Wednesday, 11th December 2024

ಇಂಧನವಾಗಿ ಜಲಜನಕ

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ತೈಲ ಆಧಾರಿತ ಇಂಧನ ಬಳಕೆಯಿಂದಾಗಿ ಭೂತಾಪಮಾನ ಹೆಚ್ಚಳಗೊಂಡಿದೆ. ಹೈಡ್ರೊಜನ್‌ನ್ನು ಪರ್ಯಾಯವಾಗಿ ಬಳಸಿದರೆ, ನಮ್ಮ ವಾತಾವರಣವನ್ನು ಶುದ್ಧಗೊಳಿಸಲು ಸಾಧ್ಯ.

ಮಾನವನ ಹುಚ್ಚು ಚಟುವಟಿಕೆಯಿಂದಾಗಿ ಭೂಮಿಯ ತಾಪಮಾನ ಹೆಚ್ಚಾಗಿ ಹಿಮಗಡ್ಡೆಗಳು ಕರಗಿ ಪ್ರವಾಹ ಉಂಟಾಗುತ್ತಿರು ವುದು ಎಲ್ಲರಿಗೂ ತಿಳಿದಿರುವ ವಿಷಯ.

ಇತ್ತೀಚೆಗೆ ಉತ್ತರಖಂಡದಲ್ಲಾದ ಪ್ರವಾಹಕ್ಕೂ ಜಾಗತಿಕ ತಾಪಮಾನ ಹೆಚ್ಚಾಗಿದ್ದೇ ಕಾರಣ ಎನ್ನುವ ಶಂಕೆಯಿದೆ. ಸಿಎನ್
ಬಿಸಿ ಅಧ್ಯಯನದ ಪ್ರಕಾರ ಭೂಮಿ ಈಗಿನ ಸ್ಥಿತಿಯಲ್ಲೇ ಇರಬೇಕೆಂದರೆ 2050 ರ ಒಳಗೆ ನಾವು ಇಂಗಾಲ ಹೊರಸೂಸುವ ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿದೆ.

ನವೀಕರಿಸಬಹುದಾದಂತಹ ಸೌರ, ಪವನ, ಜಲ ವಿದ್ಯುತ್ ಇತ್ಯಾದಿ ಮೂಲಗಳಿಂದ ಉತ್ಪಾದಿಸುವ ವಿದ್ಯುತ್‌ನ ಪ್ರಮಾಣ ಹೆಚ್ಚಾಗಿದ್ದರೂ ಸಹ ಪೆಟ್ರೋಲಿಯಂನಿಂದ ಸಿಗುವ ಇಂದನಕ್ಕೆ ಸಮವಾಗಿಲ್ಲ. ಇಂದಿಗೂ ಹೆಚ್ಚಿನ ಕಾರ್ಖಾನೆಗಳಲ್ಲಿ ಬಳಕೆ ಯಾಗುವುದು ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಇಂಧನ. ಭವಿಷ್ಯದ ದೃಷ್ಟಿಯಿಂದ ಪರ್ಯಾಯ ಇಂಧನ ಮೂಲ ಹುಡುಕುವು ದು ಅತ್ಯವಶ್ಯಕ.

ಈ ನಿಟ್ಟಿನಲ್ಲಿ ವಾತಾವರಣದಲ್ಲಿ ಲಭ್ಯವಿರುವ ಶಕ್ತಿಶಾಲಿ ಇಂಧನವಾದ ಹೈಡ್ರೋಜನ್‌ನತ್ತ ವಿಜ್ಞಾನಿಗಳು ಕಣ್ಣಿಟ್ಟಿದ್ದಾರೆ.
ಅದಾಗಲೇ ಹುಂಡೈ, ಟೊಯೋಟಾ, ಹೊಂಡ ಸಂಸ್ಥೆಗಳು ಹೈಡ್ರೋಜನ್ ಚಾಲಿತ ಕಾರನ್ನು ಮಾರುಕಟ್ಟೆಗೆ ತಂದಿದ್ದು, ಇವು
ನಿಧಾನವಾಗಿ ವಿದ್ಯುತ್ ಚಾಲಿತ ಕಾರುಗಳಿಗೆ ಸೆಡ್ಡು ಹೊಡೆಯುತ್ತಿವೆ. ವಿಶ್ವದ ಪ್ರಖ್ಯಾತ ಪೆಟ್ರೋಲಿಯಂ ಸಂಸ್ಕರಣೆ ಮತ್ತು ಸರಬರಾಜು ಜಾಲ ಹೊಂದಿರುವ ಷೆಲ್ ಸಂಸ್ಥೆ ಮತ್ತು ಅಮೆರಿಕದ ನಿಕೋಲ ಇತ್ಯಾದಿ ಸಂಸ್ಥೆಗಳು ಹೈಡ್ರೋಜನ್ ಇಂಜಿನ್ ಹೊಂದಿದ ಟ್ರಕ್ ಅನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸಿವೆ.

ಏನಿದು ಹೈಡ್ರೋಜನ್ ಇಂಧನ?
ಹೈಡ್ರೋಜನ್ ಅಥವಾ ಜಲಜನಕ ವಾತಾವರಣಲ್ಲಿರುವ ಒಂದು ಅನಿಲ. ಬೇಗನೆ ಪ್ರತಿಕ್ರಿಯಿಸುವ ಗುಣವನ್ನು ಹೊಂದಿರುವ ಹೈಡ್ರೋಜನ್ ವಾತಾವರಣದಲ್ಲಿ ಮೂಲ ರೂಪದಲ್ಲಿ ಲಭ್ಯವಿಲ್ಲ. ಹೈಡ್ರೋಜನ್‌ಅನ್ನು ನಾವು ನಮ್ಮ ಎಲ್‌ಪಿಜಿ ಅನಿಲಕ್ಕೆ ಹೋಲಿಸಬಹುದು. ಹೇಗೆ ಅದನ್ನು ಬಳಸಿದಾಗ ಯಾವುದೇ ವಿಷಾನಿಲ ವಾತಾವರಣ ಸೇರುವುದಿಲ್ಲವೋ ಹಾಗೆಯೇ ಹೈಡ್ರೋಜನ್ ಬಳಸಿದಾಗಲು ಯಾವುದೇ ವಿಷಾನಿಲ ವಾತಾವರಣ ಸೇರುವುದಿಲ್ಲ.

ನಾವು ನಿತ್ಯ ಕುಡಿಯುವ ನೀರಿನ ರಾಸಾಯನಿಕ ಹೆಸರು ಎಚ್2ಒ. ಅಂದರೆ ಎರಡು ಹೈಡ್ರೋಜನ್ ಮತ್ತು ಒಂದು ಆಮ್ಲಜನಕ
ಧಾತುವಿನಿಂದ ಸಿದ್ಧವಾದ ದ್ರಾವಣ. ಹಲವಾರು ಆಸಿಡ್‌ಗಳು, ಪೆಟ್ರೋಲಿಯಂ ಇವೆಲ್ಲದರಲ್ಲೂ ಸಹ ಹೈಡ್ರೋಜನ್ ಇದೆ.
ಹೈಡ್ರೋಜನ್ ಬೇರ್ಪಡಿಸಿದಾಗ ಮಾತ್ರ ಅದನ್ನು ಶಕ್ತಿಯ ರೂಪದಲ್ಲಿ ಬಳಸಬಹುದು.

ಸದ್ಯ ಹೈಡ್ರೋಜನ್ ಅನ್ನು ಮೂಲ ರೂಪದಿಂದ ಬೇರ್ಪಡಿಸುವ ವಿಧಾನದ ಆಧಾರದಲ್ಲಿ 3 ಮುಖ್ಯ ಭಾಗವಾಗಿ ವಿಂಗಡಿಸ ಬಹುದಾಗಿದೆ. 1. ಕಂದು ಹೈಡ್ರೋಜನ್. ಇದನ್ನು ಪೆಟ್ರೋಲಿಯಂನಿಂದ ಹೊರತೆಗೆಯಲಾಗುತ್ತದೆ. ಇಂದು ಜಗತ್ತಿನ ಒಟ್ಟಾರೆ
ಹೈಡ್ರೋಜನ್ ಉತ್ಪಾದನೆಯ 16 ಪ್ರತಿಶತ ಇದೇ ವಿಧಾನದಿಂದ ರೂಪುಗೊಳ್ಳುವುದು.

2. ಬೂದು ಹೈಡ್ರೋಜನ್. ಇದನ್ನು ನ್ಯಾಚುರಲ್ ಗ್ಯಾಸ್‌ನಿಂದ ಉತ್ಪಾದಿಸಲಾಗುತ್ತದೆ. ಇದು ಒಟ್ಟಾರೆ ಉತ್ಪಾದನೆಯ 41.9
ಪ್ರತಿಶತ ಭಾಗವನ್ನು ಹೊಂದಿದೆ. ಇದರ ಸಮಸ್ಯೆಯೆಂದರೆ, ಇವುಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ಹೆಚ್ಚು ಇಂಗಾಲ ವಾತಾ ವರಣವನ್ನು ಸೇರುತ್ತದೆ. ಪ್ರತಿ ವರ್ಷ ಸುಮಾರು 843 ಮೆಟ್ರಿಕ್ ಟನ್‌ನಷ್ಟು ಇಂಗಾಲ ಇವೆರಡೂ ಕ್ರಿಯೆಯಿಂದ ವಾತಾವರಣ ವನ್ನು ಸೇರುತ್ತಿದೆ. ಹಾಗಾಗಿ ಇವೆರಡೂ ಉತ್ಪಾದನಾ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತರಾದೆ, ಜಾಗತಿಕ ತಾಪಮಾನವನ್ನು
ಕಡಿಮೆಗೊಳಿಸುವುದು ಅಸಾಧ್ಯ.

3. ಹಸಿರು ಹೈಡ್ರೋಜನ್. ನೀರಿನಲ್ಲಿ ವಿದ್ಯುತ್ ಹರಿಸುವ ಮುಖಾಂತರ ಇದನ್ನು ತಯಾರಿಸಲಾಗುತ್ತದೆ. ಇದಕ್ಕೆ ಬಳಸುವ ವಿದ್ಯುತ್ ನವೀಕರಿಸಬಹುದಾದಂತಹ ಮೂಲದಿಂದ ತಯಾರಾಗಿದ್ದರೆ ಈ ಉತ್ಪಾದನಾ ವ್ಯವಸ್ಥೆಯಿಂದ ಯಾವುದೇ ಇಂಗಾಲ ವಾತಾವರಣವನ್ನು ಸೇರುವುದಿಲ್ಲ. ಹಂತ ಹಂತವಾಗಿ ನವೀಕರಿಸಬಹುದಾದಂತಹ ವಿದ್ಯುತ್‌ನ ಉತ್ಪಾದನೆ ಹೆಚ್ಚಾಗುತ್ತಿರುವ ಕಾರಣದಿಂದ ಹಸಿರು ಹೈಡ್ರೋಜನ್ ನ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿದೆ.

ಇದರಿಂದಾಗಿ ಮೊದಲು ಕೇವಲ ಅಮೋನಿಯಮ್ ಉತ್ಪಾದನೆ, ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಗೆ ಸೀಮಿತವಾಗಿದ್ದ ಹೈಡ್ರೋಜನ್ ಇಂದು ವಾಹನ, ಬ್ಯಾಟರಿಗೆ ಪರ್ಯಾಯ ಸಂಗ್ರಹ ಇನ್ನಿತರ ಉದ್ಯಮಗಳಲ್ಲೂ ಬಳಕೆಯಾಗುತ್ತಿದೆ. ಹೈಡ್ರೋಜನ್ ಬಳಕೆ ಹೆಚ್ಚಾಗಲು ಮುಖ್ಯ ಕಾರಣ ಅದರ ಸಾಮರ್ಥ್ಯ. ವಿದ್ಯುತ್ ಚಾಲಿತ ಸಾಮಾನ್ಯ ಕಾರನ್ನು ಚಾರ್ಜ್ ಮಾಡಲು 45 ನಿಮಿಷ ಬೇಕಾದರೆ ಹೈಡ್ರೋಜನ್ ಚಾಲಿತ ಕಾರನ್ನು ಪೆಟ್ರೋಲ್ ರೀತಿಯಲ್ಲಿ 5 ನಿಮಿಷದಲ್ಲೇ ತುಂಬಿಸಬಹುದು.

ವಿದ್ಯುತ್ ಚಾಲಿತ ವಾಹನದ ಹೆಚ್ಚಿನ ತೂಕ ಮತ್ತು ಶಕ್ತಿ ಬ್ಯಾಟರಿಗೋಸ್ಕರವೇ ಮೀಸಲಾಗಿರುತ್ತದೆ. ವಿದ್ಯುತ್ ಚಾಲಿತ ಲಾರಿ ಮತ್ತಿತರ ದೈತ್ಯ ವಾಹನ ಸಿದ್ಧಪಡಿಸಲು ಇದೊಂದು ದೊಡ್ಡ ಸವಾಲು. ಆದರೆ ಹೈಡ್ರೋಜನ್ ಎಲ್‌ಪಿಜಿ ರೀತಿಯಲ್ಲಿರುವುದರಿಂದ ದೊಡ್ಡ ಟ್ರಕ್‌ಗಳಲ್ಲೂ ಸುಲಭವಾಗಿ ಬಳಸಬಹುದಾಗಿದೆ ಮತ್ತು ಹೈಡ್ರೋಜನ್ ಬಳಕೆಯಿಂದಾಗಿ ಈ ರೀತಿಯ ವಾಹನಗಳು ಹೊರಸೂಸುವ ಇಂಗಾಲದ ಪ್ರಮಾಣ ಸೊನ್ನೆಗೆ ಇಳಿಯಲಿದೆ.

ಸಂಗ್ರಹಣೆಯ ಅನುಕೂಲ
ವಿದ್ಯುತ್‌ಅನ್ನು ಸಂಗ್ರಹಿಸಿಡಲು ಬ್ಯಾಟರಿಯನ್ನು ಬಳಕೆಮಾಡಲಾಗುತ್ತದೆ. ಇದರಿಂದಾಗಿ ಸಂಗ್ರಹಣೆಯ ಅವಶ್ಯಕತೆ ಜಾಸ್ತಿ
ಆದಂತೆ ಹೆಚ್ಚಿನ ಬ್ಯಾಟರಿಯ ಅವಶ್ಯಕತೆ ಉಂಟಾಗುತ್ತದೆ, ಅದರ ಬದಲು ವಿದ್ಯುತ್‌ಅನ್ನು ಹಸಿರು ಹೈಡ್ರೋಜನ್
ತಯಾರಿಕೆಗೆ ಬಳಸಿ ನಂತರ ಹೈಡ್ರೋಜನ್‌ಅನ್ನು ಟ್ಯಾಂಕ್ ಗಳಲ್ಲಿ ಸಂಗ್ರಹಿಸಿಡಬಹುದು ಮತ್ತು ಅವಶ್ಯಕತೆಗನುಗುಣವಾಗಿ
ಅದನ್ನು ವಿದ್ಯುತ್ ಆಗಿ ಸುಲಭವಾಗಿ ಪರಿವರ್ತಿಸಬಹುದು.

ಈ ಪ್ರಕ್ರಿಯೆ ಬ್ಯಾಟರಿಯಲ್ಲಿ ವಿದ್ಯುತ್ ಶೇಖರಿಸಿಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ. ಇಷ್ಟೆಲ್ಲಾ ಲಾಭಗಳಿದ್ದರೂ ಹೈಡ್ರೋಜನ್ ಬಳಕೆ ಇಂದು ತುಸು ಕಡಿಮೆಯೇ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು ಹೈಡ್ರೋಜನ್ ವಾತಾವರಣದಲ್ಲಿ ವೇಗವಾಗಿ ಪ್ರತಿಕ್ರಿಯಿಸುವ ಇಂಧನ. ಅದನ್ನು ಸುರಕ್ಷಿತವಾಗಿ ರಕ್ಷಿಸಿಡುವುದಕ್ಕೆ ಬಹಳಷ್ಟು ಹಣ ವ್ಯಯವಾಗುತ್ತದೆ. ವಿದ್ಯುತ್ ರೀತಿಯಲ್ಲಿ ಹೈಡ್ರೋಜನ್ ಎಲ್ಲೆಡೆ ಲಭ್ಯವಿಲ್ಲದ ಕಾರಣ ವಿದ್ಯುತ್ ವಾಹನ ರೀತಿ, ಹೈಡ್ರೋಜನ್ ವಾಹನಗಳು ಬೇಗನೆ ಪ್ರಾಮುಖ್ಯತೆ ಗಳಿಸುವುದು ಕಷ್ಟಸಾಧ್ಯ.

ಜತೆಗೆ ಹೈಡ್ರೋಜನ್ ಇಂಧನವನ್ನು ಅತ್ಯಂತ ಒತ್ತಡದಲ್ಲಿ ಸಂಗ್ರಹಿಸಿಡಬೇಕು, ಇಲ್ಲವಾದಲ್ಲಿ ಅದು ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಈ ರೀತಿ ಒತ್ತಡದಲ್ಲಿ ಶೇಖರಿಸಿಡುವುದಕ್ಕೆ ಹೇರಳ ಇಂಧನ ವ್ಯಯವಾವಾಗುತ್ತದೆ. 2019ರ ಅಂತ್ಯದ ವೇಳೆಗೆ ವಿಶ್ವದಲ್ಲಿ ಸುಮಾರು 18,000 ಹೈಡ್ರೋಜನ್ ಚಾಲಿತ ವಾಹನಗಳಿದ್ದವು ಮತ್ತು 407 ಹೈಡ್ರೋಜನ್ ಚಾರ್ಜಿಂಗ್ ಕೇಂದ್ರಗಳಿದ್ದವು. ಮುಂದಿನ ದಿನಗಳಲ್ಲಿ ಹೈಡ್ರೋಜನ್ ಉತ್ಪಾದನೆ ಹೆಚ್ಚಾದರೆ, ಇಂಗಾಲ ಹೊರಸೂಸುವಿಕೆ ಕಡಿಮೆಯಾಗಿ, ವಾತಾವರಣವನ್ನು ರಕ್ಷಿಸಲು ಸಾಧ್ಯ.