Saturday, 14th December 2024

ವಿವೇಕವಂತನೇ ನಿಜವಾದ ಮಾನವಂತ

ನಾಗೇಶ ಜೆ.ನಾಯಕ ಜಗತ್ತು ಎಲ್ಲ ಬಗೆಯ ಮನುಜರಿಂದ ತುಂಬಿದೆ. ಇತರರ ನಗುವಿನಲೇ ಸುಖವ ಕಾಣುವವನೊಬ್ಬ, ತನ್ನ ದುಃಖವನ್ನೇ ದೊಡ್ಡ ದೆಂಬಂತೆ ತಿಳಿದು ಕೊರಗುವವನೊಬ್ಬ, ಪರರ ಸೇವೆಗೆ ಜೀವವನ್ನೇ ಮುಡಿಪಾಗಿಡುವವನೊಬ್ಬ, ಸ್ವಾರ್ಥ ಕ್ಕಾಗಿಯೇ ಬದುಕು ಮಾಡುವವನು ಮತ್ತೊಬ್ಬ. ಹೀಗೆ ಎಲ್ಲರ ಬಗೆ ಬಗೆಯ ಸ್ವಭಾವಗಳು ಜಗತ್ತನ್ನು ಭಿನ್ನತೆಯ ಲೋಕವನ್ನಾ ಗಿಸಿವೆ.

ಮಾನವಂತನ ಬದುಕು ಹೇಗಿರಬೇಕು ಎಂಬುದರ ಕುರಿತು ಡಿ.ವಿ.ಜಿ. ಅವರು ಬಣ್ಣಿಸುತ್ತಾರೆ. ಇತರರ ಏಳ್ಗೆ ಕಂಡು ಕರುಬದೆ, ಕೀಳರಿಮೆ ತಾಳದೆ ಸಮಾನ ಮನಸ್ಕನಾಗಿ ವಿವೇಕವನ್ನು ಹೊಂದಿರುವವನು ಮಾನವಂತನೆನಿಸಿಕೊಳ್ಳುತ್ತಾನೆ. ಭಯದ ಬದುಕು ಮಾನವಂತನಿಗೆ ಎಂದಿಗೂ ತರವಲ್ಲ. ಅವರವರ ಕರ್ಮಫಲಗಳು ಅವರವರಿಗೆ. ಲೋಕದ ಡೊಂಕ ತಿದ್ದುವವನು ಮೊದಲು ತನ್ನ ಡೊಂಕುಗಳ ಕುರಿತು ಯೋಚಿಸಬೇಕು. ಅದಕ್ಕೆ ಮಾನವಂತನು ಮೊದಲು ತನ್ನ ತಪ್ಪುಗಳನ್ನು ಅರಿತು ನಡೆದರೆ ಭಯದ ವಾತಾವರಣ ನಿರ್ಮಾಣವಾಗದು.

ಮೌನದಿಂದಂಬಲಿಯನುಂಡು ತಣಿಯುವ ಮಾನಿ

ಶ್ವಾನನುಣುವೆಂಜಲೋಗರಕೆ ಕರುಬುವನೆ ?
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ
ಮಾಣು ನೀಂ ತಲ್ಲಣವ ಮಂಕುತಿಮ್ಮ ॥

ಬದುಕೆಂಬುದು ಕೊರತೆಗಳ ಕಣಜ. ನಮ್ಮ ಬಳಿ ಏನೆಲ್ಲ ಇದ್ದರೂ ಏನೂ ಇಲ್ಲವೆಂಬ ಕೊರತೆಗಳ ಪಟ್ಟಿಯನ್ನು ಕಣ್ಣ ಮುಂದೆ ಹರವಿಕೊಂಡು ಅತೃಪ್ತಿಯ ಉಸಿರುಗಳೆಯುತ್ತಿರುತ್ತೇವೆ. ತನ್ನ ಬದುಕಿನ ಕೊರತೆಗಳನ್ನು ಇತರರೆದುರು ಎಂದಿಗೂ ತೋರಿಸಿ ಕೊಳ್ಳದೆ ಇದ್ದಷ್ಟನ್ನೇ ಉಂಡು ಸಂತೃಪ್ತಿ ಹೊಂದುವವನು, ನಾಯಿಯು ಎಂಜಲನ್ನವ ಸವಿಯುವುದನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವುದಿಲ್ಲ.

ಹಾಗೆಯೇ ಜ್ಞಾನಿ ಎನಿಸಿಕೊಂಡವನು ಚಿತ್ತವನ್ನು ಅತ್ತಿತ್ತ ಹರಿಬಿಡದೆ ಸಮಚಿತ್ತದಿಂದ ಮುನ್ನಡೆಯುತ್ತಾನೆ. ಆದ್ದರಿಂದ ಮನುಷ್ಯನೆ ವೃಥಾ ಭಯಪಟ್ಟುಕೊಳ್ಳಬೇಡ. ಅವರವರ ಕರ್ಮಫಲಗಳು ಅವರವರಿಗೇ ಮೀಸಲು. ಅವುಗಳಿಂದ ಯಾರೂ ವಿಮುಖವಾಗಲು ಸಾಧ್ಯವಿಲ್ಲ. ಜ್ಞಾನಿಯಂತೆ ವರ್ತಿಸುವ, ಅಜ್ಞಾನಿಯಂತೆ ಬದುಕುವ ಬಗೆ ನಮಗೆ ಬಿಟ್ಟದ್ದು. ಆದ್ದರಿಂದ ಜ್ಞಾನಿಯಾದವನು ಗಂಭೀರವಾಗಿರಬೇಕು, ಸಣ್ಣ ಪುಟ್ಟ ಸಂಗತಿಗಳಿಗೆ ತಲೆ ಕೊಡಬಾರದು, ಸಮಚಿತ್ತತೆ ಪ್ರಮುಖ ಲಕ್ಷಣವಾಗಿರ ಬೇಕು ಎಂದು ಡಿವಿಜಿಯವರು ಮಾರ್ಮಿಕವಾಗಿ ನುಡಿಯುತ್ತಾರೆ.

ಇಂದಿನ ನಮ್ಮ ಬಾಳುವೆ ತೀರಾ ಅಲ್ಪತನದಿಂದ ಕೂಡಿದೆ. ಲಾಲಸೆ-ವಾಂಛೆಗಳು ಅಡಿಯಿಂದ ಮುಡಿಯವರೆಗೆ ವ್ಯಾಪಿಸಿಬಿಟ್ಟಿವೆ. ಅಸೂಯೆ-ಮತ್ಸರಗಳು ಮನಸ್ಸನ್ನು ಕೆಡಿಸಿ ಬಿಟ್ಟಿವೆ. ಎಲ್ಲವೂ ನನಗೇ ಆಗಲಿ ಎಂಬ ಸ್ವಾರ್ಥ ಸಣ್ಣತನದ ಪರಮಾವಧಿ ಎನಿಸಿದೆ.
ಮನುಷ್ಯ ಮನುಷ್ಯರ ನಡುವೆ ಗೋಡೆಗಳೆದ್ದು ನಂದನವನವಾಗಬೇಕಿದ್ದ ಬಾಳುವೆ ನರಕಸದೃಶವಾಗಿದೆ.

ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಅಮಾನುಷರಂತೆ ವರ್ತಿಸುವ ನಾವುಗಳು ಗೌರವದ ಬದುಕನ್ನು ನಡೆಸುವುದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿದೆ. ಇತರರ ಏಳ್ಗೆಯ ಕಂಡು ಅಸೂಹೆ ಪಡದೆ, ಚಿತ್ತವನು ಅತ್ತಿತ್ತ ಹರಿಯಬಿಡದೆ,
ಮನದ ಹುಚ್ಚುಕುದುರೆಗೆ ಲಗಾಮು ಹಾಕೋಣ. ಸಕಲರಿಗೂ ಬೇಕಾಗಿ ಬಾಳೋಣ.