ನಾಗೇಶ್ ಜೆ. ನಾಯಕ ಉಡಿಕೇರಿ
ಮೊಬೈಲ್‌ನಲ್ಲಿ ಮಿಸ್ಸಾಗಿ ಬಂದ ಫೋನ್ ಕಾಲ್‌ನಿಂದ ಪರಿಚಯ. ಭೇಟಿಯಾದಾಗ ಕಣ್ಣುಗಳು ಪ್ರೀತಿ ಭಾಷೆಯನ್ನು
ವಿನಿಮಯ ಮಾಡಿಕೊಳ್ಳಲು ತಡ ಮಾಡಲಿಲ್ಲ
ಮಿಸ್ಸಾಗಿ ಬಂದ ಒಂದು ನಂಬರಿನ ಜಾಡು ಹಿಡಿದು ಹೊರಟ ನನಗೆ, ಸಿಕ್ಕಿದ್ದು ನೀನು! ಚಿಕ್ಕ ವಯಸ್ಸಿನಲ್ಲಿಯೇ ಹೆಗಲಿಗೆ
ಜವಾಬ್ದಾರಿ ಜೋತು ಬಿದ್ದಿತ್ತು. ಬಿದ್ದ ಬದುಕನ್ನು ಮತ್ತೆ ನೆಟ್ಟಗೆ ನಿಲ್ಲಿಸಲು ಹರಸಾಹಸ ಪಡುತ್ತಿದ್ದ ಗಳಿಗೆಯಲ್ಲಿಯೇ, ಗುಳಿ ಕೆನ್ನೆಯ ಹುಡುಗಿಯೊಬ್ಬಳು ಬೊಗಸೆ ಕಂಗಳಲ್ಲಿ ಹಿಡಿಸದ ಕನಸು ತುಂಬಿಕೊಂಡು ‘ನಿನ್ನ ಜೊತೆ ನಾನಿರ್ತೀನಿ ಜೀವವೇ’ ಎಂದು ಹೆಜ್ಜೆಗೆ ಹೆಜ್ಜೆಗೂಡಿಸುತ್ತಾಳೆ ಎಂದು ಅದ್ಯಾರಿಗೆ ಗೊತ್ತಿತ್ತು?
‘ಹಲೋ.. ದಿವ್ಯ ಇದ್ದಾಳಾ?’ ಎಂಬ ಅಪರಿಚಿತ ನಂಬರಿನ, ಸಾವಿರ ವೀಣೆ ಒಟ್ಟಿಗೆ ಮೊಳಗಿದಂತ ಧ್ವನಿ, ಒಂದರೆಕ್ಷಣ ನನ್ನನ್ನೇ ನಾನು ಮರೆತು ಹೋಗುವಂತೆ ಮಾಡಿದ್ದು ಸುಳ್ಳಲ್ಲ. ‘ಇಲ್ಲರೀ.. ನಾನು ಜೀವನ್. ನೀವು ತಪ್ಪುು ನಂಬರಿಗೆ ಕರೆ ಮಾಡಿದ್ದೀರಿ’ ಎಂದದ್ದಷ್ಟೇ… ಅತ್ತಕಡೆಯಿಂದ ಕ್ಷಮೆಯ ಸಾಲು ಸಾಲೇ ಮಂತ್ರಘೋಷದ ತರಹ ಕೇಳಿ ಬಂತು. ಬಹುಶಃ ನೀನು ಭಯಗೊಂಡಿರ ಬೇಕು.
ಆದರೆ ಪುಟ್ಟ ರೇಡಿಯೋದಿಂದ ಆಗಷ್ಟೇ ಕೇಳಿಬರುತ್ತಿದ್ದ ‘ಮಾಮರವೆಲ್ಲೋ… ಕೋಗಿಲೆಯೆಲ್ಲೋ.. ಏನೀ ಸ್ನೇಹ ಸಂಬಂಧ.. ಎಲ್ಲಿಯದೋ ಈ ಅನುಬಂಧ’ ಎಂಬ ಹಾಡು ನನ್ನೆದೆಯಲ್ಲಿ ಮಧುರ ಭಾವನೆ ಮೂಡಿಸಿತು. ದಿನದಿನವೂ ಅನುಕ್ಷಣವೂ
ನಮ್ಮಿಬ್ಬರ ಮೊಬೈಲುಗಳು ಮಾತಾಡಲು ಶುರು ಮಾಡಿದ್ದು ಗೆಳೆಯರ ಗುಂಪಿನಲ್ಲಿ ಗುಟ್ಟಾಗಿ ಉಳಿಯಲಿಲ್ಲ.
ಕಣ್ಣುಗಳು ಪ್ರೀತಿ ಭಾಷೆಯನ್ನು ವಿನಿಮಯ ಮಾಡಿಕೊಳ್ಳಲು ತಡ ಮಾಡಲಿಲ್ಲ. ಅರ್ಧಕ್ಕೆ ಬಿಟ್ಟೆದ್ದು ಹೋದ ಅಪ್ಪನ ಬಗ್ಗೆ, ಖಾಯಿಲೆಯಿಂದ ನರಳುತ್ತಿರುವ ಅಮ್ಮನ ಕುರಿತು, ತುತ್ತಿನ ಚೀಲ ತುಂಬಲು ಗಟ್ಟಿಗೊಂಡ ಎಳೆಯ ಹೆಗಲುಗಳ ಬಗ್ಗೆ ನಾನು ತೋಡಿಕೊಂಡೆ. ತಂದೆ, ತಾಯಿ ಇಬ್ಬರೂ ಇಲ್ಲದ, ಸಂಬಂಧಿಕರ ಮನೆಯಲ್ಲಿದ್ದು ಓದುವ ಸ್ಥಿತಿ ನಿಂದಾಗಿತ್ತು. ಇದ್ದ ಒಬ್ಬ ತಮ್ಮನ ಬೆಳೆಸುವ ಹೊಣೆಗಾರಿಕೆಯೂ ನಿನ್ನ ಮೇಲಿತ್ತು. ಬಹುಶಃ ದುಃಖಗಳೇ ನಮ್ಮಿಬ್ಬರನ್ನು ಹತ್ತಿರವಾಗಿಸಿರಬೇಕು.
ಬದುಕಿನ ಎಲ್ಲ ಕಷ್ಟಗಳಿಗೆ ಅತ್ತು ಹಗುರಾಗಲು ಆಪ್ತ ಹೆಗಲು ದೊರಕಿದ ಸಂದರ್ಭ. ಹೆಪ್ಪುಗಟ್ಟಿದ ದುಃಖ ಕೆನ್ನೆ ಮೇಲಿಳಿವಾಗ ನೇವರಿಸುವ ಜೀವ ಸಿಕ್ಕಿದ ಘಳಿಗೆ. ಇನ್ನಾವ ಖುಷಿಯೂ ಬೇಕಿಲ್ಲ ಅಲ್ಲವೇ? ಕಾಲೇಜು ಮುಗಿಸಿಕೊಂಡ ನೀನು, ಕೆಲಸದ ಹೊರೆ ಇಳಿಸಿಕೊಂಡ ನಾನು ಪಾರ್ಕಿನ ಒಂಟಿ ಬೆಂಚಿನ ಮೇಲೆ ಕೂತು ನಸುಗತ್ತಲಾಗುವವರೆಗೂ ತೀರದ ಮಾತುಗಳ ಹುಕಿಗೆ ಬಿದ್ದರೆ, ಆಯಾಸ ಇಷ್ಟಿಷ್ಟೇ ಕರಗಿ ಉತ್ಸಾಹ ಕಣ್ಣತುದಿಯಲ್ಲಿ ಕೇಕೆ ಹಾಕುತ್ತಿತ್ತು.
ನಾನೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರ್ಕೋತೀನಿ. ಬರುವ ಸಂಬಳ ಎಲ್ಲ ನಿನ್ನ ಕೈಗೆ ತಂದು ಕೊಡ್ತೀನಿ. ನಾವಿಬ್ಬರೂ ಸೇರಿ ಖಾಯಿಲೆ ಬಿದ್ದ ತಾಯಿಯನ್ನು ಚೆನ್ನಾಗಿ ನೋಡ್ಕೊಳ್ಳೋಣ. ತಮ್ಮನನ್ನು ನನ್ನ ಜೊತೆಗೇ ಇರಿಸ್ಕೋತೀನಿ. ಪಾಪ, ನಾನಲ್ಲದೆ ಅವನನ್ನು ಇನ್ಯಾರು ನೋಡ್ಕೋತಾರೆ? ಎಂದು ನೀನು ನನ್ನಲ್ಲಿ ಭರವಸೆಗಳನ್ನು ತುಂಬುತ್ತಿದ್ದರೆ ಹೃದಯತುಂಬಿ ಬರುತ್ತಿತ್ತು.
‘ಜೀವಕ್ಕಿಂತ ಹೆಚ್ಚು ಪ್ರೀತಿಸುವ ಶ್ರಾವಣಿಯನ್ನು ನನ್ನಿಂದ ಕಿತ್ತುಕೊಳ್ಳದಿರು’ ಎಂದು ಮನಸು ಕಾಣದ ದೇವರಲ್ಲಿ ಮೊರೆ ಯಿಡುತ್ತಿತ್ತು. ಕಷ್ಟಪಟ್ಟೋರಿಗೆ ಸುಖ ಸಿಗೋದು ಎನ್ನುವ ಮಾತು ಕೊನೆಗೂ ನಿಜವಾಗಿಬಿಟ್ಟಿತು. ದೇವತೆಯಂತ ನೀನು ನನ್ನ
ಬಾಳಿನಲ್ಲಿ ಬಲಗಾಲಿಟ್ಟು ಬಂದ ನಂತರ ತಾಯಿಯ ಮೊಗದಲ್ಲಿ ಅರಳಿನಿಂತ ದೊಡ್ಡ ನಗೆ. ತಿಂದ ನೋವುಗಳು, ಪಟ್ಟ ಕಷ್ಟಗಳು ಗುಳೆ ಹೋಗಿ ಅದ್ಯಾವ ಕಾಲವಾಯಿತೋ? ಒಂದೆರಡು ಸಲ ರಿಂಗಣಿಸಿ ಮೊಬೈಲ್ ಸುಮ್ಮನಾದ ನಂತರ ಕಣ್ಣುಗಳು ಅಪರಿಚಿತ ಸಂಖ್ಯೆಯನ್ನೊಮ್ಮೆ ನೋಡಿ, ನಿನ್ನಲ್ಲಿ ಲೀನವಾಗುತ್ತವೆ! ಹಸಿರೊಡೆದ ಮಾಮರದಲ್ಲೀಗ ಕೋಗಿಲೆಗಳ ಕಲರವ.