Thursday, 12th December 2024

ಪರವಶತೆಗೆ ಒಳಗಾಗದಿರೋಣ…

ಪರವಶತೆಯ ಮೇಲೆ ಮೊದಮೊದಲು ಹಿಡಿತ ಸಾಧಿಸುವುದು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಒಂದಷ್ಟು ಮಾರ್ಗದರ್ಶನ ಮಾಡಲು ಖಂಡಿತ ಸಾಧ್ಯವಿದೆ. ಇದಕ್ಕಾಗಿ ನಮಗೆ ಕೊಂಚ ತಾಳ್ಮೆ, ವಿವೇಚನೆಯ ಅಗತ್ಯವಿದೆ.

ಮಹಾದೇವ ಬಸರಕೋಡ ಅಮೀನಗಡ

ನಾವು ನಮ್ಮ ಮನಸ್ಸಿನಲ್ಲಿ ಹತ್ತು ಹಲವು ಭ್ರಮಾಭರಿತ ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತೇವೆ. ಸದಾ ನಾವು ಇಚ್ಚಿಸದಂತೆ ಜೀವನ ನಡೆಯಬೇಕೆಂಬ ಬಯಕೆಯಲ್ಲಿ ಮುಳುಗು ಹಾಕುತ್ತಿರುತ್ತೇವೆ. ವಾಸ್ತವಿಕತೆಯನ್ನು ಅರಿತುಕೊಳ್ಳದೇ ಕೇವಲ ಅಹಂಭಾವದಲ್ಲಿ ಎಲ್ಲವನ್ನೂ ಪಡೆದುಕೊಳ್ಳುವ ಹುಚ್ಚು ಸಾಹಸಕ್ಕೆ ಮುಂದಾಗುತ್ತೇವೆ. ಮುಂದಾಲೋಚನೆಯಿಲ್ಲದೇ ಭಾವನೆಗಳ ಸುಳಿಯಲ್ಲಿ ಸಿಲುಕಿಕೊಂಡು ಪರವಶತೆಯಲ್ಲಿ ಮುಳುಗಿಬಿಡುತ್ತೇವೆ.

ಹತ್ತು ಹಲವು ಹುಚ್ಚು ಕಾರ್ಯಗಳಿಗೆ ಕೈ ಹಾಕುತ್ತೇವೆ. ಎಲ್ಲವನ್ನೂ ಪಡೆದುಕೊಂಡವರಂತೆ ಒಂದಷ್ಟು ಕಾಲ ಬೀಗುತ್ತೇವೆ. ಮುಂದೊಮ್ಮೆ ವಾಸ್ತವಿಕತೆಗೆ ಮರಳಿದಾಗ ನಮ್ಮ ಲೆಕ್ಕಾಚಾರವೆಲ್ಲ ಬುಡಮೇಲಾಗಿರುತ್ತದೆ. ನಾವು ಯೋಚಿಸಿದ್ದೊಂದು, ಆಗಿದ್ದು ಇನ್ನೊಂದು ಎಂಬ ಅರಿವಾಗುತ್ತದೆ. ಪರೋಕ್ಷವಾಗಿ ನಮ್ಮ ಅವನತಿಗೆ ನಾವೇ ಕಾರಣರಾಗಿರುತ್ತೇವೆ.

ಭಸ್ಮಾಸುರ ಶಿವನ ಪರಮಭಕ್ತ. ದೈತ್ಯದೇಹಿಯಾದ ಇವನು ಅತ್ಯಂತ ಶಕ್ತಿಶಾಲಿಯಾದ ಅಸುರ. ಅವಿವೇಕಿ ಕೂಡ. ಶಿವನನ್ನು
ಒಲಿಸಿಕೊಳ್ಳಲು ಭಯಂಕರ ಉಗ್ರವಾದ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನಗೆ ಬೇಕಾದ ವರನ್ನು ಬೇಡಿಕೋ’ ಎಂದು ಹೇಳಿದಾಗ ತನಗೆ ಅಮರತ್ವನ್ನು ದಯಪಾಲಿಸಬೇಕೆಂಬ ಬೇಡಿಕೆಯನ್ನು ಶಿವನ ಮುಂದಿಡುತ್ತಾನೆ. ಅಂತಹ ವರ ಕೊಡಲು ಸಾಧ್ಯವಿಲ್ಲ ಎಂಬ ಶಿವನ ಮಾತಿಗೆ ತನ್ನ ಬೇಡಿಕೆಯ ಸ್ವರೂಪವನ್ನು ಬದಲಾಯಿಸಿದ ಭಸ್ಮಾಸುರ ತಾನು ಯಾರ ತಲೆಯ ಮೇಲೆ ಕೈಯಿಟ್ಟರೂ ಅವರು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಬೇಕು ಎಂಬ ವರ ಕೇಳಿದಾಗ ಶಿವ ತಥಾಸ್ತು ಎನ್ನುತ್ತಾನೆ.

ಯಾರನ್ನು ಬೇಕಾದರೂ ಭಸ್ಮ ಮಾಡುವ ಶಕ್ತಿಯ ವರ ಪಡೆದು ಬೀಗಿದ ಭಸ್ಮಾಸುರ ದೇವಾನುದೇವತೆಗಳಿಗೆ ಕಂಟಕಪ್ರಾಯ ನಾಗುತ್ತಾನೆ. ಯಾರೇ ಸಿಕ್ಕಿದರೂ, ಅವರನ್ನು ಭಸ್ಮ ಮಾಡಲು ಮುಂದಾಗುತ್ತಾನೆ. ಈ ಲೋಕಕ್ಕೇ ಕಂಟಕಪ್ರಾಯನಾಗುತ್ತಾನೆ. ಅವನ ಉಪಟಳಕ್ಕೆ ಬೇಸತ್ತ ಅವರು ಅವನ ಸಂಹಾರಕ್ಕೆ ಉಪಾಯವೊಂದನ್ನು ಹುಡುಕಲಯ ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಮೋಹಿನಿಯ ರೂಪ ತಾಳಿ ಭಸ್ಮಾಸುರ ಎದುರು ಬರುತ್ತಾನೆ.

ಹಿನಿಯ ಮೋಹಕತೆ ಸಿಲುಕಿದ ಭಸ್ಮಾಸುರ ತನ್ನನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಾನೆ. ತಾನು ಮಾಡುವ ನಾಟ್ಯ ಭಂಗಿಗಳನ್ನು ಮಾಡಿ ತೋರಿಸಿದರೆ ಮಾತ್ರ ನಾನು ಮದುವೆಯಾಗುವುದಾಗಿ ಮೋಹಿನಿ ರೂಪದ ವಿಷ್ಣು ಹೇಳಿದಾಗ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ. ನಾಟ್ಯದಲ್ಲಿ ಮೈ ಮರೆಯುವಂತೆ ಮಾಡಿದ ಮೋಹಿನಿ ರೂಪದ ವಿಷ್ಣು, ತನ್ನ ತಲೆಯ ಮೇಲೆ ಕೈಯಿಟ್ಟು ಕೊಳ್ಳುವ ನಾಟ್ಯದ  ಭಂಗಿ ಪ್ರದರ್ಶಿಸಿದಾಗ, ಭಸ್ಮಾಸುರ ಕೂಡ ಆ ಕ್ಷಣದಲ್ಲಿ ಮೈಮರೆತು, ತನ್ನ ತಲೆಯ ಮೇಲೆ ಕೈಯಿಟ್ಟುಕೊಳ್ಳು ತ್ತಾನೆ.

ಅವನು ಪಡೆದ ವರದಂತೆ ಅವನು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗುತ್ತಾನೆ. ಹೀಗೆ ವಿಪರೀತ ಎನಿಸುವ ಶಕ್ತಿಯನ್ನು ಪಡದಿದ್ದ ಆತ, ಆ ಶಕ್ತಿಯ ಉಪಯೋಗದಿಂದಲೇ ತನ್ನ ದಾರುಣ ಅಂತ್ಯಕ್ಕೆ ತಾನೇ ಕಾರಣವಾಗುತ್ತಾನೆ. ಪರವಶತೆಯು ಇಂತಹ ನೂರೆಂಟು ಅವಘಡಗಳಿಗೆ ಕಾರಣವಾಗುತ್ತದೆ. ನೋವು, ಬದುಕಿನ ಬವಣೆಗಳನ್ನು ತಂದೊಡ್ಡುತ್ತದೆ. ಪರವಶತೆಯ ಮೇಲೆ ಮೊದಮೊದಲು ಹಿಡಿತ ಸಾಧಿಸುವುದು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಒಂದಷ್ಟು ಮಾಗದರ್ಶನ ಮಾಡಲು ಖಂಡಿತ ಸಾಧ್ಯವಿದೆ.

ಇದಕ್ಕಾಗಿ ನಮಗೆ ಕೊಂಚ ತಾಳ್ಮೆ, ವಿವೇಚನೆಯ ಅಗತ್ಯವಿದೆ. ನಂತರ ಪರವಶತೆಯ ಮೇಲಿನ ಹಿಡಿತ ತಾನಾಗಿಯೇ ಬಿಗಿಗೊಳ್ಳು ತ್ತದೆ. ಆಗ ಅದು ಪ್ರಜ್ಞಾಪೂರಿತ ಆಲೋಚನೆಯಾಗಬಲ್ಲದು. ಇದರಿಂದ ನಮ್ಮ ಆಂತರ್ಯದಲ್ಲಿ ಅಸೀಮತೆಯನ್ನು ಅರಸುವ ಹುಚ್ಚು ತುಡಿಗಳಿಗೆ ಕಡಿವಾಣ ಹಾಕಬಹುದು. ನಮ್ಮ ಅಭೀಪ್ಸೆಗಳನ್ನು ಪೂರೈಸಲು ಭೌತಿಕ ಮಾಧ್ಯಮಗಳಿಂದ ಸಾಧ್ಯವಿಲ್ಲ ಎಂಬ ಅರಿವು ಜಾಗೃತವಾಗುತ್ತದೆ. ನಮ್ಮೊಳಗಣಕ್ಕೆ ಪುಷ್ಟಿಯನ್ನು ತಂದುಕೊಡುತ್ತದೆ, ವಾಸ್ತವಿಕತೆಯನ್ನು ಸಮರ್ಥವಾಗಿ ನಿರ್ವ ಹಿಸಲು ಸಾಧ್ಯವಾಗುತ್ತದೆ.

ದುಃಖ, ದುಗುಡ, ದುಮ್ಮಾನಗಳಿಂದ ದೂರಗೊಳಿಸುತ್ತದೆ. ಬದುಕು ಆನಂದದ ಹಾದಿಯನ್ನು ಹಿಡಿಯುತ್ತದೆ.