Saturday, 14th December 2024

ಭಾರತದ ಪಿಂಕ್ ಪ್ಯಾರಿಸ್

ಪ್ರವಾಸವೇ ನಮ್ಮ ಜೀವನದ ಉಲ್ಲಾಸ. ಈಗ ಅಂದರೆ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವ ಈ ದಿನಗಳು, ಮುಂದಿನ ಪ್ರವಾಸಕ್ಕೆ ಯೋಜಿಸುವ ಸಮಯ. ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ ಎಂದು ಕೇಳಿದಾಗ, ಓದುಗರೊಬ್ಬರು ಉತ್ಸಾಹದಿಂದ ಸ್ಪಂದಿಸಿದ ಪರಿ ಇಲ್ಲಿದೆ.

ಕೀರ್ತನ ಎನ್.ಎಂ. ಮೈಸೂರು

ಪ್ರವಾಸ ಎಂದೊಡನೆ ನಮಗೆಲ್ಲ ಮೊದಲು ನೆನಪಾಗುವುದೇ ಶಾಲೆಯ ದಿನಗಳು. ಅಕ್ಟೋಬರ್ -ನವೆಂಬರ್ ಬಂತೆಂದರೆ ಸಾಕು ಎಲ್ಲಾ ಮಕ್ಕಳ ಬಾಯಲ್ಲಿ ಒಂದೊಂದು ಊರಿನ ಹೆಸರು. ಪ್ರವಾಸದ ಸಮಯ ವೆಂದರೆ ಕೆಲವರಿಗೆ ಶಾಪಿಂಗ್ ಚಿಂತೆ, ಕೆಲವರಿಗೆ
ದುಡ್ಡು ಹೊಂದಿಸುವ ಚಿಂತೆ. ನನ್ನಂತವರಿಗೆ ಪೋಷಕರನ್ನು ಹೇಗೆ ಪುಸಲಾಯಿಸಿ ಪ್ರವಾಸಕ್ಕೆ ಒಪ್ಪಿಸುವುದು ಎಂಬ ಚಿಂತೆ.

ಇವೆಲ್ಲಾ ಚಿಂತೆಗಳ ಸಂತೆಯೊಂದಿಗೆ ಸ್ನೇಹಿತರೆಲ್ಲಾ ಸೇರಿ ಒಂದು ಸಭೆಯನ್ನೇ ನಡೆಸುತ್ತಿದ್ದೆವು. ಆ ವಯಸ್ಸಿನಲ್ಲಿ ಪ್ರವಾಸವೆಂದರೆ,
ಶಾಲೆಯ ನಾಲ್ಕು ಗೋಡೆಗಳ ಬಂಧನದಿಂದ ತಪ್ಪಿಸಿಕೊಂಡು ಸ್ನೇತರೊಂದಿಗೆ ದೂರದ ಯಾವುದೋ ಊರಿಗೆ ಹೋಗಿ ಮೋಜು ಮಾಡಿ ಬರುವುದಷ್ಟೇ ಎಂದು ತಿಳಿದಿದ್ದೆೆವು. ಅಷ್ಟಾಗಿ ಟ್ರಾವೆಲ್ ಫ್ರೀಕ್ ಅಲ್ಲದ ನಮ್ಮ ಕುಟುಂಬ ಕರ್ನಾಟಕದ ಗಡಿಯಾಚೆಗೆ ಪ್ರವಾಸ ಕೈಗೊಂಡಿದ್ದೇ ಕಡಿಮೆ.

ನನ್ನೂರು ನಂಜನಗೂಡಿನಿಂದ ಮೈಸೂರಿಗೆ ಕೇವಲ 26.ಕಿ.ಮೀ. ಎರಡೋ ಅಥವ ಮೂರು ತಿಂಗಳಿಗೊಮ್ಮೆ ನಮ್ಮಪ್ಪ ನಮ್ಮ ನ್ನೆಲ್ಲ ಕೂಡಿಸಿಕೊಂಡು, ಅವರೂ ಸೇರಿದಂತೆ ಒಟ್ಟು ಮನೆಯ ಐದು ಮಂದಿ ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದೆವು. ಸಿನಿಮಾ-ನಾಟಕಗಳೆಲ್ಲವೂ ಕನಸು. ಇನ್ನು ಹೋಟೆಲ್…. ಅದು ನಮ್ಮಪ್ಪನ ಮನಸ್ಸಿಗೊಪ್ಪುವ ಶಿಷ್ಠಾಚಾರ ಮತ್ತು ಗೋಜಿಲ್ಲದ ಸ್ಥಳ ವಾಗಿರಬೇಕು. ಅಲ್ಲಿ ತಿಂಡಿ ತಿಂದು, ಬಟ್ಟೆ ಬರೆ ಖರೀದಿಸಿ ಮನೆಗೆ ವಾಪಸ್. ಈ ನಡುವೆ ಮೋಜು-ಗೋಜಿಗೆ ಅವಕಾಶಲ್ಲ. ಹೋಗಿ ಬರುವ ಎರಡು ಗಂಟೆ ನಮ್ಮಪ್ಪನ ಉಪನ್ಯಾಸವನ್ನು ಕಡ್ಡಾಯವಾಗಿ ಕೇಳಬೇಕಿತ್ತು. ಅಲ್ಲಿಗೆ ಅರ್ಧ ದಿನದ ಪ್ರವಾಸ ಮುಗಿಯಿತು.

ಇದನ್ನು ಬಿಟ್ಟರೆ ಬೆಂಗಳೂರಿನ ಇಬ್ಬರು ಮಾವನ ಮನೆಯಲ್ಲಿ ಎರಡು ತಿಂಗಳು ಬೇಸಿಗೆ ರಜೆಯ ಕ್ಯಾಂಪ್. ಆದರೆ ತಂದೆಯಂತೂ ತಮ್ಮ ಜವಾಬ್ದಾರಿಯನ್ನರಿತು, ಯಾವಾಗಲೂ ಕಾಲಿಗೆ ಚಕ್ರಕಟ್ಟಿ ತಿರುಗುತ್ತಿದ್ದರು. ಅವರ ವೃತ್ತಿಗೆ ತಕ್ಕಂತೆ ತುಂಬಾ ತಿರುಗಾಟ. ಹೀಗಾಗಿ ಮನೆಯವರೊಂದಿಗೆ ಪ್ರವಾಸ ಕಡಿಮೆ. ಶಾಲಾ-ಕಾಲೇಜು ಪ್ರವಾಸ ಹಾಗು ಕುಟುಂಬದೊಂದಿಗಿನ ತಿರುಗಾಟ ಸೇರಿದಂತೆ ನಾನು ನೋಡಿದ್ದು ಪುಣೆ, ಹೈದರಾಬಾದ್, ತಿರುಪತಿ, ಮಂತ್ರಾಲಯ, ಕುಂಬಕೋಣ, ಶ್ರೀರಂಗಂ ಮತ್ತು ತಂಜಾಊರು. ನನಗೆ ಭರತನಾಟ್ಯ ಕಲಿಸುತ್ತಿದ್ದ ಗುರುಗಳಾದ ರಮ್ಯ ಎಸ್.ರಾಘವೇಂದ್ರ ಅವರ ನೃತ್ಯ ತಂಡದೊಂದಿಗೆ ನೃತ್ಯ ಪ್ರದರ್ಶನ ನೀಡಲು ಹೋದ್ದೂ ಈ ಪಟ್ಟಿಯಲ್ಲಿ ಸೇರಿದೆ.

ಜೈಪುರದ ಬಣ್ಣದ ಲೋಕ
ಈ ಕರೋನಾ ಸನ್ನಿವೇಶದಲ್ಲಿ, ‘ವಿಶ್ವವಾಣಿ’ಯ ‘ಓದುಗರ ವೇದಿಕೆ’ ಶೀರ್ಷಿಕೆ ಅಡಿಯಲ್ಲಿ ‘ಆರು ತಿಂಗಳಿಂದ ಪ್ರವಾಸ ಮಾಡಲು ಅವಕಾಶ ಸಿಗದೆ ನಿಮ್ಮ ಕಾಲುಗಳು ಜಡ್ಡು ಕಟ್ಟಿವೆಯೆ? ಹೊಸಾ ಜಾಗಗಳನ್ನು ನೋಡದೇ ಮನಸ್ಸು ಜಡವಾಗಿದೆಯೆ? ಹಾಗಾದರೆ ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ?’ ಎಂದು ಕೇಳಿದಾಗ, ನನಗೆ ಮೊದಲು ನೆನಪಾಗಿದ್ದು ಜೈಪುರ.

ಚಿಕ್ಕವಳಿದ್ದಾಗ ಬಹಳ ಆಸೆಪಟ್ಟು ನೋಡಬೇಕೆಂದಿದ್ದ ಈ ಊರು, ಎಂಬಿಎ ಮುಗಿಸುವಷ್ಟರಲ್ಲಿ ಮನಸ್ಸಿನ ಯಾವುದೋ
ಮೂಲೆಯಲ್ಲಿ ಮರೆಯಾಗಿಬಿಟ್ಟಿತ್ತು. ರಾಜಸ್ಥಾನದ ಸೌಂದರ್ಯಕ್ಕೆ ಮತ್ತು ಅದರ ಅದ್ಭುತ ಇತಿಹಾಸಕ್ಕೆ ಕನ್ನಡಿ ಹಿಡಿದಂತಿರುವ ಈ ಊರು ರಾಜಸ್ಥಾನದ ರಾಜಧಾನಿಯೂ ಕೂಡ. ಇದು ಭಾರತದ ಮೊಟ್ಟಮೊದಲ ಯೋಜಿತ ನಗರವಾಗಿದ್ದು ಹಲವು ಪ್ರವಾಸಿ ಗರ ಕಣ್ಮನ ಸೆಳೆಯುವುದರಿಂದ, ಇದನ್ನು ಭಾರತದ ಪ್ಯಾರಿಸ್ ಎಂದು ಮತ್ತು ಪಟ್ಟಣದ ಹಲವು ಮನೆಗಳು ಗುಲಾಬಿ ಬಣ್ಣದಿಂದ ಕೂಡಿದ್ದು ಇದನ್ನು ಪಿಂಕ್ ಸಿಟಿ ಎಂದು ಕರೆಯುತ್ತಾರೆ.

ಈಗ ಆಸೆಯೇನೋ ಮೂಡಿಯಾಯಿತು. ಆದರೆ ಮತ್ತೊಮ್ಮೆ ಅದೇ ಹಳೆಯ ಚಿಂತೆ. ತಂದೆ ತಾಯಿಯನ್ನು ಒಪ್ಪಿಸುವುದು ಹೇಗೆ? ಕೋವಿಡ್-19 ಯಿಂದಾಗಿ ಪಕ್ಕದ ದಿನಸಿ ಅಂಗಡಿಗೆ ಹೋಗಲು ಬಿಡದ ತಂದೆ, ಕಾಯಿಸದೆ ನೀರು ಸಹ ಕುಡಿಯಲು ಬಿಡದ ತಾಯಿ. ಇವರಿಬ್ಬರನ್ನು ಜೈಪುರಕ್ಕೆ ಕರೆದುಕೊಂಡು ಹೋಗಿ ಅಥವ ಕಳಿಸಿಕೊಡಿ ಎಂದು ಕೇಳುವುದೇ ದೊಡ್ಡ ಸವಾಲು. ಹಾಗಂತ ನಾಳೆಯೇ ಜೈಪುರಕ್ಕೆ ಹೋಗೋಣ ಎಂಬ ಹಠವಿಲ್ಲ. ಆದರೆ ವೃತ್ತಿ ಜೀವನಕ್ಕೆ ಕಾಲಿಡುವ ಮುನ್ನ ಒಮ್ಮೆ ಜೈಪುರಕ್ಕೆ ಹೋಗಿ ಬರಬೇಕೆಂಬ ಆಸೆ ಅಷ್ಟೆ. ದೇವರ ದಯೆ ಯಿಂದ ಆದಷ್ಟು ಬೇಗ ಈ ಮಹಾಮಾರಿಯ ರೌದ್ರ ನರ್ತನ ಕಡಿಮೆಯಾದರೆ ಕುಟುಂಬ ದೊಂದಿಗೆ ಜೈಪುರಕ್ಕೆ ಹೋಗ ಬಯಸಿದ್ದೇನೆ.

ಹೋಗುವ ಮುನ್ನ ಯಾವ ರೀತಿ ತಯಾರಿ ಎಂದರೆ ಆ ಊರಿನ ಬಗ್ಗೆ ಕೆಲವು ಪ್ರವಾಸ ಕಥನಗಳನ್ನು ಓದುತ್ತಿದ್ದೇನೆ, ಗೂಗಲ್ ಗುರುವಿನಿಂದ ಆ ಸ್ಥಳದ ಬಗ್ಗೆ ಮತ್ತು ಆಸು-ಪಾಸಿನ ಊರಿನ ಬಗ್ಗೆ ಮಾಹಿತಿ ಪಡೆದಿದ್ದೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಕನಸಿನ ಊರಿನ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದೇನೆ. ಆಂಗ್ಲಭಾಷೆಯಲ್ಲಿ ಹೇಳುವಂತೆ ‘ಕ್ಯೂರಿಯಾಸಿಟಿ ಈಸ್ ದ ಫ್ಯೂಯೆಲ್ ಫಾರ್ ಡಿಸ್ಕವರಿ ಅಂಡ್ ಲರ್ನಿಂಗ್’ (ಹೊಸತನ್ನು ಕಲಿಯಲು ಕುತೂಹಲವೇ ಇಂಧನ.) ಕುತೂಹಲವಿಲ್ಲದೆ ಮಾಡುವ ಯಾವ ಕೆಲಸವೂ ಆನಂದವನ್ನು ನೀಡಲಾಗದು.

ಪ್ರವಾಸದ ಕನಸನ್ನು ಸಾಕಾರಗೊಳಿಸಿಕೊಳ್ಳುವ ಜೊತೆಗೆ ನಮ್ಮ ಮತ್ತು ನಮ್ಮ ಸುತ್ತ ಇರುವವರ ಕಾಳಜಿಯೂ ಮುಖ್ಯ. ನಾವು
ಹೋದ ಕಡೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತ, ಮುಖವನ್ನು ಮಾಸ್ಕ್ ‌‌ನಿಂದ ಮುಚ್ಚಿ, ಕೈಗಳನ್ನು ಆಗಾಗ
ಸ್ವಚ್ಛ ಮಾಡಿಕೊಳ್ಳುತ್ತ, ಬಿಸಿ ನೀರು ಮತ್ತು ಬಿಸಿಯಾದ ಆಹಾರ ಸೇವಿಸಿ, ಸರ್ಕಾರ ಮತ್ತು ವೈದ್ಯರು ನೀಡಿರುವ ಸಲಹೆ-
ಸೂಚನೆಗಳನ್ನು ಪಾಲಿಸುವ ಮೂಲಕ ಸುರಕ್ಷತೆ ಕಾಪಾಡಿಕೊಳ್ಳಬೇಕಾಗಿದೆ. ಪ್ರವಾಸದುದ್ದಕ್ಕೂ ಒಂದಂತೂ ನೆನಪಿರಬೇಕು
ಕೋವಿಡ್-19 ಒಂದು ವೈರಾಣುವೇ ಹೊರತು ನಮ್ಮ ದಾಯಾದಿಯಲ್ಲ. ಅದಕ್ಕೆ ನನ್ನವರು ತನ್ನವರು, ನನ್ನೂರಿನವರು ಅಥವ ಪ್ರವಾಸಿಗರೆಂಬ ಭೇದವಿಲ್ಲ. ಆದ್ದರಿಂದ ಹೋದ ಕಡೆ ನಾಗರಿಕರಾಗಿ, ಜಾಗರೂ ಕರಾಗಿ ನಡೆದುಕೊಳ್ಳುವುದೇ ನಾವು ತೆಗೆದು ಕೊಳ್ಳುವ ಮುನ್ನೆಚ್ಚರಿಕೆ. ಇದೆಲ್ಲವನ್ನು ಪಾಲಿಸಿದಲ್ಲಿ ಪ್ರವಾಸ ಪ್ರಯಾಸವಲ್ಲ.