Thursday, 12th December 2024

ಮಾಯೆಯ ತೆರೆ ಸರಿಯಲಿ

ಒಳ್ಳೆಯದು ಕೆಟ್ಟದ್ದು ಎಲ್ಲರಲ್ಲೂಇದೆ. ಮಾಯೆಯ ತೆರೆ ಸರಿದಾಗ ಜಗತ್ತು ಸುಗಮ, ಇಲ್ಲವಾದರೆ ಎಲ್ಲವೂ ಅಯೋ ಮಯ.

ರವೀಂದ್ರ ಸಿಂಗ್ ಕೋಲಾರ

ಬ್ರಹ್ಮನ ಮಾನಸಪುತ್ರನಾದ ನಾರದ ಮುನಿ ಒಮ್ಮೆ ಭೂಲೋಕವನ್ನೆಲ್ಲಾ ಸಂಚರಿಸುತ್ತಾ ವೈಕುಂಠದಲ್ಲಿರುವ ಶ್ರೀಮನ್ನಾರಾ ಯಣನ ಬಳಿ ಬಂದನು.

‘ನಾರಾಯಣ, ನಾರಾಯಣ’ ಎಂದು ಉದ್ಗರಿಸಿ ಶೇಷಶಯನನಾದ ಆ ಮಹಾವಿಷ್ಣುವನ್ನು ಎಂದಿನಂತೆ ವಿನಮ್ರನಾಗಿ ವಂದಿಸಿ ದನು. ‘‘ಬಂದ ವಿಷಯವಾದರೂ ಏನು ನಾರದ?’’ ಎಂದು ವಿಷ್ಣು ನಾರದನನ್ನು ಪ್ರಶ್ನಿಸಿದನು. ನಾರದನು ಆಗ, ‘‘ಏನು ಇಲ್ಲ ಸ್ವಾಮಿ, ಈಗ ತಾನೆ ಭೂಲೋಕವನ್ನೆಲ್ಲ ಪರ್ಯಟನೆ ಮಾಡಿಬಂದೆ.

ಮಾನವರೆಲ್ಲ ಬುದ್ಧಿಹೀನರಾಗಿ ಬದುಕುತ್ತಿದ್ದಾರೇನೊ ಎಂಬ ಅನುಮಾನ ನನ್ನಲ್ಲಿ ಕಾಡಿದೆ. ತಾವು ಶಾಶ್ವತವಾಗಿ ಭೂಮಿ ಮೇಲೆ ಉಳಿದು ಬಿಡಬಲ್ಲೆವು ಎಂಬಿತ್ಯಾದಿಗಳ ಭಾವನೆಗಳಿಂದ ಕೇವಲ ಸ್ವಾರ್ಥದ ಬದುಕನ್ನು ಅವರು ಅವಲಂಬಿಸಿಕೊಂಡು ಬಿಟ್ಟಿ ದ್ದಾರೆ. ಇದರಲ್ಲಿ ಸರಿ ಯಾವುದು, ತಪ್ಪು ಯಾವುದು? ನೀನು ಸೃಷ್ಟಿಸಿರುವ ಈ ಮಾಯ ಪ್ರಪಂಚದ ಜೀವನವೇ ನನಗೆ ಅರ್ಥ ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಈ ಸಂದೇಹದಿಂದ ಪಾರುಮಾಡು’’ ಎಂದು ನಾರದ ಮಹಾವಿಷ್ಣುವಿನಲ್ಲಿ ಬೇಡಿಕೊಂಡನು.
ಆಗ ಹರಿಯು ‘‘ಒಳ್ಳೆಯ ಮತ್ತು ಕೆಟ್ಟ ಎರಡರ ಸೃಷ್ಟಿಯೂ ಭೂಮಿ ಮೇಲೆ ಆರಂಭದಿಂದಲೂ ಶಾಶ್ವತವಾಗಿ ಇರುವಂತೆ ನಾನು
ಮಾಡಿಟ್ಟುರುವೆನು. ಅರ್ಥಾತ್ ಮಾನವ ಸೇರಿದಂತೆ ಎಲ್ಲಾ ಜೀವಕೋಟಿಗಳ ಒಳ್ಳೆಯತನವೆಂಬುದು ಕೆಟ್ಟದ್ದರಿಂದಲೇ ಗುರುತಿಸ ಲ್ಪಡುತ್ತದೆ.

ಅವನು ಈ ಮಾಯೆಯೆಂಬ ಅಂಶದಿಂದಲೇ ತನ್ನ ಬದುಕನ್ನು ಸಾಗಿಸುತ್ತಾನೆ. ನನ್ನ ಮಾಯೆಯಿಂದಲೇ ಚರಾಚರಾ ಭೂತ ಕೋಟಿಗಳು ಅದರದರ ಸಂಬಂಧಗಳಿಗೆ ಅಂಟಿಕೊಂಡು ಬಾಳುತ್ತವೆ. ಈ ಮಾಯಾ ಸರೋವರವನ್ನು ದಾಟಿದವನೇ ನನಗೆ ಪರಮಾಪ್ತನಾಗುತ್ತಾನೆ’’ ಎಂದು ಹೇಳಿ ‘‘ನಾರದ ಅಲ್ಲೊಮ್ಮೆ ನೋಡು! ನನ್ನ ಮಾಯೆಯ ಪ್ರಭಾವ ಹೇಗಿರುತ್ತದೆ’’ ಎಂದು ಒಂದು ಕಾಡಿನ ಕಡೆ ತೋರಿಸಿದನು.

ಅಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿತು. ಬಳಿಕ ಆ ಕರುವಿನ ಮೈಯನ್ನು ಅಕ್ಕರೆಯಿಂದ ನೆಕ್ಕುತ್ತಿತ್ತು. ಈ ದೃಶ್ಯ ತೋರಿ ಸುತ್ತಾ ಹರಿಯು, ‘‘ನಾರದ ಆ ಹಸುವಿನಲ್ಲಿರುವ ಮಾಯೆಯನ್ನು ಈಗ ವಾಪಸ್ಸು ಪಡೆದುಕೊಳ್ಳುವೆ. ಮುಂದೇನಾಗುತ್ತದೆಂದು ನೋಡು’’ ಎಂದುನು. ಕೆಲವೇ ಕ್ಷಣಗಳಲ್ಲಿ ಆ ಹಸು, ಕರುವಿಗೂ ತನಗೂ ಸಂಬಂಧವೇ ಇಲ್ಲವೆನ್ನುವ ಹಾಗೆ ತನ್ನ ಪಾಡಿಗೆ ಮೇಯುತ್ತಾ ಹೊರಟಿತು. ಅದೇ ಸಮಯಕ್ಕೆ ಹಸಿದ ಹುಲಿಯೊಂದು ಬೇಟೆಯ ಹುಡುಕುತ್ತಾ ಬಂತು. ಆಗ ತಾನೆ ಜನಿಸಿದ ಕರು ವನ್ನು ನೋಡಿ, ಒಳ್ಳೆಯ ಆಹಾರವೇ ಸಿಕ್ಕಿತೆಂದು ಓಡೋಡಿ ಅದರತ್ತ ಬರುತ್ತಿತ್ತು.

ಕಂಗಾಲಾದ ಕರು ದಿಕ್ಕು ಕಾಣದೆ, ಮೇಲೆ ಏಳುವ ಪ್ರಯತ್ನ ಮಾಡುತ್ತಿತ್ತು. ಇದನ್ನು ನೋಡುತ್ತಿದ್ದ ನಾರದನ ಕರುಳು ಚುರುಕ್ಕೆಂದಿತು. ತಕ್ಷಣ ‘‘ಸ್ವಾಮಿ ಆ ಕರುವನ್ನು ಹೇಗಾದರೂ ನಿಮ್ಮ ಮಾಯೆಯಿಂದ ಉಳಿಸಿ’’ ಎಂದು ಬೇಡಿಕೊಂಡನು. ದೂರದಲ್ಲಿ ಮೇಯುತ್ತಾ ಹೊರಟಿದ್ದ ಹಸುವಿನಲ್ಲಿ ಪುನಃ ಮಾಯೆ ಆವರಿಸಿಕೊಳ್ಳುವಂತೆ ಪರಮಾತ್ಮನಾದ ಹರಿಯು ಕೃಪೆ ಹರಿಸಿದನು. ಮರುಕ್ಷಣವೇ ಆ ಹಸುವಿನ ಎರಡೂ ಕಣ್ಣುಗಳು ಕೋಪದಿಂದ ಕೆಂಪಾಗಿ, ಬಾಲ ನೆಟ್ಟಗಾಯಿತು. ಹುಲಿಯನ್ನು
ನೋಡಿದ ಹಸು, ತನ್ನ ಕಂದನ ರಕ್ಷಿಸಲೆಂದು ಓಡೋಡಿ ಬಂದು, ಹುಲಿಯ ಹೊಟ್ಟೆಗೆ ತನ್ನ ಕೊಂಬುಗಳಿಂದ ತಿವಿದು ಓಡಿಸಿತು. ನಂತರ ಆ ಹಸು ತನ್ನ ಕರುವನ್ನು ನೆಕ್ಕುತ್ತಾ ಹಾಲುಣಿಸಲು ಪ್ರಾರಂಭಿಸಿತು.

ಸರಿ ತಪ್ಪುಗಳನ್ನು ಪರಾಮರ್ಶಿಸದ ನಾವೆಲ್ಲರೂ ಒಂದಲ್ಲಾ ಒಂದು ಮಾಯೆಯ ಭ್ರಮೆಯಲ್ಲೇ ಬದುಕು ಸಾಗಿಸುತ್ತಿರುತ್ತೇವೆ. ಶಾಶ್ವತವಲ್ಲದ ಪ್ರಪಂಚದಲ್ಲಿ ಸ್ವಾರ್ಥಪರತೆಯಿಂದ ಮಾಡಬಾರದನ್ನು ಮಾಡುತ್ತೇವೆ. ಕೇವಲ ತಮ್ಮ ಸುಖಕ್ಕಾಗಿ ಸೃಷ್ಟಿಯ ವಿರುದ್ಧ ದಿಕ್ಕಿನಲ್ಲಾದರೂ ಸರಿ ಎಂದು ಸಾಗುವ ಮನುಷ್ಯನು, ಮುಂದಿನ ಆಗುಹೋಗುಗಳತ್ತ ಕಿಂಚಿತ್ತೂ ಯೋಚಿಸದೆ ತನ್ನ ಜೊತೆಗೆ ಇಡಿ ಜೀವ ಸಂಕುಲವನ್ನು ಸಂಕಷ್ಟಕ್ಕೆ ನೂಕುವನೋ? ಮಾಯೆಯ ಕೊಳುಕು ಜಲದಲ್ಲಿ ಮುಳುಗು ಹಾಕುವ ಅವನು ಜ್ಞಾನದ ಕಣ್ತೆರೆದು ಒಮ್ಮೆ ಮಾಯೆಯಿಂದ ಹೊರಬರ ಬಾರದೇಕೆ? ಅತ್ಯಂತ ಬುದ್ಧಿಶಾಲಿಯಾದ ಮನುಷ್ಯ ಸರ್ವೇ ಜನೋಃ ಸುಖಿನೋಭವಂತು ಎಂದು ಎಲ್ಲರ ಕಲ್ಯಾಣವನ್ನು ಬಯಸಿ ಅನಾಯಸವಾಗಿ ಈ ಮಾಯಾ ಸರೊವರವನ್ನು ದಾಟಬಹು ದಲ್ಲವೆ?

ಮಾನವ ಸೇರಿದಂತೆ ಎಲ್ಲಾ ಜೀವಕೋಟಿಗಳ ಒಳ್ಳೆಯತನವೆಂಬುದು ಕೆಟ್ಟದ್ದರಿಂದಲೇ ಗುರುತಿಸಲ್ಪಡುತ್ತದೆ. ಅವನು ಈ ಮಾಯೆ ಯೆಂಬ ಅಂಶದಿಂದಲೇ ತನ್ನ ಬದುಕನ್ನು ಸಾಗಿಸುತ್ತಾನೆ