Sunday, 15th December 2024

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ

ತಿಪಟೂರಿನಲ್ಲಿ 1935, ಮೇ 3 ರಂದು ವೆಂಕಟಲಕ್ಷ್ಮಮ್ಮ, ರಾಮಧ್ಯಾನಿ ವೆಂಕಟ ಕೃಷ್ಣಭಟ್ಟರ ಕುವರನಾಗಿ ಜನಿಸಿದ, ಕನ್ನಡಸೇವಕ ಸಿ.ವಿ. ಶಿವಶಂಕರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ನಮ್ಮ ನಾಡಿನ ಹೆಮ್ಮೆ! ಕನ್ನಡ ರಂಗಭೂಮಿ ಹಾಗೂ ಚಿತ್ರ ರಂಗದಲ್ಲಿ ಸುಮಾರು 62 ವರ್ಷಗಳಿಂದ ಕಲಾಸೇವೆ ಮಾಡುತ್ತಾ,  ನಮ್ಮ ಜೀವಭಾಷೆಯಾದ ಕನ್ನಡದ ಬೆಳವಣಿಗೆಗಾಗಿ ಶ್ರಮಿಸಿ ದರು. ಕರ್ನಾಟಕದ ಹಿರಿಮೆಯನ್ನು, ಪ್ರಾಚೀನತೆಯನ್ನು ಎತ್ತಿ ತೋರುವ ಹಲವು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಅನೇಕ ಕನ್ನಡ ನಾಟಕಗಳನ್ನು ಬರೆದಿದ್ದಾರೆ. ಇವರ ಲೇಖನಿಯಿಂದ ಮೂಡಿ ಬಂದ ಹಲವು ಕನ್ನಡಾಭಿಮಾನಿ ಗೀತೆಗಳು, ‘ಮನೆ ಕಟ್ಟಿ ನೋಡು’, ‘ಮಹಾತಪಸ್ವಿ’ ಮೊದಲಾದ ಚಿತ್ರಗಳು ಹಾಗೂ ವಿಶೇಷವಾಗಿ ನಮ್ಮ ನಾಡಿನ ಹಿರಿಮೆಯನ್ನು ಮೆರೆಸುತ್ತಿರುವ ‘ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡು ಇವೆಲ್ಲವೂ ಸಿ. ವಿ. ಶಿವಶಂಕರ್ ಅವರ ಕನ್ನಡ ಅಭಿಮಾನಕ್ಕೆ ಸಾಕ್ಷಿ ಎನಿಸಿವೆ.

ಡಾ.ಗೀತಾ ಪಾಟೀಲ ಕಲಬುರಗಿ

ಇಂದಿನ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿ ಸಿ. ವಿ. ಶಿವಶಂಕರ ಅವರು ನಮ್ಮ ನಾಡು ನುಡಿ ಕುರಿತು ಮನಬಿಚ್ಚಿ ಮಾತನಾಡಿದ್ದರ ಅಕ್ಷರ ರೂಪ ಇಲ್ಲಿದೆ. ‘ಇತ್ತೀಚಿಗೆ ನಾನು ಸಂದರ್ಶನ ನೀಡು ವುದು, ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದು ಕಡಿಮೆ, ಏಕೆಂದರೆ ಆಡುವಾಗ ಮಾತುಗಳಲ್ಲಿ ಸ್ಪಷ್ಟತೆ ಕಡಿಮೆಯಾಗುತ್ತಿದೆ. ಮಾತಾಡುವಾಗ ತಪ್ಪಾಗಬಾರದಲ್ವಾ? ಆದರೆ ನೀವು ಅಭಿಮಾನ ದಿಂದ ಕರೆ ಮಾಡಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿ ಕೊಳ್ಳಲು ಕೇಳುತ್ತಿರುವಿರಿ, ನಿಮ್ಮ ಅಭಿಮಾನಕ್ಕೆ ಎದೆ ತುಂಬಿ ಬಂತಮ್ಮ’ ಎಂದು ಅರೆಕ್ಷಣ ಭಾವುಕರಾಗಿ ಸುಮಾರು ಒಂದೂವರೆ ಗೆಂಗಳ ಕಾಲ ನಿರರ್ಗಳವಾಗಿ, ಮನಸ್ಸು ಬಿಚ್ಚಿ ಮಾತನಾಡಿದರು.

ವಾಟ್ಸಾಪ್ ವಿಡಿಯೋ ಮೂಲಕ ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ತಮ್ಮ ಜೀವನ, ಕನ್ನಡ ನಾಡು ನುಡಿ, ರಾಜ್ಯೋತ್ಸವದ ಕುರಿತು ಮಾತನಾಡುತ್ತಾ, ತಮ್ಮ ವೃತ್ತಿ ಜೀವನದ ಅನುಭವಗಳ ಬುತ್ತಿ ಬಿಚ್ಚಿಟ್ಟರು, 85 ವಸಂತಗಳನ್ನು ಕಂಡ ಸರಳ, ಸಜ್ಜನಿ ಕೆಯ ಸಾಕಾರ ಮೂರ್ತಿ, ಸಿ.ವಿ.ಶಿವಶಂಕರ್ ಅವರು.

ಸರ್, ತಮ್ಮ ಬಾಲ್ಯ ಹೇಗಿತ್ತು? ತಾವು ಕನ್ನಡದ ಬಗ್ಗೆ ಇಷ್ಟು ಅಭಿಮಾನ ಬೆಳೆಸಿಕೊಳ್ಳಲು ಹೇಗೆ ಸಾಧ್ಯವಾಯಿತು?
ಉತ್ತರ: ನಮ್ಮ ತಂದೆಯವರು ನನಗೆ ಒಳ್ಳೆಯ ಶಿಕ್ಷಣ ಕೊಡಿಸಿದರು. ಕನ್ನಡದ ಬಗ್ಗೆ ನಾನು ಇಷ್ಟು ಅಭಿಮಾನ ಬೆಳೆಸಿಕೊಳ್ಳಲು ನಮ್ಮ ತಂದೆಯೇ ಕಾರಣ. ಅವರು ಒಬ್ಬ ಒಳ್ಳೆಯ ಅರ್ಚಕರಾಗಿದ್ರು, ಮೇಲಾಗಿ ಜ್ಯೋತಿಷಿ ಆಗಿದ್ದರು. ಕನ್ನಡ ಭಾಷೆಯ ಬಗ್ಗೆ ಬಹಳ ಒಲವಿತ್ತು ಅವರಿಗೆ! ಹಾಗಾಗಿ ನಾವು ಕನ್ನಡ ಭಾಷೆಯ ಬಗ್ಗೆ ತಿಳಿದು ಕೊಳ್ಳುವುದಕ್ಕೆ, ನಮ್ಮ ಇತಿಹಾಸ ಅರಿತುಕೊಳ್ಳುವು ದಕ್ಕೆ ಸಾಧ್ಯವಾಯಿತು. ಚಿಕ್ಕಂದಿನಿಂದಲೂ ನನಗೆ ಸಾಹಿತ್ಯ, ನಾಟಕ, ನಟನೆಯತ್ತ ಅಪಾರ ಒಲವು! ಎಸ್.ಎಸ್.ಎಲ್.ಸಿ. ಓದುತ್ತಿರುವಾಗ ಶಾಲೆಯನ್ನು ಅರ್ಧದಲ್ಲೇ ಬಿಟ್ಟು ನಾಟಕ ಕಂಪನಿ ಸೇರಿದೆ.

ಕನ್ನಡ ರಂಗಭೂಮಿಯಲ್ಲಿ ತಮ್ಮ ಅನುಭವದ ಬಗ್ಗೆ ಹೇಳುವಿರಾ?
ಉ : ನಾನು ಗುಬ್ಬಿ ವೀರಣ್ಣ ನಾಟಕ ಮಂಡಳಿ, ಅಲ್ಲಿಂದ ಸುಬ್ಬಯ್ಯ ನಾಯ್ಡುರವರ ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿಕೊಂಡು ಹಲವಾರು ನಾಟಕಗಳನ್ನು ಬರೆದೆ, ಪ್ರಕಟಿಸಿದೆ. ಜನಾನೂ ಭೇಷ್ ಅಂದರು! ರಾಣಿ- ರಾಜು ಬಿ.ಎ., ಮಾಧೂ ಮಗಳು, ಆರೋಗ್ಯ ಪಿಶಾಚಿ, ನಿತ್ರಾಣ ಸುಂದರ, ಧರ್ಮಜೀವಿ, ಸಿನಿಮಾ ಸುಂದರಿ ಪ್ರಮುಖ ನಾಟಕಗಳು. ರೇಡಿಯೋ, ದೂರದರ್ಶನಕ್ಕಾಗಿ ನಾಟಕಗಳನ್ನು ನಿರ್ಮಿಸಿ, ನಿರ್ದೇಶಿಸಿದೆ. ಆಕಾಶವಾಣಿಯಲ್ಲಿ ‘ಕಂಪನಿಯ ಪೆಂಪು-ಇಂಪು’ ಸರಣಿಯನ್ನು ನಡೆಸಿಕೊಡುತ್ತಾ ರಂಗದ ಪರದೆಯ ಒಳಗಿನ ನಾಟಕವನ್ನು ಹಾಸ್ಯದ ಮೂಲಕ ಬಿಚ್ಚಿಟ್ಟೆ. ಈ ಸರಣಿ ಹಳ್ಳಿಹಳ್ಳಿಯಲ್ಲೂ ಜನಪ್ರಿ ಯವಾಯಿತು. ಶ್ರೀಕೃಷ್ಣ ಗಾರುಡಿ, ಭಕ್ತ ಕನಕದಾಸ, ಆಶಾಸುಂದರ, ಸಂತ ತುಕಾರಾಂ ಇವೆಲ್ಲ ನಾನು ನಟಿಸಿದ ನಾಟಕಗಳು.

ನಾಟಕ ರಂಗದಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದಿರಿ. ಈ ಅನುಭವ ಹೇಗಿತ್ತು?
ಉ: ನಾನು ನಾಟಕರಂಗದಲ್ಲಿನ ಅನೇಕ ದಿಗ್ಗಜರ ಒಡನಾಟ ಹಾಗೂ ಡಾ ರಾಜ್, ಅಶ್ವಥ್ ರಂತಹ ನಟರ ಸಹಯೋಗದಲ್ಲಿ
ಚಲನಚಿತ್ರ ರಂಗಕ್ಕೆ 1954ರಲ್ಲಿ ಸೇರಿಕೊಂಡೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ, ಸಂಭಾಷಣೆ-ಗೀತ ಸಾಹಿತ್ಯದತ್ತ ಒಲವು ಬೆಳೆಸಿಕೊಂಡೆ. ಶುದ್ಧವಾದ ಹಾಗೂ ಸ್ಪಷ್ಟ ಉಚ್ಚಾರಣೆಯ ನನ್ನ ಭಾಷೆಯನ್ನು ಹಲವು ನಿರ್ದೇಶಕರು ಮೆಚ್ಚಿದರು.

ಆಗ ಮದರಾಸಿನಲ್ಲಿದ್ದ ತಮಿಳು ನಟ-ನಟಿಯರಿಗೆ ಕನ್ನಡ ಕಲಿಸಲು ನನ್ನನ್ನು ನೇಮಿಸಿಕೊಂಡರು. ‘ಸ್ಕೂಲ್ ಮಾಸ್ಟರ್’
ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಶಿವಾಜಿ ಗಣೇಶನ್ ಸಂಭಾಷಣೆ ಹೇಳಲು ಹೇಳಲು ಹರಸಾಹಸ ಮಾಡುತ್ತಿದ್ದಾಗ ಅವರ ಮನೆಗೆ ಹೋಗಿ ಕನ್ನಡ ಕಲಿಸಿದೆ. ಅಲ್ಲಿಂದ ಆರಂಭಗೊಂಡ ನನ್ನ ಕನ್ನಡದ ಮೇಸ್ಟರ ಉಪಾಧ್ಯಾಯ ವೃತ್ತಿ, ಹಲವು ಗೀತಸಾಹಿತಿ ಗಳ ಸಾಹಿತ್ಯವನ್ನು ತಿದ್ದಿಕೊಟ್ಟು ಸೊಗಸಾದ ಚಿತ್ರಗೀತೆಗಳನ್ನು ರೂಪಿಸುವ ಕೆಲಸಕ್ಕೂ ಕರೆದೊಯ್ದಿತು. ಜತೆಗೆ ಹುಣಸೂರು ಕೃಷ್ಣಮೂರ್ತಿಯವರಂಥ ನಿರ್ದೇಶಕರ ಮನೆಯಲ್ಲೇ ಬಿಡಾರ ಹೂಡುವ ಹಾಗೆಮಾಡಿತು. ನಾನು ಪಡೆದ ಅನುಭವದಿಂದ, ನನ್ನ ಪರಿಶ್ರಮದಿಂದ ಅವರ ಸಹಾಯಕ ನಿರ್ದೇಶಕರಾಗುವ ಮಟ್ಟಕ್ಕೆ ಬೆಳೆಯುವುದು ಸಾಧ್ಯವಾಯಿತು. ನಮ್ಮ ಊರು, ಮನೆ ಕಟ್ಟಿ ನೋಡು, ಪದವೀಧರ, ಮಹಾತಪಸ್ವಿ, ನಮ್ಮ ಊರ ರಸಿಕರು, ಕನ್ನಡ ಕುವರ ಇವೆಲ್ಲವೂ ನನ್ನ ನಿರ್ದೇಶನದ ಚಿತ್ರಗಳು. ನನ್ನ ಕನ್ನಡಾಭಿಮಾನದ ಚಿತ್ರಗಳಿಂದ, ಗೀತೆಗಳಿಂದಲೇ ಕನ್ನಡ ಕಲಾರಸಿಕರ ಮನವನ್ನು ಗೆಲ್ಲುವುದಕ್ಕೆ ಸಾಧ್ಯವಾಯಿತು.

ಬೆಳೆದಿದೆ ನೋಡಾ ಬೆಂಗಳೂರು ನಗರ…,ನಾ ನೋಡಿ ನಲಿಯುವ ಕಾರವಾರ… ಸಿರಿವಂತನಾದರೂ ಕನ್ನಡನಾಡಲ್ಲೇ, ಹೋಗದಿರಿ ಸೋದರರೇ, ಕನ್ನಡದಾ ರವಿ ಮೂಡಿ ಬಂದಾ.. ನಾಡಚರಿತೆ ನೆನಪಿಸುವ ವೀರಗೀತೆಯ… ಇವೆಲ್ಲ ನಾನು ರಚಿಸಿದ ನಮ್ಮ ನಾಡು
ನುಡಿಯ ಚೆಲುವು, ಸಂಸ್ಕೃತಿ ಬಿಂಬಿಸುವ ಹಾಡುಗಳು.

ಕನ್ನಡಿಗರಲ್ಲಿ ಭಾಷಾಭಿಮಾನ, ಜಾಗೃತಿ ಮೂಡಿಸುವಲ್ಲಿ ಮತ್ತೆ ಯಾವ ರೀತಿಯಲ್ಲಿ ತೊಡಗಿಸಿಕೊಂಡಿರುವಿರಿ?
ಉ: ಕನ್ನಡ ಕೇವಲ ಭಾಷೆಯಲ್ಲ! ಪ್ರತಿಯೊಬ್ಬ ಕನ್ನಡಿಗನ ಬದುಕು! ಪವಿತ್ರವಾದ ಈ ಕನ್ನಡ ನಾಡಿನಲ್ಲಿ ವಾಸಿಸುತ್ತಿರುವ
ಸಮಸ್ತ ಕನ್ನಡಿಗರೆಲ್ಲರೂ ತಮ್ಮ ಜನ್ಮಭೂಮಿಯ ಇತಿಹಾಸವನ್ನು ನೆನಪಿಸಿ ಕೊಳ್ಳಬೇಕಾದುದು ಆದ್ಯಕರ್ತವ್ಯ ಹಾಗೂ ಇಂದಿನ
ಆವಶ್ಯಕತೆ ಕೂಡಾ! ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಬದುಕೇ ಕನ್ನಡ ಭಾಷಾ ಪ್ರಚಾರದ ತಪಸ್ಸು. ಆದರೆ ತಪಸ್ಸು ಮಾಡುವ ಋಷಿಗಳಂತೆ ನಾನು ಒಂದೇ ಕಡೆ ಕುಳಿತು ಜಪ ಮಾಡುವವನಲ್ಲ, ಕನ್ನಡ ಜಾಗ್ರತಿಯ ಸಂಚಾರಿಯಾಗಿ ನಾನು ಕರ್ನಾಟಕದ ಎಲ್ಲ ಭಾಗಗಳಲ್ಲಿ, ವಿಶೇಷವಾಗಿ ಗಡಿಭಾಗಗಳಲ್ಲಿ ಕನ್ನಡ ಬಳಕೆಯ ಬಗೆಗೆ ಜಾಗೃತಿ ಮೂಡಿಸಲು ನನ್ನ ‘ಕನ್ನಡ ಕುವರ’ ಚಿತ್ರ ಪ್ರದರ್ಶನ, ನಾನು ಬರೆದ ದೇಶ ಭಕ್ತಿ ಗೀತೆಗಳ ಪ್ರದರ್ಶನ, ಕನ್ನಡ ನಾಡಿನ ಹಿರಿಮೆಯ ಬಗ್ಗೆ ಬರೆದಿರುವ ಪುಸ್ತಕಗಳನ್ನು ಹಾಗೂ ಕನ್ನಡ ಗರಿಮೆಯನ್ನು ಬಿಂಬಿಸುವ ಹಾಡುಗಳನ್ನೊಳಗೊಂಡ ಅಡಕ ಮುದ್ರಿಕೆಗಳನ್ನು ಉಚಿತವಾಗಿ ಹಂಚುವ ವ್ಯವಸ್ಥೆ ಮಾಡಿದ್ದೇನೆ. ಹಾಗೂ ಕನ್ನಡದ ಬಗೆಗೆ ವಿಚಾರ ಸಂಕಿರಣಗಳನ್ನು, ಬಿಡಿ ನಾಟಕಗಳನ್ನು, ಶಾಲಾ ಮಕ್ಕಳಿಗೆ ಕನ್ನಡ ಹಾಗೂ ಇತಿಹಾಸದ ಪರಿಚಯವನ್ನು ವಿವಿಧ ಮಾಧ್ಯಮಗಳ ಮುಖಾಂತರ ಮಾಡುವುದರಲ್ಲಿ ತೊಡಗಿಕೊಂಡು ಕನ್ನಡ ಜಾಗೃತಿಗಾಗಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ.

ಇಂದಿನ ಶಿಕ್ಷಣ ವ್ಯವಸ್ಥೆೆಯಲ್ಲಿ ಕನ್ನಡ ಕಲಿಕೆಯ ಕುರಿತು ತಮ್ಮ ಅಭಿಪ್ರಾಯ ಏನು?
ಉ: ಮಾತೃಭಾಷೆಯನ್ನು ಕಲಿಯದವನು ನಮ್ಮ ಈ ಕರ್ನಾಟಕದಲ್ಲಿ ಜೀವಂತ ಶವದಂತೆ ಬದುಕುತ್ತಿದ್ದಾನೆ. ಪ್ರಸ್ತುತ ಶಿಕ್ಷಣ ಪದ್ಧತಿಯಿಂದ ವೈಚಾರಿಕತೆ, ನೈತಿಕ ಜವಾಬ್ದಾರಿ, ವ್ಯಕ್ತಿತ್ವ ನಿರ್ಮಾಣಕ್ಕೆ ಸಶಕ್ತವಾದ ಶಿಕ್ಷಣ ಹಾಗೂ ನಿರೀಕ್ಷಿತ ಅರಿವನ್ನು
ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ನಾಡಿನ ಚರಿತ್ರೆ, ಹಿರಿಮೆ, ನಮ್ಮ ಸಂಸ್ಕೃತಿ ಇವೆಲ್ಲವೂ ನಮ್ಮ ಮಾತೃಭಾಷೆಯ ಬೆಳಕು. ಮಾತೃಭಾಷೆಯನ್ನೇ ಕನ್ನಡಿಗರು ದೂರ ಮಾಡಿದರೆ ಈ ನಾಡಿನ ಮಕ್ಕಳ ಭವಿಷ್ಯ ಘೋರ ದುರಂತವಾಗಬಹುದು, ಶಿಕ್ಷಣ
ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದಲ್ಲಿ ಮಾತ್ರ ಏಕರೂಪ ಶಿಕ್ಷಣ ಪದ್ಧತಿ ಜಾರಿಗೊಳಿಸಲು ಸಾಧ್ಯ. ಇವತ್ತು ಜಾಗತೀಕರಣ ದಿಂದಾಗಿ, ಶಿಕ್ಷಣ ಕೇವಲ ಉದ್ಯೋಗ ಪಡೆಯಲಷ್ಟೇ ಸೀಮಿತಗೊಂಡಿದ್ದು, ಆಂಗ್ಲ ಭಾಷೆಯನ್ನು ಕಲಿತವನೇ ವಿದ್ಯಾವಂತ ಎನಿಸಿದ್ದಾನೆ.

ಆಂಗ್ಲ ಭಾಷೆ ಅನ್ನ ಕೊಡುವ ಭಾಷೆ ಎಂಬ ಧ್ವಜ ಹಿಡಿದು, ಆಂಗ್ಲ ಶಾಲೆಗಳ ಮೂಲಕ ಕನ್ನಡಿಗರ ಹಣವನ್ನು ದೋಚುತ್ತ ಕನ್ನಡ ಮಕ್ಕಳನ್ನು ಆಂಗ್ಲ ಸಂಸ್ಕೃತಿಯ ಕಡೆಗೆ ಸೆಳೆದೊಯ್ಯುತ್ತಿರುವ ಖಾಸಗಿ ವಿದ್ಯಾ ಸಂಸ್ಥೆಗಳಾಗಲಿ, ಅವುಗಳಿಗೆ ನೀರೆರದು ಗೊಬ್ಬರ ಹಾಕಿ ಬೆಳೆಸುತ್ತಲಿರುವ ಸರ್ಕಾರವಾಗಲೀ, ಈ ರಾಜ್ಯದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಸ್ವಾರ್ಥ ಕಾರ್ಯಕ್ಕೆ ನಿಂತಿರು ವುದು, ಏಕೀಕರಣಕ್ಕಾಗಿ ಹೋರಾಡಿ ಮಡಿದವರ ಕೀರ್ತಿಗೆ ಮಸಿ ಬಳಿದಂತಾಗಿದೆ ಎಂದೇ ಭಾವಿಸಬೇಕು! ನಮ್ಮನ್ನು ಗುಲಾಮ ರನ್ನಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದ ಆಂಗ್ಲರೂ ಕೂಡ ‘ಜಿಲ್ಲಾಧಿಕಾರಿಯಾದವನು ಮಾತೃಭಾಷೆ ಯನ್ನು ಬಲ್ಲವನೇ ಆಗಿದ್ದಲ್ಲಿ ಜನರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ’ ಎಂದು ಅರಿತಿದ್ದರು. ಇದನ್ನು ಇವತ್ತು ಆಂಗ್ಲ ಭಾಷಾ ಮಾಧ್ಯಮದಲ್ಲೇ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತ, ಕನ್ನಡಿಗರ ಹಣದಿಂದಲೇ ಬದುಕು ಸಾಗಿಸುತ್ತಿರುವ ಆಂಗ್ಲಶಾಲೆಗಳ ನಿರ್ವಾ ಹಕರು ಅವಶ್ಯವಾಗಿ ಗಮನಿಸಬೇಕು. ಪಕ್ಕದ ತಮಿಳುನಾಡು, ಕೇರಳ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯದಲ್ಲಿ ವಿಶೇಷ ವಾಗಿ, ಬೆಂಗಳೂರು ನಗರ ಮತ್ತು ಸುತ್ತಮುತ್ತಲೂ ಅನ್ಯಭಾಷಿಕರ ವಲಸೆಯಿಂದ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಹಲವು ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಜಾನಪದ ಸಂಸ್ಕೃತಿಗೂ ಧಕ್ಕೆ ಉಂಟಾಗುತ್ತಿದೆ.

ಇದನ್ನು ತಡೆಗಟ್ಟುವಲ್ಲಿ ಕನ್ನಡ ಸಂಘಟನೆಗಳು ಶ್ರಮಿಸಬೇಕಿದೆ, ನಮ್ಮ ಸರಕಾರವೂ ಸಹ ಕನ್ನಡವನ್ನು ರಾಜ್ಯ ಭಾಷೆ ಎಂದು
ಪರಿಗಣಿಸಿ, ಪಕ್ಕದ ತಮಿಳುನಾಡು ಕೇರಳ ರಾಜ್ಯಗಳಲ್ಲಿರುವಂತೆ ಕನ್ನಡ ಕಲಿಕೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕಾಗಿದೆ.

ಇವತ್ತಿನ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ನಾಡಿನ ಜನತೆಗೆ ಏನನ್ನು ಹೇಳಬಯಸುವಿರಿ?
ಉ: ಕನ್ನಡ ಮಾತೆಯೇ ಎಂಥೆಂಥವರನ್ನೋ ಅಂತಂಥವರನ್ನಾಗಿ ಮಾಡಿದೆ. ಇಂಥವರನ್ನೇಕೆ (ಕನ್ನಡವನ್ನು ಉಪೇಕ್ಷೆ ಮಾಡಿ ದವರನ್ನು) ಅಂಥವರನ್ನಾಗಿ ಮಾಡಲಿಲ್ಲವೇಕೆ?ನನ್ನನ್ನು ಕಾಡುವ ಬಹು ದೊಡ್ಡ ಪ್ರಶ್ನೆ ಇದು! ಇದಕ್ಕೆ ನಾನು ತಮ್ಮಲ್ಲಿ
ಕಳಕಳಿಯಿಂದ ಕೇಳಿಕೊಳ್ಳುವುದಿಷ್ಟೇ : ಸಂಪದ್ಭರಿತವಾದ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೆಲ್ಲರೂ ತಪ್ಪದೆ ಕನ್ನಡವನ್ನು ಕಲಿತೇ ಬಾಳಬೇಕು, ಇದು ಎಲ್ಲರ ಆದ್ಯ ಕರ್ತವ್ಯ. ಅನಾದಿ ಕಾಲದಿಂದಲೂ ಜೀವಕ್ಕಂಟಿಕೊಂಡೇ ಬೆಳೆದು ಬದುಕಿ ಬಂದ ಭಾಷೆ ನಮ್ಮ ಸಿರಿಗನ್ನಡ ಭಾಷೆ! ನಮ್ಮ ತಾಯಿ ಭೂಮಿ ಹಾಗೂ ತಾಯಿ ಭಾಷೆಯ ಬಗೆಗೆ ನಮ್ಮ ಮಕ್ಕಳಿಗೆ ತಿಳಿಸಬೇಕಾದ
ಸುಸಂದರ್ಭ ನಮಗೊದಗಿ ಬಂದಿದೆ. ನಮ್ಮ ನಾಡಿಗಾಗಿ ಜೀವತೆತ್ತ ಮಹಾಮಹಿಮರನ್ನು ಒಂದಿಷ್ಟಾದರೂ ನೆನಪಿನಲ್ಲಿ
ಇಟ್ಟುಕೊಳ್ಳಬೇಕು.

ಪ್ರತಿಯೊಬ್ಬ ಕನ್ನಡಿಗನೂ ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆಯನ್ನು ತಾಯಿಭಾಷೆ ಎಂದೇ ಗೌರವಿಸಿ ಮೆರೆಸಬೇಕೆಂಬುದೇ ನನ್ನ ಪ್ರಾರ್ಥನೆ. ಯಾರಿಗೆ ನಮ್ಮ ಭಾರತ ದೇಶದ ಹೆಸರನ್ನು ಕೇಳಿದರೆ ರೋಮಾಂಚನವಾಗುವುದೋ, ಯಾರಿಗೆ ಜನ್ಮಭೂಮಿ ಕನ್ನಡ ನಾಡಿನ ಹೆಸರನ್ನು ಕೇಳಿದರೆ ಅಭಿಮಾನ ಮೂಡುವುದೋ, ಯಾರಿಗೆ ಕನ್ನಡ ಭಾಷೆಯನ್ನು ಕಲಿಯುವ ಅಸೆ ಇರುತ್ತದೋ ಅಂಥ ಸ್ಥಳವಂದಿಗರ ಪಾದಗಳಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಕನ್ನಡ ಬಂಧುಗಳೇ, ಒಂದು ಕ್ಷಣ ಗಂಭೀರವಾಗಿ ಆಲೋಚನೆ ಮಾಡಿ. ಒಂದು ನಾಡನ್ನು ನಿರ್ನಾಮ ಮಾಡಬೇಕಾದರೆ ಆ ನಾಡಿನ ಜೀವ ಭಾಷೆಯನ್ನು ನಾಶ ಮಾಡಿದರೆ ಸಾಕು; ಆ ನಾಡು ನಾಮಾವಶೇಷವಾಗಿ ಹೋಗುತ್ತದೆ ಎಂಬ ಮಾತನ್ನು ನೆನಪಿನಲ್ಲಿಡಿ. ಆದ್ದರಿಂದಲೇ, ಕನ್ನಡವೇ ನಮ್ಮ ನಾಡಿನ ಸಾರ್ವಭೌಮ ಭಾಷೆಯಾಗಬೇಕು, ಅನ್ನ ಕೊಡುವ ಭಾಷೆಯಾಗಬೇಕು.

ಕನ್ನಡ ನಾಡಿನ ಅಭಿಮಾನವನ್ನು ಮೆರೆಸುವ ಈ ಹಾಡನ್ನು ‘ಸಂಗಮ’ ಚಿತ್ರಕ್ಕೆಂದು 1973ರಲ್ಲಿ ಧ್ವನಿ ಮುದ್ರಿಸಿದರೂ, ಆ ಸಿನಿಮಾ ಬಿಡುಗಡೆಯಾಗಲೇ ಇಲ್ಲ. ಸುಖದೇವ್ ಅವರ ಸಂಗೀತ ನಿರ್ದೇಶನದಲ್ಲಿ, ಪಿ.ಬಿ.ಶ್ರೀನಿವಾಸ್ ಮತ್ತು ಸಿ.ಕೆ.ರಮಾ ಇದನ್ನು ಹಾಡಿದ್ದು, 1970ರ ದಶಕದಲ್ಲಿ ರೇಡಿಯೋ ಸಿಲೋನ್ ಮೂಲಕ, ನಾಡಿನಾದ್ಯಂತ ಬಿತ್ತರಗೊಂಡು, ಕನ್ನಡಿಗಿರ ನಾಲಗೆಯಲ್ಲಿ ನಲಿದಾಡುತ್ತಿತ್ತು. ಸಿ.ವಿ.ಶಿವಶಂಕರ್ ಅವರು ಇದನ್ನು ಇತರ ಸಿನಿಮಾಗಳಲ್ಲಿ ಅಳವಡಿಸಲು ಪ್ರಯತ್ನಿಸಿದ್ದುಂಟು. ಅದು ಫಲ ಕಾಣಲಿಲ್ಲ. ಆದರೆ ಈ ಹಾಡು ಮಾತ್ರ ಸಾರ್ವಕಾಲಿಕ ಜನಪ್ರಿಯತೆಯನ್ನು ಪಡೆದು, ಕನ್ನಡಾಭಿಮಾನವನ್ನು ಮೆರೆದದ್ದಂತೂ ನಿಜ.

***

ಕಾವೇರಿ ತುಂಗೆಯಲ್ಲಿ ಮೀಯುವಾಸೆ ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ ॥ ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ ॥ ಶರಣಗೆ ವಂದಿಪ ಶರಣೆ ನಾನಾದೊಡೆ ವಚನವೆ ಬದುಕಿನ ಮಂತ್ರವೆನುವೆ ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ ॥ ದಾಸರಿಗೆ ವಂದಿಪ ಅಭಿಮಾನಿಯಾದೊಡೆ ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ ಕಾವೇರಿ ತುಂಗೆಯರ ಮಡಿಲಲ್ಲೆ ಮೀಯುವೆ ॥ ಇನ್ನೊಮ್ಮೆ ಮರುಜನ್ಮ ಪಡೆಯುವೆ ನಾದೊಡೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ॥
-ಸಿ.ವಿ.ಶಿವಶಂಕರ್

ಹಾಡಿನಿಂದ ಬೆಳೆದ ಬಾಂಧವ್ಯ

ಎರಡು ವರ್ಷಗಳ ಹಿಂದೆ ನಮ್ಮ ಮಹಿಳಾ ಮಂಡಳದ ಸದಸ್ಯೆಯರೆಲ್ಲ ಸೇರಿ ಕಲಬುರಗಿ ನಗರದ ಅಂಧ ಹೆಣ್ಣು ಮಕ್ಕಳ ವಸತಿಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ಸಂದರ್ಭದಲ್ಲಿ, ಸಹೋದರಿ ಆಶಾ. ‘ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ’ ಹಾಡನ್ನು ಹಾಡಿದಳು. ಆ ಹಾಡಿನ ಸಾಹಿತಿ ಯಾರು, ಸಂಗೀತ  ನಿರ್ದೇಶಕರು ಯಾರು, ಯಾವ ಚಿತ್ರದ್ದು ಇವೆಲ್ಲವುಗಳ ಬಗ್ಗೆ ವಿವರಣೆ ನಾನು ನೀಡಬೇಕೆಂದು ತೀರ್ಮಾನವಾಗಿತ್ತು. ಆ ಸಂದರ್ಭ ದಲ್ಲಿ ಹಾಡಿನ ಬಗ್ಗೆ ವಿವರಗಳನ್ನು ಹುಡುಕುವಾಗ ಹಾಡನ್ನು ರಚಿಸಿದ ಸಾಹಿತಿ ಸಿ.ವಿ.ಶಿವಶಂಕರ್ ಅವರ ಮೊಬೈಲ್ ಸಂಖ್ಯೆ ದೊರಕಿದ್ದು ನನ್ನ ಅದೃಷ್ಟ! ಕೇಳಿದಾಗೆಲ್ಲ ಖುಷಿಯಾಗುವ, ಕಣ್ತುಂಬಿ ಬರುವ ‘ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡನ್ನು ಬರೆದ ಮಹನೀಯರನ್ನು ಒಮ್ಮೆ ಮಾತನಾಡಿಸಬೇಕು, ಅಭಿನಂದಿಸಬೇಕು ಎಂಬ ಆಸೆ ಹುಟ್ಟಿತು. ನಮ್ಮ ಜತೆಯವ ರಿಗೂ ಆ ನಂಬರ್ ನೀಡಿ, ಈ ಸಾಹಿತಿಯನ್ನು ಅಭಿನಂದಿಸಿ ಎಂದು ವಿನಂತಿ ಮಾಡಿದೆ. ಆವತ್ತು ಸಂಜೆ ನಾನು ಶಿವಶಂಕರ್ ಅವರೊಡನೆ ಮಾತನಾಡಲು ಕರೆ ಮಾಡಿದಾಗ, ನಾನು ಕಲಬುರಗಿಯವಳು ಎಂದು ತಿಳಿದು ‘ನನಗೆ ಇವತ್ತು ಕಲಬುರಗಿಯಿಂದ ಬಹಳಷ್ಟು ಜನ ಕರೆ ಮಾಡಿ ಮಾತನಾಡಿದರು, ಉತ್ತರ ಕರ್ನಾಟಕದ ಜನರಿಗೆ ನಾಡು ನುಡಿಯ ಬಗ್ಗೆ ವಿಶೇಷವಾದ ಒಲವು’ ಎಂದು ಅಭಿಮಾನದಿಂದ, ಆತ್ಮೀಯತೆಯಿಂದ ಮಾತನಾಡಿಸಿ ರಾಜ್ಯೋತ್ಸವ, ಕನ್ನಡ ಭಾಷೆ, ನಮ್ಮ ಸಂಸ್ಕೃತಿ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಅಂದು ಆರಂಭಗೊಂಡ ಅವರೊಂದಿಗಿನ ಬಾಂಧವ್ಯ ಇಂದು ಇಲ್ಲಿ ಪ್ರಕಟವಾದ ಈ ಸಂದರ್ಶನಕ್ಕೂ ಕಾರಣ ಎನಿಸಿತು!

-ಸಂದರ್ಶಕಿ

ಬಂಧುಗಳೇ, ನಾವು ನಮ್ಮ ವಿಳಾಸವನ್ನು ಮರೆತಿದ್ದೇವೆ. ಅದರಿಂದಲೇ ನಮಗೆ ಅಜ್ಞಾನ ಕವಿದಿದೆ. ವಿಳಾಸವೆಂದರೇನು? ನಾನು ಯಾರು, ನನ್ನ ಹೆತ್ತವರು ಯಾರು? ನಮ್ಮ ಊರು, ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಯಾವುದು? ಎಂದು ಎಲ್ಲರೂ ನೆನಪಿಸಿಕೊಳ್ಳಬೇಕು. ಈ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ತಮ್ಮ ತಮ್ಮ ವಿಳಾಸವನ್ನು ತಿಳಿದಿರಬೇಕು. ನಾನು ಕನ್ನಡ ನಾಡಿನವನು, ನನ್ನ ತಾಯಿ ಭಾಷೆ ಕನ್ನಡ, ನನ್ನ ಇತಿಹಾಸ ಈ ನಾಡಿನ ಪುರಾತನ ಚರಿತ್ರೆ ಎಂದು ತಿಳಿಯಬೇಕಾದದ್ದು ಬಹುಮುಖ್ಯ! ರಾಜ್ಯವಾಳುವ ಮಂತ್ರಿಯಾಗಲೀ, ಕವಿ, ಸಾಹಿತಿ, ರೈತ, ಕಾರ್ಮಿಕ ಎಲ್ಲರೂ ನಮ್ಮ ತಾಯಿಭೂಮಿಯ ಋಣ ಹಾಗೂ ಕನ್ನಡ ಭಾಷೆಯ ಋಣ ತೀರಿಸಲೇ ಬೇಕು. ಅದೇ ದೇವರ ಪೂಜೆ, ಅದೇ ದೇಶ ಭಕ್ತಿ! ಜನ್ಮ ಕೊಟ್ಟ ತಾಯಿ, ಬಾಳು
ಕೊಟ್ಟಿರುವ ತಾಯಿನಾಡು ನಮಗೆ ಸರ್ವಸ್ವ! ನಿಜ ಕನ್ನಡಿಗರಾಗಿ ಬಾಳುವುದೇ ಜೀವನದ ಗುರಿ, ಅದೇ ಧರ್ಮ! ನಿಮ್ಮ ಮಕ್ಕಳ ಬದುಕನ್ನು ಕನ್ನಡ ನುಡಿಯಿಂದ ಸಿಂಗರಿಸಿ, ನಾಡು ನುಡಿಯನ್ನು ರಕ್ಷಿಸಿರಿ. ಸಿರಿಗನ್ನಡಂ ಗೆಲ್ಗೆ!  -ಸಿ.ವಿ.ಶಿವಶಂಕರ್