Thursday, 12th December 2024

ಸಾಧಿಸುವ ತುಡಿತದ ಸೆಲೆ ಎಲ್ಲಿ ?

ಮಂಜುಳಾ ಡಿ

ಸಾಹಸ, ಹೋರಾಟ ಇವೆಲ್ಲ ಪುರುಷರ ಕ್ಷೇತ್ರಗಳು ಎನ್ನುವ ಕಾಲವೂ ಇತ್ತು. ಹಿಮಾಲಯ ಏರುವಾಗ ಸಹಾಯ ಮಾಡುವ ಶೇರ್ಪಾಗಳೂ ಇದಕ್ಕೆ ಹೊರತಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಒಮ್ಮೆ ಈ ಪರ್ವತ ಏರಿ ಬದುಕುಳಿದು ಬಂದರೆ ಅದೇ ಅದಮ್ಯ ಸಾಹಸ. ಅಂತದ್ದರಲ್ಲಿ ಮಹಿಳಾ ಶೇರ್ಪಾ ಲಕ್ಪಾ ಶೇರ್ಪಾನಿ, ಒಂಭತ್ತು ಬಾರಿ ಎವರೆಸ್ಟ್‌ ಏರಿರುವುದು, ಆಕೆಯ ಸಾಧನೆಯ ಶಿಖರವನ್ನು ತೊರುತ್ತದೆ. 

ಹಿಮಾಲಯದ ಅಗಾಧ ಹಿಮರಾಶಿಯಡಿಯಲ್ಲಿ ದಫನಾದ ಪರ್ವತಾರೋಹಿಗಳ ಸಂಖ್ಯೆ ಒಮ್ಮೆ ಕಂಪಿಸುವಂತದ್ದು. ಪರ್ವತದ ನೆತ್ತಿಯ ಮೇಲೆ ಹೆಜ್ಜೆಯಿಡುವ ಹಾದಿಯಲ್ಲಿ ಕಾಣುವ ರೋಚಕ ಕತೆಗಳು ಮನಸ್ಸನ್ನು ಅತೀವವಾಗಿ ಕಾಡುತ್ತವೆ. ಆ ಹಿಮರಾಶಿ ಯಲ್ಲಿ ಚಿಕ್ಕ ಸುಳಿವೂ ಸಿಗದೇ ಕುಸಿದವರೆಷ್ಟೋ… ಆದರೂ ಆ ಪರ್ವತವನ್ನೇರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಪರ್ವತ ಏರುವವರ ರೋಚಕ ಕತೆಗಳದ್ದೇ ಒಂದು ಅನೂಹ್ಯ ಲೋಕ. ಮಾರ್ಕ್, ಗೊರಾನ್ ಕ್ರಾಪರ್, ಲಕ್ಪಾ ಶೇರ್ಪಾನಿ, ತೆಂಬಾ ಶೆರಿ…ಇವರ ಕಥೆಯೇ ರೋಚಕ. ಆತ ಮಾರ್ಕ್ ಜೋಸೆಫ್ ಇಂಗ್ಲಿಸ್. ಉತ್ಸಾಹಕ್ಕೆ ಅನ್ವರ್ಥ ಎನ್ನಬಹುದಾದ ಸ್ವಭಾವ. ಪರ್ವತಾ ರೋಹಿಗಳ ತರಬೇತುದಾರನಾಗಿ ಪರ್ವತ ಏರುವಲ್ಲಿ ಪರಿಣಿತನಾದ ಮಾರ್ಕ್, 23 ನೇ ವಯಸಿಗೆ ನ್ಯೂಜಿಲೆಂಡ್‌ನ ಕುಕ್ ಪರ್ವತ ಏರುವ ಸಾಹಸಕ್ಕೆ ನಿಂತವ. ಒಂದೊಂದೇ ಹೆಜ್ಜೆ ಏರುತ್ತಿದ್ದರೆ ಪರ್ವತ ಕಿರಿದಾಗುತ್ತಿತ್ತು. ಅಷ್ಟರಲ್ಲಿ ಬೀಸಿದ ಹಿಮಗಾಳಿಗೆ ಅವನೊಂದಿಗಿದ್ದ ಸ್ನೇಹಿತ ಡೆಲ್ ಮತ್ತು ಮಾರ್ಕ್ ಇಬ್ಬರೂ ಹಿಮಗುಹೆಯಲ್ಲಿ ಸಿಲುಕುತ್ತಾರೆ.

ಸತತ ಹದಿಮೂರು ದಿನಗಳವರೆಗೆ! ಇಲ್ಲಿಂದ ಇವರು ಬದುಕಿ ಬರುವುದೇ ಒಂದು ಅಗಾಧ ಅಚ್ಚರಿ. ಆದರೆ ಫ್ರಾಸ್ಟ್‌ ಬೈಟ್ – ಹಿಮ ವೃಣ ಅವರನ್ನ ಅದ್ಯಾವ ಪರಿ ತಿಂದಿರುತ್ತದೆ ಎಂದರೆ ಮಾರ್ಕ್‌ನ ಎರಡೂ ಮೊಣಕಾಲಿನ ಕೆಳಭಾಗವನ್ನು ಅನಿವಾರ್ಯವಾಗಿ ತೆಗೆಯಲೇ ಬೇಕಾದ ಪರಿಸ್ಥಿತಿ. ಆದರೆ ಮಾರ್ಕ್‌ನ ಬದುಕು ಕದಲುವುದೇ ಇದರ ನಂತರ. ಲಿಂಕನ್ ವಿಶ್ವವಿದ್ಯಾಲಯದಿಂದ ಜೈವಿಕ ರಸಾಯನಶಾಸ್ತ್ರದಲ್ಲಿ ಬಿ ಎ ಆನರ್ಸ್ ಮುಗಿಸಿ, ಮೋಂಟಾನಾ ವೈನ್ ಮೇಕರ್ ಕಂಪನಿಯಲ್ಲಿ ಸೀನಿಯರ್ ವೈನ್ ಮೇಕರ್ ಆಗಿ ವೈನ್ ಮಾಡುವ ಕಸುಬು ಕಲಿತ. ಕೃತಕ ಕಾಲು ಕಟ್ಟಕೊಂಡು ಓಡಾಡುತ್ತಾ ಸೈಕ್ಲಿಂಗ್ ಪ್ರಾರಂಭಿಸಿ 2000 ರಲ್ಲಿ ಸಿಡ್ನಿ ಒಲಂಪಿಕ್ಸ್
ನಲ್ಲಿ ಬಂಗಾರದ ಪದಕ ಕೂಡ ಪಡದ. ಏನು ಮಾಡಿದರೂ ಎತ್ತ ಸಾಗಿದರೂ ಅವನ ಮನದಲ್ಲಿ ಓಡುತ್ತಿದ್ದುದು ಮಾತ್ರ ಮೌಂಟ್
ಕುಕ್ ಎಂಬ ಅಗಾಧ ಪರ್ವತ. ಅವನನ್ನು ಅಸದೃಶವಾಗಿ ಜೀವಂತಿಕೆ ತುಂಬಿ ಮುನ್ನಡೆಸುತ್ತಿದ್ದ ಏಕಮಾತ್ರ ಗಾಢತೆ.

ಕೃತಕ ಕಾಲಿನೊಂದಿಗೆ ಆರೋಹಣ

ಮಾಂಟ್ ಕುಕ್ ಮೇಲೆ ಮಾರ್ಕ್ ಕಾಲಿನ ಗುರುತು ಮೂಡಿಸಿದ್ದ. ಇಷ್ಟಕ್ಕೇ ಅವನು ತಣಿಯಲಿಲ್ಲ. ಇದಾದ ನಂತರ ಅವನು ತಿರುಗಿದ್ದು ಮೌಂಟ್ ಎವರೆಸ್ಟ್‌ ಕಡೆಗೆ. ಆದರೆ ಎವರೆಸ್ಟ್‌‌ನ ಹಿಮದ ಮಡಿಲಲ್ಲಿ ಹೂತವರೆಷ್ಟೋ, ಸುಳಿವೇ ಸಿಗದವರೆಷ್ಟೋ. ಮಾರ್ಕ್ ಹಿಂದೆಗೆಯಲಿಲ್ಲ. ಕೃತಕ ಕಾಲುಗಳೊಂದಿಗೆ ಆರಂಭವಾದ ಆತನ ಎವರೆಸ್‌ಟ್‌‌ನೊಂದಿಗಿನ ಹೋರಾಟ ಅರ್ಧದಲ್ಲಿರು ವಾಗಲೇ ಹಿಮ ಮಾರುತ ಅವನನ್ನು ಬೀಸಿ ಹೊಗೆಯಿತು. ಅವನ ಕೃತಕ ಕಾಲು ಮುರಿಯಿತು. ಆದರೆ ಅವನು ಅಲ್ಲಿಗೇ ನಿಲ್ಲಲಿಲ್ಲ. ಕೊನೆಗೂ ಕೃತಕ ಕಾಲಿನ ಹೆಜ್ಜೆ ಗುರುತನ್ನು ಎವರೆಸ್ಟ್‌ ಮೇಲೆ ಮೂಡಿಸಿದಾಗ (2006) ಎವರೆಸ್ಟ್ ಅರೆಗಳಿಗೆ ತನ್ನ ದಟ್ಟ ಚಳಿಯ ನಡುವೆ ತುಸು ಬೆವೆತಿರಬಹುದು!

ಹಿಮಾಲಯದ ಶೀತಲ ಗಾಳಿ ಮೇಲೇರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುತ್ತಾ ಹೋಗಿ ಉಸಿರಾಟ ವಿಪರೀತ ತಲೆನೋವು ಹೀಗೆ ವೈಪರಿತ್ಯಗಳಾಗುವುದು ಅತೀ ಸಹಜ. ಆಮ್ಲಜನಕದ ಸಿಲಿಂಡರ್‌ಗಳಿಲ್ಲದೇ ಅನೂಹ್ಯ ಹಾದಿಯಲ್ಲಿ ಮಾರ್ಗದರ್ಶಕರಿಲ್ಲದೇ ಏರುವುದು ಖಂಡಿತಾ ಊಹಿಸಲೂ ಸಾಧ್ಯವಿಲ್ಲ. ಗೊರಾನ್ ಕ್ರಾಪ್ ಎನ್ನುವ ಸ್ವೀಡಿಷ್ ಪರ್ವತಾರೋಹಿ ಶೆರ್ಪಾ ಮತ್ತು ಆಕ್ಸಿಜನ್ ಸಿಲಿಂಡರ್‌ಗಳಿಲ್ಲದೇ ಏರಿದ್ದು (1996) ಆತನಿಗೆ ಪರ್ವತಗಳ ಬಗ್ಗೆೆ ಇದ್ದ ವಿಪರೀತ ಸೆಳೆತದಿಂದಾಗಿಯೇ.

ಹದಿನಾರನೆಯ ವಯಸ್ಸಿನ ಸಾಧನೆ

ತೆಂಬಾ ಶೆರಿ… ಶೆರ್ಪಾ ವಂಶದ ಈತನನ್ನು ಹದಿನೈದು ವಯಸಿಗೇ ಎವರೆಸ್ಟ್‌ ಅವನನ್ನು ತನ್ನತ್ತ ಸೆಳೆದುಕೊಂಡಿತು. 2000 ರಲ್ಲಿ ಮೊದಲ ಬಾರಿ ಈತ ಎವರೆಸ್ಟ್‌ ಏರಲು ಮಾಡಿದ ಪ್ರಯತ್ನ. ಬೀಸಿದ ಹಿಮಗಾಳಿ ಒಳಗಿನ ಎಲುಬಿನ ಹಂದರಕ್ಕಿಳಿದ ಶೀತ ಇಡೀ ದೇಹ ಫ್ರಾಸ್ಟ್‌ ಬೈಟ್ – ಹಿಮ ವೃಣ ಹೊಕ್ಕು ಮೂಳೆಗಳು ಅದ್ಯಾವ ಪರಿ ಮರಗಟ್ಟಿದವೆಂದರೆ ಆತನ ದೇಹವನ್ನು ಹಿಮಾಲಯದ ಬುಡದ ಆಸ್ಪತ್ರೆಯಲ್ಲಿ ತಂದು ಹಾಕುವಲ್ಲಿ ತುಸುವೇ ತಡವಾಗಿದ್ದರೂ ಆತ  ಉಳಿಯು ತ್ತಿರಲಿಲ್ಲ.

ಆತನ ಎಲ್ಲಾ ಕೈಬೆರಳುಗಳನ್ನು ಚಳಿ ತಿಂದು ಹಾಕಿತ್ತು. ಎಲ್ಲಾ ಬೆರಳುಗಳನ್ನು ಕತ್ತರಿಸಿ ಹಾಕಲಾಯಿತು. ಇಷ್ಟೆಲ್ಲಾ ಕಷ್ಟಗಳು
ಆತನ ದೇಹವನ್ನೇ ಛಿದ್ರಗೊಳಿಸಿದರೂ, ಮತ್ತೆ ಮತ್ತೆ ಪರ್ವತ ಏರಬೇಕೆಂಬ ಸೆಳೆತವಾದರೂ ಎಂತಹದ್ದಿರಬೇಕು!

ನಡೆಯಲಾರದಾದಗ ತೆವಳಿಕೊಂಡೇ ಏರಿದ. ಎವರ್ಟ್ ನೆತ್ತಿಯ ಮೇಲೆ ಹೆಜ್ಜೆ ಊರಿದಾಗ ಆತನಿಗೆ 16 ವರ್ಷ 14 ದಿನ. ಎವರ್ಟ್ ಏರಿದ ಅತ್ಯಂತ ಕಿರಿಯ ಎಂಬ ದಾಖಲೆ ಬರೆದ. ಬೆಳೆದದ್ದು ವಿಶ್ವದ ಯಾವುದೋ ಮೂಲೆಯಲ್ಲಿ, ಆದರೆ ಸೆಳೆತ ಮೋಹ ಇನ್ನೆಲ್ಲೋ ಇರುವ ಹಿಮಾಲಯದಲ್ಲಿ. ಇದನ್ನೇ ಮನುಷ್ಯನ ತುಡಿತ, ಸಾಧಿಸುವ ಹಂಬಲ ಎನ್ನಬಹುದೆ!