Sunday, 15th December 2024

ಇವನ ರೀತಿ ನಾ ಪ್ರೀತಿ ಮಾಡಲಾರೆ…

ನಳಿನಿ.ಟಿ.ಭೀಮಪ್ಪ ಧಾರವಾಡ

ಇಷ್ಟ್ಯಾಕೆ ನನ್ನ ಪ್ರೀತಿಸುತ್ತೀಯೋ ಹುಚ್ಚು ಹುಡುಗಾ? ನಿಜವಾಗಿಯೂ ನನಗೆ ಭಯವಾಗುತ್ತದೆ. ಆ ಪ್ರಾಂಜಲ ಪ್ರೀತಿಗೆ ನಾನು ನಿಜವಾಗಿಯೂ ಅರ್ಹಳಾ ಎನ್ನುವ ಒಂದು ಅಳುಕು ಕಾಡುತ್ತದೆ. ನಿನ್ನ ಹುಚ್ಚು ಪ್ರೀತಿಯ ಅಲೆಗೆ ನಾನೆಲ್ಲಿ ದಡ ಸಿಗದ ಹಾಗೆ ಕೊಚ್ಚಿ ಹೋಗುವೆನೋ ಎಂಬ ಆತಂಕ ನನಗೆ.

ಅಲೆಗಳಲ್ಲೂ ಹತ್ತಾರು ಬಣ್ಣಬಣ್ಣದ ಬಲೆಯ ರಚಿಸುವ ಕಲೆಗಾರ ನೀನು. ಆ ಕಲೆಯ ಬಲೆಯಲ್ಲಿ ಸಿಲುಕಿ, ನಿನ್ನ ಹೃದಯದ ನೆಲೆಗಾಗಿ ಪರಿತಪಿಸುವ ಮೀನಂತೆ ನಾನಾಗಿಹೆ. ಅದೆಂತಹ ಸೆಳೆತವೋ ಅದರಲ್ಲಿ! ಸಾವಿರ ಮಾತುಗಳಿಗೆ ಸಮನಾದ ನಿನ್ನ ಒಂದೇ  ಒಂದು ಕಣ್ಣೋಟದ ಮಿಂಚು ತಾಕುತ್ತಿದ್ದಂತೆ ಹೃದಯ ಭೋರ್ಗರೆವ ಕಡಲಾಗುತ್ತದೆ.

ಮೈಯ್ಯೆಲ್ಲ ಪುಳಕದ ಸಂಚು, ಮನದಲ್ಲಿ ಅರಿಯಲಾಗದ ಸಂಚಲನ. ಹಿಡಿದಿಡಲಾಗದೆ ಪದಗಳೇ ಸೋಲುತಿಹುದೇನೋ ಎನ್ನುವ
ಅನುಮಾನ. ನೀ ಕಳಿಸಿಕೊಟ್ಟ ಮುತ್ತಿನ ಹಾರದಲ್ಲಿನ ಪ್ರತಿಯೊಂದು ಮುತ್ತಿಗೂ ಮುತ್ತಿಕ್ಕಿ ಕಳಿಸಿರುವೆ ಎಂದು ಗೊತ್ತು. ಆ ಮುತ್ತುಗಳ ಮಾಲೆಯೇ ನನ್ನೀ ಕೊರಳನ್ನು ಸುತ್ತುವರೆದು ಕಚಗುಳಿ ಇಡುತ್ತಾ ಮತ್ತೇರಿಸುತ್ತಿದೆ ಎಂಬುದನು ಬಲ್ಲೆಯೇನು? ಆಗಸ ದಿಂದ ಹೆಕ್ಕಿ ತಂದಿರುವ ನಕ್ಷತ್ರಗಳನ್ನು ಪೋಣಿಸಿ ಮಾಲೆಯನ್ನಾಗಿ ಮಾಡಿ, ಆ ತುಂಬಿದ ಚಂದಿರನನ್ನೇ ಪದಕವಾಗಿಸಿ, ಅದರೊಳಗೆ ನಿನ್ನ ಬಿಂಬ ಮೂಡಿಸಿ, ನನ್ನೆದೆಯ ಸಿಂಹಾಸನದ ಮೇಲೆ ಸದಾ ನೀನು ವಿರಾಜಮಾನವಾಗಿರಬೇಕೆಂಬ ಹುಚ್ಚು ಬಯಕೆ ನನ್ನದು.

ಹುಣ್ಣಿಮೆಗೆ ಉಕ್ಕುಕ್ಕುವ ಕಡಲಂತೆ ನಿನ್ನ ಪ್ರೇಮಧಾರೆ. ನನ್ನೆಲ್ಲಪ್ರೀತಿಯೂ ಸಹ ನಿನಗೇ ಧಾರೆ. ನನ್ನೊಲವಿನ ಧರೆಗೆ ನೀನೇ
ದೊರೆ. ಸುಡುಬಿಸಿಲಿನಲ್ಲೂ ಒಮ್ಮೊಮ್ಮೆ ತಂಪಾದ ಗಾಳಿಯೊಂದು ಸವರಿಹೋಗುವಂತೆ ನಿನ್ನ ನೆನಪು. ಆವರಿಸಿದಾಗಲೆಲ್ಲಾ
ಸಾವರಿಸಿಕೊಳ್ಳುವುದು ಬಲು ಕಷ್ಟ ನನಗೆ. ಈ ಹೃದಯದಲ್ಲಿ ನೀ ಹಚ್ಚಿದ ಪ್ರೇಮ ಹಣತೆ ಪ್ರಜ್ವಲಿಸುತ್ತಿದೆ ಗೆಳೆಯಾ. ಅದರಲ್ಲಿ ಪ್ರೀತಿಯ ಎಣ್ಣೆ ತುಂಬಿ, ವಿರಹದ ಕುಡಿ ಚಿವುಟಿ ಪ್ರಾಂಜಲವಾಗಿ ಹೊಮ್ಮುವ ಪ್ರೇಮದ ಬೆಳಕಿನಲ್ಲಿ ಸದಾ ನಿನ್ನೊಂದಿಗೆ
ನಲಿಯುತ್ತಾ, ನಿನ್ನೊಲವ ಸವಿಯುವಾಸೆ ಹೆಚ್ಚಾಗುತಿದೆಯೋ ಹುಚ್ಚು ಹುಡುಗಾ!