Thursday, 12th December 2024

ಹೃಷಿಕೇಷ್’ನಲ್ಲಿ ರ‍್ಯಾಫ್ಟಿಂಗ್

ರೋಹಿತ್ ದೋಳ್ಪಾಡಿ

ಕಳೆದ ಫೆಬ್ರವರಿ ತಿಂಗಳಲ್ಲಿ ಉತ್ತರಭಾರತ ಪ್ರವಾಸ ಕೈಗೊಂಡು ಉತ್ತರಾಖಂಡ್ ರಾಜ್ಯದ ಹೃಷಿಕೇಶ್ ಗೆ ಹೋಗಿದ್ದೆವು. ಮೂಲತಃ ಹೃಷಿಕೇಶವು ಧಾರ್ಮಿಕ ಸ್ಥಳ. ಪವಿತ್ರ ಗಂಗಾ ನದಿವು ಹೃಷಿಕೇಶದ ಮೂಲಕ ಹರಿಯುತ್ತದೆ. ಇಲ್ಲಿ ಅನೇಕ ಮಂದಿರಗಳು, ಆಶ್ರಮ ಗಳು ಇವೆ. ಸಂಜೆ ಗಂಗಾರತಿ ನಡೆಯುವುದು ಇಲ್ಲಿನ ವಿಶೇಷ. ಗಂಗಾ ನದಿಯನ್ನೂ ದಾಟಲು ರಾಮ ಝೂಲಾ,ಲಕ್ಷ್ಮಣ ಝೂಲಾ ಎಂಬ ತೂಗು ಸೇತುವೆಗಳಿವೆ.

ಇಲ್ಲಿನ ಗಂಗಾ ನದಿಯಲ್ಲಿ ‘ರಿವರ್ ರ್ಯಾಫ್ಟಿಂಗ್’ಮಾಡಬಹುದು. ಅನೇಕರು ರಾಫ್ಟಿಂಗ್ ಮಾಡಲೆಂದೇ ಹೃಷಿಕೇಷಕ್ಕೆ ಬರುತ್ತಾರೆ. ಹಲವು ಖಾಸಗಿ ರ್ಯಾಫ್ಟಿಂಗ್ ನಡೆಸುವ ಸಂಸ್ಥೆಗಳು ವಿವಿಧ ಕಾಠಿಣ್ಯ ಮಟ್ಟದ ರ್ಯಾಫ್ಟಿಂಗ್ ನಡೆಸುವುದರ ಜತೆ, ಅನುಭವಿ ಮಾರ್ಗದರ್ಶಿಗಳನ್ನು ಜತೆಯಲ್ಲಿ ಕಳಿಸುತ್ತಾರೆ. ಸಾಮಾನ್ಯ ಪ್ರವಾಸಿಗರಿಗೆ 13 ಕಿಮೀ ರ್ಯಾಫ್ಟಿಂಗ್ ಸುಲಭ. ರ್ಯಾಫ್ಟಿಂಗ್ ಆರಂಭ ವಾಗುವ ಸ್ಥಳಕ್ಕೆ ಹೋಗಿ ಅಲ್ಲಿಂದ 13 ಕಿ.ಮೀ ರಾಫ್ಟಿಂಗ್ ಮಾಡುತ್ತಾ ರಿಷಿಕೇಶದ ಗಂಗಾರತಿ ನಡೆಯುವ ಸ್ಥಳಕ್ಕೆ ಬರಬಹುದು.

ಗಾಳಿ ತುಂಬಿದ ಉದ್ದನೆಯ ಟ್ಯೂಪ್ ರೀತಿಯ ರ್ಯಾಫ್ಟಿಂಗ್ ಉಪಕರಣದಲ್ಲಿ 5 ರಿಂದ 6 ಜನ ಕುಳಿತುಕೊಳ್ಳಬಹುದು. ಎತೆಯಲ್ಲಿ ಒಬ್ಬ ಮಾರ್ಗದರ್ಶಕ ಇರುತ್ತಾರೆ. ರಭಸವಾಗಿ ಹರಿಯುವ ನೀರು ಹಾಗೂ ಸುತ್ತಲ ಕಾನನಗಳನ್ನು ನೋಡುತ್ತಾ, ಗಂಗಾ ನದಿಯಲ್ಲಿ ತೇಲುತ್ತಾ ಹೋಗುವ ಅನುಭವವೇ ಬಹು ಅಪರೂಪದದು. ಎಡಕ್ಕೆ, ಬಲಕ್ಕೆ ಅಲ್ಲಾಡುತ್ತಾ ಮೇಲೆ, ಕೆಳಗೆ ಹಾರುತ್ತಾ, ಕಲ್ಲು ಬಂಡೆ ಗಳಿಗೆ ಢಿಕ್ಕಿ ಹೊಡೆಯುತ್ತಾ ಸಾಗುವ ರ್ಯಾಫ್ಟಿಂಗ್ ದೋಣಿಯಲ್ಲಿ ಪಯಣವೆಂದರೆ, ಒಮ್ಮೊಮ್ಮೆ ತುಸು ಭಯ, ಎದೆ ಝಲ್ ಎನ್ನ ಬಹುದು.

ಆದರೆ, ಜತೆಯಲ್ಲಿರುವ ಮಾರ್ಗದರ್ಶಿ ಅನುಭವಿ ಆಗಿರುವುದರಿಂದ, ಅಪಾಯವಿಲ್ಲ. ನೀರಿನಲ್ಲಿ ನೆನೆಯುವುದು, ಒಮ್ಮೊಮ್ಮೆ ನೀರಿಗಿಳಿಯುವುದು, ನಮ್ಮ ಜತೆಯಲ್ಲೇ ಸಾಗಿಬರುವ ಮತ್ತೊಂದು ರ್ಯಾಫ್ಟಿಂಗ್ ದೋಣಿಗೆ ಢಿಕ್ಕಿ ಹೊಡೆಯುತ್ತಾ ಮುಂದೆ ಸಾಗುವು ಎಲ್ಲವೂ ಮೈನವಿರೇಳಿಸುವ ಅನುಭವ. ಅದಲ್ಲದೆ ರಾಫ್ಟಿಂಗ್ ಮಾಡುವಾಗ ನಡುವೆ ನದಿಗೆ ಇಳಿಯಲು ಅವಕಾಶ ಇದೆ. ನೀರಿನಲ್ಲಿ ಆಟ ಆಡಬಹುದು.

ಗಂಗಾನದಿಯ ನೀರಿನಲ್ಲಿ, ರಭಸದ ಹರಿವಿನ ಜತೆ ಕುಲುಕುತ್ತಾ ಸಾಗುವ ಆ ಅನುಭವ ರೋಮಾಂಚಕ. ನೀವು ಹೃಷಿಕೇಷಕ್ಕೆ ಹೋದಾಗ, ರ್ಯಾಫ್ಟಿಂಗ್ ಅನುಭವಕ್ಕೆ ಪಕ್ಕಾಗಿ. ಮೂರರಿಂದ ನಾಲ್ಕು ಗಂಟೆಗಳ ಗಂಗಾ ರ್ಯಾಫ್ಟಿಂಗ್, ಜೀವನದ ಒಂದು ಅಪ
ರೂಪದ ಅನುಭವವಾಗಿ, ನಿಮ್ಮ ಮನದಾಳದಲ್ಲಿ ಸೇರಿಹೋಗುವುದಂತೂ ನಿಜ.