Thursday, 12th December 2024

ಬದಲಿ ಆ್ಯಪ್ ಸ್ಟೋರ್’ಗಳ ಲೋಕ

ಬಡೆಕ್ಕಿಲ ಪ್ರದೀಪ
ಟೆಕ್ ಟಾಕ್

ಅಧಿಕೃತ ಮತ್ತು ಜನಪ್ರಿಯ ಆ್ಯಪ್‌ಗಳಿಗೆ ಬದಲಿಯಾಗಿ ವಿವಿಧ ಸ್ವರೂಪಗಳ ಆ್ಯಪ್ ಇವೆ, ಗೊತ್ತೆೆ!

ಮೊನ್ನೆ ತಾನೆ ಭಾರತದಲ್ಲಿ ಆತ್ಮನಿರ್ಭರ್ ಆ್ಯಪ್ ಸ್ಟೋರ್‌ಗಳ ಬಗೆಗಿನ ಸುದ್ದಿಯ ಕುರಿತು ನಾವು ಮಾತನಾಡುತ್ತಿದ್ದಾಗ ನನಗನಿ ಸಿದ್ದು ಇಷ್ಟು. ಆಂಡ್ರಾಯ್ಡ್’‌‌ನ ಪ್ಲೇ ಸ್ಟೋರ್ ಇರಬಹುದು ಅಥವಾ ಆಪಲ್‌ನ ಆ್ಯಪ್ ಸ್ಟೋರ್ ಇರಬಹುದು, ನಮಗೆ ಬೇಕಾದ ಆ್ಯಪ್‌ಗಳನ್ನು ಅಲ್ಲಿಂದ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವವರೇ ಅತಿ ಹೆಚ್ಚು. ಆದರೆ ಅದನ್ನೂ ಮೀರಿ ಇನ್ನೊಂದು ದೊಡ್ಡ ಆ್ಯಪ್ ಸ್ಟೋರ್‌ಗಳ ಪಟ್ಟಿಯೇ ಇದೆ, ಅವುಗಳ ಮೂಲಕ ಈ ಅಧಿಕೃತ ಸ್ಟೋರ್‌ಗಳಲ್ಲಿ ಸಿಗುವ ಆ್ಯಪ್‌ಗಳನ್ನು ಬಿಟ್ಟು ಬೇರೆ ಆ್ಯಪ್ ‌ಗಳು ಸಿಗುವುದೂ ಇದೆ. ಹಾಗೇ ಈ ಸ್ಟೋರ್‌ಗಳಲ್ಲಿ ಕೆಲವು ಅಧಿಕೃತ ಆ್ಯಪ್‌ಗಳ ಹೆಸರಿನಲ್ಲೇ, ಅದೇ ರೀತಿ ಇರುವ ನಕಲಿ (ಅನಧಿ ಕೃತ) ಆ್ಯಪ್‌ಗಳು ಸಿಗುವುದೂ ಇದೆ.

ಆದರೂ ಇದೊಂದು ವಿಸ್ಮಯ ಲೋಕ. ಆ್ಯಪ್ ಗಳಿಲ್ಲದಿದ್ದರೆ ನಮ್ಮ ಫೋನ್‌ಗಳು ಬರಡಾಗಿ ಬಿಡುವುದು ಸಹಜವೇ ಬಿಡಿ. ಅಂತಹ ಒಂದು ಮಾಯಾಲೋಕವನ್ನು ಈ ಆ್ಯಪ್‌ಗಳು ಸೃಷ್ಟಿ ಮಾಡಿವೆ. ಅದಕ್ಕೆ ಹೆಚ್ಚಿನೆಲ್ಲರನ್ನೂ, ಅದರಲ್ಲೂ ಯುವ ಜನತೆಯನ್ನು ಅವಲಂಬಿತ ವಾಗಿಸಿದೆ. ಹಾಗಾಗಿ, ಈ ಆ್ಯಪ್‌ಗಳ ಸ್ಟೋರ್ ಗಳಲ್ಲಿರುವ ಉತ್ತಮ ಆ್ಯಪ್‌ಗಳ ಮೇಲೆ ಒಂದು ಕಣ್ಣಾಡಿಸೋಣ. ಇಲ್ಲಿ ಕೆಲವೊಂದು ದೊಡ್ಡ ಕಂಪೆನಿಗಳ (ಸ್ಯಾಮ್‌ಸಂಗ್, ಹುವಾವೇ ಇತ್ಯಾದಿ) ಸ್ಟೋರ್‌ಗಳೂ ಇವೆ, ಹಾಗೇನೇ ಅಧಿಕೃತ ಆ್ಯಪ್‌ಗಳ ವಿರುದ್ಧ ದಂಗೆಯೆದ್ದು ಶುರುವಾಗಿರುವ ಅನಧಿಕೃತ ಸ್ಟೋರ್‌ಗಳೂ ಬಹಳ ಬೆಳವಣಿಗೆಯನ್ನು ಕಂಡಿದ್ದೂ ಇದೆ.

ಮೊದಲಿಗೆ ಕೆಲವು ಟಾಪ್ ಕಂಪೆನಿಗಳ ಆ್ಯಪ್ ಸ್ಟೋರ್‌ಗಳನ್ನು ನೋಡೋಣ ಬನ್ನಿ. ಅಂದ ಹಾಗೇ ಇವು ಆಯಾ ಕಂಪೆನಿಗಳು
ಹೆಚ್ಚಾಗಿ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವವರಿಗೆಂದೇ ವಿಶೇಷವಾಗಿ ಮಾಡಿರುವ ಸ್ಟೋರ್‌ಗಳಾದರೂ, ಕೆಲವು
ಆ್ಯಪ್‌ಗಳು ಮಾತ್ರ ಉಳಿದ ಫೋನ್‌ಗಳಲ್ಲಿ ಕೆಲಸ ಮಾಡೋದಿಲ್ಲ. ಉಳಿದವು ಅಲ್ಲಿ ಇನ್ ಸ್ಟಾಲ್ ಮಾಡುವುದಕ್ಕೆ ಸಾಧ್ಯವಾಗುವು ದರಿಂದ ಈ ಸ್ಟೋರ್‌ಗಳಲ್ಲಿ ನಿಮಗೆ ಇಷ್ಟವಾಗುವ ಆ್ಯಪ್‌ಗಳಿವೆಯಾ ಅಂತ ಒಂದು ರೌಂಡ್ ಹಾಕಿ ಬರುವುದಕ್ಕಡ್ಡಿಯಿಲ್ಲ.

ಈಗಾಗಲೇ ಹೇಳಿರುವ ಸ್ಯಾಮ್‌ಸಂಗ್ ಗ್ಯಾಲಕ್ಸೀ ಸ್ಟೋರ್, ಹುವಾವೇ ಆ್ಯಪ್‌ಗ್ಯಾಲರಿ ಬಿಟ್ಟು, ಅಮೆಜಾನ್ ಆ್ಯಪ್‌ಸ್ಟೋರ್, ಶವೋಮಿ ಮಿ ಗೆಟ್ ಆ್ಯಪ್ಸ್‌, ಒಪೋ ಆ್ಯಪ್ ಮಾರ್ಕೆಟ್, ವಿವೋ ಆ್ಯಪ್‌ಸ್ಟೋರ್‌ಗಳೂ ಇವೆ. ಇವುಗಳಲ್ಲದೇ ಕೆಲವು ಆ್ಯಪ್ ಸ್ಟೋರ್‌ಗಳಂತೂ ಕೆಲವು ಮೊಬೈಲ್ ಪ್ರಿಯರ ಫೇವರಿಟ್‌ಗಳಾಗಿವೆ. ಇವು ಕೆಲವೊಮ್ಮೆ ಅಧಿಕೃತ ಸ್ಟೋರ್‌ಗಳಲ್ಲಿ ಸಿಗದ ಅಪ್‌ ಡೇಟ್‌ಗಳನ್ನು ನೀಡುವುದರಿಂದ ಅಥವಾ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಕೊಡುವುದರಿಂದ ಎಲ್ಲರಿಗೂ ಪ್ರಿಯ ಎನಿಸಿದೆ.

ಬದಲಿ ಸ್ಟೋರ್‌ಗಳ ಆಗರ
ಅಂದಹಾಗೆ ಇವೆಲ್ಲ ಆಂಡ್ರಾಯ್ಡ್‌‌ಗೆ ಆಗುವಂತವು ಅನ್ನೋದು ನೆನಪಿರಲಿ. ಯಾಕೆಂದರೆ ಐಓಎಸ್ (ಅಂದರೆ ಐಫೋನ್-ಐಪ್ಯಾಡ್‌ ಗಳ ಓಎಸ್) ಅಷ್ಟು ಸುಲಭವಾಗಿ ಅನಧಿಕೃತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಬಿಡುವುದಿಲ್ಲ. ಆದರೂ ಅಲ್ಲೂ ಕೆಲವೊಂದು ಸ್ಟೋರ್‌ಗಳಿವೆ. ಅವುಗಳನ್ನು ಆಮೇಲೆ ನೋಡೋಣ. ಇದೀಗ ನಾವು ನೋಡೋಣ ಉಳಿದ ಪಾಪ್ಯುಲರ್
ಆಂಡ್ರಾಯ್ಡ್‌ ಬದಲಿ ಸ್ಟೋರ್‌ಗಳನ್ನ. ಮೊದಲನೆಯದು ಗೆಟ್‌ಜಾರ್. ಇದು 2004-05ರಲ್ಲೇ ಕಾರ್ಯಾರಂಭ ಮಾಡಿ, ಅಂದು ಇದ್ದ ನೋಕಿಯಾ ಫೋನ್‌ಗಳಲ್ಲೇ ಆ್ಯಪ್ ಗಳನ್ನು ಇನ್‌ಸ್ಟಾಲ್ ಮಾಡುವ ವ್ಯವಸ್ಥೆಯನ್ನು ಹೊಂದಿತ್ತು. ಅದೀಗ ಹಳೇ ರೀತಿ ಯಲ್ಲೇ ಇಂದಿನ ವ್ಯವಸ್ಥೆಗೆ ತಕ್ಕ ಹಾಗೆ, ಆ್ಯಪ್‌ಗಳು, ಏಪಿಕೆಗಳು ಅಂದರೆ ಆಂಡ್ರಾಯ್ಡ್‌ ಪ್ಯಾಕೇಜ್ಗಳು ಅನ್ನುವ ಇನ್‌ಸ್ಟಾಲ್ ಮಾಡಬಹುದಾದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇನ್ನು ಏಪಿಕೆ ಮಿರರ್ ಅನ್ನೋ ಇನ್ನೊಂದು ಸ್ಟೋರ್‌ನಲ್ಲಿ ನೀವು ಕೇವಲ ಇತರೇ ಆ್ಯಪ್‌ಗಳಲ್ಲದೇ ಈಗಾಗಲೇ ಪ್ಲೇಸ್ಟೋರ್ ‌ನಲ್ಲಿರುವ ಆ್ಯಪ್‌ಗಳ, ಇನ್ನೂ ಲಭ್ಯವಾಗಬೇಕಿರುವ ಅಪ್‌ಡೇಟ್‌ಗಳಿಂದ ಹಿಡಿದು, ಹಿಂದಿನ ಅಪ್‌ಡೇಟ್‌ಗಳನ್ನೂ ಡೌನ್ ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮಗಿಷ್ಟವಾಗದ ಅಪ್‌ಡೇಟನ್ನು ಬಿಟ್ಟು, ಹಿಂದಿನ ಅಪ್‌ಡೇಟ್‌ಗೆ ಹೋಗಬಹುದು, ಅಲ್ಲಿಂದ ಮತ್ತೆ ಲೇಟೆಸ್ಟ್‌ ಅಪ್‌ಡೇಟನ್ನ ಪ್ಲೇಸ್ಟೋರ್ ಅಥವಾ ಇದೇ ಏಪಿಕೆ ಮಿರರ್‌ನಿಂದ ಇನ್‌ಸ್ಟಾಲ್ ಮಾಡಿ ಕೊಳ್ಳಬಹುದು.

ಹಳೆ ಸ್ಟೋರ್
ಎಫ್‌ಡ್ರಾಯ್ಡ್‌ ಅನ್ನೋ ಇನ್ನೊಂದ್ ಆ್ಯಪ್‌ಸ್ಟೋರ್ ತುಂಬಾ ಹಳೇ ಸ್ಟೋರ್ ಆಗಿದ್ದು, ಸರಳವಾಗಿ ಡಿಸೈನ್ ಮಾಡಿರುವ ಇದೊಂದು ಓಪನ್‌ಸೋರ್ಸ್ ಆ್ಯಪ್‌ಸ್ಟೋರ್ ಆಗಿದ್ದು, ಇದರ ಮೂಲಕ ಹಲವು ಸರಳ ಆ್ಯಪ್‌ಗಳಿಂದ ತೊಡಗಿ, ಕೆಲವು ವಿರಳ ಆ್ಯಪ್‌ಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇವೇ ಅಲ್ಲದೇ ಇನ್ನೂ ಹಲವು ಬದಲಿ ಸ್ಟೋರ್‌ಗಳಿವೆ. ಆ್ಯಪ್‌ಟಾಯ್ಡ್‌, ಎಪಿಕೆ ಅಪ್‌ಡೇಟರ್, ಏಪಿಕೆ ಪ್ಯೂರ್,  ಏಪಿವಿಪಿಎನ್ ಹೀಗೆ ಹತ್ತು ಹಲವು ಈ ಲಿಸ್ಟ್’‌‌ನಲ್ಲಿವೆ. ಆದರೆ ಯಾವತ್ತೂ ನೀವು ಏನು ಡೌನ್‌ಲೋಡ್ ಮಾಡ್ತಾ ಇದೀರಿ ಅನ್ನೋದನ್ನು ಸರಿಯಾಗಿ ಪರಿಶೀಲಿಸಿ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿರುವುದು ನಿಮ್ಮ ಜವಾಬ್ದಾರಿ. ಯಾಕೆಂದರೆ, ಈ ಸ್ಟೋರ್‌ಗಳಲ್ಲಿ ಅಧಿಕೃತ ಸ್ಟೋರ್ ಗಳಲ್ಲಿರುವಷ್ಟು ಸುರಕ್ಷತೆ, ಹಾಗೂ ವ್ಯವಸ್ಥಿತ ಹಿಡಿತ ಇರುವುದಿಲ್ಲ.

ಒಟ್ಟಾರೆ, ಇದು ಈ ಲೋಕದ ಒಂದು ಪರಿಚಯವಾಗಿತ್ತೇ ಹೊರತು, ಇದರೊಳಗೆ ನುಗ್ಗುವಾಗ ಆಗಬಹುದಾದ ಆಕಸ್ಮಿಕಗಳಿಗೆ ನೀವೇ ಜವಾಬ್ದಾರಿಯಾದ್ದರಿಂದ ಜಾಗರೂಕತೆಯಿಂದ ಒಳನುಗ್ಗಿ.

ಐಓಎಸ್‌ನಲ್ಲಿ ಅಡ್ಡದಾರಿಗಳು 
ಇದು ಐಫೋನ್‌ನಲ್ಲಿ ಆ್ಯಪ್‌ಸ್ಟೋರ್‌ನ ನೀಡದ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಅಂದುಕೊಳ್ಳುವವರಿಗಾಗಿ. ಹೆಚ್ಚಾಗಿ ಆ್ಯಪಲ್‌ನ ಫೋನ್ ಅಥವಾ ಐಪ್ಯಾಡ್ ಇತ್ಯಾದಿಗಳನ್ನು ಬಳಸಬೇಕಾದವರು ಅದರಲ್ಲಿ ಅನಧಿಕೃತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ, ಉಪಯೋಗಿಸುವ ಯೋಚನೆ ಮಾಡಿದರೆ ಜೈಲ್‌ಬ್ರೇಕ್ ಮಾಡಬೇಕಾಗುತ್ತಿತ್ತು. ಆದರೆ ಈ ಸ್ಟೋರ್
ಗಳು ಅದಿಲ್ಲದೆ ಆ್ಯಪ್‌ಗಳನ್ನು ಉಪಯೋಗಿಸುವ ದಾರಿಗಳಾಗಿವೆ. ಮೊದಲನೆಯದು ಟ್ವೀಕ್‌ಬಾಕ್ಸ್‌. ಕೆಲವು ಟೆಸ್ಟ್‌‌ಗಳನ್ನು ಮಾಡಿದ ನಂತರವೇ ಆ್ಯಪ್‌ಗಳನ್ನು ತನ್ನ ಸ್ಟೋರ್ ಒಳಗೆ ಬಿಟ್ಟುಕೊಳ್ಳುವ ಇದು, ಉತ್ತಮ ಆ್ಯಪ್ ಗಳ ಭಂಡಾರವೇ. ಇನ್ನೊಂದು ಐಓಎಸ್ ‌ಈಮಸ್ ಅನ್ನುವ ಸ್ಟೋರ್ ಮೂಲಕವೂ ಬೇರೆ ಬೇರೆ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇನ್ನು ಟುಟುಆ್ಯಪ್ ಅನ್ನುವ ಈ ಆ್ಯಪ್‌ನ ಮೂಲಕ ಐಓಎಸ್ ಅಲ್ಲದೇ ಆಂಡ್ರಾಯ್ಡ್‌‌ನಲ್ಲಿ ಕೂಡ ಆ್ಯಪ್ ಇನ್‌ಸ್ಟಾಲ್ ಮಾಡಬಹುದು.

ಇನ್ನು ಪ್ರೀಮಿಯಂ ಆ್ಯಪ್‌ಗಳನ್ನು ಐಓಎಸ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವುದೂ ಸಾಧ್ಯ. ಐಓಎಸ್‌ನ ಲಿಸ್ಟ್ ಚಿಕ್ಕದಾದರೂ ಇವು ಕೆಲವರಿಗೆ ಅಗತ್ಯವಾಗಿ ಬೇಕಾಗುವ ಆ್ಯಪ್‌ಗಳನ್ನು ನೀಡಬಲ್ಲವು ಎನ್ನಲಾಗಿದೆ.