Sunday, 10th November 2024

ನೂರು ದೇಗುಲಗಳ ನಾಡು

ಬಸನಗೌಡ ಪಾಟೀಲ

ಇಲ್ಲಿದ್ದವು ನೂರು ದೇಗುಲಗಳು, ನೂರು ಬಾವಿಗಳು. ಆದರೆ ಜನರ ನಿರ್ಲಕ್ಷ್ಯ, ಅಧಿಕಾರಶಾಹಿಯ ಔದಾಸಿನ್ಯದಿಂದಾಗಿ, ಇಲ್ಲಿನ ಶಿಲಾ ದೇಗುಲಗಳು ಅವನತಿಯ ಹಾದಿ ಹಿಡಿದಿವೆ. ಈಗ ಉಳಿದಿರುವವು ಬೆರಳೆಣಿಕೆಯ ದೇಗುಲಗಳು ಮತ್ತು ಬಾವಿಗಳು. ಹೀಗೆಯೇ ಬಿಟ್ಟರೆ ಇವು ಕೂಡ ಕರಗಿ ಹೋದಾವು!

ಕೆಲವು ವರ್ಷಗಳ ಕಾಲ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿ ಗುರುತಿಸಿಕೊಂಡಿದ್ದ ಲಕ್ಕುಂಡಿ ಇಂದು ಸಣ್ಣ ಊರು. ಹಿಂದೆ ಅಧಿಕಾರದ ಕೇಂದ್ರವಾಗಿದ್ದಾಗಲೇ, ಅಧ್ಯಾತ್ಮದ ಕೇಂದ್ರವೂ ಆಗಿತ್ತು ಈ ಊರು. ಎಂದೋ ಅಜ್ಜಿ ಹೇಳಿದ್ದ ಮಾತು ‘ನೂರು ಬಾವಿ ಮತ್ತು ನೂರು ದೇವಾಲಯಗಳು ಆ ಊರಲ್ಲಿವೆ. ಎಂದಾದರೂ ಅಲ್ಲಿ ಹೋದಾಗ ನೋಡಿಕೊಂಡು ಬಾ’.

ನಾನು ಮತ್ತು ಮೂವರು ಜನ ಸ್ನೇಹಿತರು ಆ ಊರಿನ ವಿಶೇಷತೆಯನ್ನು ನೋಡಲು ಹೊರಟೆವು. ಬಸ್ ಹತ್ತಿ ಊರನ್ನೇನೊ ತಲುಪಿದೆವು. ಮೊದಲು ಎದುರಾದ ಸಮಸ್ಯೆ ಎಂದರೆ ನೂರು ದೇವಾಲಯಗಳನ್ನು ಒಂದೇ ದಿನದಲ್ಲಿ ಹೇಗೆ ನೋಡೋದು ಎಂದು. ಅಲ್ಲಿಯೇ ಹೋಗುತ್ತಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿ ಐತಿಹಾಸಿಕ ದೇವಾಲಯಗಳು ಎಲ್ಲಿವೆ ಎಂದು ಕೇಳಿದೆ. ‘ಈ ಕಚ್ಚಾ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ, ಅಲ್ಲಿ ಒಂದು ಗುಡಿ ಇದೆ.

ಅದೇ ಮುಸ್ಕಿನ ಬಾವಿ ಗುಡಿ’ ಎಂದನಾತ. ಆ ಕಚ್ಚಾ ರಸ್ತೆಯಲ್ಲಿಯೇ ಹೆಜ್ಜೆ ಹಾಕಿದೆವು. ಆ ಪುರಾತನ ದೇವಾಲಯಕ್ಕೆ ಹೋಗುವ ಹಾದಿ ಗಲೀಜಾಗಿತ್ತು. ದೇವಾಲಯ ಹತ್ತಿರ ದೇವಾಲಯದ ಬಗ್ಗೆ ತಿಳಿಸುವ ಸೂಚನಾ ಫಲಕವಿಲ್ಲ, ಎಲ್ಲೆಂದರಲ್ಲಿ ಬೆಳೆದ ಆಳೆ ತ್ತರದ ಗಿಡ, ಕಸ. ಸಂಪೂರ್ಣ ಕಲ್ಲಿನಲ್ಲಿಯೇ ರಚನೆಗೊಂಡ ಬಾವಿಯೂ ಹಸಿರು ನೀರಿನಿಂದ ತುಂಬಿ ಹೋಗಿತ್ತು. ಆ ದೇವಾಲಯ ದ ಪ್ರತಿ ಕಂಬ, ಮೂಲೆ ಮೂಲೆಯೂ ನಮ್ಮ ಸಂಸ್ಕೃತಿ ಮತ್ತು ಕಲೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅದು ಮಾಣಿಕೇಶ್ವರ ದೇವಾಲ ಯ ಹಾಗೂ ಮುಸುಕಿನ ಬಾವಿ.

ಮುಂದೆ ನಮ್ಮ ಪಯಣ ಸಾಗಿತು. ಊರಿನವರ ಸಹಾಯದಿಂದ ಕಾಶಿ ವಿಶ್ವನಾಥ ದೇವಾಲಯ ತಲುಪಿದೆವು. ನನ್ನ ಕಣ್ಣನ್ನು ತನ್ನ ಕಲೆಯಿಂದ ಆ ದೇವಾಲಯ ಸೆಳೆದಿತ್ತು. ಸೂರ್ಯ ಕಿರಣಗಳು ಓರೆಯಾಗಿ ಆ ದೇವಾಲಯದ ಮೇಲೆ ಬಿದ್ದು ಎಲೆಯ ಮೇಲಿನ ನೀರಿನ ಹನಿ ಬಿಸಿಲಿಗೆ ಹೊಳೆಯುವಂತೆ ಕಾಣುತ್ತಿತ್ತು. ಕಾಶಿ ವಿಶ್ವನಾಥ ದೇವಾಲಯದ ಎದುರಿಗೆ ಸೂರ್ಯ ದೇವಾಲಯವು ಇದೆ. ಇವೆರಡು ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾಗಿವೆ.

ಧರಿಸಿದ ಬಟ್ಟೆಗೂ ಮೀರಿದ ಪಾಂಡಿತ್ಯ

ಅಲ್ಲಿ ನಮ್ಮ ಕಣ್ಣಿಗೆ ಬಿದ್ದದ್ದು ಕುರುಚಲು ಗಡ್ಡ, ಕೆಂಪಾದ ಕಣ್ಣುಗಳು, ಮಸುಕಾದ ಬಟ್ಟೆ, ಕಂಚಿನ ಕಂಠದ ಒಬ್ಬ ಗೈಡ್. ಹೆಸರು ಅಬ್ದುಲ್ ರಜಾಕ್ ಕಟ್ಟಿಮನಿ. ಅರಳು ಹುರಿದಂತೆ ಪಟ ಪಟ ಮಾತನಾಡುತ್ತಾ ಇತಿಹಾಸದ ಪುಟಗಳನ್ನೆಲ್ಲ ಕ್ಷಣಮಾತ್ರದಲ್ಲಿ ತಿರುವಿ ಹಾಕುತ್ತಾ ಅಲ್ಲಿದ್ದವರಿಗೆ ಅರ್ಥವಾಗುವಂತೆ ತಿಳಿಸುತ್ತಿದ್ದರು. ಆಗಾಗ ‘ಅಂಡರ್‌ಸ್ಟ್ಯಾಂಡ್ ದಿಸ್ ಇಸ್ ಅವರ್ ಗ್ರೇಟ್ ಹಿಸ್ಟರಿ’ ಎಂದು ಇಂಗ್ಲಿಷನಲ್ಲಿಯೂ ವಿವರಿಸುತ್ತಿದ್ದರು. ಅವರನ್ನು ಮಾತನಾಡಿಸಲಾಗಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಎಂ.ಎ. ಪಡೆದು, ಸ್ವಲ್ಪ ಕಾಲ ಶಿಕ್ಷಕನಾಗಿ ಸುಮಾರು ಏಳು ಚಿಕ್ಕ ಪುಸ್ತಕಗಳನ್ನು ಬರೆದಿದ್ದಾಗಿ ತಿಳಿಸಿ ದರು. ಯಾವುದೇ ವ್ಯಕ್ತಿಯನ್ನು ಅವರು ಧರಿಸಿದ ಬಟ್ಟೆಯಿಂದ ಅಳೆಬಾರದೆಂದು ಹಿರಿಯರು ಹೇಳಿದ ಮಾತು ಅಲ್ಲಿ ನನ್ನೆದುರಿಗೆ ಸತ್ಯ ವಾಗಿತ್ತು.

ವೀರಬಲ್ಲಾಳನ ರಾಜಧಾನಿ

ಲಕ್ಕುಂಡಿಯಲ್ಲಿ ನೂರು ಬಾವಿ ಮತ್ತು ನೂರು ದೇವಾಲಯಗಳು ಇದ್ದವು. ಇದೀಗ ಕೇವಲ ಇಪ್ಪತ್ತು ದೇವಾಲಯ ಉಳಿದಿವೆ. ಅದರಲ್ಲಿ ಹನ್ನೊಂದು ದೇವಾಲಯಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಮತ್ತು ಆರು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ಬದಾಮಿ ಚಾಲುಕ್ಯರು ಇಲ್ಲಿ ಅಡಳಿತ ನಡೆಸಿದ್ದರು. ಹೊಯ್ಸಳರ ವೀರಬಲ್ಲಾಳ ಲಕ್ಕುಂಡಿಯನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ ಎಂದು ಬಲ್ಲಾಳನ ಮಗ ಎರಡನೇ ನರಸಿಂಹ ಕೆತ್ತಿಸಿದ ಶಾಸನ ತಿಳಿಸುತ್ತದೆ.

ರಾಮಾಯಣದ ಶಿಲಾಕೆತ್ತನೆ
ಈ ದೇವಾಲಯದಲ್ಲಿ ರಾವಣ ಕೈಲಾಸ ಪರ್ವತ ಎತ್ತಿದ, ರಾವಣ ಆನೆಯೊಂದಿಗೆ ಸೆಣಸಾಡುತ್ತಿದ್ದ ದೃಶ್ಯ, ಶಿವ ತಾಂಡವ ನೃತ್ಯ, ಗಣಪತಿ ಮತ್ತು ಷಣ್ಮುಖರ ವಿಗ್ರಹಳು, ನವರಂಗದ ಚಿತ್ರಣ, ಪಾರ್ವತಿ ಸ್ನಾನ ಮಾಡುತ್ತಿರುವುದು, ಭೀಮನು ಭಗವದತ್ತನ ಆನೆ ಯನ್ನು ಎದುರಿಸುತ್ತಿರುವ ಚಿತ್ರ ಬಾಗಿಲುವಾಡದ ಮೆಟ್ಟಿಲು ಇವೆಲ್ಲವೂ ಇಲ್ಲಿನ ಶಿಲ್ಪವೈಭವವನ್ನು ಬಿಂಬಿಸಿವೆ.

ಕಾಶೀ ವಿಶ್ವನಾಥ ದೇವಾಲಯದ ಎದುರಿಗಿರುವ ಸೂರ್ಯ ದೇವಾಲಯದ ಮೂರ್ತಿಯೂ ಭಗ್ನವಾಗಿದ್ದು ಇದೀಗ ಅದು ಅಲ್ಲಿಲ್ಲ. ಆ ಮೂರ್ತಿಯನ್ನು ನಾವು ಮ್ಯೂಸಿಯಂ ಅಲ್ಲಿ ಕಾಣಬಹುದು. ‘ನೀವು ಮ್ಯೂಸಿಯಂಗೆ ನಡೆಯಿರಿ ನಾನು ಅಲ್ಲಿಗೆ ಬರುವೆ’ ಎಂದು ಅಬ್ದುಲ್ ರಜಾಕ್ ಮತ್ತೊಬ್ಬ ಪ್ರವಾಸಿಗರಿಗೆ ವಿವರಿಸುತ್ತಾ ಮುನ್ನಡೆದರು. ಮುಂದೆ ಎದುರಾದದ್ದು ಜೈನ ಬಸದಿ ಮತ್ತು ಮ್ಯೂಸಿಯಂ. ಮ್ಯೂಸಿಯಂನಲ್ಲಿ ಲಕ್ಕುಂಡಿಯಲ್ಲಿನ ದೇವಾಲಯಗಳಲ್ಲಿನ ಮೂರ್ತಿಗಳ ಅವಶೇಷಗಳನ್ನು ರಕ್ಷಿಸಿಡಲಾಗಿತ್ತು. ಲಕ್ಕುಂಡಿಯ ಸುಮಾರು ಹನ್ನೆರಡು ದೇವಾಲಯಗಳ ಮಾಹಿತಿ ಅಲ್ಲಿನ ಫಲಕದಲ್ಲಿ ಮುದ್ರಿತವಾಗಿತ್ತು.

ಹೇಳಿದ ಮಾತಿನಂತಯೇ ಅಬ್ದುಲ್ ರಜಾಕ್ ನಮ್ಮನ್ನು ಜೈನ ಬಸದಿಯಲ್ಲಿ ಬಂದು ಸೇರಿ ‘ಇದು ಜೈನ ಬಸದಿ, ಮಹಾವೀರನ ಮೂರ್ತಿ, ಪದ್ಮಾವತಿ ದೇವಿ ವಿಗ್ರಹ, ಚತುರ್ಮುಖ ಬ್ರಹ್ಮನ ವಿಗ್ರಹ. ತನ್ನ ಜೀವಿತಾವಧಿಯ ಕೊನೆಯ ಹತ್ತು ವರ್ಷಗಳನ್ನು ಹೊಯ್ಸಳ ರಾಜ ಬಿಟ್ಟಿದೇವ ಖ್ಯಾತಿಯ ವಿಷ್ಣುವರ್ಧನ ಇಲ್ಲಿ ಕಳೆದಿದ್ದ’ ಎಂದು ವಿವರಿಸಿದರು.

‘ಇಲ್ಲಿ ಶೈವ, ವೈಷ್ಣವ ಹಾಗೂ ಜೈನ ಧರ್ಮಗಳ ಮಿಶ್ರ ಸಂಸ್ಕೃತಿ ಇತ್ತು ಎಂದು ಲಕ್ಕುಂಡಿಯಲ್ಲಿ ಸಿಕ್ಕ 22 ಶಾಸನಗಳು ತಿಳಿಸುತ್ತವೆ. ಲಕ್ಕುಂಡಿಯಲ್ಲಿ ಟಂಕಸಾಲೆಯೊಂದು ಇತ್ತು ಇಲ್ಲಿ ಗದ್ಯಾಣ, ಪೊನ್ ಗದ್ಯಾಣ, ಲೊಕ್ಕಿ ಎಂಬ ನಾಣ್ಯಗಳನ್ನು ತಯಾರಿಸುತ್ತಿದ್ದರು’ ಎಂದು ವಿವರಿಸಿದರು. ಲಕ್ಕುಂಡಿಯ ಕಾಶೀ ವಿಶ್ವನಾಥ ದೇವಾಲಯದಲ್ಲಿನ ಶಾಸನ ಹೇಳುವಂತೆ 1184ನೇ ಇಸವಿಯಲ್ಲಿ ಲಕ್ಕುಂಡಿಯನ್ನು 4ನೇ
ಸೋಮೇಶ್ವರ ಆಳುತ್ತಿದ್ದ. ಇಲ್ಲಿನ ದೇಗುಲಗಳಲ್ಲಿ ಪ್ರಮುಖ ಎಂದರೆ ಕಾಶೀ ವಿಶ್ವೇಶ್ವರ, ಹಾಲಗುಂಡಿ ಬಸವಣ್ಣ, ನಾರಾಯಣ ದೇವಾಲಯ, ವೀರಭದ್ರ ದೇವಾಲಯ, ಸೋಮೆಶ್ವರ ದೇವಾಲಯ, ಕುಂಬಾರ ಗೀರಿಶ್ವರ ದೇವಾಲಯ, ನಗರದೇವ, ಮಲ್ಲಿಕಾ ರ್ಜುನ, ವಿರೂಪಾಕ್ಷ, ಮಾಣಿಕೇಶ್ವರ, ನನ್ನೇಕೇಶ್ವವರ ದೇವಾಲಯ, ನೀಲಕಂಠೇಶ್ವರ ದೇವಾಲಯ. ಲಕ್ಕುಂಡಿ ಕೇವಲ ಮೂರಕ್ಷ ರದ ಹೆಸರಿನ ಊರಲ್ಲ ಎಂದು ಅದರ ಅಂತರಾಳಕ್ಕಿಳಿದಾಗ ನನಗೆ ತಿಳಿಯಿತು.

ಶುದ್ದತೆಗೆ ಬೇಕು ಪ್ರಾಮುಖ್ಯತೆ

ಹಲವು ಐತಿಹಾಸಿಕ ಶಿಲಾ ದೇಗುಲಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಲಕ್ಕುಂಡಿ ಪ್ರಸಿದ್ಧಿ ಪಡೆಯು ವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಲಕ್ಕುಂಡಿಯ ಪ್ರವಾಸೋದ್ಯಮಕ್ಷೇತ್ರ ಅಷ್ಟೇನು ಹೇಳಿಕೊಳ್ಳುವ ಹಾಗಿಲ್ಲ. ಪ್ರತಿ ಜನವರಿಯಲ್ಲಿ ಲಕ್ಕುಂಡಿ ಉತ್ಸವ ನಡೆಯುವ ಜಾಗ ಮತ್ತು ಮಂಟಪವು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಮೂರ್ನಾಾಲ್ಕು ದೇವಾಲಯ ಗಳು ಅವನತಿಯತ್ತ ಸಾಗಿವೆ. ಲಕ್ಕುಂಡಿಯ ಮಧ್ಯ ಭಾಗದಲ್ಲಿರುವ ವಿರುಪಾಕ್ಷ ದೇವಾಲಯ ತನ್ನ ಹೊಳಪನ್ನು ಕಳೆದು ಕೊಳ್ಳುವುದರೊಂದಿಗೆ ಸ್ಥಳೀಯರ ಒಳಾಂಗಣ ಆಟಗಳ ಕೇಂದ್ರವಾಗಿದೆ. ಅತ್ತಿಮಬ್ಬೆ ದ್ವಾರದ ಹಿಂದಿರುವ ಮತ್ತೊಂದು ದೇವಾಲಯದ ಹತ್ತಿರ ಕಸ ಚೆಲ್ಲುವುದು, ಎತ್ತುಗಳನ್ನು ಕಟ್ಟುವುದು ನಡೆದಿದೆ.

ದೇವಾಲಯಕ್ಕೆ ಹೊಂದಿಕೊಂಡು ಮನೆಗಳು ನಿರ್ಮಾಣವಾಗುತ್ತಿವೆ. ಅಬ್ದುಲ್ ರಜಾಕ್ ಒಬ್ಬರನ್ನು ಬಿಟ್ಟು ಇನ್ನಾವುದೇ ಗೈಡ್‌ ಗಳು ಣಸಿಗುವುದಿಲ್ಲ. ಹಲವಾರು ದೇವಾಲಯಗಳ ಸುತ್ತ ಮುತ್ತ ಬೆಳೆದ ಕಸ ದೇವಾಲಯಗಳ ಸೌಂದರ್ಯವನ್ನು ಕಸಿದು ಕೊಂಡಿದೆ. ಲಕ್ಕುಂಡಿಗೆ ಒಂದು ಸದೃಢ ಪ್ರವಾಸೋದ್ಯಮ ಕಾರ್ಯಾಲಯ ಬೇಕು. ಇದು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡುವ ಉಡುಗೊರೆಯಾಗಬೇಕು.

ಅಲ್ಲಮ ಪ್ರಭು ನಡೆದ ನೆಲ
ಅಲ್ಲಮ ಪ್ರಭುಗಳು ಮತ್ತು ಅತ್ತಿಮಬ್ಬೆಯಂತಹ ದಿವ್ಯ ಮಹನೀಯರು ನಡೆದಾಡಿದ ಜಾಗ ಲಕ್ಕುಂಡಿ. ಪುರಾಣದಲ್ಲಿ ಏಳೂರಪುರ,
ಕೃತಪುರ ಮಹಾತ್ಮೆಯಲ್ಲಿ ಲಕ್ಷ ಕುಂಡ, ಸುಮಾರು 11ನೇ ಶತಮಾನದ ಶಾಸನಗಳಲ್ಲಿ ಲೊಕ್ಕಿಗುಂಡಿ ಎಂದು ಇದನ್ನು  ಕರೆಯ ಲಾಗಿದೆ. ಲೊಕ್ಕಿ ಎಂದರೆ ಒಂದು ಜಾತಿಯ ಗಿಡ ಮತ್ತು ಗುಂಡಿ ಎಂದರೆ ತಗ್ಗು ಎಂದರ್ಥ.