ಬಿ.ಕೆ.ಮೀನಾಕ್ಷಿ, ಮೈಸೂರು
ಈ ಟೀಚರ್ ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿದರೆಂದರೆ, ನಾನು ಟೀಚರ್ ಆದ ನಂತರ ಅವರ ರೀತಿಯೇ ನಿಂತು, ಮೇಜಿನ ಮೇಲೆ ಕೈ ಊರಿ, ಅವರ ಶೈಲಿಯಲ್ಲೇ ಪಾಠಮಾಡತೊಡಗಿದೆ!
ಮಿಡಲ್ ಸ್ಕೂಲ್‌ನಲ್ಲಿ ಏಳನೇ ತರಗತಿಯಲ್ಲಿ ಉತ್ತೀರ್ಣಳಾದೆ. ನನ್ನನ್ನು ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಗೆ ಸೇರಿಸಿದರು. ಏಳನೇ ತರಗತಿ ಪಾಸಾದವರಿ ಗೆಲ್ಲ ಎರಡು ಕೊಂಬು ಬಂದಿತ್ತು. ಅದರಲ್ಲೂ ನಾನು ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದಕ್ಕೆ ಚೂರು ಉದ್ದದ ಕೊಂಬೇ ಬಂದಿತ್ತು. ನನಗಿಂತ ಕಿರಿಯ ವಿದ್ಯಾರ್ಥಿನಿಯರನ್ನು ಏನೋ ಒಂದು ರೀತಿ ಜಂಭದಿಂದ ನೋಡುವ ಧಿಮಾಕು ತಲೆಗೇರಿಬಿಟ್ಟಿತ್ತು. ಇದೇ ಉಮೇದಿನಲ್ಲಿ ನಾನು ಎಂಟನೇ ತರಗತಿಗೆ ಕಾಲಿಟ್ಟೆನು. ಶಿಕ್ಷಕರೆಲ್ಲರು ಅವರವರ ವಿಷಯಾನುಸಾರವಾಗಿ, ತರಗತಿಗೆ ಬಂದು ಹೋಗುತ್ತಿದ್ದರು.
ಇಂಗ್ಲಿಷ್‌ಗೆ ಕಮಲಮ್ಮ (ಎಚ್.ಎಸ್.ಕೆ) ಟೀಚರಂತೆ ಅಂತ ಮಾತಾಡುತ್ತಿದ್ದರೂ ಅವರಿನ್ನೂ ನಮಗೆ ಬಂದಿರಲಿಲ್ಲ. ರಜ ಹಾಕಿದ್ದರೋ ಏನೋ. ಕನ್ನಡವನ್ನು ರುಚಿ ಕಟ್ಟಾಗಿ ಮಾತಾಡುತ್ತಿದ್ದ ರತ್ನಮ್ಮ ಟೀಚರ್ ಸಮಾಜಪಾಠಗಳಿಗೆ ಬರುತ್ತಿದ್ದರು. ನಮಗೆ ಇಷ್ಟವಾದರು. ಸಮಾಜ ಪಾಠಗಳೆಂದರೆ ಪ್ರಾಣ ಬಿಡುತ್ತಿದ್ದ ನಾನು, ಎಲ್ಲ ವಿಷಯಗಳೂ ಹೀಗೇ ಸಲೀಸಾಗಿ ಇರುತ್ತವೆಂದು ಭಾವಿಸಿದ್ದೆ. ನಾನು ಕೆ.ಬಿ. ಬಡಾವಣೆ ಅಥವಾ ಜಯದೇವ ಸರ್ಕಲ್ ಕಡೆಯಿಂದ ಬರುತ್ತಿದ್ದ ಹುಡುಗಿ. ಇನ್ನೆಲ್ಲರೂ ಶಾಲೆಯ ಸುತ್ತಮುತ್ತಲಿನ ಹುಡುಗಿ ಯರು. ಅವರುಗಳ ಅಕ್ಕತಂಗಿಯರೆಲ್ಲ ಅಲ್ಲೇ ಓದಿದ್ದವರು, ಓದುತ್ತಿದ್ದವರು. ಹಾಗಾಗಿ ಎಲ್ಲ ಶಿಕ್ಷಕರ ಪರಿಚಯವೂ ಅವರು ಗಳಿಗಿತ್ತು. ಆದರೆ ನನಗೆ ಮಾತ್ರ ಎಲ್ಲರೂ ಹೊಸಬರೆ!
ತಲೆಬುಡ ಅರ್ಥವಾಗಲಿಲ್ಲ
ಒಂದು ದಿನ ಬೆಳಗಿನ ಅವಽಯೊಂದರಲ್ಲಿ ಇಷ್ಟು ದಿನ ಕಾಣಿಸಿಕೊಳ್ಳದಿದ್ದ ಇಂಗ್ಲಿಷ್ ಟೀಚರ್ ನಮ್ಮ ಮುಂದೆ ಪ್ರತ್ಯಕ್ಷವಾದರು. ಬಂದವರೇ ಸೀದಾ ಇಂಗ್ಲಿಷ್ ನಲ್ಲಿಯೇ ಪರಿಚಯವನ್ನೂ, ಪಾಠಗಳನ್ನು ಪ್ರಾರಂಭಿಸಿಬಿಟ್ಟರು. ಅವರು ನಿರರ್ಗಳವಾಗಿ ಮಾತಾಡುತ್ತಿದ್ದರೆ, ನಾನು ತಲೆಬುಡ ಅರ್ಥವಾಗದೆ ಮಿಕಿಮಿಕಿ ಕಣ್ಣು ಬಿಟ್ಟುಕೊಂಡು ನೋಡುತ್ತಾ ಕುಳಿತುಬಿಟ್ಟೆ!
ಅಲ್ಲಿಯವರೆಗೂ ಹೈಸ್ಕೂಲು ಎಂದು ಜಂಭದಿಂದ ಬಿಂಕದಿಂದ ಓಡಾಡುತ್ತಿದ್ದ ನನ್ನ ಜಂಭ ಜರ್ರನೆ ಇಳಿದುಹೋಯಿತು. ಏಕೆಂದರೆ ನನ್ನ ಇಂಗ್ಲಿಷ್ ಅಷ್ಟೊಂದು
ಚೆನ್ನಾಗಿತ್ತು! ಮಾಧ್ಯಮಿಕ ಶಾಲೆಯಲ್ಲಿ ‘ಮೋಹನ್ ಈಸ್ ಕಮಿಂಗ್, ಸೋಹನ್ ಈಸ್ ಗೋಯಿಂಗ್’ ಎಂಬುದನ್ನೇ ದೊಡ್ಡ ಇಂಗ್ಲಿಷ್ ಎಂದು ಪರಿಭಾವಿಸಿದ್ದ ನಾನು, ಕಮಲಮ್ಮ ಟೀಚರ್‌ರ ಇಂಗ್ಲಿಷ್ ನದಿಯ ಪ್ರವಾಹದಲ್ಲಿ ತರಗೆಲೆಯಂತೆ ಕೊಚ್ಚಿಹೋಗಿಬಿಟ್ಟೆ, ಅಥವಾ ಬಿರುಗಾಳಿಯಲ್ಲಿ ತೂರಿ ಹೋದೆ!
ಇವರೇ ಇಂಗ್ಲಿಷಿಗೆ ಬರುವುದು ಎಂದು ಖಚಿತವಾದ ಮೇಲೆ, ನನ್ನ ಉದ್ದದ ಕಾರಣ, ಮೊದಲೇ ಹಿಂದಿನ ಬೆಂಚಿನಲ್ಲಿದ್ದ ನಾನು, ಈಗಂತೂ ಅವರಿಗೆ ಕಾಣದ ಹಾಗೆ, ತಲೆಮರೆಸಿಕೊಂಡು ಕೂರತೊಡಗಿದೆ. ಅಂತೂ ಇಂತೂ ನಿಧಾನವಾಗಿ ಅವರ ಗುಣಸ್ವಭಾವಗಳು ಪರಿಚಯವಾಗತೊಡಗಿದಂತೆ, ಇಂಗ್ಲೀಷು ನನಗೆ ಬೇಡವಾ ಗಿದ್ದರೂ, ಕಮಲಮ್ಮ ಟೀಚರ್ ಬೇಕಾದರು. ನಿಧಾನವಾಗಿ ಹೊಂದಿಕೊಳ್ಳತೊಡಗಿದಂತೆ ಇಂಗ್ಲೀಷೂ ಅರ್ಥವಾಗತೊಡಗಿತು. ಪಾಠಗಳೂ ಅರ್ಥವಾಗ ತೊಡಗಿದವು. ಎಷ್ಟೊಂದು ಪದಗಳಿಗೆ ಅರ್ಥ ಗೊತ್ತಿಲ್ಲದಿದ್ದರೂ ಅವರ ಹಾವ ಭಾವಗಳಿಂದ ಇದು ಇದೇ ಅರ್ಥ ಎಂದು ಗ್ರಹಿಸತೊಡಗಿದೆ. ಬರಬರುತ್ತಾ ಕನ್ನಡದ ಹಾಗೇ ಸಲೀಸೆನಿಸತೊಡಗಿತು. ಇದು ನಾನು ಕಲಿತುಕೊಂಡದ್ದೇನಲ್ಲ, ಕಮಲಮ್ಮ ಟೀಚರ್ ಕಲಿಸಿದ್ದು!
ಕಮಲಮ್ಮ ಟೀಚರ್‌ರ ವ್ಯಕ್ತಿತ್ವ ನಿಧಾನವಾಗಿ ನನ್ನನ್ನು ಆವರಿಸಿಕೊಳ್ಳತೊಡಗಿದಂತೆ ಅವರ ಎತ್ತರವಾದ ಆಕರ್ಷಕ ನಿಲುವು, ಪಾಠ ಮಾಡುವ ಶೈಲಿ, ವಿವರಿಸುವ ಆಪ್ತತೆ, ಅರ್ಥ ಮಾಡಿಸಲೇಬೇಕೆಂಬ (ನನ್ನಂಥಹ ಬೃಹಸ್ಪತಿಗಳಿಗೆ) ಕಳಕಳಿ, ಓತಪ್ರೋತವಾಗಿ ಹರಿದುಬರುತ್ತಿದ್ದ ಪದಪುಂಜಗಳು, ಇದೆಲ್ಲಕ್ಕೂ ಕಳಶವಿಟ್ಟಂತೆ ಅವರ ಕಂಚಿನ ಕಂಠ!
ಚಪ್ಪಲಿ ಇಲ್ಲದ ಬಡವರು
ಕಮಲಮ್ಮ ಟೀಚರ್ ಬರೀ ಪಾಠ ಮಾಡಿ ತರಗಯಿಂದಾಚೆಗೆ ಹೋಗುತ್ತಿರಲಿಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿ, ಸಮಾಜದ ಸ್ಥಿತಿಗತಿ, ಜನರ ಮನೋಭಾವ ಎಲ್ಲವನ್ನೂ ತಮ್ಮ ಪಠ್ಯದ ಮಧ್ಯೆ ಆಯಾಚಿತವಾಗಿ ವಿಶ್ಲೇಷಿಸುತ್ತಿದ್ದರು.. ಅವರಿಗೇ ಗೊತ್ತಿಲ್ಲದಂತೆ ಅವರ ಮುಖದಿಂದ ಇತರ ವಿಷಯಗಳು ಹರಿದು ಬರುತ್ತಿದ್ದವು. ಇಂತಹ ವಿಷಯಗಳನ್ನು ಇಂಗ್ಲಿಷ್‌ನ ನಡುನಡುವೆ ಕನ್ನಡ ಬಳಸಿ ಹೇಳುತ್ತಿದ್ದುದರಿಂದ ನನಗೆ ಅವರು ಬಹಳ ಆಪ್ತವೆನಿಸುತ್ತಿದ್ದರು.
ಒಮ್ಮೆ ಹೀಗೇ, ‘ನೋಡ್ರಮ್ಮ, ಮಾನ್ಯ……ರವರು ಸಮುದ್ರ ತೀರದ ಮರಳಿನ ಮೇಲೆ ಬರಿಗಾಲಿನಲ್ಲಿ ನಡೆದುಹೋದರಂತೆ. ಅದು ಇವತ್ತಿನ ಪೇಪರಿನಲ್ಲಿ ದೊಡ್ಡ ವಿಷಯ’ ಎಂದರು. ನಾನು ಎಲ್ಲದಕ್ಕೂ ಬಾಯಿ ಹಾಕುತ್ತಿದ್ದೆನಲ್ಲ, ಸಲೀಸಾಗಿ ಹೇಳಿದೆ, ‘ಅಯ್ಯೋ, ಎಷ್ಟು ಜನ ಬಡವರಿಗೆ ಚಪ್ಪಲಿಯೇ ಇಲ್ಲ, ಅಲ್ವಾ ಮೇಡಂ?’
ಎಂದೆ. ಅವರು, ‘ನಾನೂ ಇದನ್ನೇ ಹೇಳ ಹೊರಟಿದ್ದು’ ಎಂದು ರಾಜಕೀಯ ವಿಷಯಗಳ ಬಗ್ಗೆಯೂ ಬಹಳಷ್ಟು ಚರ್ಚೆ ಮಾಡುತ್ತಿದ್ದರು. ಅವರ ಪಿರಿಯಡ್ಡಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಗಮನವಿಟ್ಟು ಪಾಠ ಕೇಳುತ್ತಿದ್ದುದು ವಿಶೇಷವಾಗಿತ್ತು. ಸಣ್ಣ ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ!
ಕೇವಲ ಅವರ ಕಂಠ ಮಾತ್ರ ಮಾರ್ದನಿಸುತ್ತಿತ್ತು! ವಿಷಯ ಮಂಡನೆ ಮಾಡುವಾಗ ಅವರಿಗಿದ್ದ ಆತ್ಮವಿಶ್ವಾಸ, ದೃಢತೆ ಅನುಪಮವಾದದ್ದು. ಕಮಲಮ್ಮ ಟೀಚರ್ ಮತ್ತು ಗೀತಾಬಾಲಿ ಟೀಚರ್ ಇಬ್ಬರೂ ಅಂಕಾ ಟಾಕೀಸಿನವರೆಗೂ ಒಟ್ಟಿಗೇ ಹೋಗುತ್ತಿದ್ದರು. ನಂತರ ಇಬ್ಬರೂ ಬೇರೆ ಬೇರೆಯಾಗುತ್ತಿದ್ದರು. ಗೀತಾಬಾಲಿ
ಮೇಡಂ ಬಸ್ ಸ್ಟ್ಯಾಂಡಿಗೆ ಹೋದರೆ, ಇವರು ಮನೆ ಕಡೆಗೆ ಹೋಗುತ್ತಿದ್ದರು. ನಾವು ಒಂದೈದು ಜನ ಹುಡುಗಿಯರಿದ್ದೆವು.
ಅವರನ್ನು ಅಲ್ಲಿಯವರೆಗೂ ಹಿಂಬಾಲಿಸಿ ಅಲ್ಲಲ್ಲ, ಬೆನ್ನಟ್ಟಿ ಹೋಗುತ್ತಿದ್ದೆವು. ಅವರಿಬ್ಬರೂ ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಕೆಲವು ಹುಡುಗಿಯರು, ‘ಏ ಬೇಡ ಕಣೇ, ನಾವೇ ಬೇರೆ ಹೋಗೋಣ’ ಎಂದರೂ ಕೇಳದೆ, ನಾನಂತೂ ಹಿಂಬಾಲಿಸಿಬಿಡುತ್ತಿದ್ದೆ. ಪಾಪ! ನಮ್ಮ ಪ್ರತಿದಿನದ ಈ ಕಾಟವನ್ನು ಅವರು ಒಂದಿನಿತೂ ತೋರಿಸಿಕೊಳ್ಳದೆ ಬಹುಶಃ ಸಹಿಸಿಕೊಂಡಿರಬಹುದೇ ಎಂದು ನನಗೆ ಈಗೀಗ ಅನುಮಾನ!
ನೀ ನನ್ನಕಮಲ ಎಂಬ ಕವನ
ಬರಬರುತ್ತಾ ನಾನಂತೂ ಅವರ ಆರಾಧಕಳಾಗಿಬಿಟ್ಟೆ. ಅವರದೇ ಧ್ಯಾನದಲ್ಲಿದ್ದ ನಾನು, ಅರ್ಧರಾತ್ರಿಯಲ್ಲಿ ಕುಳಿತು ಅವರ ಮೇಲೊಂದು ಕವನ ಬರೆದೆ. ‘ನೀ ನನ್ನ ಕಮಲ…..’ ಅಂತ ಪ್ರಾರಂಭವಾಗುವ ಕವನ ಮುಂದಕ್ಕೆ ನಾಲ್ಕು ಪ್ಯಾರಾಗ್ರಾಫ್ ನಲ್ಲಿ ಮುಗಿದಿತ್ತು. ನಾನು ತರಗತಿಯಲ್ಲಿ ವೀಣಾ ಮತ್ತಿತರ ಗೆಳತಿಯರಿಗೆ ಇದನ್ನು ತೋರಿಸಿದ್ದೆ. ಪ್ರತಿದಿನ ಬಂದ ಕೂಡಲೇ ಹಿಂದಿನ ದಿನದ ಹೋಮ್ ವರ್ಕ್ ನೋಡುವುದು ಕಡ್ಡಾಯವಾಗಿತ್ತು.
ಮೊದಲೇ ಇಂಗ್ಲೀಷು! ನಾನು ಕೆಲವೊಮ್ಮೆ ತೋರಿಸುತ್ತಿದ್ದೆ. ಕೆಲವೊಮ್ಮೆ ಹೇಗೋ ಪಾರಾಗಿಬಿಡುತ್ತಿದ್ದೆ. ಅಂದೂ ಹಾಗೇ ಏನೋ ಓದುವವಳಂತೆ ನಟಿಸುತ್ತಾ ಕುಳಿತಿದ್ದೆ. ಟೀಚರ್ ತರಗತಿಗೆ ಬಂದ ಕೂಡಲೇ ಎಲ್ಲರೂ ಮುತ್ತಿಕೊಂಡರು. ನಂತರ ಎಲ್ಲರೂ ತಿರುಗಿ ತಿರುಗಿ ನನ್ನನ್ನು ನೋಡುತ್ತಿದ್ದರು. ಓಹೋ! ನಾನು ಹೋಮ್ ವರ್ಕ್ ತೋರಿಸಿಲ್ಲವಲ್ಲ ಅದಕ್ಕೆ ಎಂದು ಹೇಗೋ ಬಚಾವಾಗಲು ಪ್ರಯತ್ನಿಸುತ್ತಿದ್ದೆ. ಆದರೆ ವಿಷಯ ಅದಾಗಿರಲಿಲ್ಲ. ಅದ್ಯಾವ ಮಾಯದಲ್ಲಿ ನನ್ನ ಕವನ ಎಗರಿಸಿಬಿಟ್ಟಿದ್ದರೋ, ಹೋಗಿ ಟೀಚರ್‌ಗೆ ತೋರಿಸಿದ್ದರು. ಇದು ನನಗೆ ಗೊತ್ತಿರಲಿಲ್ಲ. ಎಲ್ಲರೂ ಬಂದು ನನ್ನನ್ನು ಎಳೆದುಕೊಂಡು ಹೋದರು.
ಏನು ಉಗಿಸಿಕೊಳ್ಳಬೇಕಪ್ಪಾ ಎಂದು ಹೋಗಿ ನಿಂತ ನನ್ನನ್ನು ಅವರು ನಗುತ್ತಾ ನೋಡಿದರು. ಅವರ ಆ ನೋಟ ನನಗಿನ್ನೂ ಹೃದಯದಲ್ಲಿ ಅಚ್ಚೊತ್ತಿದೆ.
ಸಂಪೂರ್ಣವಾಗಿ ನಗುವಿನಿಂದ ತುಂಬಿದ ಮುಖ, ಕಣ್ಣುಗಳಲ್ಲಿ ತುಳುಕುತ್ತಿದ್ದ ಸಂತೋಷದ ನಗು, ಜೊತೆಗೆ ಒಂದು ಸಣ್ಣದಾಗಿ ತುಂಬಿನಿಂತ ನೀರಿನಪಸೆ, ಅಗಲವಾದ ಅವರ ಮುಖ ಇನ್ನಷ್ಟು ಅಗಲವಾಗಿದೆ ಎನಿಸಿತು. ನನಗೆ ನೋಟ್ಸ್ ಕೇಳುತ್ತಾರೆಂಬ ಭಯದಲ್ಲಿ ಕವನದ ವಿಷಯ ಮರೆತುಹೋಗಿತ್ತು.
‘ಚೆನ್ನಾಗಿ ಬರೆದಿದ್ದೀಯಮ್ಮ’ ಒಂದೇ ಮಾತು ಅವರು ಹೇಳಿದ್ದು. ಮುಂದಕ್ಕೆಲ್ಲ ನಾನೇ ಅಕ್ಷರಶಃ ಒದರಿದೆ. ‘ರಾತ್ರಿ ಒಂದು ಗಂಟೆಯಲ್ಲಿ ಕುಳಿತು ಬರೆದೆ’ ಅದೂ ಇದೂ ಎಂದು. ಅವರ ಆ ಮುಖಭಾವ ನನ್ನನ್ನ ಧನ್ಯತೆಯಲ್ಲಿ ಮುಳುಗಿಸಿತು.
ಕ್ಷಮಿಸಿ ಟೀಚರ್!
ಇನ್ನೊಮ್ಮೆ ಸುಮಾರು ಮಕ್ಕಳನ್ನು ಸಂಜೆ ಶಾಲೆ ಬಿಟ್ಟಾಗ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ನಮಗೆಲ್ಲ ತಿಂಡಿ ಕಾಫಿ ಕೊಟ್ಟರು. ಅವರ ತಾಯಿ ಆಚೆ ಬರಲಿಲ್ಲ. ನಾನು ತಮಾಷೆಗೆ ‘ಓಹೋ ಬುರ್ಖಾ ಹಾಕ್ಕೊಂಡಿದ್ದಾರಾ?’ ಎಂದುಬಿಟ್ಟೆ. ಅದೆಂತಹ ಅಚಾತುರ್ಯ ಮಾಡಿಬಿಟ್ಟೆ ಎಂದರೆ, ಛೇ! ಈಗಲೂ ನನಗೆ ಅದನ್ನು ನೆನೆದರೆ ಜಿಗುಪ್ಸೆಯಾಗುತ್ತದೆ. ಎಲ್ಲರೂ ಬೈದರು. ಆದರೆ ಮೇಡಂ ನಗುನಗುತ್ತಲೇ ನಮ್ಮನ್ನೆಲ್ಲ ಕಳಿಸಿಕೊಟ್ಟರು.
ಟೀಚರ್, ದಯವಿಟ್ಟು ಕ್ಷಮಿಸಿ. ಅವತ್ತು ನಾನು ಹಾಗೆ ಕೇಳಬಾರದಿತ್ತು. ಅದು ಅಪರಾಧವೇ ಸರಿ! ಅವರ ಪಾಠಗಳು ನನಗೆ ಈಗಲೂ ನೆನಪಿವೆ. ದಿ ಡೋವ್,
ಒಥೆಲೋ, ಗಾಂಧಿ, ದಿ ಆಕ್ಟೋಪಸ್, ಸಿಗ್ನಲ್ ಮ್ಯಾನ್ …..ಹೀಗೇ ಇನ್ನೂ ಎಷ್ಟೋ! ಅವರು ಪಾಠದ ವಿವರಣೆ ನೀಡುತ್ತಿದ್ದರೆ ಎಲ್ಲ ಸೀನುಗಳು ನಮ್ಮ ಕಣ್ಣ ಮುಂದೆ ನಡೆಯುವಂತೆ ಕಾಣುತ್ತಿತ್ತು. ಇಷ್ಟಲ್ಲದೆ ಅವರು ವರ್ಣಿಸುವ ಪಾತ್ರಗಳಲ್ಲಿ ಅವರಿಗೆ ಒಲವು ಮತ್ತು ಸ್ಪಷ್ಟ ನಿಲುವುಗಳಿರುತ್ತಿದ್ದವು. ಅವರ ಶುದ್ಧ ಕನ್ನಡ, ಉಚ್ಛಾರಣೆ ಅದರಲ್ಲಿನ ಸೆಳೆತ ನಮ್ಮನ್ನೆಲ್ಲ ಮೋಡಿಗೊಳಪಡಿಸಿದ್ದವೆನ್ನುವುದು ಸರಿಯಾದ ವಿಶ್ಲೇಷಣೆ. ಅವರು ಒಂದು ದಿನ ರಜ ಹಾಕಿದರೂ ನನಗಂತೂ ಸಿಕ್ಕಾಪಟ್ಟೆ ಬೇಜಾರಾಗುತ್ತಿತ್ತು. ಅವತ್ತಿನ ತರಗತಿ ಸ್ವಾರಸ್ಯ ಕಳೆದುಕೊಳ್ಳುತ್ತಿತ್ತು.
ದ್ಯಾಸವೇ ಇಲ್ಲವಾ?
ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ನಾನಂತೂ ಕಮಲಮ್ಮ ಟೀಚರ್‌ರನ್ನು ಬಹಳ ನೆನೆಸಿಕೊಳ್ಳುತ್ತಿದ್ದೆ. ಒಂದು ದಿನ ಮಧ್ಯದಲ್ಲೆಲ್ಲೋ ದಾರಿಯಲ್ಲಿ ಸಿಕ್ಕಿದ್ದರು. ನಾನು ನಮಸ್ತೆ ಹೇಳಿ ಮಾತಾಡಿಸಿದೆ. ‘ಏನಮ್ಮಾ, ಈಗ ನಾವೆಲ್ಲ ಎಲ್ಲಿ ನೆನಪಿಗೆ ಬರುತ್ತೀವಿ ಅಲ್ವಾ? ನಮ್ಮ ದ್ಯಾಸವೇ ಇಲ್ಲ ನಿನಗೆ’ ಅಂದರು. ಅವರನ್ನು ಮನಸ್ಸಿನ ತುಂಬ ತುಂಬಿಕೊಂಡವಳು ನಾನು, ಹೀಗೆ ಅಂದರಲ್ಲ ಎಂದು ಕೊಂಚ ಬೇಸರವಾಯಿತು. ನಂತರ ಅದನ್ನು ಮರೆತುಬಿಟ್ಟೆ. ಇನ್ನೊಂದು ಮಾತು, ಅವರು ‘ದ್ಯಾಸವೆಲ್ಲಿದೆ? ದ್ಯಾಸ ಇಲ್ವಾ?’ ಈ ಪದ ಬಳಸುತ್ತಿದ್ದರು. ನಾನು ಆವಾಗೆಲ್ಲ ನಿಮಗೆ ಈ ಪದ ಒಪ್ಪುವುದಿಲ್ಲಪ್ಪ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಆ ಪದ ನನಗೆ ತುಂಬ ಕರ್ಕಶವೆನ್ನುವಂತೆ ಕೇಳಿಸುತ್ತಿತ್ತು.
ಕಮಲಮ್ಮ ಟೀಚರ್ ಕುವೆಂಪುರವರ ‘ರಾಮಾಯಣ ದರ್ಶನಂ’ ಅನ್ನು ರಾಜ್ಯೋತ್ಸವದಲ್ಲಿ ಸುಲಲಿತವಾಗಿ ಅರ್ಥಗರ್ಭಿತವಾಗಿ ವಾಚನ ಮಾಡುತ್ತಿದ್ದರಂತೆ. ಅದರ ಬಗ್ಗೆ ಎಲ್ಲರಿಗೂ ಬಹಳ ಮೆಚ್ಚುಗೆಯಿದೆ. ಅಲ್ಲದೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರಿಗೆ ಪ್ರೋತ್ಸಾಹದಾಯಕವಾಗಿ ಕಾರ್ಯಕ್ರಮಗಳನ್ನು ಮಾಡಿಸಿದ್ದಲ್ಲದೆ, ಚಂದಾ ಎತ್ತಿ ಹಣವನ್ನು ಕಾರ್ಗಿಲ್ ನಿಽಗೆ ಸಮರ್ಪಿಸಿದ್ದರಂತೆ! ಎಂಥಾ ಒಳ್ಳೆಯ ಕೆಲಸವಲ್ಲವಾ? ಮತ್ತೂ ಮುಂದೆ ಹೋಗಿ ಜಿಲ್ಲಾಪಂಚಾಯತ್‌ಗೆ ಗ್ರಂಥಾಲಯ ಮಾಡಲು ಪುಸ್ತಕಗಳನ್ನು ನೀಡಿದ್ದರಂತೆ.
ಇದು ಈಚೆಗೆ ನನಗೆ ಸಿಕ್ಕ ಮಾಹಿತಿ. ದೇಶದ ಬಗ್ಗೆ ಸಮಾಜದ ಬಗ್ಗೆ ಅವರ ಕಳಕಳಿ ಎಷ್ಟಿತ್ತೆಂದರೆ, ಅದಕ್ಕೆ ನಾನು ಕೊಟ್ಟಿರುವ ಶೀರ್ಷಿಕೆ ಅನ್ವರ್ಥವೆಂದು ಭಾವಿಸುತ್ತೇನೆ. ನಾನು ಮೂವತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದೆ. ಪಾಠ ಪ್ರಾರಂಭಿಸಿದ ಕೂಡಲೇ ನನಗರಿವಿಲ್ಲದೇ ನಾನು ಕಮಲಮ್ಮ ಟೀಚರ್ ಆಗುತ್ತಿದ್ದೆ. ಅವರು ಕಪ್ಪುಹಲಗೆಯ ಮೇಲೆ ಬರೆಯುವ ಸ್ಟೈಲ್, ಅವರು ನಿಲ್ಲುವುದು, ಟೇಬಲ್ ಮೇಲೆ ಕೈ ಊರುವುದು, ಎಲ್ಲರನ್ನೂ ಗಮನಿಸುತ್ತಾ
ಮಾತನಾಡುವುದು ಎಲ್ಲವನ್ನೂ ನಾನು ಅನುಕರಿಸುತ್ತಲೇ ಬಂದೆ. ಕೊನೆಯವರೆಗೂ ಹಾಗೇ ಮಾಡುತ್ತಿದ್ದೆ. ಎಷ್ಟೊಂದು ಸಾರಿ, ‘ನಾನ್ಯಾಕೆ ಕಮಲಮ್ಮ ಟೀಚರ್ ತರ ಮಾಡ್ತೀನಿ?’ ಎಂದು ಕೇಳಿಕೊಂಡರೆ ಅದಕ್ಕೆ ಉತ್ತರವಿಲ್ಲ ನನ್ನಲ್ಲಿ. ಅವರ ಪ್ರಭಾವ ನನ್ನ ಮೇಲೆ ಈ ಮಟ್ಟಿಗಿದೆ ಎಂದರೆ ಎಲ್ಲರಿಗೂ ಅವರು ಅಷ್ಟೇ ಇಷ್ಟವಾಗಿರಬೇಕಲ್ಲವೇ? ಕಮಲಮ್ಮ ಟೀಚರ್ ನನ್ನ ಮೇಲೆ ಅಕ್ಷರಶಃ ಪ್ರಭಾವ ಬೀರಿದ ಪ್ರೀತಿಯ ಟೀಚರ್.
ಮಾತೆಂದರೆ ನಿಮ್ಮದು
ಮುತ್ತಾಗಿ ಉದುರಿದ್ದು
ಕೆಸರ ನಡುವಿನ ಕಮಲದ್ದು
ನನ್ನೆದೆಯ ಗೂಡಲಿ ಬಚ್ಚಿಟ್ಟುಕೊಂಡದ್ದು