Sunday, 15th December 2024

ಬಿದ್ದರೂ ಮೇಲೆದ್ದ ಜೇಡ

ಬಂಡೆಯೊಂದನ್ನು ಏರಲು ಪ್ರಯತ್ನಿಸುತ್ತಿದ್ದ ಆ ಜೇಡ ಪದೇ ಪದೇ ಜಾರಿ ಬೀಳುತ್ತಿತ್ತು. ಆದರೆ ಧೃತಿಗೆಡದ ಆ ಪುಟಾಣಿ ಕೀಟ, ಅದೆಷ್ಟೋ ಬಾರಿ ಜಾರಿ ಬಿದ್ದ ನಂತರ, ಕೊನೆಗೂ ಮೇಲೇರಿ ಕುಳಿತಿತು. ಈ ಉದಾಹರಣೆ ಯುವಕನೊಬ್ಬನಿಗೆ ಸ್ಫೂರ್ತಿ ತುಂಬಿದ್ದು ಹೇಗೆ? ಓದಿ ನೋಡಿ.

ಸಂತೋಷ್ ರಾವ್ ಪೆರ್ಮುಡ

ಜೀವನದಲ್ಲಿ ತಾನು ಕೈಗೆತ್ತಿಕೊಂಡ ಯಾವುದೇ ವ್ಯವಹಾರ ವಹಿವಾಟುಗಳಲ್ಲಿ ಯಶಸ್ಸನ್ನು ಕಾಣದ ವ್ಯಕ್ತಿಯೊಬ್ಬ ಬದುಕಿನ ಆಸೆಯನ್ನು ಕಳೆದುಕೊಂಡು ಒಂಟಿಯಾಗಿ ಮನೆಬಿಟ್ಟು ಹೊರಟು ಹೋದ. ನಡೆಯುತ್ತಾ ಹೋದವನು ದೊಡ್ಡದಾದ ಕಲ್ಲಿನ ಗುಹೆಯೊಳಗೆ ಕುಳಿತು ತನ್ನ ಕಷ್ಟಗಳು ಮತ್ತು ಜೀವನದಲ್ಲಿ ಉಂಟಾದ ಸೋಲುಗಳ ಕುರಿತು ಚಿಂತಿಸತೊಡಗಿದ.

ಯಾವ ರೀತಿಯಲ್ಲಿ ಯೋಚಿಸಿದರೂ ಕಮರಿ ಹೋಗಿದ್ದ ತನ್ನ ಆತ್ಮಸ್ಥೈರ್ಯ ಚಿಗುರುತ್ತಿರಲಿಲ್ಲ, ಹೊಸ ಉತ್ಸಾಹವೂ ಮೂಡು ತ್ತಿರಲಿಲ್ಲ, ಹೊಸ ದಾರಿಯೂ ಕಾಣಿಸುತ್ತಿರಲಿಲ್ಲ. ಬದುಕೆಲ್ಲಾ ಈ ಹತಾಶೆ, ನೋವು, ನಿರಾಶೆ ಮತ್ತು ಸೋಲಿನಲ್ಲೇ ಕಳೆಯಬೇಕೋ ಏನೋ ಎಂದು ಅಧೀರನಾಗಿ ಚಿಂತಿಸುತ್ತಿದ್ದ. ಸೋಲಿನಿಂದ ಕಂಗೆಟ್ಟ ಆತನಿಗೆ ಬೇರೆ ದಾರಿಯೂ ಕಾಣದೇ ಗುಹೆಯ ಮೂಲೆ ಯಲ್ಲಿ ಕುಳಿತು ಹೊರಗಡೆ ಆಕಾಶದೆಡೆಗೆ ಶೂನ್ಯ ದೃಷ್ಟಿಯಿಟ್ಟು ಕುಳಿತಿದ್ದ. ಅಲ್ಲಿನ ಸಣ್ಣ ಧ್ವನಿಯೂ ಕೇಳಿಸುವಷ್ಟು ಮೌನ ವಿದ್ದು, ಸಣ್ಣ ಮಿಸುಕಾಟವೂ ಆತನಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆಗ ಗುಹೆಯ ಮೂಲೆಯಲ್ಲಿ ಬೃಹತ್ ಗಾತ್ರದ ಜೇಡವೊಂದು ಬಲೆಯನ್ನು ನೇಯಲು ಬಂಡೆಯನ್ನು ನಿಧಾನವಾಗಿ ಏರುತ್ತಿತ್ತು. ತಕ್ಷಣ ಆಯತಪ್ಪಿ ಜಾರಿ ಕೆಳಗೆ ಬಿತ್ತು.

ಮರಳಿ ಯತ್ನ
ಈತ ಕುತೂಹಲದಿಂದ ಈಗ ಜೇಡ ಏನು ಮಾಡುವುದೆಂದು ಸೂಕ್ಷ್ಮವಾಗಿ ಗಮನಿಸತೊಡಗಿದ. ಆದರೆ ಆ ಜೇಡ ತಾನು ಕೆಳಗೆ ಬಿದ್ದೇ ಇಲ್ಲವೇನೋ ಎಂಬ ಭಾವದೊಂದಿಗೆ ಮತ್ತೆ ಪ್ರಾರಂಭದಿಂದ ಬಂಡೆಯನ್ನು ಏರುತ್ತಿತ್ತು. ವಿಷಾದದಿಂದ ಕುಳಿತಿದ್ದ ಈತ ‘ಅಯ್ಯೋ ಹುಚ್ಚು ಜೇಡನೇ, ಬಂಡೆಯು ಪಾಚಿಗಟ್ಟಿ ಬಹಳಷ್ಟು ಜಾರುತ್ತಿದೆ. ಆದರೂ ನೀನು ಮತ್ತೆ ಮತ್ತೆ ಏರಲು ಪ್ರಯತ್ನಿಸುತ್ತಾ ಇದ್ದೀ ಯಲ್ಲಾ’ ಎಂದು ನಗತೊಡಗಿದ.

ನಿನ್ನ ಛಲವನ್ನು ಮೆಚ್ಚಲೇ ಬೇಕು ಎಂದು ಯೋಚಿಸುತ್ತಿದ್ದಂತೆ ಜೇಡ ಮತ್ತೆ ಆಯತಪ್ಪಿ ಬಿತ್ತು, ಮತ್ತೆ ಸೋಲನ್ನು ಮರೆತು ಪ್ರಾರಂಭದಿಂದ ಹತ್ತಲು ಶುರು ಮಾಡಿತು. ಜೇಡವು ಬೀಳುತ್ತಲೇ ಇತ್ತು, ಮತ್ತೆ ಹತ್ತುತ್ತಲೇ ಇತ್ತು, ಈತ ವ್ಯಂಗ್ಯವಾಗಿ ನಗುತ್ತಿದ್ದ.
ಅದ್ಯಾವುದರ ಪರಿವೆಯೂ ಇಲ್ಲದಂತೆ ಜೇಡ ತನ್ನ ಪಾಡಿಗೆ ತನ್ನ ಪ್ರಯತ್ನವನ್ನು ಮಾಡುತ್ತಿತ್ತು.

ಒಂದಷ್ಟು ಸಮಯ ಕಳೆದಾಗ ವ್ಯಂಗ್ಯವಾಗಿ ನಗುತ್ತಿದ್ದ ಈತ ಗಂಭೀರವಾಗಿ ಜೇಡವನ್ನು ನೋಡತೊಡಗಿದ. ಜೇಡದ ನಿರಂತರ
ಪ್ರಯತ್ನ, ಶ್ರಮ, ಹಲವು ಬಾರಿ ಬಿದ್ದಿದ್ದು ಎಲ್ಲವು ತನ್ನ ವ್ಯವಹಾರದಲ್ಲಾದ ಸೋಲುಗಳನ್ನು ನೆನಪಿಸುತ್ತಿದ್ದವು. ಜೇಡವು ಕೊನೆಗೂ ಹಲವಾರು ಪ್ರಯತ್ನಗಳು ಮತ್ತು ನೋವನ್ನನುಭವಿಸಿದ ನಂತರ ಬಂಡೆಯನ್ನೇರಲು ಯಶಸ್ವಿಯಾಯಿತು.

ಇನ್ನಷ್ಟು ಪ್ರಯತ್ನಿಸಲು ಸ್ಫೂರ್ತಿ ಜೀವನಲ್ಲಿ ಸೋತು ಆಕಾಶ ನೋಡುತ್ತಿದ್ದಾತ ಇದನ್ನು ನೋಡಿ ದಂಗಾಗಿ ಹೋದ. ಅಯ್ಯೋ ಈ ಜೇಡನಿಗಿಂತಲೂ ನಾನು ಕೀಳಾಗಿಬಿಟ್ಟೆನೇ? ಅದಕ್ಕಿರುವ ಹಠ, ನಿರಂತರ ಪ್ರಯತ್ನ, ಸೋಲನ್ನು ಮರೆತು ಹೊಸ ಉತ್ಸಾಹವನ್ನು ಮೂಡಿಸಿಕೊಳ್ಳುವ ಮನೋಭಾವ ನನ್ನಲ್ಲಿ ಇಲ್ಲವಾಯಿತೇ ಎಂದು ಯೋಚಿಸಿದ.

ಗುಹೆಯೊಳಗಿಂದ ಹೊಸ ಉತ್ಸಾಹದಿಂದ ಎದ್ದು ತನ್ನ ಹಳ್ಳಿಗೆ ಮರಳಿ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ತನ್ನ ವ್ಯವಹಾರ ವಹಿವಾಟಿನಲ್ಲಿ ಗೆದ್ದು ಶಹಬ್ಬಾಸ್ ಎನಿಸಿಕೊಂಡ. ಜೇಡನ ಉದಾಹರಣೆಯು ಇನ್ನಷ್ಟು ಪ್ರಯತ್ನಿಸಲು ಆತನಿಗೆ ಸ್ಫೂರ್ತಿ ತುಂಬಿತು.

ಸೋಲು ಎಂದರೇನು ?

ಮನುಷ್ಯ ಸೋಲುವುದು, ಬದುಕು ಅಥವಾ ಸಂದರ್ಭ, ಸನ್ನಿವೇಶಗಳು ನಮ್ಮನ್ನು ಸೋಲಿಸಿದಾಗ ಅಲ್ಲ. ಗೆಲುವಿನ ಕಡೆಗಿನ ನಮ್ಮ ಪ್ರಯತ್ನ ಕಡಿಮೆಯಾದಾಗ ಅಥವಾ ಪ್ರಯತ್ನ ನಿಂತಾಗ ನಿಜವಾಗಿಯೂ ಸೋಲುತ್ತೇವೆ. ಸೋಲೆನ್ನುವುದು ಮನುಷ್ಯನ ಪ್ರಯತ್ನ ಕಡಿಮೆ ಆಯಿತು ಎಂದು ಸೂಚಿಸುವ ಸಂದರ್ಭವಷ್ಟೇ. ಆದ್ದರಿಂದ ಬದುಕಿನಲ್ಲಿ ಗೆಲುವು ದಕ್ಕುವವರೆಗೂ ನಿರಂತರ ವಾಗಿ ಪ್ರಯತ್ನಿಸುತ್ತಲೇ ಇರಬೇಕು. ಸಾಧಕರೆಲ್ಲರೂ ಹತ್ತು ಹಲವು ಸೋಲುಗಳು, ನೋವುಗಳು, ಹತಾಶೆಗಳ ನಂತರವೇ ಯಶಸ್ಸಿನ ಮೆಟ್ಟಿಲನ್ನೇರಿದ್ದಾರೆ, ಸಾಧಕರಾಗಿ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಜೀವನದಲ್ಲಿ ಆತ್ಮವಿಶ್ವಾಸಕ್ಕೆ ಎಂದೂ ಕೊರತೆಯಾಗದಿರಲಿ.