Saturday, 14th December 2024

ಕರಾವಳಿಯ ಗಮ್ಮತ್ತಿಗೆ ಕೊಕೆರೋಸ್ ಕುಟೀರ

ರಾಜು ಅಡಕಳ್ಳಿ

ಸಮುದ್ರದಿಂದ ಬೀಸುವ ಗಾಳಿಗೆದುರಾಗಿ, ಸಾಗರದ ನೀಲರಾಶಿಯ ಸನಿಹವೇ ತಲೆ ಎತ್ತಿರುವ ಈ ಕುಟೀರ ರಜಾ ದಿನ ಕಳೆಯಲು ಸುಂದರ ತಾಣ. ಮಳೆಗಾಲದಲ್ಲಿ ಇಲ್ಲಿ ತಂಗಿದರೆ, ವರ್ಷವೈಭವವದ ವಿಶ್ವರೂಪವನ್ನು ನೋಡಲು ಸಹ ಸಾಧ್ಯ.

ಕೊಕೆರೋಸ್ ವಿಶಿಷ್ಟ ಹೆಸರು. ಈ ರೆಸಾರ್ಟಿನ ಹೆಸರಿನಷ್ಟೇ ವೈಶಿಷ್ಟ್ಯ ಅಲ್ಲಿಯ ಸೌಲಭ್ಯ, ಆತಿಥ್ಯ. ವಾತಾವರಣವಂತೂ ವಿಹಂಗಮ. ವಿಲಾಸ ವಿಸ್ತಾರದ ಕಡಲ ಕಿನಾರೆಯಲ್ಲಿಯೇ ಕೆನಡಾ ಪೈನ್ ಸುಂದರ ಮರ ಕುಟೀರಗಳು. ಈ ಕುಟೀರಗಳ ಒಳಹೊಕ್ಕು ಇಣುಕಿದರೆ ಸಾಕು, ಹಿತ್ತಿಲಿನ ಅಂಚಲ್ಲೇ ಕಣ್ಣುಮುಚ್ಚಾಲೆಯಾಡುತ್ತಾ, ಮೈ ಮನಗಳಿಗೆ ಮುದನೀಡುವ ಹಾಲ್ನೊರೆ ಗಳ ಮೊರೆತ, ಗಾಳಿಯ ಸೆಳೆತ, ಕಲ್ಪನಾಲಾಸ್ಯವಂತೂ ಇಲ್ಲಿ ಕ್ಷಣ ಕ್ಷಣಕ್ಕೂ ಥಕಧಿಮಿತ. ಆಗಸದತ್ತ ಕಣ್ಣೆೆತ್ತಿದರೆ ಕಾಣುವಂಥ ಮನಮೋಹಕ ಮೇಘಗಳ ಚಿತ್ರಚಿತ್ತಾರ, ಸಂಜೆಯಾಯಿತೆಂದರೆ ಲಾಟೀನುಗಳ ಸಾಲುದೀಪದಂತೆ ಕಂಗೊಳಿಸುವ ಹಾಯಿದೊಣಿ
ಗಳ ಸವಾರಿ…. ಅಲ್ಲಲ್ಲಿ ಗಾಳಿಪಟದಂತೆ ಮಿಂಚಿ ಮರೆಯಾಗುವ ಬೆಳ್ಳಕ್ಕಿಗಳ ಬೆಡಗಿನ ಬಿನ್ನಾಣ.

ಗೋಳಿಬಜೆ ಅವಲಕ್ಕಿ
ಕಾಟೇಜಿನ ಜಗುಲಿಯಲ್ಲೇ ಕುಳಿತು ಬಿಸಿಬಿಸಿ ಅವಲಕ್ಕಿ, ಗೋಳಿಬಜೆ ಮೆಲ್ಲುತ್ತಾ ಪಡುವಣದಲ್ಲಿ ಸೂರ್ಯಾಸ್ತ ನೋಡುವ ಭಾಗ್ಯ. ಲಕ್ ಇದ್ದರೆ ಕಾಮನಬಿಲ್ಲೂ ಕಂಡೀತು. ಹೀಗೆ ಒಮ್ಮೆಗೇ ಹಲವು ದೃಶ್ಯಕಾವ್ಯಗಳ ದರ್ಶನದ ರಂಗಸ್ಥಳವೇ ಈ ಕೊಕೆ ರೋಸ್ ರೆಸಾರ್ಟ್. ಹಲವು ರುಚಿ ಅಭಿರುಚಿಗಳಿಗೆ ಕಾವು ಕೊಡುವಂಥ ಈ ರೆಸಾರ್ಟ್ ಕುಂದಾಪುರ ಸಮೀಪದ ಕೋಟೇಶ್ವರದ ಕೋಡಿ ಬೀಚ್‌ನಲ್ಲಿದೆ. ಅರಬ್ಬೀ ಸಮುದ್ರ ದಂಚಿನ ವಿಶಾಲ ತೆಂಗಿನ ತೋಟದಲ್ಲಿರುವ ಈ ರೆಸಾರ್ಟಿನಲ್ಲಿ ವಿಹರಿಸುವುದೇ ವಿಸ್ಮಯಕಾರಿ ಅನುಭವ. ಏಕೆಂದರೆ ಮಾಲ್ಡೀವ್ಸ್‌ನಂತೆ ಇಲ್ಲಿಯ ಕಾಟೇಜುಗಳೂ ಕಡಲಲೆಗಳು ಸಮೀಪದಲ್ಲೇ ಇರುವುದರಿಂದ ಅನುಕ್ಷಣವೂ ಭೋರ್ಗರೆತದ ಪ್ರತ್ಯಕ್ಷ ಹಿತಾನುಭವ. ಪ್ರತಿನಿತ್ಯ ಇಲ್ಲಿ ತಾಜಾ ಮೀನುಗಳು ಬಲೆಗೆ ಬೀಳುವುದರಿಂದ ರುಚಿರುಚಿ ಮೀನಿನ ಊಟೋಪಚಾರವೂ ಮತ್ತೊಂದು ಆಕರ್ಷಣೆ. 20 ಕಾಟೇಜುಗಳು ಮತ್ತು ಎರಡು ಸಭಾಂಗಣಗಳು, ವಿಶಾಲ ಹುಲ್ಲುಹಾಸಿನ ತಾಣವಾಗಿರುವುದರಿಂದ ಈ ರೆಸಾರ್ಟು ಕುಟುಂಬ ಸಮೇತರಾಗಿ ಅಥವಾ ಸ್ನೇಹಿತರೊಂದಿಗೆ ಕಾಲ ಕಳೆಯುವುದಕ್ಕೆ ಅತ್ಯಂತ ಸೂಕ್ತ. ಅಷ್ಟೇ ಅಲ್ಲ ಕಾರ್ಪೊರೇಟ್ ಕಂಪನಿಗಳಿಗೂ ತರಬೇತಿ, ಶಿಬಿರ, ಸಭೆ, ಸಮಾರಂಭ ನಡೆಸುವುದಕ್ಕೆ ಇದು ಪ್ರಶಸ್ತ ಸ್ಥಳ. (ರೆಸಾರ್ಟಿನ ಸಂಪರ್ಕ info.coqueirosbeachcottages.com)

ಯೋಗ ಶಿಬಿರ
ಪ್ರತಿ ವರ್ಷ ಇಲ್ಲಿ ಏರ್ಪಡಿಸಲಾಗುವ ಯೋಗ ಶಿಬಿರದಲ್ಲಿ ಅಮೆರಿಕ, ಕೆನಡಾ, ಪೆರು ಮುಂತಾದ ದೇಶಗಳ ನೂರಾರು ಮಂದಿ ಭಾಗವಹಿಸುತ್ತಿರುವುದು ವಿಶೇಷ. ಸೈಕ್ಲಿಂಗ್, ಸ್ವಿಮ್ಮಿಂಗ್, ಫಿಶಿಂಗ್, ಬೀಚ್ ವಾಲಿಬಾಲ್, ಕ್ರಿಕೆಟ್… ಹೀಗೆ ಹಲವು ಚಟುವಟಿಕೆಗಳಿಗೆ ಇಲ್ಲಿ ಸುವರ್ಣಾವಕಾಶ. ತೋಟದಲ್ಲೇ ಬೆಳೆದಿರುವ ತೆಂಗಿನ ಮರಗಳಿದ ಕೈಗೆಟಕುವ ಸೀಯಾಳವನ್ನೂ (ಎಳನೀರು) ಕಿತ್ತು ಕುಡಿ
ಯುವುದು ಒಂದು ಅಪರೂಪದ ಅನುಭವ.  ಈ ಕಾಟೇಜಿನ ಅಂಗಳಕ್ಕೆ ನವಿಲುಗಳು ಆಗಾಗ ಬರುತ್ತವೆ, ನರ್ತಿಸುತ್ತವೆ. ವಾಕಿಂಗ್ ನಡುವೆ ಕಾಣಸಿಗುವ ನವಿಲುಗಳ ಜತೆ ತುಂಟಾಟ ಆಡುವುದಕ್ಕೂ ಇಲ್ಲಿ ಸಾಧ್ಯ.

ಮಳೆಗಾಲದ ಸಿರಿ
ಧೋ ಎಂದು ಸುರಿಯುವ ಮಳೆಯನ್ನು ಎಂಜಾಯ್ ಮಾಡುವುದಕ್ಕೆಂದೇ ಇಲ್ಲಿಗೆ ಬರುವ ಪ್ರವಾಸಿಗರಿದ್ದಾರೆ. ಕಾರಣ ಇಲ್ಲಿಯ ಮಾಯದಂಥ ಮಳೆಯೆಂದರೆ ಮೇಘರಾಜನ ಮ್ಯಾಜಿಕ್ಕೇ ಸರಿ. ವಿಶಾಲ ಸಮುದ್ರದಿಂದ ಬೀಸಿ ಬರುವ ಮೋಡಗಳು ಹನಿಗೂಡು ತ್ತವೆ. ಮೊದಲಿಗೆ ಜಿಟಿಜಿಟಿಯಾಗಿ ಶುರುವಾಗುವ ಮಳೆ, ಕ್ಷಣಾರ್ಧದಲ್ಲಿ ಕಾರಂಜಿಯಾಗಿ, ತದನಂತರ ಆಕಾಶದ ಕೊಡದಿಂದ ನೀರು ಸುರಿದಂತೆ ಭಾಸವಾಗಿ, ನೋಡನೋಡುತ್ತಿದ್ದಂತೆ ನೀವು ನಿಂತ ನೆಲವೇ ಕಲ್ಯಾಣಿಯಂತಾಗಿಬಿಡುತ್ತದೆ. ಹಚ್ಚಹಸಿರಿನ
ವಸುಂಧರೆ ಎಲ್ಲೆಡೆ ತೊಯ್ದು ತೊಪ್ಪೆಯಾಗಿ ನಾಚಿ ನೀರಾಗುತ್ತಾಳೆ. ಇಂಥ ದೃಶ್ಯ ವೈಭವದಲ್ಲಿ ನೀರೆಯರು ಮಂಡಾಳೆ ಧರಿಸಿ ನೀರಿಗಳಿದು ಗದ್ದೆತೋಟಗಳ ಕೆಲಸಕ್ಕೆ ಮುಂದಾಗುವ ನೋಟ ಪೇಟೆ ಪಟ್ಟಣಗಳಲ್ಲಿ ಸಿಗುವುದು ಸಾಧ್ಯವೇ? ಹೀಗೆ ಹಲವು ಗತ್ತು-ಗಮ್ಮತ್ತುಗಳ ಆಗರವಾಗಿ ಕೊಕೆರೋಸ್ ನೀಲ, ನಿರ್ಮಲ ವಿಶಾಲಾಂಗಣದ ಕರಾವಳಿಗೆ ಕೈಬೀಸಿ ಕರೆಯುತ್ತೆ. ನಿಮಗೆ ಹ್ಯಾಪ್ಪಿ ಜರ್ನಿ!

ಸುಂದರ ಅನುಭವ
ಈ ರೆಸಾರ್ಟ್ ಎದುರಿನಲ್ಲಿ ಸುಂದರ ಸಮುದ್ರ ಇರುವುದು ಒಂದು ಪ್ಲಸ್ ಪಾಯಿಂಟ್. ರೆಸಾರ್ಟ್ ಮುಂಭಾಗದ ರಸ್ತೆಯಲ್ಲಿ ನಾಲ್ಕು ಕಿಮೀ ಕ್ರಮಿಸಿದರೆ, ಕೋಡಿ ಬೀಚ್, ಸೀ ವಾಕ್ ಮತ್ತು ಗಂಗೊಳ್ಳಿ ಬಂದರನ್ನು ನೋಡುವ ತಾಣ ಸಿಗುತ್ತದೆ. ಸನಿಹದ ಕೋಟೇಶ್ವರ ಪಟ್ಟಣದಲ್ಲಿರುವ ಕೋಟಿಲಿಂಗೇಶ್ವರ ದೇಗುಲ ಮತ್ತು ವಿಶಾಲ ಕೆರೆಯನ್ನು ನೋಡುವ ಅವಕಾಶವಿದೆ. ಈ ಸುತ್ತಲೂ ಸಂಚರಿಸುವಾಗ ಕಾಣಿಸುವ ಕಡಲು, ನದಿಯ ಹಿನ್ನೀರು, ತೆಂಗಿನ ಮರ, ಅಲ್ಲಲ್ಲಿ ಹರಡಿರುವ ಹಳ್ಳಿಗಳು, ಗದ್ದೆಗಳು ಎಲ್ಲವೂ ಸುಂದರ ಅನುಭವ ಒದಗಿಸುತ್ತವೆ.