Thursday, 12th December 2024

ಪ್ರೀತಿಯಲ್ಲಿ ಗೆಲ್ಲುವುದು ಹೇಗೆ ?

ರಾಜು.ಕೆ

ಹಳ್ಳಿ ಹುಡುಗನಾದ ನನಗೆ ನಿಜವಾಗಿಯೂ ಈ ವ್ಯಾಲೆಂಟೈನ್ಸ್ ಡೇ ಎಂದರೇನು ಗೊತ್ತಿರಲಿಲ್ಲ. ಫ್ರೆಂಡ್ಸ್ ಕರೆದರು ಎಂದು ಆ ದಿನ ಪಾರ್ಕ್‌ನಲ್ಲಿ ಸುತ್ತಾಡಲು ಹೋದೆವು. ಅಲ್ಲಿ ಕಂಡ ದೃಶ್ಯಗಳು ಮನಸ್ಸಿನಲ್ಲಿ ಮೂಡಿಸಿದ ಭಾವನೆಗಳು ಹಲವು.

ಮೊದಲ ಬಾರಿ ನಮ್ಮ ಊರನ್ನು ಬಿಟ್ಟು ಹೊಸ ಊರಿನಲ್ಲಿ ಓದುವ ಅವಕಾಶ. ಹೊಸ ಕಾಲೇಜು, ಹೊಸ ಗೆಳೆಯರು. ಸ್ವಲ್ಪ ಖುಷಿಯ ಜೊತೆಗೆ ಭಯವೂ ಆಗುತ್ತಿತ್ತು. ಏಕೆಂದರೆ ದೂರದ ಊರಿಂದ ಬಂದಿರುವ ಪಕ್ಕಾ ಹಳ್ಳಿ ಹುಡುಗ ನಾನು. ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತ ತಲೆಯಲ್ಲಿ ನೂರಾರು ಯೋಚನೆಗಳು ಬರತೊಡಗಿದವು.

ಹೇಗೋ ಏನೋ ಒಂದೇ ದಿನದಲ್ಲಿ ಒಳ್ಳೆ ಫ್ರೆಂಡ್ಸ್‌ ಸಿಕ್ರು. ನನ್ನ ಅದೃಷ್ಟ ಅಂದುಕೊಂಡು ಆ ದಿನ ಕಳೆಯಿತು. ಹೀಗೇ ದಿನ ಕಳೆಯಿತು. ಫೆಬ್ರವರಿ ಬಂತು. ನನ್ನ ಫ್ರೆಂಡ್ ಹೇಳಿದ ‘ನಾಳೆ ರವಿವಾರ ಲವರ್ಸ್ ಡೇ’ ಎಂದು. ‘ನಾಳೆ ಪಾರ್ಕಿಗೆ ಹೋಗೋಣವೆ?’ ಎಂದ. ಅದಕ್ಕೆ ಎಲ್ಲರೂ ಒಟ್ಟಿಗೆ ಹೋಗುವುದು ಎಂದು ತೀರ್ಮಾನ ಮಾಡಿಕೊಂಡೆವು.

ನನಗಾದರೋ ಲವರ್ಸ್ ಡೇ ಎಂದರೇನು, ವ್ಯಾಲೆಂಟೈನ್ ಡೇ ಎಂದರೇನು ಯಾವುದೂ ಗೊತ್ತಿರಲಿಲ್ಲ. ರವಿವಾರ ಮುಂಜಾನೆ ಪಾರ್ಕಿಗೆ ಸ್ನೇಹಿತರೆಲ್ಲ ಹೊರಟೆವು. ನಮಗೆ ಯುವಕ ಯುವತಿ ಜೋಡಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದರು. ನಾವು ಮೊದಲೇ ಹಳ್ಳಿಯಿಂದ ಬಂದವರು, ಇಂಥ ಪಾರ್ಕ್ ನಲ್ಲಿ ಪ್ರೇಮಿಗಳು ಇಷ್ಟೊಂದು ಇರ್ತಾರೆ ಅಂತ ಗೊತ್ತೇ ಇರಲಿಲ್ಲ. ನಂತರ ನನ್ನ
ಫ್ರೆಂಡ್ಸ್‌‌ಗಳೆಲ್ಲ ಇವರ ತೆವಲಿಗೆ ಈ ಸಾರ್ವಜನಿಕ ತಾಣವೆ ಬೇಕೆ ಎಂದು ಅಣುಕಿಸುತ್ತೆದ್ದೆವು.

ಓಡಿಹೋಗಲು ಸಿದ್ಧಳಾದ ಹುಡುಗಿ

ಒಂದು ಅಶೋಕ ಮರದ ಕೆಳಗೆ ಜೋಡಿ ಕುಳಿತು ಮಾತನಾಡುತ್ತಾ, ‘ನಮ್ಮಿಬ್ಬರ ಪ್ರೀತಿನ ಮನೆಯಲ್ಲಿ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ? ಆದ ಕಾರಣ ನಾವಿಬ್ಬರೂ ಓಡಿ ಹೋಗೋಣವೆ?’ ಎಂದು ಮಾತನಾಡುವುದನ್ನು ಕೇಳಿಸಿಕೊಂಡೆವು. ಮತ್ತು ಇನ್ನೊಂದು ಮರದ ಕೆಳಗೆ ಇನ್ನೊಂದು ಜೋಡಿ ‘ನಾನು ಮೇಲು ನೀನಲ್ಲ ಮೇಲು’ ಎಂದು ಜಗಳ ಮಾಡುತ್ತಿದ್ದರು. ಇನ್ನೂ ಸ್ವಲ್ಪ ದೂರದಲ್ಲಿ ಒಂದು ಜೋಡಿ ಹುಡುಗಿಯು, ‘ಬರ್ತಡೇ ದಿನ ವಿಶ್ ಮಾಡಿಲ್ಲ, ಆ ದಿನ ನನಗೆ ಯಾವುದೇ ಉಡುಗೊರೆಯನ್ನು ನೀ ಕೊಟ್ಟಿಲ್ಲ.

ನಿನ್ನ ಉಡುಗೊರೆಗಾಗಿ ಕಾಯುತ್ತಾ ಕುಳಿತಿದ್ದೆ. ನೀ ಬರಲೇ ಇಲ್ಲ. ಅದಕ್ಕೆ ನಾ ನಿನ್ನ ಪ್ರೀತಿ ಮಾಡಲ್ಲ’ ಎಂದು ಆ ಹುಡುಗನನ್ನು ದೂರ ತಳ್ಳುತ್ತಿದ್ದಳು. ಇಷ್ಟೆಲ್ಲಾ ನೋಡಿದ ನಂತರ ನನ್ನ ಮನಸ್ಸು ಯೋಚನೆ ಮಾಡತೊಡಗಿತು. ನಿಜವಾದ ಪ್ರೀತಿ ಎಂದರೇನು? ನಮ್ಮ ಹಳ್ಳಿಯಲ್ಲಿ ಅಂತಹ ಪ್ರಶ್ನೆಯೇ ಎದುರಾಗಿರಲಿಲ್ಲ. ಇಲ್ಲಿ ನೋಡಿದರೆ, ನಗರದಲ್ಲಿ, ಕಾಲೇಜು ಮೆಟ್ಟಿಲು ತುಳಿಯುವ ಯುವಜನರಲ್ಲಿ ಈ ರೀತಿಯ ಜಗಳ, ಒತ್ತಡ, ವಾಗ್ವಾದ ಹುಟ್ಟುಹಾಕುತ್ತಿರುವ ಪ್ರೀತಿ ಎಂದರೇನು? ಪಟ್ಟಣದ ಹುಡುಗರ ಕೈಗೆ ಸಿಗದ ಮರೀಚಿಕೆಯೇ ಈ ಪ್ರೀತಿ? ನಮ್ಮ ಹಳ್ಳಿಯ ಹುಡುಗರಿಗೆ ಇಂತಹ ಒಂದು ಪ್ರಶ್ನೆ ಹುಟ್ಟುವುದೇ ಇಲ್ಲವಲ್ಲ!

ಗಿಫ್ಟ್‌ ಅಷ್ಟು ಮುಖ್ಯವೆ?
ಈಗಿನ ಪಟ್ಟಣದ ಹುಡುಗರಿಗೆ ಪ್ರೀತಿ ಪ್ರೇಮದ ಬಗ್ಗೆ ಗೌರವದ ಭಾವನೆ ಹೊರಟುಹೋಗಿದೆ ಎನಿಸತೊಡಗಿತು. ಏಕೆಂದರೆ ನಿಜವಾದ ಪ್ರೀತಿ ಯಾವಾಗಲೂ ಪರಸ್ಪರರ ನಂಬಿಕೆ ಮತ್ತು ತಾಳ್ಮೆಯನ್ನು ಆಧರಿಸಿದೆ. ಸಂಭಾಷಣೆ ಆಗಾಗ್ಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇಂದು ಕೆಲವು ಪ್ರೇಮಿಗಳು ‘ಗಿಫ್ಟ್ ಕೊಟ್ಟಿಲ್ಲ’ ಎಂದು ಜಗಳಾಡುವುದಾದರೂ ಏಕೆ? ಪ್ರೀತಿಯನ್ನು ಇನ್ನೊಬ್ಬರಿಗೆ ತಿಳಿಸಲು ಬೆಲೆ ಬಾಳುವ ಗಿಫ್ಡ್ ಕೊಟ್ಟಾಗ ಮಾತ್ರ ಅದಕ್ಕೆ ಬೆಲೆಯೆ? ಮನಸ್ಸಿನಲ್ಲಿ ಮೂಡುವ ಪ್ರಾಮಾಣಿಕ ಪ್ರೀತಿ ಮಾತ್ರ ಸಾಲದೆ? ಅದಕ್ಕೆ ಗಿಫ್ಟ್‌ ಎಂಬ ಬಣ್ಣದ ಚೌಕಟ್ಟು ಅಷ್ಟು ಅಗತ್ಯವೆ? ಇಲ್ಲವಾದರೆ, ಹುಡುಗಿಯೊಬ್ಬಳು ವ್ಯಾಲಂಟೈನ್ ಡೇ ದಿನ, ಗಿಫ್ಟ್‌ ತಂದು ಕೊಡದ ಹುಡುಗನನ್ನು ದೂರಕ್ಕೆ ತಳ್ಳುವುದಾದರೂ ಏಕೆ? ಕೇವಲ ದೈಹಿಕ ಆಕರ್ಷಣೆ ಯಿಂದ, ಕಣ್ಣಿನ ನೋಟದ ಸೆಳೆತದಿಂದ ಪ್ರೀತಿ ಎಂದುಕೊಂಡು ಪಾರ್ಕು, ಸಿನೆಮಾ, ಹೊಟೇಲ್, ಕ್ಲಬ್ಬುಗಳನ್ನು ಸುತ್ತಿ ತಮ್ಮ ಇಂದ್ರಿಯಗಳನ್ನು ಸಂತೋಷ ಪಡಿಸಿಕೊಂಡರೆ ಅದನ್ನು ಪ್ರೇಮ ಎನ್ನಬೇಕೆ? ಎಂಬ ಪ್ರಶ್ನೆ ಮೂಡಿತು.

ಇಂದಿನ ಯುವಕ ಯುವತಿಯರ ಪ್ರೀತಿ ಪ್ರೇಮಗಳು ಹೆಚ್ಚು ಶುರುವಾಗುವುದೇ ಮೇಲೆ ಹೇಳಿದ ಆಕರ್ಷಣೆಗಳಿಂದ. ಪ್ರೀತಿ ಎಂಬುದು ಸುಲಭವಾಗಿ ಹೇಳಲಾಗದ ಭಾವ. ಅದು ಮನಸ್ಸಿನಲ್ಲಿ ಹುಟ್ಟುವ ಅನುರಾಗ, ಮನಸ್ಸಿನಿಂದ ಮನಸ್ಸಿಗೆ ಸಾಗುವ ಅಂತರಗಂಗೆ. ಪ್ರೀತಿಯು ಮನುಷ್ಯರ ನಡುವಿನ ಮಧುರವಾದ, ನಿಜವಾದ ಬಾಂಧವ್ಯವನ್ನು ಸೂಚಿಸುತ್ತದೆ. ಆದರೆ ನಾ ಕಂಡಂತೆ, ನಮ್ಮಲ್ಲಿ ಅನೇಕರಿಗೆ ಪ್ರೀತಿ ಮತ್ತು ಪ್ರೀತಿಯಲ್ಲಿರುವುದು ಏನು ಎಂದು ನಿಜವಾಗಿಯೂ ಅರ್ಥವಾಗುವುದಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ.

ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಪ್ರೀತಿಸಿದವರಿಗೆ ಕಷ್ಟ ಬಂದಾಗ ಹೆಗಲಾಗಿ
ನಿಲ್ಲುವ ಆಶಯ ಇರಬೇಕು ಎನ್ನುತ್ತಾರೆ ನಮ್ಮ ಅಜ್ಜ ಅಜ್ಜಿ. ‘ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ?’ ಅಂತ ಕೇಳುವುದು ಪ್ರೀತಿಯಾಗದು. ‘ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುತ್ತೇನೆ’ ಎನ್ನುವುದು ದೊಡ್ಡ ಪ್ರೇಮ.

ನಿಜವಾದ ಪ್ರೀತಿಯಲ್ಲಿ ಹೊಟ್ಟೆಕಿಚ್ಚು ಇರಲಾರದು. ನಿಜವಾದ ಪ್ರೀತಿಯ ಸೌಧವನ್ನು ಗಿಫ್ಟ್‌ ಗಳ ತಳಪಾಯದಿಂದ ಕಟ್ಟಲು ಸಾಧ್ಯವಿಲ್ಲ. ದುಬಾರಿ ಗಿಫ್ಟ್‌ ಬಳಸಿ ಬೆಳೆದ ಪ್ರೀತಿಯು, ಬಿರುಗಾಳಿ ಬೀಸಿದಾಗ ಕುಸಿದು ಬೀಳುವ ಗಾಳಿಗೋಪುರಗಾಗುವುದಿಲ್ಲವೆ? ನಾನು ಪ್ರೀತಿಸಿದವರು ಚೆನ್ನಾಗಿದ್ದರೆ ಸಾಕು, ಅದೇ ನನ್ನ ಸರ್ವಸ್ವ ಎನ್ನುವ ಭಾವನೆ ಹೊಂದಿರಬೇಕು. ಆ ದಿನ ಪಾರ್ಕ್‌ನಲ್ಲಿ ಸುತ್ತಾಡಿದಾಗ ನನಗೆ ಅನಿಸಿದ್ದೇ ಇದು.

‘ನಿಜವಾದ ಪ್ರೀತಿ ನಿಮಗೆ ಮುಂದೊಂದು ದಿನ ಸಿಕ್ಕರೆ ನೀವೇ ಅದೃಷ್ಟಶಾಲಿ ಮತ್ತು ಪ್ರೀತಿನಾ ಪ್ರೀತಿಯಿಂದ ಗೆಲ್ಲಿ, ಸ್ನೇಹವನ್ನು
ಸ್ನೇಹದಿಂದ ಉಳಿಸಿಕೊಳ್ಳಿ.’ಎಂದು ನನ್ನ ಗೆಳೆಯರಿಗೆ ಹೇಳಿ ನಾನು ಮನೆಯತ್ತ ನಡೆದೆ.