣವಾಗುವ ತನಕ ಉಪವಾಸ ವೃತ ಕೈಗೊಳ್ಳುತ್ತಾರೆ. ದೇಗುಲದ ಶಿಖರವನ್ನು ನೋಡಿದ ನಂತರವೇ ತಾನು ಉಪವಾಸ ವೃತ ನಿಲ್ಲಿಸುವುದಾಗಿ ಹೇಳುತ್ತಾಳೆ.
ಸಾಂಪ್ರದಾಯಿಕ ಶೈಲಿಯಲ್ಲಿ ದೇಗುಲ ನಿರ್ಮಿಸಿ, ಶಿಖರವನ್ನು ಒಡಮೂಡಿಸಲು ವರ್ಷಗಟ್ಟಲೆ ಸಮಯ ಅಗತ್ಯ. ಆದ್ದರಿಂದ, ಕೋಕಸ ಎಂಬ ಶಿಲ್ಪಿಯು ಮೊದಲು ಶಿಖರವನ್ನು ನಿರ್ಮಿಸಿ, ನಂತರ, ಅದೇ ಶಿಲೆಯಲ್ಲಿ ದೇಗುಲವನ್ನು ಕೊರೆಯುತ್ತಾ ಹೋಗುತ್ತಾನೆಂಬ ಕಥೆಯಿದೆ. ಮೊದಲಿಗೆ ಒಡಮೂಡಿದ ಶಿಖರವನ್ನು ಕಂಡ ನಂತರ, ರಾಣಿಯು ತನ್ನ ಉಪವಾಸ ವೃತಕ್ಕೆ ಕೊನೆ ಹಾಡುತ್ತಾಳೆ. ಕೋಕಸ ಮತ್ತು ಆತನ ವಂಶಸ್ಥರು ಮಧ್ಯಭಾರತದ ಹಲವು ದೇಗುಲಗಳ ಸ್ಥಪತಿಗಳಾಗಿದ್ದರು ಎಂಬುದಕ್ಕೆ ಶಾಸನಾಧಾರವಿದೆ.
ಎಲ್ಲೋರಾದ ಕೈಲಾಸ ದೇಗುಲದ ವಾಸ್ತು ಶೈಲಿಯ ಮೇಲೆ ದಕ್ಷಿಣ ಭಾರತದ ಎರಡು ದೇಗುಲ ಗಳ ಪ್ರಭಾವವಿದೆ ಎಂದು ತಜ್ಞರು ಗುರುತಿಸಿದ್ದಾರೆ. ಪಟ್ಟದಕಲ್ಲಿನ ವಿರೂಪಾಕ್ಷ ದೇಗುಲ ಮತ್ತು ಕಾಂಚಿಯ ಕೈಲಾಸ ದೇಗುಲದ ವಾಸ್ತುವಿನ ಕೆಲವು ಅಂಶಗಳು ಎಲ್ಲೋರಾದ ಕೈಲಾಸ ದೇಗುಲ ದಲ್ಲಿ ಕಾಣಬಹುದು. ಈ ದೇಗುಲದಲ್ಲಿ ಶೈವ ಮತ್ತು ವೈಷ್ಣವ ಸಂಗವನ್ನೂ ಕಾಣಬಹುದು.
ಪ್ರವೇಶ ದ್ವಾರದ ಎಡಭಾಗದಲ್ಲಿ ಶೈವ ದೇವತೆಗಳ ವಿಗ್ರಹಗಳಿದ್ದರೆ, ಬಲ ಭಾಗದಲ್ಲಿ ವೈಷ್ಣವ ದೇವತೆಗಳ ಮೂರ್ತಿಗಳಿವೆ. 280 ಅಡಿ ಉದ್ದ, 106 ಅಡಿ ಅಗಲದ ಅಂಗಣದಲ್ಲಿರುವ ಈ ದೇಗುಲದ ಮುಂಭಾಗದಲ್ಲಿ ಎರಡು ಆನೆಗಳು ನಿಂತಿವೆ. ಇಡೀ ದೇಗುಲವನ್ನು ಆನೆಗಳು ಹೊತ್ತು ನಿಂತಿರುವ ವಿನ್ಯಾಸದಲ್ಲಿ ಕೆತ್ತಲಾಗಿದ್ದು, ಹಲವು ಶಿಲಾ ನಿರ್ಮಿತಿಗಳು ಭಗ್ನಗೊಂಡಿರುವು ದನ್ನೂ ಕಾಣಬಹುದು. 18ನೆಯ ಶತಮಾನದಲ್ಲಿ ರಾಣಿ ಅಹಲ್ಯಾಬಾಯಿ ಹೋಲ್ಕರ್, ಇಲ್ಲಿ ಶಿವಲಿಂಗವನ್ನು ಪುನಃಪ್ರತಿಷ್ಠಾಪಿಸಿ, ಪೂಜೆಗೆ ಅನುವು ಮಾಡಿಕೊಟ್ಟಳು.
10,000 ವರ್ಷಗಳ ಹಿಂದೆ!
ಮಧ್ಯಪ್ರದೇಶದಲ್ಲಿರುವ ಭೀಮಬೆಟ್ಟ ಅಥವಾ ಭೀಮ್ ಬೆಟ್ಕಾದಲ್ಲಿ ಸುಮಾರು 750 ಗುಹೆಗಳಿದ್ದು, ಅಲ್ಲಿರುವ ಸಾವಿರಾರು ಚಿತ್ರಗಳ ಪೈಕಿ ಒಂದು ಚಿತ್ರವು ತ್ರಿಶೂಲವನ್ನು ಹಿಡಿದ ಶಿವನನ್ನು ಹೋಲುತ್ತದೆ. ವಿಶೇಷವೆಂದರೆ, ಈ ಗುಹೆಗಳಲ್ಲಿ ಶಿಲಾಯುಗದ ಕಾಲದಲ್ಲಿ ಪುರಾತನ ಮಾನವರು ವಾಸಿಸುತ್ತಿದ್ದು, ಸುಮಾರು 10,000 ವರ್ಷಗಳ ಹಿಂದೆ ಅಲ್ಲಿ ನೂರಾರು ಚಿತ್ರಗಳನ್ನು ಬರೆದಿಟ್ಟಿದ್ದರು.
ಈ ಗುಹೆಗಳನ್ನು ವ್ಯಾಪಕವಾಗಿ ಸಂಶೋಧಿಸಿ, ಹೊರಜಗತ್ತಿಗೆ ಪರಿಚಯಿಸಿದ ವಿ.ಎಸ್.ವಾಕಣ್‌ಕರ್ ಅವರು, ಇಲ್ಲಿಕಂಡು ಬಂದ
ತ್ರಿಶೂಲದಂತಹ ಆಯುಧವನ್ನು ಹಿಡಿದ ವ್ಯಕ್ತಿಯ ಚಿತ್ರವನ್ನು ‘ನಟರಾಜ’ ಎಂದುಕರೆದಿದ್ದಾರೆ.
ಪಂಚಮುಖ ಶಿವ
ಐದು ಮುಖಗಳನ್ನು ಹೊಂದಿರುವ ಶಿವನನ್ನು ‘ನಮಃ ಶಿವಾಯ’ ಎಂದು ಐದು ಅಕ್ಷರಗಳಿಂದ(ಪಂಚಾಕ್ಷರಿ) ಜಪಿಸುವ ಪದ್ಧತಿ ನಮ್ಮ ನಾಡಿನಲ್ಲಿದೆ. ಶಿವನ ಐದು ಮುಖಗಳನ್ನು ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂದು ಕರೆಯಲಾಗಿದ್ದು, ಕೆಲವು ಶಿಲ್ಪಗಳಲ್ಲಿ ಶಿವನ ಐದೂ ಮುಖಗಳು ಕಾಣಿಸುವಂತೆ ಕಂಡರಿಸುವ ಪದ್ಧತಿಯಿದೆ. ಕಾಂಬೋಡಿಯಾದಲ್ಲಿ(10ನೆಯ ಶತಮಾನ)ಕಂಡು ಬಂದ ಶಿವನ ಈ ಶಿಲ್ಪದಲ್ಲಿ ಐದು ಮುಖಗಳನ್ನು ಸುಂದರವಾಗಿ ಕೆತ್ತಲಾಗಿದೆ!
ನಟರಾಜ
ಅಧ್ಯಾತ್ಮ ಮತ್ತುಕಲೆಯ ನಡುವಿನ ದೈವಿಕ ಸಂಬಂಧವನ್ನು ಬಿಂಬಿಸುವ ‘ನಟರಾಜ’ನ ತಾಂಡವ ನೃತ್ಯವು ಅಭೂತಪೂರ್ವ, ಅಮೋಘ. ಆರನೆಯ ಶತಮಾನದ ಬಾದಾಮಿ ಗುಹೆ, ನಂತರದ ಎಲ್ಲೋರಾ ಗುಹೆಗಳಲ್ಲಿ ಶಿಲಾರೂಪದಲ್ಲಿ ಕಂಡುಬಂದ ನಟರಾಜನ ಚಿತ್ರಣವು, ಹತ್ತನೆಯ ಶತಮಾನದಲ್ಲಿ ಚೋಳರಕಾಲದಲ್ಲಿಕಂಚಿನ ಪ್ರತಿಮೆಗಳಲ್ಲಿಕಾಣಿಸಿ, ಎಲ್ಲರ ಗಮನ ಸೆಳೆಯಿತು. ತಾಂಡವ ನೃತ್ಯ ಮಾಡುವ ಶಿವನ ಎಡಗೈಯಲ್ಲಿ ಅಗ್ನಿಯನ್ನು ಹಿಡಿದು, ಬಲಗೈಯನ್ನು ಅಭಯ ಹಸ್ತವಾಗಿರಿಸುತ್ತಾನೆ.
ಇನ್ನೊಂದು ಕೈಯಲ್ಲಿ ಡಮರು ಹಿಡಿದು, ನಾಲ್ಕನೆಯಕೈಯು ದಂಡಹಸ್ತ ಮುದ್ರೆ ಯಲ್ಲಿರುತ್ತದೆ. ನಟರಾಜನನ್ನು ಬೆಂಕಿಯ ಜ್ವಾಲೆಗಳು ಸುತ್ತುವರಿದಿರುತ್ತವೆ. ಎಡಗಾಲನ್ನು ಎತ್ತಿರುವಾಗಲೇ, ಬಲಗಾಲನ್ನುಕುಬ್ಜ(ಅಪಸ್ಮಾರ ಪುರುಷ)ನ ಮೇಲೆ ಒತ್ತಿ, ನೃತ್ಯಭಂಗಿಯಲ್ಲಿ ನಿಂತಿರುತ್ತಾನೆ. ನಟರಾಜನ ತಾಂಡವ ನೃತ್ಯವನ್ನು ಸೃಷ್ಟಿ ಸ್ಥಿತಿ ಲಯಕ್ಕೆ ಹೋಲಿಸಿ, ಕಾಸ್ಮಿಕ್ ನೃತ್ಯವೆಂದೂ ಕರೆದು, ನಾನಾ ರೀತಿ ವಿಶ್ಲೇಷಿಸ ಲಾಗಿದೆ. ನಟರಾಜನ ನೃತ್ಯವನ್ನು ತೋರಿಸುವ ಹಲವು ಐತಿಹಾಸಿಕ ಕಂಚಿನ ವಿಗ್ರಹಗಳು ವಿಶ್ವವಿಖ್ಯಾತ.
ರುಂಡಮಾಲ ಶಿವ
ಶಿವನ ಅಲಂಕಾರಗಳು ವಿಭಿನ್ನ, ವಿಶಿಷ್ಟ, ಅನನ್ಯ. ಕೊರಳಿನಲ್ಲಿ ನಾಗರಹಾವನ್ನು ಸುತ್ತಿಕೊಂಡಿರುವ ಶಿವನು, ಅಲಂಕಾರದ ರೂಪದಲ್ಲಿ ಧರಿಸುವುದು ‘ರುಂಡ ಮಾಲೆ’! ಸದಾ ನೀರನ್ನು ಚಿಮ್ಮಿಸುವ ಗಂಗೆಯನ್ನು ತಲೆಯಲ್ಲಿರುವ ಜಟೆಯಲ್ಲಿ ಧಿರಿಸುವ ಶಿವನು, ಚಂದ್ರನನ್ನು ಸಹ ತಲೆಯಲ್ಲೇ ಹಿಡಿದಿಟ್ಟಿದ್ದಾನೆ. ಶಿವನ ಹಣೆಯಲ್ಲಿರುವಕಣ್ಣು ಬೆಂಕಿಯನ್ನೇ ಕಾರುತ್ತದೆ! ಸ್ಮಶಾನದಲ್ಲಿ ವಾಸಿಸುವ ಶಿವನು ಬೂದಿಯನ್ನು ಮೈತುಂಬಾ ಬಳಿದುಕೊಂಡಿರುವ ನೀಲಕಂಠ.