ಹಂಪೆಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಒಂದು ಭುವನೇಶ್ವರಿಯ ಗುಡಿ ಇದೆ. ಇದೇ ರೀತಿ ಹಸಿರಿನ ಸಿರಿ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಭುವನೇಶ್ವರಿಯ ದೇಗುಲವಿದೆ. ಕನ್ನಡಾಭಿಮಾನಕ್ಕೆ ಪ್ರತೀಕ ಎನಿಸಿರುವ ಭುವನೇಶ್ವರಿ ಯನ್ನು ನೆನಪಿಸಿಕೊಳ್ಳುವ ಮೂಲಕ, ನಮ್ಮ ನೆಲದ ಭಾಷೆಗೆ ಗೌರವ ಸಲ್ಲಿಸುವ ಪರಿಪಾಠ ನಮ್ಮ ನಾಡಿನಲ್ಲಿದೆ.
ಡಾ.ಕರವೀರಪ್ರಭು ಕ್ಯಾಲಕೊಂಡ
ರಾಜ್ಯದ ಏಕೈಕ ಕನ್ನಡಾಂಬೆಯ ಐತಿಹಾಸಿಕ ಆಲಯ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಭುವನೇಶ್ವರಿ ದೇಗುಲವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿ ಶಿಖರದಲ್ಲಿದೆ. ಇದು ಭುವನೇಶ್ವರಿ ಎನಿಸಿರುವ ಕನ್ನಡ ತಾಯಿಯ ದೇವಾಲಯ. ಸಿದ್ಧಾಪುರ ಪಟ್ಟಣದಿಂದ ಕುಮಟಾ ಮಾರ್ಗದಲ್ಲಿ 8 ಕಿ.ಮೀ. ಕ್ರಮಿಸಿದರೆ ಸಿಗುವ ಬೆಟ್ಟದ ಮೇಲೆ, ಹಸಿರಿನ ಸಿರಿಯ ನಡುವೆ ಈ ಭುವನೇಶ್ವರಿ ದೇಗುಲವಿದೆ.
ಬನವಾಸಿಯ ಸೌಂದರ್ಯವನ್ನು ನೆನಯುತ್ತಾ ಪಂಪ ತನ್ನ ಕಾವ್ಯವನ್ನು ರಚಿಸಿದ್ದು, ಬನವಾಸಿ ದೇಶವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಬರೆದಿದ್ದ. ಬನವಾಸಿಗೆ ಸಾಕಷ್ಟು ಸನಿಹದಲ್ಲಿರುವ ಇರುವ ಈ ಭುವನೇಶ್ವರಿ ದೇಗುಲವು ಕನ್ನಡ ಮಾತೆಯನ್ನು ನೆನಪಿಸುವುದು ವಿಶೇಷ. ಕನ್ನಡ ದೇವಿಗೆ ಇಲ್ಲಿ ನಿತ್ಯೋತ್ಸವ. ಮೂರು ಶತಮಾನಗಳಿಂದ ಕನ್ನಡ ದೀಪ ಜ್ವಾಜಲ್ಯಮಾನವಾಗಿ ಬೆಳಗುತ್ತಿರುವ ಸ್ಥಳ. ಡಿ.ಎಸ್.ಕರ್ಕಿಯವರ ‘ಕನ್ನಡದ ದೀಪ’ ಇಲ್ಲಿ ‘ನಂದಾದೀಪ’. ನಿತ್ಯವೂ ಸುಪ್ರಭಾತ, ಮಂತ್ರಪಠಣ, ಅಭಿಷೇಕ, ಪೂಜೆ, ಪುನಸ್ಕಾರ, ವೇದಘೋಷ…. ಎಲ್ಲವೂ ಕನ್ನಡಮ್ಮನಿಗೆ ಅರ್ಪಣೆ.
ಭುವನಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ನಂತರ ಭುವನೇಶ್ವರಿ ದೇವಿ ಇಲ್ಲಿ ನೆಲೆ ನಿಂತಿದ್ದರಿಂದ ಈ ಕ್ಷೇತ್ರಕ್ಕೆ ಭುವನ ಗಿರಿ ಎಂಬ ಹೆಸರು ಬಂದಿದೆಯಂತೆ. ಈ ದೇವಾಲಯದಲ್ಲಿ ಭುವನೇಶ್ವರಿಯೊಂದಿಗೆ ಕೃಷ್ಣ, ನಂದೀಶ್ವರ, ಗಣಪತಿ, ಗೋಪಾಲ ಸ್ವಾಮಿಯ ದೇವಾಲಯಗಳು ಕೂಡಾ ಇವೆ. ಇದೇ ದೇವಾಲಯವು ಕರ್ನಾಟಕದ ‘ರಾಜರಾಜೇಶ್ವರಿ’ದೇವಾಲಯ ಎಂದು
ಕೂಡಾ ಹೆಸರುವಾಸಿಯಾಗಿದೆ.
ಸ್ಥಳೀಯರೇ ಸೇರಿ ವರ್ಷಕ್ಕೊಮ್ಮೆ ಇಲ್ಲಿ ಶಿಶಿರೋತ್ಸವವನ್ನು ನಡೆಸುವ ಮೂಲಕ ನಾದಸೇವೆಯನ್ನು ಅರ್ಪಿಸುತ್ತಾರೆ. ಜತೆಗೆ ನವರಾತ್ರಿ ಉತ್ಸವ, ವಸಂತೋತ್ಸವ, ತೆಪ್ರೋತ್ಸವ, ರಥೋತ್ಸವಗಳು ನಡೆಯುತ್ತವೆ. ದೇವಗಿರಿಯ 300 ಅಡಿ ಎತ್ತರದ ಬೆಟ್ಟದ ಮೇಲೆ ಭುವನೇಶ್ವರಿದೇವಿ ಪವಡಿಸಿದ್ದು , ಈ ಹಿಂದೆ ದೇವಿಯ ದರ್ಶನ ಪಡೆಯಲು ನೂರಾರು ಮೆಟ್ಟಿಲುಗಳನ್ನು ಏರಬೇಕಿತ್ತು.
ಇತ್ತೀಚೆಗೆ ದೇವಾಲಯದ ಬಾಗಿಲಿನವರೆಗೆ ರಸ್ತೆ ನಿರ್ಮಿಸಲಾಗಿದೆ. ಭುವನೇಶ್ವರಿಯ ದೇಗುಲವನ್ನು ಶಿಲೆಗಳಿಂದ ನಿರ್ಮಿಸಿದ್ದು ಆಕರ್ಷಕ ಕಂಬಗಳು, ದೇವಾಲಯದ ಅಕ್ಕಪಕ್ಕದಲ್ಲಿರುವ ನಂದೀಶ್ವರ ಮುಂತಾದ ವಿಗ್ರಹಗಳು ಸೂಕ್ಷ್ಮ ಕೆತ್ತೆನೆಗೆ ಸಾಕ್ಷಿಯಾಗಿ ನಿಂತಿವೆ. ಕದಂಬ ಮತ್ತು ವಿಜಯನಗರ ಅರಸರ ಸಾಮಂತರಾಗಿದ್ದ ಶ್ವೇತಪುರ (ಬಿಳಗಿ) ಅರಸರು ಉತ್ತಮ ನಡವಳಿಕೆಯವರೂ,
ಕನ್ನಡಾಭಿಮಾನಿಗಳೂ ಆಗಿದ್ದು , ಅವರಲ್ಲಿ ಕೊನೆಯ ಅರಸ ಬಸವೇಂದ್ರ 1692 ರಲ್ಲಿ ಭುವನೇಶ್ವರಿಯ ಈ ಗುಡಿಯನ್ನೂ,
ಪುಷ್ಕರಣಿಯನ್ನೂ ನಿರ್ಮಿಸಿದನೆಂದು ಇತಿಹಾಸ ಸಾರುತ್ತದೆ.
ಕನ್ನಡ ಮಾತೆಯನ್ನು ನೆನಪಿಸುವ ಈ ದೇವಾಲಯ ವಿಜಯನಗರ ಶೈಲಿಯಲ್ಲಿದೆ. ವಾಸ್ತುವಿನಲ್ಲಿ ಚಾಲುಕ್ಯ ಶೈಲಿಯ ಲಕ್ಷಣ ಗಳನ್ನು ಸಹ ಕಾಣಬಹುದು. ಕದಂಬನಾಗರ ಶೈಲಿಯ ಶಿಖರವಿದೆ. ಕೆತ್ತನೆಯಿರುವ ಪುಟ್ಟದಾದ ಆಕರ್ಷಕ ಪ್ರಾಂಗಣ, ಸುಖನಾಸಿ ಹಾಗೂ ಗರ್ಭಗುಡಿ ಮನೋಹರವಾಗಿವೆ. ಗೋಡೆಯ ಹೊರ ಮತ್ತು ಒಳ ಭಾಗಗಳ ಮೇಲೆ ವಿವಿಧ ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ.
ಬಿಳಗಿ ಅರಸರ ಆಸ್ಥಾನದಲ್ಲಿದ್ದ ವಿದ್ವಾಂಸ ಭಟ್ಟಾಕಳಂಕರು ತರ್ಕ, ನ್ಯಾಯಶಾಸ್ತ್ರ, ಗಣಿತ, ಜ್ಯೋತಿಷ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು ಕನ್ನಡ ಭಾಷೆಯಲ್ಲಿ ಪ್ರಭುತ್ವಹೊಂದಿ, ಈ ಭಾಷೆಯ ಹೆಚ್ಚಿನ ಅರಿವಿಗಾಗಿ ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ರಚಿಸಿ ಕನ್ನಡೇತರರು ಕನ್ನಡವನ್ನು ಕಲಿಯಲು ಅನುವು ಮಾಡಿಕೊಟ್ಟರೆಂದು ತಿಳಿದುಬರುತ್ತದೆ. ಶಬ್ಧಾನುಶಾಸನಂ ಕನ್ನಡ ವ್ಯಾಕರಣ ಗ್ರಂಥವನ್ನು ಭಟ್ಟಾಕಳಂಕರು ರಚಿಸಿ, 592 ಸೂತ್ರಗಳನ್ನು ಅವರ ಕನ್ನಡಾಭಿಮಾನವನ್ನು ಸಾರುತ್ತದೆ. ಈ ಕೃತಿಯನ್ನು 1604ರಲ್ಲಿ ಭುವನೇಶ್ವರಿ ದೇವಿಗೆ ಅರ್ಪಿಸಿ ಪೂಜಿಸಿದರೆಂದೂ ಹೇಳಲಾಗುತ್ತಿದೆ.
ಈ ಭುವನೇಶ್ವರಿ ದೇಗುಲವು ಹಸಿರಿನ ಮಡಿಲಲ್ಲಿದ್ದು, ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯವನ್ನು ಬಿಂಬಿಸುವುದರ ಜತೆಯಲ್ಲೇ, ಆ ಪ್ರದೇಶದ ಸಂಸ್ಕೃತಿಯನ್ನು ಸಹ ಬಿಂಬಿಸುತ್ತದೆ. ಕನ್ನಡ ಭಾಷೆಯನ್ನು ತಾಯಿ ಭುವನೇಶ್ವರಿಯೊಂದಿಗೆ ಸಮೀಕರಿಸುವ ಪದ್ಧತಿಯಿರುವ ಹಿನ್ನೆಲೆಯಲ್ಲಿ, ಈ ಭುವನೇಶ್ವರಿ ದೇಗುಲವನ್ನು ಕನ್ನಡ ಭಾಷೆಯ ಅಭಿಮಾನದೊಂದಿಗೆ ವೀಕ್ಷಿಸುವುದರಲ್ಲಿ ತಪ್ಪಿಲ್ಲ, ಅಲ್ಲವೆ?
ಕನ್ನಡ ಭುವನೇಶ್ವರಿ
ಕನ್ನಡಾಭಿಮಾನವನ್ನು ಮೂಡಿಸುವಲ್ಲಿ ಸಿದ್ದಾಪುರದ ಭುವನೇಶ್ವರಿಯ ದೇಗುಲವನ್ನು ಸ್ಫೂರ್ತಿಯನ್ನಾಗಿ ಬಳಸಿಕೊಳ್ಳುವ ಪ್ರಯತ್ನ ಹಿಂದೆ ನಡೆದಿತ್ತು. ಭುವನೇಶ್ವರಿ ದೇಗುಲದಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡ ಉದಾಹರಣೆಗಳೂ ಇವೆ. ಆದರೆ ಈಚಿನ ವರ್ಷಗಳಲ್ಲಿ, ಈ ದೇಗುಲವನ್ನು ಸಾಕಷ್ಟು ಕಡೆಗಣಿಸಲಾಗಿದೆ ಎಂದೇ ಸ್ಥಳೀಯರ ಅನಿಸಿಕೆ. ಹಂಪೆಯ ವಿರೂಪಾಕ್ಷ ದೇಗುಲದ ಆವರಣದಲ್ಲೂ ಒಂದು ಭುವನೇಶ್ವರಿಯ ಗುಡಿ ಇದೆ. ಕನ್ನಡಾಭಿಮಾನಕ್ಕೆ ಇನ್ನೊಂದು ಹೆಸರೆನಿಸಿರುವ ಭುವನೇಶ್ವರಿಯ ನೆಪದಲ್ಲಾದರೂ, ಕನ್ನಡದ ಪ್ರಾಮುಖ್ಯತೆ ಅರಿಯೋಣ, ಕರ್ನಾಟಕದಲ್ಲಿ ಕನ್ನಡವೇ ಅನ್ನ ಕೊಡುವ ಭಾಷೆ ಎಂದು ಸಾರಲು ಶ್ರಮಿಸೋಣ.