Saturday, 14th December 2024

ಮಹಿಳೆಯ ಸಮಾನತೆ ಒಂದು ಕನಸೇ ?

ವಿವಾಹಿತ ಮಹಿಳೆಯರು ಸಮಾನ ಅವಕಾಶ ಪಡೆಯಬೇಕು ನಿಜ. ಅವರ ಸಹಾಯಕ್ಕಾಗಿ ಕಾನೂನಿನ ಬೆಂಬಲವೂ ಇದೆ. ಆದರೆ, ಪ್ರಾಯೋಗಿಕವಾಗಿ ಅವು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ?

ಸ್ಮಿತಾ ಮೈಸೂರ ಹುಬ್ಬಳ್ಳಿ

ರಾತ್ರಿ 10-30 ಕ್ಕೆೆ ಕೆಲಸ ಮುಗಿಸಿನಿದ್ರೆಗೆ ಜಾರುತ್ತಿದ್ದವಳನ್ನು, ಇಂಜಿನಿಯರಿಂಗ್ ಓದುತ್ತಿದ್ದ ಮಗ ಬಂದು ‘ಅಮ್ಮಾ ಪ್ಲೀಸ್, ಬೆಳಿಗ್ಗೆ 6ಕ್ಕೆೆ ನನ್ನ ಎಬ್ಬಿಸು’ ಎಂದು ನನ್ನ ಅಲುಗಾಡಿಸಿ ಎಬ್ಬಿಸಿ ಹೇಳಿ ಹೋದ. ನಿದ್ರೆ ಕೆಡಿಸಿದ ಸಿಟ್ಟಿದ್ದರೂ ‘ನೀ ಏಳೂದಿಲ್ಲೋ
ಮಾರಾಯಾ’ ಎಂದು ಮತ್ತೆ ಮಲಗಲು ಪ್ರಯತ್ನಿಸಿದೆ.

ಮುಂಜಾನೆ ಎಬ್ಬಿಸಲು ಹೋದರೆ ಅವನೆಲ್ಲಿ ಏಳುತ್ತಾನೆ? ಹಲವು ಸಾರಿ ಅಲುಗಾಡಿಸಿ ಎಬ್ಬಿಸಿದರೆ, ಹೂಂ, ಹೂಂ ಎನ್ನುತ್ತ ರಗ್ಗು ಎಳೆದು ಮತ್ತೆ ಮಲಗಿದ. ‘ಅಲ್ಲೋ ನನ್ನ ನಿದ್ದಿ ಕೆಡಿಸಿ 6 ಕ್ಕಎಬ್ಬಸ ಅಂದಂವಾ 6-30 ಆದ್ರೂ ಏಳೂದಿಲ್ಲೋ ಎಂದು ಬಯ್ಯತ್ತ’, ಅಡುಗೆ ಮನೆ ಹೊಕ್ಕರೆ, ಕಾದು ಕುಳಿತ ಕೆಲಸಗಳು ನಾ ಮುಂದೆ ನಾ ಮುಂದೆ ಅನ್ನುತ್ತಿದ್ದವು.

ದಿನಾಲೂ ಇದೇ ರಾಗ ಇದೇ ಹಾಡು. ಚಹಾ ಕುಡಿದು, ಫ್ರಿಜ್ ತೆಗೆದು ಅಡಿಗೆಗೆ ಬೇಕಾದ ಕಾಯಿಪಲ್ಲೆ ತೆಗೆದಿಡುವಷ್ಟರಲ್ಲಿ ಪತಿರಾ ಯರು ಪ್ರತ್ಯಕ್ಷ. ಎನಿ ಹೆಲ್ಪ್‌ ನೀಡೆಡ್? ಎನ್ನುತ್ತ ಪಲ್ಲೆ ಹೆಚ್ಚತೊಡಗಿದರು. ‘ಬಟಾಟೆ ಗಜ್ಜರಿ ಅಷ್ಟ ಸಣ್ಣ ಹೆಚ್ವಿದರ ಹೆಂಗ? ಗಜ್ಜರಿ ದೊಡ್ಡ ಹೋಳ ಮಾಡರಿ, ಬಟಾಟೆ ಕುಕ್ಕರನ್ಯಾಗ ಇಡೀದನ್ನ ಬೇಯಿಸಬೇಕು.’ ‘ನೀ ಹೇಳಿದಂತೆ ಮಾಡಲಿಕ್ಕೆ ಆಗೂದಿಲ್ಲ ನೀನೇ ಮಾಡಕೊ’ ಎನ್ನುತ್ತ ಹೊರಗೇ ಹೋದರು, ಅರ್ಧ ಹೆಚ್ಚಿದ ಪಲ್ಲೆ ಬಿಟ್ಟು!

ಸರಿಪಡಿಸಲು ಒಂದು ಹೆಚ್ಚಿನ ಕೆಲಸವಾಯಿತು. ಜಗಳವಾಡಲು ಸಮಯವೆಲ್ಲಿ? ನನಗಿಂತ ಜೋರಾಗಿ ಮಾತನಾಡಿ ತಮ್ಮದೇ ಸರಿ ಎನ್ನುವರ ಹತ್ತಿರ ಮಾತೇ ಬೇಡ ಅನ್ನಿಸಿ ಸುಮ್ಮನಾದದ್ದಾಯಿತು. ಅವಸರದಲ್ಲೇ ಸ್ನಾನ ಅವಸರದಲ್ಲೇ ದೇವರ ಪೂಜೆ ಅಡಿಗೆ ಮುಗಿಸಿ ಎಲ್ಲರ ಊಟದ ಡಬ್ಬಿ ರೆಡಿ ಮಾಡಿ ಹೊರಡುವಷ್ಟರಲ್ಲಿ ‘ನನಗೆ ಅಜರ್ಂಟ ಕೆಲಸವಿದೆ ಮನೇ ಲಾಕ್ ನೀನೇ ಮಾಡು’ ಎನ್ನುತ್ತ ಬೈಕ್ ಹತ್ತಿ ಹಾರಿಯೇ ಬಿಟ್ಟರು ಪತಿರಾಯರು. ಅಂತೂ ದಿನಾಲೂ ಒಂದಿಲ್ಲೊಂದು ಕಾರಣಕ್ಕೆ ಓಡುತ್ತಲೇ ಬಸ್ ಹಿಡಿಯುವದು. ಎಲ್ಲರ ಹತ್ತಿರ ಮನೆಯ ಒಂದೊಂದು ಕೀಲಿ ಕೈ. ಹೀಗಾಗಿ ಬಾಜೂ ಮನೆಯವರಲ್ಲಿ ಚಾವಿ ಕೊಡುವ ಕೆಲಸ ತಪ್ಪಿದೆ. ಬಸ್ ಹತ್ತಿದ ಮೇಲೂ ಚಿಂತೆ, ಗ್ಯಾಸ್ ಸರಿಯಾಗಿ ಬಂದ್ ಮಾಡಿದ್ದೇನೋ ಇಲ್ಲವೋ, ಬಾಲ್ಕನಿ ಬಾಗಿಲು ಹಾಕಿದ್ದೇನೋ ಇಲ್ಲವೋ? ಏನಾದರೂ ಆಗಲಿ ಎಂದುಕೊಂಡು ಸುಮ್ನನೆ ಕಣ್ಮುಚ್ಚಿ ಕುಳಿತಾಗಲೇ ನೆಮ್ಮದಿ.

ಪುರುಷರ ದರ್ಬಾರು ಇನ್ನು ಕಛೇರಿಗಳಲ್ಲಿ ಎಲ್ಲ ಕಡೆ ಪುರುಷರದೇ ದರ್ಬಾರು. ಮಹಿಳೆಯರು ಉನ್ನತ ಹುದ್ದೆಯಲ್ಲಿದ್ದರೂ ಅಷ್ಟೇ, ಕೆಳಹಂತದಲ್ಲೀದ್ದರೂ ಅಷ್ಟೇ. ಇಂಥ ಅಸಮಾನತೆಯ ಮಧ್ಯೆ, ಬದುಕು ಕಟ್ಟಿಕೊಳ್ಳುವ ಹೆಣ್ಣಿನ ಪಾಡು ದೇವರಿಗೇ ಪ್ರೀತಿ. ಮೊನ್ನೆ ಯಾರೋ ಫೋನ್ ಮಾಡಿದಾಗ ಹೇಳುತ್ತಿದ್ದರು, ಮನೆಯಲ್ಲಿ ರಾಣಿಯಂತೆ ಇರುವದು ಬಿಟ್ಟು, ಯಾಕೆ ಹೀಗೆ ಒದ್ದಾಡು ತ್ತಾರೋ!

ಅದಕ್ಕುತ್ತರವಾಗಿ ಕೇಳಿದೆ ‘ಎಲ್ಲರಿಗೂ ರಾಣಿಯರ ಜೀವನ ಎಲ್ಲಿ ಸಿಗುತ್ತೆ? ಸಿಗುವಂತಿದ್ದರೆ ಇರಬಹುದು. ನದಿಯ ಎರಡು ತೀರ ಗಳನ್ನು ಜೋಡಿಸುವಾಗಲೇ ಸಾಕಾಗುತ್ತದೆ.’ ಅಂದರೆ ಅರ್ಥವಾಯಿತಲ್ಲ, ಜೀವನದ ಮೂಲ ಅವಶ್ಯಕತೆಗಳನ್ನು ಪೂರೈಸಲು ಒಬ್ಬರೇ ದುಡಿದರೆ ಆಗುವುದೇ ಇಲ್ಲ. ಇನ್ನು ಕಛೇರಿಗಳಲ್ಲಿ? ಅಲ್ಲಿಯೂ ಪುರುಷರದೇ ದರ್ಬಾರು. ಮಹೀಳಾ ಅಧಿಕಾರಿಗಳ ಅಸಹಾಯಕ ಅಂಶಗಳನ್ನ ಕಂಡು ಹಿಡಿದು, ಅದರ ದುರುಪಯೋಗ ಮಾಡಲು, ತಮ್ಮ ವಶದಲ್ಲೇ ಇಟ್ಟುಕೊಂಡಿರುತ್ತಾರೆ. ಕೆಳಹಂತದ ಮಹಿಳಾ ನೌಕರರ ಪಾಡನ್ನಂತೂ ಕೇಳುವುದೇ ಬೇಡ. ಸಂಸಾರದ ಬಗ್ಗೆೆ ಪ್ರೀತಿ, ಜವಾಬ್ದಾರಿ ಇರುವ ಮಹಿಳೆ ಸಾಕಷ್ಟು ಬಾರಿ ಅವಲಂಬಿತಳಾಗಿರುತ್ತಾಳೆ.

ಮಹಿಳೆಯರ ಸೌಮ್ಯ ಸ್ವಭಾವ, ಅಂತಃಕರಣದ ಪ್ರಯೋಜನವನ್ನು ಪುರುಷರು ಚೆನ್ನಾಗಿಯೇ ಮಾಡಿಕೊಳ್ಳುತ್ತಾರೆ. ಎಲ್ಲರೂ
ಜಯಲಲಿತಾ, ಇಂದಿರಾಗಾಂಧಿಯವರಷ್ಟು ಗಟ್ಟಿ ಮನಸ್ಸಿನವರು ಆಗಲು ಸಾಧ್ಯವೇ? ಇಲ್ಲ. ಹೆಚ್ಚಿನ ಮಹಿಳೆಯರು ಅದರಲ್ಲೂ
ಕಛೇರಿಯಲ್ಲಿ ಕೆಲಸ ಮಾಡುವವರು ಮಹತ್ವಾಕಾಂಕ್ಷಿಗಳಲ್ಲ. ಅದರರ್ಥ ಅವರು ಜಾಣರಲ್ಲ ಅಥವಾ ಎಲ್ಲವನ್ನೂ ನಿಭಾ ಯಿಸುವ ತಾಕತ್ತು ಇಲ್ಲವೆಂದಲ್ಲ. ಆದರೆ ಅವರ ಅನುಭವ, ವ್ಯವಹಾರ ಜ್ಞಾನ ಕಡಿಮೆ ಎನ್ನುತ್ತ ಹಿಂದೆ ತಳ್ಳುತ್ತಾರೆ.

ಮಹಿಳೆಯರ ಹಿತರಕ್ಷಣೆಗೆ ಬಂದ ಕಾನೂನುಗಳು, ಮಹಿಳಾ ಆಯೋಗ ಅವಳನ್ನು ಮತ್ತೊೊಂದು ಶೋಷಣೆಗೆ ಈಡು ಮಾಡಿವೆ. ನ್ಯಾಯಯುತವಾಗಿ ಸಿಗಬೇಕಾದ ಅಧಿಕಾರವನ್ನು ಸ್ಥಾನವನ್ನು ಮಹಿಳೆ ಕೇಳಿದಾಗ, ಅವಳನ್ನ ಅಸಹ್ಯ, ಅಸಭ್ಯ ಮಾತುಗಳಿಂದ ಅವಮಾನಿಸುವದು. ಇಂಥ ಹೊಲಸು ಮಾತುಗಳಿಂದ ಹೊಲಸು ವರ್ತನೆಯಿಂದ, ಹೆಚ್ಚಿನ ಮಹಿಳೆಯರು ಇದರ ತಂಟೆಯೇ ಬೇಡ ಎಂದು ಸುಮ್ಮನಿರುವರು. ತಮ್ಮ ಪಾಡಿಗೆ ತಾವು ಮೌನದಿಂದ ಅನುಭವಿಸುವರು.

ಅನ್ಯಾಯ ಕಂಡು ಪ್ರತಿಭಟನೆಗೆ ಮುಂದಾದರೆ, ಇನ್ನೊಮ್ಮೆ ಏನನ್ನೂ ಕೇಳಿರಬಾರದು ಹಾಗೆ ಮಾಡುತ್ತಾರೆ. ಇದನ್ನೂ ಎದುರಿಸುವ ಮಹಿಳೆಯರು ಮಾನಸಿಕವಾಗಿ ಬಹಳ ಗಟ್ಟಿಯಾಗಿರಬೇಕು. ಆಯೋಗ, ಕಾನೂನುಗಳು ಇಂಥ ಸೂಕ್ಷ್ಮಗಳನ್ನರಿತು ಕೆಲಸ ಮಾಡಬೇಕು. ಅಂದಾಗ ಅವುಗಳಿದ್ದಕ್ಕೂ ಸಾರ್ಥಕ, ಮಹಿಳೆಗೂ ಅಷ್ಟಿಷ್ಟು ಸಹಾಯ ದೊರೆತು, ನೆಮ್ಮದಿ.