Sunday, 15th December 2024

ಐದು ವರ್ಷ ತುಂಬಿದ ಜಿಯೋ

Reliance Jio

ಅಜಯ್ ಅಂಚೆಪಾಳ್ಯ

ನಮ್ಮ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ದೊರೆಯಲು ಮುಖ್ಯ ಕಾರಣವೆಂದರೆ, ಐದು ವರ್ಷಗಳ ಹಿಂದೆ ಜಿಯೋ ಆರಂಭಿಸಿದ ದರ ಸಮರ. ಅದರಿಂದಾಗಿ ಜನಸಾಮಾನ್ಯರಿಗೂ ಇಂಟರ್ನೆಟ್ ಸೇವೆ ಲಭ್ಯವಾಯಿತು.

ಅಂತರ್ಜಾಲ ಕ್ಷೇತ್ರದಲ್ಲಿ ಅದುವರೆಗೆ ಕಂಡರಿಯದ ಸ್ಪರ್ಧೆಯನ್ನು ಜಾರಿಗೆ ತಂದ ರಿಲಯನ್ಸ್ ಸಂಸ್ಥೆಯ ಜಿಯೋ, ಈಗ ಐದು ವರ್ಷಗಳನ್ನು ಪೂರೈಸಿದ್ದು, ನಮ್ಮ ದೇಶದ ಇಂಟರ್ನೆಟ್ ಬಳಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದು ಒಂದು ವಾಸ್ತವ. ಇಪ್ಪತ್ತೊಂದನೆಯ ಶತಮಾನದ ಆರಂಭದಿಂದಲೂ ಇಂಟರ್ನೆಟ್ ಭಾರತದ ಸಾಮಾನ್ಯನಿಗೂ ಪರಿಚಯವಾಗಿದ್ದರೂ, ಅದು ಎಲ್ಲರ ಕೈಗೆಟುಕುವಂತೆ ಇರಲಿಲ್ಲ. ಇಂಟರ್ನೆಟ್‌ನ್ನು ಅಗ್ಗದ ಬೆಲೆಗೆ ಜನಸಾಮಾನ್ಯರಿಗೆ ಒದಗಿಸಿ, ಈ ಸೇವೆಯನ್ನು ಎಲ್ಲರಿಗೂ ತಲುಪಿಸಿದ ಶ್ರೇಯ ಜಿಯೋಕ್ಕೆ ಸೇರುತ್ತದೆ.

ಐದು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ 4ಜಿ ಸೇವೆಗಳನ್ನು ಆರಂಭಿಸಿ, ವೇಗದ ಡೇಟಾವನ್ನು ನೀಡುವ ಮೂಲಕ ಹೊಸ ಬಳಕೆದಾರರನ್ನು ಸೃಷ್ಟಿಸಿ, ಟೆಲಿಕಾಂ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ತನ್ನ ಪ್ರತಿಸ್ಪರ್ಧಿಗಳಿ ಗಿಂತ ತೀರಾ ಕಡಿಮೆ ಟಾರಿಫ್ ಇರುವ, ಒಟಿಟಿ, ಪ್ಲಾಟ್ ಫಾರ್ಮ್ ನೀಡುವುದರ ಜತೆ, ಧ್ವನಿ ಕರೆಗಳು ಉಚಿತವಾಗಿ ಲಭ್ಯವಾದವು. ಅಲ್ಲಿಯವರೆಗೆ ಅಸ್ತಿತ್ವದಲ್ಲಿದ್ದ ಆಪರೇಟರ್‌ಗಳು ತಮ್ಮ ಗ್ರಾಹಕ ಬಳಗವನ್ನು ಉಳಿಸಿಕೊಳ್ಳುವುದಕ್ಕೆ ಜಿಯೋ ಮಾರ್ಗವನ್ನು ಅನುಸರಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಈ ಐದು ವರ್ಷಗಳಲ್ಲಿ ಜಿಯೋ ಸಂಸ್ಥೆಯು ಟೆಲಿಕಾಂ ಕ್ಷೇತ್ರವನ್ನು ನಾಟಕೀಯವಾಗಿ ಬದಲಿಸಿದೆ.

ಯುನಿಕಾರ್ನ್ ಸಂಸ್ಥೆ
ಜಿಯೋ, ಆನ್ಲೈನ್ ಸ್ಟಾರ್ಟ್ ಅಪ್ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸಿದೆ. ಈ ಐದು ವರ್ಷಗಳ ಅವಧಿಯಲ್ಲಿ ವಿಶಾಲ ಅರ್ಥದಲ್ಲಿ ಯೂನಿಕಾರ್ನ್ ಸಂಸ್ಥೆ ಯಾಗಿ ಬೆಳೆದು ನಿಂತಿದೆ. ಗ್ರಾಹಕರು ಶಾಪಿಂಗ್ ಮಾಡುವ, ಚಲನಚಿತ್ರ ಗಳನ್ನು ನೋಡುವ, ವಿಮೆ ಅಥವಾ ಆಹಾರವನ್ನು ಖರೀದಿಸುವ, ರಜಾದಿನಗಳನ್ನು ಕಾಯ್ದಿರಿಸುವ ಅಥವಾ ವೈದ್ಯರನ್ನು ಸಂಪರ್ಕಿಸುವ ವಿಧಾನವನ್ನು ಬದಲಾ ಯಿಸಲು ಜಿಯೋ ಕ್ರಾಂತಿ ಅನುವು ಮಾಡಿಕೊಟ್ಟಿದೆ ಎನ್ನಬಹುದು. ಆಪ್‌ಗಳ ಮೂಲಕ ಹಣ ವರ್ಗಾವಣೆಯು ಈಚಿನ ದಿನಗಳಲ್ಲಿ ವ್ಯಾಪಕವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅನಿವಾರ್ಯವೂ ಆಗಿದೆ. ಈ ಕ್ಷೇತ್ರ ಬೆಳೆಯಲು ಅಗ್ಗದ ಇಂಟರ್ನೆಟ್ ತನ್ನದೇ ಕೊಡುಗೆ ನೀಡಿದೆ.

ಯುಪಿಐ ವಹಿವಾಟುಗಳ ಮೌಲ್ಯ ಮತ್ತು ಪರಿಮಾಣವು 2016 ರ ಆಗಸ್ಟ್ ಮತ್ತು 2021ರ ಅದೇ ತಿಂಗಳ ನಡುವೆ ಕ್ರಮವಾಗಿ 206000 ಪಟ್ಟು ಮತ್ತು 395000 ಪಟ್ಟು ಹೆಚ್ಚಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಮತ್ತು ಅದಕ್ಕೂ ಮುನ್ನ ನಮ್ಮ ದೇಶದ ಪ್ರಧಾನಿಯವರು ಆನ್‌ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರಚಾರ
ನೀಡಿದ್ದು, ಅದು ಯಶಸ್ವಿಗೊಳ್ಳಲು ಅತಿ ಕಡಿಮೆ ಬೆಲೆಯ ಇಂಟರ್ನೆಟ್ ಸೇವೆಯು ಜನಸಾಮಾನ್ಯರಿಗೂ ದೊರಕಿದ್ದು ಒಂದು ಮುಖ್ಯ ಕಾರಣ. ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ನೀಡಿದ ಜಿಯೋ ಸಂಸ್ಥೆಯ ಮಹತ್ವ ಇಲ್ಲಿ ಅರಿವಾಗುತ್ತದೆ.

ಜಿಯೋ ಆರಂಭಿಸಿದ 4 ಕ್ರಾಂತಿ ಇನ್ನೆರಡು ಕ್ಷೇತ್ರಗಳಲ್ಲಿ ಬದಲಾವಣೆ ತಂದಿದೆ. ಸ್ಮಾರ್ಟ್ ಫೋನ್ ಗಳ ಪ್ರಸರಣ ಮತ್ತು ಭಾರತದಲ್ಲಿ ಸ್ಮಾರ್ಟ್ ಫೋನ್ ತಯಾ ರಿಕೆ. ಇದೀಗ ಜಿಯೋ ತನ್ನದೇ ಹೊಸ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್‌ನ್ನು ಮಾರುಕಟ್ಟೆಗೆ ತರಲಿದ್ದು, ಅದು ಮತ್ತೊಂದು ರೀತಿಯ ದರಸಮರಕ್ಕೆ ವೇದಿಕೆ ಯನ್ನು ಸಿದ್ಧಪಡಿಸಲಿರುವುದು ಸಹ ಒಂದು ವಾಸ್ತವ. ಜಿಯೋ ನೀಡಲು ಆರಂಭಿಸಿದ ಅತಿ ಕಡಿಮೆ ಬೆಲೆಯ ಇಂಟರ್ನೆಟ್ ಸೇವೆಯು, ನಮ್ಮ ದೇಶದ ಜನ ಸಾಮಾನ್ಯರ ಕೈಗೆ ಆಧುನಿಕ ತಂತ್ರಜ್ಞಾನದ ಒಂದು ವಿಭಾಗವು ಎಟಕುವಂತೆ ಮಾಡಿದ್ದಂತೂ ನಿಜ. ಐದು ವರ್ಷ ಪೂರೈಸಿರುವ ಜಿಯೋ ಸಂಸ್ಥೆಯು, ಮುಂದಿನ ದಿನಗಳಲ್ಲಿ ಇನ್ನೂ ಏನೇನು ಹೊಸ ಸೇವೆಗಳನ್ನು, ದರಸಮರಗಳನ್ನು ಜಾರಿಗೆ ತರಲಿದೆ ಎಂದು ಕಾದುನೋಡಬೇಕಿದೆ.

ಫೇಸ್‌ಬುಕ್ ಬಳಕೆ 
ಭಾರತದಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ 2016 ರಲ್ಲಿ 205 ದಶಲಕ್ಷದಿಂದ ಈಗ 425 ದಶಲಕ್ಷಕ್ಕೆ ದ್ವಿಗುಣಗೊಂಡಿದೆ. ಅದೇ ರೀತಿಯಲ್ಲಿ, ಲಕ್ಷಾಂತರ
ಭಾರತೀಯರು ವಾಟ್ಸಆಪ್ ಬಳಸುತ್ತಿದ್ದಾರೆ. ಡಿಜಿಟಲ್ ಸೇವೆ, ಇ ಕಾಮರ್ಸ್ ಸೇವೆ ಹೆಚ್ಚಳವಾಗಿ, ಗ್ರಾಹಕರ ಸಂಖ್ಯೆಯೂ 190 ದಶಲಕ್ಷದಿಂದ 390ದಶಲಕ್ಷಕ್ಕೆ ಏರಿದೆ. ಈ ಏರಿಕೆಗೆ ನಮ್ಮ ದೇಶದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿರುವ ಇಂಟರ್ನೆಟ್ ಸಹ ಒಂದು ಕಾರಣ.