ಪ್ರಶಾಂತ್ ಟಿ.ಆರ್.
ಕನ್ನಡಿಗರ ಮನದಲ್ಲಿ ಸದಾ ಅಮರ ಅಭಿನಯ ಭಾರ್ಗವ ವಿಷ್ಣುವರ್ಧನ್
ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದಲ್ಲಿ ಎಂದೂ ಮಾಸದ, ಮರೆಯಲಾಗದ ಮಾಣಿಕ್ಯ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಸದಾ ಸ್ನೇಹಜೀವಿಯಾಗಿ, ಕರ್ಣನಂತೆ ತ್ಯಾಗ ಮೂರ್ತಿಯಂತೆ ಬಾಳಿದವರು. ಇತರರು ಹೀಗೆ ಬಾಳುವಂತೆ ದರಿಯೂ ಆದವರು. ತನ್ನ ಜತೆ ಇದ್ದ ಕಲಾವಿದರಿಗೂ ದಾರಿ ದೀಪವಾಗಿದ್ದ ಹೃದಯ ವಂತ. ಇತರರಿಗೆ ಎಂದಿಗೂ ಕೇಡು ಬಯಸದ ಕರುಣಾ ಮಯಿ. ಚಿತ್ರರಂಗದಲ್ಲಿ ಯಜಮಾನರಾಗಿ ಎಂದಿಗೂ ಹಮ್ಮು ಬಿಮ್ಮು ತೋರದ, ಸರಳತೆಯ ಸಾಕಾರ ಮೂರ್ತಿ ನಮ್ಮ ಪ್ರೀತಿಯ ಅಭಿನವ ಭಾರ್ಗವ ವಿಷ್ಣುವರ್ಧನ್. ಇಂದು ಅವರ 70 ನೇ ಹುಟ್ಟು ಹಬ್ಬ.
ವಿಷ್ಣುವರ್ಧನ್ ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅವರೊಬ್ಬ ನಟರಾಗಿ ಮಾತ್ರವಲ್ಲದೆ ಆದರ್ಶರಾಗಿಯೂ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಕನ್ನಡದ ಹಿರಿಯ -ಕಿರಿಯ ನಟರು ವಿಷ್ಣುವರ್ಧನ್ ಅವರನ್ನು ಸದಾ ಸ್ಮರಿಸಿಕೊಳ್ಳುತ್ತಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರೊಂದಿಗೆ ಬೆರೆತ, ಮಧುರ ಕ್ಷಣಗಳನ್ನು ವಿ.ಸಿನಿಮಾಸ್‌ನೊಂದಿಗೆ ಮೆಲುಕು ಹಾಕಿದ್ದಾರೆ.
ಶಿಸ್ತಿನ ಸಿಪಾಯಿ
ವಿಷ್ಣುವರ್ಧನ್ ಸಿನಿಮಾಗಳು ಎಂದರೆ ಅಲ್ಲಿ ರಮೇಶ್‌ಭಟ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು. ವಿಷ್ಣು ಚಿತ್ರಗಳು
ಎಂದರೆ ಆ ಚಿತ್ರಗಳಲ್ಲಿ ರಮೇಶ್‌ಭಟ್ ಕೂಡ ಉತ್ಸುಕರಾಗಿರುತ್ತಿದ್ದರು. ಅವರೊಂದಿಗೆ ನಟಿಸುವುದೇ ಒಂದು ಭಾಗ್ಯ ಎಂದು ಕೊಳ್ಳುತ್ತಿದ್ದರು. ವಿಷ್ಣುವರ್ಧನ್ ಅವರೊಂದಿಗೆ ಕಲೆತ, ಕಳೆದ ಆ ದಿನಗಳನ್ನು ರಮೇಶ್‌ಭಟ್ ಇಲ್ಲಿ ಮೆಲುಕು ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ವಿಷ್ಣುವರ್ಧನ್ ಒಬ್ಬರು. ನಿಜವಾಗಿಯೂ ಅವರೊಬ್ಬ ಶಿಸ್ತಿನ ಸಿಪಾಯಿ. ನಮ್ಮ
ವೀರ ಯೋಧರು ಹೇಗೆ ಸದಾ ಶಿಸ್ತನ್ನು ಮೈಗೂಡಿಸಿಕೊಂಡಿರತ್ತಾರೋ ಅಂತೆಯೇ, ವಿಷ್ಣುವರ್ಧನ್ ಅವರು ಕೂಡ, ಶಿಸ್ತನ್ನು ಪಾಲಿಸುತ್ತಿದ್ದರು. ಹೇಳಿದ ಸಮಯಕ್ಕೆೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದರು. ಹಾಗಾಗಿ ಚಿತ್ರತಂಡವೂ ಕೂಡ ಸದಾ ಕ್ರಿಯಾಶೀಲವಾಗಿರುತ್ತಿತ್ತು.
ಒಂದು ಸಿನಿಮಾದಲ್ಲಿ ನಟಿಸುತ್ತಿರುವಾಗ ಇನ್ನೊಂದು ಸಿನಿಮಾವನ್ನು ಒಪ್ಪಿಕೊಳ್ಳುತ್ತಿರುಲಿಲ್ಲ. ಆಗ ನಟಿಸುತ್ತಿದ್ದ ಚಿತ್ರದಲ್ಲಿ
ತಮಗೆ ನೀಡಿದ್ದ ಪಾತ್ರಕ್ಕೆ ಜೀವತುಂಬಿ ಅಭಿನಯಿಸುವ ಕಾರ್ಯ ಅವರದ್ದಾಗಿರುತ್ತಿತ್ತು. ಪ್ರತಿಯೊಬ್ಬರೊಂದಿಗೂ ಬೆರೆತು ಕಷ್ಟ
ಸುಖಕ್ಕೆೆ ಸ್ಪಂದಿಸುತ್ತಿದ್ದರು. ಅವರ ಈ ಮೇರು ವ್ಯಕ್ತಿತ್ವವೇ ಚಿತ್ರದ ಶೀರ್ಷಿಕೆಯಾಗಿ ಹೊರ ಹೊಮ್ಮಿದವು. ಹೃದಯವಂತ, ಯಜಮಾನ , ಕರ್ಣ… ಈ ಶೀರ್ಷಿಕೆಗಳು ಅವರ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುತ್ತಿದ್ದವು. ಹಾಗಾಗಿಯೇ, ನಿರ್ದೇಶಕರು, ನಿರ್ಮಾಪಕರು ಆ ಹೆಸರಿನಿಂದಲೇ ಚಿತ್ರವನ್ನು ತೆರೆಗೆ ತರುತ್ತಿದ್ದರು. ಶ್ರದ್ಧೆಯಿಂದ ಕೆಲಸ ಮಾಡಿ ಆ ಶ್ರದ್ಧೆಯೇ ನಿಮ್ಮನ್ನು ಕೈಹಿಡಿಯುತ್ತದೆ ಎಂದು ಸಹಕಲಾವಿದರು, ಕಾರ್ಮಿಕರಿಗೂ ಹೇಳುತ್ತಿದ್ದರು. ಆ ಮಾತನ್ನು ಸ್ವತಃ ಅವರೇ ಪಾಲಿಸುತ್ತಿ
ದ್ದರು. ಅಂತಹ ಮಹಾನ್ ನಟರೊಂದಿಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದು, ನನಗೂ ಸಂತಸ ತಂದಿದೆ. ಆದರೆ ಅವರನ್ನು
ಕಳೆದುಕೊಂಡ ದುಃಖ ಇನ್ನು ಮನದಲ್ಲಿ ಮಡುಗಟ್ಟಿದೆ. ಅಂತಹ ನಟ ಮತ್ತೆ ಹುಟ್ಟಿ ಬರಲು ಸಾಧ್ಯವೆ?
ಸ್ನೇಹಜೀವಿ
ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಖಳ ನಟರಾಗಿ, ಹಾಸ್ಯನಟರಾಗಿ ಬಣ್ಣಹಚ್ಚಿದ ಖ್ಯಾತಿ ಹಿರಿಯ ನಟ ಮುಖ್ಯಮಂತ್ರಿ
ಚಂದ್ರು ಅವರಿಗೆ ಸಲ್ಲುತ್ತದೆ. ವಿಷ್ಣು ಅವರೊಂದಿಗಿನ ಆ ದಿನಗಳ ಒಡನಾಟವನ್ನು ಮುಖ್ಯಮಂತ್ರಿ ಚಂದ್ರು ನೆನಪು ಮಾಡಿಕೊಳ್ಳುತ್ತಾರೆ. ವಿಷ್ಣುವರ್ಧನ್ ನಾನುಕಂಡ ಉತ್ತಮ ನಟರಲ್ಲಿ ಒಬ್ಬರು. ಸ್ನೇಹಪರ ಮನೋಭಾವ ಅವರದ್ದು. ರಾಜ್‌ಕುಮಾರ್ ಬಿಟ್ಟರೆ, ಒಬ್ಬ ಉತ್ತಮ ನಟರ ಸ್ಥಾನದಲ್ಲಿ ಗುರುತಿಸಿಕೊಂಡವರು ವಿಷ್ಣು ವರ್ಧನ್. ಅವರು ಪಾತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿ, ಅವರ ತಲ್ಲೀನತೆ ಮೆಚ್ಚುವಂತಹದ್ದು.
ಎಲ್ಲಕ್ಕಿಂತ ಮಿಗಿಲಾಗಿ ಅವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸುತ್ತಿದ್ದ ರೀತಿ ಅದ್ಭುತ. ಸದಾ ಸ್ನೇಹಪರ ವಾಗಿರುತ್ತಿದ್ದ ಅವರ ಗುಣ ಆದರ್ಶನೀಯ. ಹಾಸ್ಯ, ಹರಟೆ ಸ್ವಭಾವ ಅವರದ್ದು, ಎಂದಿಗೂ ಯಾರ ಮನಸ್ಸನ್ನು ನೋಯಿಸಿ ದವರಲ್ಲ. ವಿವಾದ ದಿಂದ ಸದಾ ದೂರ ಉಳಿಯುತ್ತಿದ್ದ ಅವರು ನನ್ನೊಂದಿಗೆ ಸಹಕಲಾವಿದರು ಹೀಗೆಯೇ ನಟಿಸ ಬೇಕು ಎಂದು ಯಾವತ್ತೂ ಹೇಳಿದವರಲ್ಲ, ಸದಾ ಪ್ರೋತ್ಸಾಹ ನೀಡುತ್ತಾ ಕಲಾವಿದರಲ್ಲಿ ಹುಮ್ಮಸ್ಸು ಮೂಡಿಸುತ್ತಿದ್ದರು.
ಅವರ ಚಿತ್ರದಲ್ಲಿ ನಟಿಸುವುದು ಎಂದರೆ ನನಗೆ ಎಲ್ಲಿಲ್ಲದ ಸಂತಸ. ಸಾಮಾನ್ಯವಾಗಿ ನಾಯಕರನ್ನೇ ವೈಭವೀಕರಣ ಮಾಡುತ್ತಿದ್ದ ಕಾಲದಲ್ಲಿಯೂ ಹಾಸ್ಯ ನಟನಾಗಿ, ಖಳನಟನಾಗಿ ನಾನು ಗುರತಿಸಿಕೊಂಡೆ. ಅವರೊಂದಿಗೆ ನಟಿಸಿದ ಎಲ್ಲಾ ಚಿತ್ರಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ. ಸೂರ್ಯವಂಶ ನಾನು ಎಂದಿಗೂ ಮರೆಯದ ಸಿನಿಮಾ, ಜಮೀನ್ದಾರ್ರು, ಸಿಂಹಾದ್ರಿಯ ಸಿಂಹ, ಎಂತಹ ಅದ್ಭುತ ಸಿನಿಮಾಗಳು ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಸರಳತೆಯ ಸಾಕಾರಮೂರ್ತಿ ವಿಷ್ಣವರ್ಧನ್ ಅವರ ಹೆಸರು ಕೇಳಿದಾಕ್ಷಣ ನನ್ನ ಮನದಲ್ಲಿ ಹೊಸ ಆಶಾಕಿರಣ ಮೂಡುತ್ತದೆ. ಶಕ್ತಿ ಸಂಚಲನವಾದಂತಾಗುತ್ತದೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅವರ ಚಿತ್ರಗಳಿಗೆ ನಿರ್ದೇಶನ ಮಾಡಿದ್ದೇನೆ ಎನ್ನುವುದು ನಿಜವಾಗಿಯೂ ನನ್ನ ಅದೃಷ್ಟ. ಸುಪ್ರಭಾತ ವಿಷ್ಣುವರ್ಧನ್ ಅವರಿಗೆ ಮೊದಲು ನಿರ್ದೇಶನ ಮಾಡಿದ ಸಿನಿಮಾ. ಮೈಸೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಿತು. ಹೀಗೆ ಒಂದು ದಿನ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ, ವ್ಯಾನ್‌ವೊಂದರಲ್ಲಿ ಯುವಕರ ತಂಡವೊಂದು ಬಂದಿಳಿಯಿತು. ಬಂದವರೆ ನೇರವಾಗಿ ವಿಷ್ಣವರ್ಧನ್ ಅವರ ಬಳಿಗೆ ತೆರಳಿದರು. ಅದರಲ್ಲಿ ಒಬ್ಬ ಯುವಕ ತನ್ನ ಜೇಬಿನಲ್ಲಿದ್ದ ಬ್ಲೇಡ್ ತೆಗೆದು ತನ್ನ ಕೈಯನ್ನು ಕೊಯ್ದುಕೊಂಡನು. ಅಲ್ಲಿಂದ ರಕ್ತ ಸುರಿಯುತ್ತಿತ್ತು. ಅದನ್ನು ಬೆರಳಲ್ಲಿ ತೆಗೆದು ವಿಷ್ಣುವರ್ಧನ್ ಅವರ ಹಣೆಗೆ ತಿಲಕವಿಟ್ಟನು. ನನಗೆ ಆಶ್ಚರ್ಯವಾಯಿತು. ಇಂತಹ ಜನಾನುರಾಗಿ, ಸ್ಟಾರ್ ನಟರ ಜತೆ ಚಿತ್ರ ಮಾಡುತ್ತಿದ್ದೇನೆ ಎಂದು ನನ್ನಲ್ಲೇ ನನಗೆ ಹೆಮ್ಮೆ ಎನಿಸಿತು.
ಅವರಲ್ಲಿದ್ದ ಶಿಸ್ತು, ಸರಳತೆ ನಮಗೆಲ್ಲರಿಗೂ ಮಾದರಿ. ನಾನೊಂದು ಚಿತ್ರ ಮಾಡುತ್ತಿದ್ದೇನೆ ಎಂದರೆ, ಕಥೆ ಏನು ಎಂದು
ಯಾವುತ್ತೂ ಕೇಳಿದವರಲ್ಲ. ಬದಲಾಗಿ ದಿನಾಂಕವನ್ನು ಮೊದಲು ನಿಗಧಿ ಮಾಡುತ್ತಿದ್ದರು. ತಮ್ಮ ಪಾತ್ರಕ್ಕೆ ಮೊದಲೇ ಸಾಕಷ್ಟು
ಪೂರ್ವ ತಯಾರಿ ನಡೆಸುತ್ತಿದ್ದರು. ಅವರಲ್ಲಿದ್ದ ಸಮಯದ ಪರಿಪಾಲನೆ ಮೆಚ್ಚವಂತಹದ್ದು, ಹೇಳಿದ ಸಮಯಕ್ಕೆ ಚಿತ್ರೀಕರಣ
ದಲ್ಲಿರುತ್ತಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲರೊಂದಿಗೂ ಬೆರೆತು, ಹಾಸ್ಯ ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಿದ್ದರು. ಇಡೀ ಚಿತ್ರತಂಡ ಒಂದು ಕುಟುಂಬದಂತೆ ಭಾಸವಾಗುತ್ತಿತ್ತು. ಇಂತಹ ಊಟವೇ ಬೇಕೆಂದು ಎಂದೂ ಅವರು ಕೇಳಿದವರಲ್ಲ.
ಎಲ್ಲರೊಂದಿಗೂ ಕುಳಿತು, ಊಟ ಮಾಡುತ್ತಿದ್ದರು.
ನಾ ಕಂಡ ಕರುಣಾಮಯಿ ನಾನು ನಿಜವಾಗಿಯೂ ಅದೃಷ್ಟವಂತ. ಅಪ್ಪಾಜಿಯವರ ಕುಟುಂಬ ಸೇರಿದ್ದು ನನಗೆ ಹೆಮ್ಮೆ. ಅವರೊಂದಿಗೆ ಕಳೆದ ದಿನಗಳು. ಸದಾ ನನ್ನ ನೆನಪಿನಲ್ಲಿದೆ. ಅವರು ಶಾರೀರಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ನಮ್ಮ ನಡುವೆಯೇ ಇದ್ದಾರೆ. ಅವರು ಸದಾ ನಮ್ಮನ್ನು ಹರಸುತ್ತಿದ್ದಾರೆ. ಪ್ರತಿ ವಿಚಾರದಲ್ಲೂ ಅವರನ್ನು ನಾನು ಆದರ್ಶವಾಗಿ ಪಾಲಿಸುತ್ತೇನೆ ಎನ್ನುತ್ತಾರೆ ವಿಷ್ಟುವರ್ಧನ್ ಅಳಿಯ, ನಟ ಅನಿರುದ್‌ಧ್. ಅವರೊಂದಿಗೆ ಎರಡು ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತು. ಅದು ನನ್ನ ಏಳೇಳು ಜನ್ಮದ ಪುಣ್ಯ. ಅವರೊಂದಿಗೆ ನಾನು ನಟಿಸುತ್ತಿದ್ದೇನೆ ಎನ್ನುವಾಗ ನನಗೆ ಎಲ್ಲಿಲ್ಲದ ಆನಂದ. ಅವರು ನನ್ನ ಮುಂದೆ ಬಂದಾಗ ಹೊಸ ಮಿಂಚು ಹರಿದಂತಾಗುತ್ತಿತ್ತು. ಅವರು ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ರೀತಿ ಮೆಚ್ಚುವಂತಹದ್ದು.
ಅದಕ್ಕೆ ಮಿಗಿಲಾಗಿ ಅಪ್ಪಾಜಿ ಅವರಲ್ಲಿ ವಿಶೇಷ ಗುಣವೊಂದಿತ್ತು. ಅವರು ಒಂದೇ ಅವಧಿಯಲ್ಲಿ ಎರಡು ವಿಚಾರಗಳ ಬಗ್ಗೆಯೂ
ಗಮನಹರಿಸುತ್ತಿದ್ದರು. ಅದೊಂದು ದಿನ ನಾನು ಅವರೊಂದಿಗಿದ್ದೆೆ. ಒಂದು ಕಡೆ ಅವರಿಗಿಷ್ಟವಾದ ಹಾಡು ಕೇಳುತ್ತಿದ್ದರು.
ಮತ್ತೊಂದೆಡೆ ಸಿನಿಮಾದ ಸಂಭಾಷಣೆಯೂ ಇತ್ತು. ಅದೇ ಸಂಭಾಷಣೆಯನ್ನು ಅವರು ಸನ್ನಿವೇಶದಲ್ಲಿ ಹೇಳಬೇಕಿತ್ತು. ಹಾಡು
ಕೇಳುತ್ತಲೇ, ಸಂಭಾಷಣೆಯನ್ನು ಮನವರಿಕೆ ಮಾಡಿಕೊಂಡರು. ತಮಗೆ ನೀಡಿದ್ದ ಸನ್ನಿವೇಶದ ಚಿತ್ರೀಕರಣಕ್ಕೆ ತೆರಳಿದರು. ಆಗ
ಕೇಳಿದ್ದ ಹಾಡನ್ನು ಗುನುಗುನಿಸುತ್ತಾ ಚಿತ್ರೀಕರಣಕ್ಕೆ ಸಿದ್ಧವಾದರು.
ಅದು ಒಂದು ಪುಟದಷ್ಟಿದ್ದ ಸಂಭಾಷಣೆ. ಅಷ್ಟನ್ನೂ ಚಾಚು ತಪ್ಪದೇ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದರು.
ನಿಜಕ್ಕೂ ಅವರ, ಆ ಗುಣ ನನಗೆ ಅಚ್ಚರಿ ತಂದಿತು. ಅಪ್ಪಾಜಿಯವರು ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಿ ಪ್ರತಿಪಾತ್ರವೂ ವಿಭಿನ್ನತೆಯಿಂದ ಕೂಡಿರುತ್ತದೆ. ಸನ್ನಿವೇಶಗಳೇ ಬೇರೆ, ಧ್ವನಿಯೇ ಬೇರೆ. ಹೀಗಿರುವಾಗಲೂ ಅವರು ತಮಗೆ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಆಪ್ತರಕ್ಷಕ ಚಿತ್ರದಲ್ಲಿ ರಾಜನಾಗಿ, ಸಂಶೋಧಕರಾಗಿ, ತಪಸ್ವಿಯಾಗಿ ಅವರು ತೋರಿದ ಅಭಿನಯ ಅದ್ಭುತ. ಅದನ್ನು ಎಂದಿಗೂ ಮರೆಯಾಲಾಗುವುದಿಲ್ಲ.
ಸಿಂಹಾದ್ರಿಯ ಸಿಂಹ ಚಿತ್ರದ ಪಾತ್ರ ಇನ್ನೂ ಅದ್ಭುತ. ಅದರಲ್ಲಿಯೂ ಮೂರು ಪಾತ್ರಗಳು, ನರಸಿಂಹೇಗೌಡರಾಗಿ ಅವರು
ತೋರಿದ ಅಭಿನಯ ಚಾತುರ್ಯ ಅಮೋಘ. ಅಪ್ಪಾಜಿ ಅವರ ಮಾವ ಸಿಂಹಾದ್ರಿ ಸಿಂಹ ಚಿತ್ರವನ್ನು ನೊಡಿದ್ದರಂತೆ. ಅವರಿಗೆ
ಇಷ್ಟವಾಗಿದ್ದು, ನರಸೆಂಹೇಗೌಡರ ಪಾತ್ರ. ಅವರು, ಮಗಳು ಭಾರತೀ ಅವರನ್ನು ಕೇಳಿದರಂತೆ, ನರಸಿಂಹೇಗೌಡರ ಪಾತ್ರದಲ್ಲಿ
ನಟಿಸಿದವರು ಯಾರು ಎಂದು. ಅಂತಹ ಶ್ರೇಷ್ಠ ನಟ ಅವರು ಎನ್ನುತ್ತಾರೆ ಅನಿರುದ್ದ್.
ಅಪ್ಪಾಜಿ ಅವರು ಬಿಡುವಿದ್ದಾಗಲೆಲ್ಲಾ ಟೆನ್ನಿಸು ಆಡುವ, ಇಲ್ಲ ಕ್ರಿಕೆಟ್ ಆಡುವಲ್ಲಿಯೂ ನಿರತರಾಗುತ್ತಿದ್ದರು. ಅಲ್ಲಿಯೂ ಹೊಸ
ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಡುಗಳು ಎಂದರೆ ಅವರಿಗೆ ಅಚ್ಚುಮೆಚ್ಚು, ಮನೆಯಲ್ಲಿರುವಾಗಲೆಲ್ಲಾ, ಹಾಡುತ್ತಾ
ಸಂತಸಪಡುತ್ತಿದ್ದರು. ಜತೆಗೆ ಒಳ್ಳೆಯ ಸಿನಿಮಾಗಳು, ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದರು. ತಮಗೆ ಮೆಚ್ಚುಗೆಯಾದ
ಧಾರಾವಾಹಿಯ ತಂಡವನ್ನು ಮನೆಗೆ ಕರೆಯಿಸಿ, ಪ್ರೋತ್ಸಾಹ ನೀಡಿದ್ದಾರೆ. ಇದರ ಜತೆಗೆ ಕಷ್ಟ ಎಂದು ಬಂದವರನ್ನು ಎಂದೂ
ಬರಿಗೈಯಲ್ಲಿ ಕಳಿಸಿದವರಲ್ಲ. ತಾನು ಮಾಡಿದ ಸಹಾಯವನ್ನು ಎಲ್ಲಿಯೂ ಅವರು ಹೇಳಿಕೊಂಡಿಲ್ಲ. ಬಲಗೈಯಲ್ಲಿ ನೀಡಿದ್ದು,
ಎಡಗೈಗೆ ಗೊತ್ತಾಗಬಾರದು ಎಂಬ ಗುಣ ಅವರದ್ದು. ಕಡೆಯವರೆಗೂ ಸ್ವಾರ್ಥ ಎಂಬುದು ಅವರ ಬಳಿ ಸುಳಿಯಲೇ ಇಲ್ಲ ಎಂದು
ವಿಷ್ಣುವರ್ಧನ್ ಅವರ ನೆನಪನ್ನು ನಮ್ಮೊಂದಿಗೆ ಅನಿರುದ್ದ್ ಮೆಲುಕು ಹಾಕಿದರು.
ಹೃದಯವಂತ
ಬಾಲ ನಟನಾಗಿದ್ದಾಗಿನಿಂದಲೂ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಮಾಸ್ಟರ್ ಆನಂದ್ ಕೂಡ ವಿಷ್ಣುವರ್ಧನ್ ಅವರೊಂದಿಗೆ ಕಳೆದ ಮಧುರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮುತ್ತಿನ ಹಾರ ನನಗೆ ಪ್ರಸಿದ್ಧಿ ತಂದುಕೊಟ್ಟ ಚಿತ್ರ. ಅದಕ್ಕೆ ಕಾರಣ ನಾನು ವಿಷ್ಣು ಸರ್ ಅವರೊಂದಿಗೆ ನಟಿಸಿದ್ದು. ಅವರ ಸೌಜನ್ಯ, ಸರಳತೆ, ನನಗೆ ಮಾದರಿಯಾಗಿದೆ. ಅವರು ಹ್ಯಾಂಡ್ ಶೇಕ್ ಮಾಡುತ್ತಿದ್ದು ಕಡಿಮೆ, ಹಾಗಾಗಿ ಕೆಲವರು ಅದನ್ನೇ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದರು. ಅಹಂ ಎಂದುಕೊಂಡಿದ್ದರು. ಖಂಡಿತಾ ಇಲ್ಲ. ಅವರು ನಿಜವಾಗಿಯೂ ಹೃದಯವಂತ. ಅವರು ಹ್ಯಾಂಡ್ ಶೇಕ್ ಮಾಡದಿರುವುದಕ್ಕೆೆ ಕಾರಣವೊಂದಿದೆ.
ಹಿಂದೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ, ಕೈ ಬೆರಳುಗಳ ನಡುವೆ, ಬ್ಲೇಡ್ ಇಟ್ಟುಕೊಂಡು ವಿಷ್ಣು ಸರ್ ಅವರಿಗೆ ಹ್ಯಾಂಡ್ ಶೇಖ್ ಮಾಡುವ ನೆಪದಲ್ಲಿ ಗಾಯಗೊಳಿಸಿದ್ದ. ಹಾಗಾಗಿ ಅಂದಿನಿಂದ ವಿಷ್ಣು ಸರ್ ಹ್ಯಾಂಡ್ ಶೇಖ್ ಮಾಡುವುದನ್ನು ಬಿಟ್ಟಿದ್ದರು. ತಮ್ಮನ್ನು ಕಾಣಲು ಬರುವ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಕೈಮುಗಿಯುತ್ತಿದ್ದರು. ಗೌರವ ನೀಡುತ್ತಿದ್ದರು.
ಒಂದು ಬಾರಿ ಈ ವಿಚಾರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ನಿಜವಾಗಿಯೂ ಅಂತಹ ಮಹಾನ್ ನಟರೊಂದಿಗೆ ನನಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದು, ಅತೀವ ಸಂತಸ ತಂದಿದೆ.