Monday, 25th November 2024

Happy Birthday ಇಸ್ರೊ !

ಇಸ್ರೊ ಸ್ಥಾಪನೆಯಾಗಿ ನಿನ್ನೆಗೆ ೫೩ ವರ್ಷ!

ಡಿಯರ್ ಇಸ್ರೋ,
ಹೇಗಿದಿಯಾ? ನೀನೊಂದು ಮುಗಿಯದ ಪಯಣ. ಆಗಾಗ ನಿನ್ನ ಪಯಣಗಳು ನಮ್ಮ ಕಣ್ಣಿಗೂ ಹುರುಪನ್ನು ತುಂಬುತ್ತವೆ. ನೀ
ತಯಾರಿಸಿದ ರಾಕೆಟ್ ಭೂಮಿಗೆ ಲಂಬಾಕಾರದಲ್ಲಿ ಗಟ್ಟಿಯಾಗಿ ನಿಂತು, ಬೆಂಕಿಯನ್ನು ಗುಳುತ್ತಾ ಆಗಸಕ್ಕೆ ನೆಗೆದು, ಉಪಗ್ರಹವನ್ನು ನೆತ್ತಿಯ ಮೇಲೆ ಹೊತ್ತೊಯ್ದು ಕಕ್ಷೆಗೆ ಸೇರಿಸುವ ಆ ಪರಿ ಅದ್ಭುತ.

ಅದೆಷ್ಟೋ ಸಲ ಮುಗ್ಗರಿಸಿ ಬಿದ್ದರೂ ಮತ್ತೇ ಮೇಲೇಳುವ ನಿನ್ನ ಆತ್ಮವಿಶ್ವಾಸಕ್ಕೆ ನೀನೇ ಸಾಟಿ. 1962ರಲ್ಲಿ ಇಂಕೋ ಸ್ಪಾರ್(ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ) ಎಂಬ ಹೆಸರಿನಿಂದ ಡಾ.ವಿಕ್ರಮ್ ಸಾರಾ ಭಾಯ್ ಅವರ ಕನಸಿನ ಕೂಸಾಗಿ ಜನಿಸಿದ ನಿನ್ನ ಹೆಸರು ಜಗತ್ತಿನಾದ್ಯಂತ ರಾರಾಜಿಸಲಿ ಎನ್ನುವ ಕಾರಣಕ್ಕಾಗಿ 1969ರಲ್ಲಿ ನಿನಗೆ ಇಸ್ರೋ (ಭಾರತದ ಬಾಹ್ಯಾಕಾಶ ಸಂಶೋಧನಾ ಸಮಿತಿ) ಎಂದು ಮರು ನಾಮಕರಣ ಮಾಡಿದರು.

1971 ರಲ್ಲಿ ಆರ್ಯಭಟ ಎಂಬ ಭಾರತದ ಮೊದಲ ಕೃತಕ ಉಪಗ್ರಹವನ್ನು ತಯಾರಿಸಿ ಅದನ್ನು ಉಡಾಯಿಸಲು ಬಹು ಉತ್ಸುಕತೆಯಿಂದ ನೀನಿದ್ದೆ. ಆದರೆ ದುರದೃಷ್ಟವಶಾತ್ ನೀನು ನಿನ್ನ ಜನಕ ಡಾ. ವಿಕ್ರಮ್ ಸಾರಾಭಾಯ್ ಅವರನ್ನು ಕಳೆದು ಕೊಂಡಿದ್ದೆ! ಅದು ನಿನಗೆ ಬಿದ್ದ ಮೊದಲ ಬಹುದೊಡ್ಡ ಹೊಡೆತ! ನಂತರ 1975ರಲ್ಲಿ ಆರ್ಯಭಟವನ್ನು ಕಕ್ಷೆಗೆ ಸೇರಿಸಲಾಯಿತು.

ನಂತರ ಯಶಸ್ವಿ ಸಾರಥಿಯಾಗಿ ನಿನ್ನ ಜೊತೆಗೆ ಬಹು ಕಾಲದವರೆಗೆ ನಿಂತವರು ಪ್ರೊ. ಸತೀಶ್ ಧವನ್. ಅವರ ಅವಧಿಯಲ್ಲಿ ನೀನು ಅದೇಷ್ಟೋ ಬದಲಾವಣೆಗಳನ್ನು ಕಂಡೆ. ಮೊದಲ ಉಡಾವಣಾ ವಾಹಕ ಎಸ್‌ಎಎಲ್ವಿ ತಯಾರಿಸಿ ಉಡಾಯಿಸಲಾಯಿತಾ ದರೂ, ಅದು ವಿಫಲಗೊಂಡಿತು. ಮತ್ತೆ ಮರುವರ್ಷ ಅದೇ ಪ್ರಯತ್ನ ಮಾಡಿ, ಅದರಿಂದಲೇ ರೋಹಿಣಿ ಎಂಬ ಉಪಗ್ರಹವನ್ನೂ ಯಶಸ್ವಿಯಾಗಿ ಉಡಾಯಿಸಿ ಬಿಟ್ಟೆ.

1993ರಲ್ಲಿ ಪಿಎಸ್‌ಎಲ್ವಿ ಸೋತರೂ ಮತ್ತೆ 1994ರಲ್ಲಿ ಗೆದ್ದೆ. 2008ರಲ್ಲಿ ಮೊದಲ ಪ್ರಯತ್ನದ ಚಂದ್ರನ ಕಕ್ಷೆಗೆ ಕಾಲಿಟ್ಟು, ಚಂದ್ರನ ಮೇಲ್ಮೈ ಹಿಮದ ರೂಪದಲ್ಲಿ ನೀರಿದೆ ಎಂದು ನೀ ಸಾರಿದಾಗ ಉಳಿದೆಲ್ಲ ದೇಶಗಳು ದಿಗ್ಭ್ರಮೆಗೆ ಒಳಗಾಗಿದ್ದು ಸುಳ್ಳಲ್ಲ. ಆಮೇಲೆ 2013-14ರಲ್ಲಿ ಒಂದೇ ಸಲಕ್ಕೆ ಮಂಗಳನ ಕಕ್ಷೆಯಲ್ಲೂ ನಿನ್ನ ಕರಾಮತ್ತು ತೋರಿಸಿ ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದೆ.

ಇದೆಲ್ಲವೂದಕ್ಕೂ ಕಿರೀಟಪ್ರಾಯವಾದಂತಹ ನಿನ್ನ ಸಾಧನೆಯೆಂದರೆ, ಯಾರೂ ಊಹಿಸದ ರೀತಿಯಲ್ಲಿ ಪಿಎಸ್‌ಎಲ್ವಿ ಉಡಾ ವಣಾ ವಾಹನದ ಮೂಲಕ, ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿಗೆ, ಒಂದೇ ಸಲಕ್ಕೆ 104 ಉಪಗ್ರಹಗಳನ್ನು ನಭಕ್ಕೆ ಹಾರಿಸಿ, ನಿನ್ನ ಕೀರ್ತಿಪತಾಕೆಯನ್ನು ಇನ್ನು ಉತ್ತುಂಗಕ್ಕೇರಿಸಿಕೊಂಡೆ!

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮಹಾನ್ ಸಾಹಸಕ್ಕೆ ಚಂದ್ರಯಾನ-2 ಮೂಲಕ ಕೈ ಹಾಕಿ ಕೂದಲೆಳೆ ಅಂತರ ದಲ್ಲಿಯೇ ಆ ಸಾಹಸದಿಂದ ವಂಚಿತನಾದಾಗಲಂತೂ ಎಲ್ಲರಿಗೆ ನಿರಾಸೆಯಾಯಿತು. ಅದಾಗಲೇ ನೀನು ನಮ್ಮ ಭಾರತದ ಗಗನ ಯಾನಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವ ಗಗನಯಾನ, ಶುಕ್ರಯಾನ, ಮಂಗಳ ಯಾನ-2 ಗಳಿಗಾಗಿ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವ ಯೋಜನೆಯಲ್ಲಿ ತೊಡಗಿರುವೆ.

ಮೊನ್ನೆ ಒಂದು ವಾರದ ಹಿಂದೆ ನಿನ್ನ ಪುಟ್ಟ ಅಥವಾ ಬೇಬಿ ರಾಕೆಟ ಎಂದೇ ಕರೆಯಲ್ಪಡುವ ಎಸ್‌ಎಸ್‌ಎಲ್‌ವಿ ಮೊದಲ ಬಾರಿಗೆ ಉಡಾವಣೆಯಾಗಿ ಕೊನೆ ಹಂತದಲ್ಲಿ ವಿ-ಲಗೊಂಡಾಗ ನಿನಗೆ ಅದೇಷ್ಟೋ ನೋವಾಯಿತೋ ಏನೋ! ಆದರೂ ನೀ ಸೋಲಿಗೆ ಹೆದರದೇ ಮತ್ತೆ ನಿನ್ನ ಕೆಲಸದಲ್ಲಿ ನಿರತನಾಗಿ ಸದಾ ಹೊಸದರತ್ತ ತುಡಿಯುವೆ. ನಿನಗೆ ಜನ್ಮದಿದನ ಶುಭಾಶಯಗಳು.