ರವಿ ಮಡೋಡಿ ಬೆಂಗಳೂರು
ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಮೂದಲಿಕೆಯ ಭಾವನೆಯಿರುತ್ತದೆ. ಆದರೂ, ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ನಿಜವಾದ ಜನಸೇವೆ ಲಭ್ಯ. ಕಳೆದ ಏಳೆಂಟು ವರುಷದಲ್ಲಿ ಸುಮಾರು 2300ಕ್ಕೂ ಅಧಿಕ ನಾರ್ಮಲ್ ಹೆರಿಗೆಯನ್ನು ಸರಕಾರಿ ಆಸ್ಪತ್ರೆಯಲ್ಲಿಯೇ ನಡೆಸಿದ ವಿಶಿಷ್ಟ ವೈದ್ಯರೊಬ್ಬರು ಇಲ್ಲಿ ನೆನಪಾಗುತ್ತಾರೆ.
ಅವರೇ ಡಾ.ತೇಜಸ್ವಿ ಬರುವೆ. ತೇಜಸ್ವಿಯವರು 2012ರಲ್ಲಿ ಹೊಸನಗರ ತಾಲೂಕಿನ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದರು. ಹೊಸನಗರವು ಗ್ರಾಮೀಣ ಹಿನ್ನೆಲೆ ಹೊಂದಿದ, ಸುಮಾರು 20 ಸಾವಿರ ಜನಸಂಖ್ಯೆ ಇರುವ ಒಂದು ಸಣ್ಣ ತಾಲೂಕು ಕೇಂದ್ರ. ಸುತ್ತಮುತ್ತಲಿನಲ್ಲಿ ಹೇಳಿಕೊಳ್ಳುವ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ ಜನರು ಪ್ರಾಥಮಿಕ ಚಿಕಿತ್ಸೆ ಗಷ್ಟೇ ಈ ಆಸ್ಪತ್ರೆಯನ್ನು ಬಳಸುತ್ತಿದ್ದರು.
ಯಾವಾಗ ತೇಜಸ್ವಿಯವರು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದರೋ ಅಲ್ಲಿಗೆ ಜನರ ನಂಬಿಕೆ
ಅಭಿಪ್ರಾಯಗಳು ಕ್ರಮೇಣ ಬದಲಾಯಿತು. ಅವರು ತಮ್ಮ ವಿಶ್ವಾಸಾರ್ಹವಾದ ಸೇವೆಯ ಮೂಲಕ ಸರ್ಕಾರಿ ಆಸ್ಪತ್ರೆ ಬಗೆಗೆ ಇದ್ದ ಅಪನಂಬಿಕೆಗಳನ್ನು ದೂರಮಾಡಿ ಜನರು ಆಸ್ಪತ್ರೆಯತ್ತ ಬರುವಂತೆ ಮಾಡಿದರು.
ತೇಜಸ್ವಿಯವರು ಬರುವ ಮುಂಚೆ ಈ ಆಸ್ಪತ್ರೆಯಲ್ಲಿ ಆರು ವರುಷಗಳಲ್ಲಿ ನಡೆದಿದ್ದು ಬೆರಳೆಣಿಕೆಯಷ್ಟು ಹೆರಿಗೆಗಳು ಮಾತ್ರ. ತೇಜಸ್ವಿ ಅವರು ಬಂದ ತರುವಾಯ ಏಳು ವರುಷದಲ್ಲಿ ಸುಮಾರು 2300ಕ್ಕೂ ಹೆಚ್ಚು ನಾರ್ಮಲ್ ಹೆರಿಗೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಯಾವುದೇ ಖರ್ಚುವೆಚ್ಚವಿಲ್ಲದೇ ಮಾಡಿಸಿ ಜನಾದರಣೀಯ ವೈದ್ಯರಾಗಿ ಮನ್ನಣೆಗೆ ಪಾತ್ರರಾಗಿದ್ದಾರೆ.
ತೇಜಸ್ವಿಯವರ ಪ್ರಕಾರ ಭಾರತೀಯರ ದೇಹ ಸ್ಥಿತಿ ಹಾಗೂ ಇಲ್ಲಿನ ಪರಿಸರವನ್ನು ಅವಲೋಕಿಸಿದರೆ ಶೇಕಡ 80 ಭಾಗದ ಹೆರಿಗೆ ಗಳನ್ನು ಸಹಜವಾಗಿ ಮಾಡಿಸುವುದಕ್ಕೆ ಸಾಧ್ಯವಿದೆ. ತೇಜಸ್ವಿಯವರ ಈ ಕಾರ್ಯವನ್ನು ಆರ್ಥಿಕವಾಗಿ ನೋಡಿದರೆ, ಸಾಮಾನ್ಯ ಜನರ ಕೋಟಿಗಟ್ಟಲೇ ಹಣವನ್ನು ಉಳಿಸಿದ್ದಾರೆ.
ಒಂದು ಉತ್ತಮ ಆಸ್ಪತ್ರೆಯಲ್ಲಿ ತೇಜಸ್ವಿ ಬರುವೆ ಅವರಂಥ ವೈದ್ಯರ ಜತೆ, ನಿಷ್ಠರಾದ ಸಿಬ್ಬಂದಿಯೂ ಬೇಕು. ತೇಜಸ್ವಿಯವರು ತಮ್ಮ ಸಿಬ್ಬಂದಿಗಳನ್ನು ಹುರಿದುಂಬಿಸಿ, ಸೇವೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು ಕೂಡ ಮಹತ್ವದ್ದು. ಜತೆಗೆ ಮೇಲಾಧಿ ಕಾರಿಗಳ ಮತ್ತು ಇಲಾಖೆಯ ಬೆಂಬಲ ಪ್ರೋತ್ಸಾಹವು ಸಕಾಲದಲ್ಲಿ ಸಿಕ್ಕಿರುವುದು ಇದಕ್ಕೆ ಪೂರಕವಾಗಿದೆ.
ಕೇವಲ ತೇಜಸ್ವಿಯವರು ಹೆರಿಗೆ ಮಾತ್ರವಲ್ಲದೇ ಇತರ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡುತ್ತಾರೆ. 37 ವರ್ಷ ವಯಸ್ಸಿನ ತೇಜಸ್ವಿ ಯವರು ಗ್ರಾಮೀಣ ಪ್ರದೇಶದಲ್ಲಿ ಜನಸೇವೆ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಸ್ಥಳೀಯರು ಇವರನ್ನು ಸನ್ಮಾನಿಸಿ ತಮ್ಮ ಪ್ರೀತಿ ಯನ್ನು ತೋರಿದ್ದು ಸ್ಮರಣೀಯ ಎನಿಸಿದೆ.