Thursday, 12th December 2024

ನಕ್ಷತ್ರಗಳ ಲಕ್ಷದೀಪೋತ್ಸವ

ಚಂದ್ರಶೇಖರ ಹೆಗಡೆ

ಭಾವಪುನರುಜ್ಜೀವನ ಇವರ ಕವಿತೆಗಳ ಮುಖ್ಯ ಲಕ್ಷಣ. ಭಾವಯುಗದ ಶ್ರೇಷ್ಠ ಕವಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಬೆಳಗುತ್ತಿರುವ ನಂದಾದೀಪವೆಂದರೆ ಅದು ಡಾ. ಎನ್ಎಸ್ ಲಕ್ಷ್ಮೀನಾರಾಯಣಭಟ್ಟರು.

ಬಿಸಿಲರಾಣಿಯ ಸಖ್ಯದಲ್ಲಿ ಮಾತಿಗಿಳಿದು ಹೊರಟಿದ್ದೆ ದೇಗುಲಕ್ಕೆಂದು. ಪ್ರಾಂಗಣದಲ್ಲಿ ಕಾಲಿಟ್ಟೊಡನೆ ಮಾತುಗಳ ವರಸೆ ಬದಲಾಯಿತು. ಇದೇನು ನಿನ್ನ ಮಹಿಮೆ ರಾಣಿ? ಸಹಿಸಿಕೊಳ್ಳುವೆನೆಂದು ಬೇಗೆಗೆ ನೂಕುವುದೇ? ಎಂದು ಬಾಣಲೆಯಂತಾಗಿದ್ದ ಕಲ್ಲಿನ ಹಾಸಿನ ಮೇಲೆ ಹೆಜ್ಜೆಗಳನಿಡುತ್ತಾ, ತಾಳಲಾಗದೇ ಕೋಪವನ್ನಾವರಿಸಿಕೊಂಡು ಮುಖ ಸಿಂಡರಿಸಿಕೊಂಡು ಕೇಳಿದೆ. ಇದು
ನನ್ನ ಹಾಗೂ ಭೂದೇವಿಯ ನಡುವಿನ ಸ್ನೇಹ ಸಂಬಂಧದ ಪ್ರತಿಬಿಂಬವಷ್ಟೇ. ಹಾಗಾದರೆ ನನ್ನ ಸಖ್ಯ…? ನೀನೇ ಫಲಾನುಭವಿ…. ಸಕಲವನ್ನೂ ನನಗಾಗಿಯೇ ಧಾರೆಯೆರೆಯುತ್ತಿರುವಂತೆ ಹೇಳಿದ ಹಸಿ ಸುಳ್ಳನ್ನು ಕೇಳಿ ‘ಅಬ್ಬಾ ಈಗ ಸಮಾಧಾನವಾಯಿತು’ ಎಂದು ವ್ಯಂಗ್ಯವಾಡಿದೆ!

ಅನ್ಯ ದಾರಿ ಕಾಣದೇ ಅನಿವಾರ್ಯವಾಗಿ ಹೆಜ್ಜೆಗಳನಿಟ್ಟು ಪಾದಗಳಿಗೆ ಈ ವಸಂತದ ತಾಪವನ್ನುಣಿಸಿದೆ. ತಂಪಾದ ಶಶಿಕಳೆ ಯಿಂದ ಕಂಗೊಳಿಸುತ್ತಿದ್ದ ಪರಮಶಿವನ ದರ್ಶನದಿಂದ ಪುನೀತನಾಗಿ ಹೊರಬಂದು ವಾಹನವನ್ನೇರಿ ಹೊರಟೆ. ಬಿಸಿಲ ಕನ್ಯೆಯೂ ಬೆನ್ನು ಬಿದ್ದಳು. ಜೇಬಿನಲ್ಲಿ ಅಡಗಿ ಕುಳಿತಿದ್ದ ಮೊಬೈಲನ್ನು ಹೊರಗೆ ತೆಗೆದಿದ್ದೇ ತಡ, ಹಸಿದ ಹುಲಿಯಂತೆ ಸಂದೇಶ ಗಳನ್ನು ಬಾಚಿ ತಬ್ಬಿಕೊಳ್ಳಲಾರಂಭಿಸಿತು. ತೆರೆದು ನೋಡಿದೆ.

ಆಘಾತಕಾರಿ ಸುದ್ದಿಯೊಂದು ಬಂದೆರಗಿತು. ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು (ಎನ್.ಎಸ್.ಎಲ್.) ಇಹಲೋಕ ಪರಿತ್ಯಕ್ತರಾದರೆಂಬ ಸುದ್ದಿಯು ಭಾವಲೋಕವನ್ನು ಘಾಸಿಗೊಳಿಸಿತು. ಮನದ ಕಡಲಿನ ಮೇಲೆ ಭಾವಗಳನ್ನರಳಿಸಿ ಜಗತ್ತನ್ನೇ ಕುಣಿಸಿದ ಕವಿಯಿಂದು ಸಾವೆಂಬ ಮೌನದ ಮಾತಿಗೆ ಮರುಳಾಗಿ ಪರವಶರಾದದ್ದನ್ನು ಓದಿ ತಲ್ಲಣಗೊಂಡೆ. ಅಲ್ಲಿ ಜಾನ್ ಕೀಟ್ಸ್ ನೀರ ಮೇಲೆ ನೆನಪು ಬರೆದು ಚಿರಂತನವಾದರೆ, ಇಲ್ಲಿ ಕನ್ನಡಿಗರ ಮನದ ಸಾಗರದೊಳಗೆ ಭಾವದಲೆಗಳನ್ನು ಹರಿಸಿ, ಸದಾ ತಬ್ಬಿ ಸಂತೈಸುವ ರಹದಾರಿಯೊಂದರ ಆಚಾರ್ಯ ಪುರುಷರಾಗಿ ಡಾ.ಎನ್.ಎಸ್.ಎಲ್.ರವರು ನನಗೆ ಗೋಚರವಾಗುತ್ತಾರೆ.

ಕವಿಯೊಬ್ಬರು ಹಾಡುವಂತೆ, ಸದಾ ಕಾಲ ತಬ್ಬುವಂತೆ ಮೇಲೆ ಬಾಗಿ ನಿಂತ ಇವರ ಗೀತೆಗಳಲ್ಲಿನ ಭಾವಗಳು ನೊಂದ ಮನಸು ಗಳಿಗೆ ಆಸರೆಯನ್ನೊದಗಿಸಿವೆ. ಕೆಲವೇ ದಿನಗಳ ಹಿಂದೆ ಇವರ ಭಾವಗೀತೆಯಲ್ಲಿನ ಪಲ್ಲವಿಯ ‘ನೀ ಸಿಗದೇ ಬಾಳೊಂದು ಬಾಳೆ..’ ಎಂಬ ಸಾಲನ್ನೇ ನನ್ನ ಪ್ರಬಂಧವೊಂದರ ಶೀರ್ಷಿಕೆಯನ್ನಾಗಿ ಅಲಂಕರಿಸಿ ಕವಿವರ್ಯರನ್ನು ಆನಂದಿಸಿ ಸಂಭ್ರಮಿಸಿದ್ದ.

ಬಾನಂಗಳದಿಂದ ಮರೆಯಾದ ಚಂದಿರನಂತೆ ಮರೆಯಾಗಿರುವ ಕವಿಯನ್ನು ನೆನೆದು ಅವರದೇ ‘ನೀ ಸಿಗದೇ ಬಾಳೊಂದು ಬಾಳೆ ಕೃಷ್ಣಾ..’ ಗೀತೆಯನ್ನು ಈಗ ಮತ್ತೊಮ್ಮೆ ಹಾಡಿದರೆ ಹೊರಡುವ ಧ್ವನಿ ನಮ್ಮನ್ನು ಆರ್ದ್ರಗೊಳಿಸದೇ ಇರಲಾರದು. ಕನ್ನಡಿಗರ ಭಾವಲೋಕವೀಗ ಕಮಲವಿಲ್ಲದ ಕೆರೆ; ಚಂದಿರನಿಲ್ಲದ ರಾತ್ರಿ; ತಂಗಾಳಿಯಿಲ್ಲದ ಉರಿಯ ಇರುಳು; ಮಾತುಗಳೆಲ್ಲವೂ ಮೌನವಾಗಿ ದುಃಖದಿಂದ ಬಿಗಿದ ಕೊರಳು.

ಭಾವಕವಿವರೇಣ್ಯರಾದ ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರನ್ನು ಕಳೆದುಕೊಂಡ ನಮಗೀಗ ಯಾರು ಅರಿವರು ನಮ್ಮ
ಈ ನೋವ ಎಂದು ರಾಗಿಸಿ ತಲ್ಲಣಿಸಿ ಕೂಗುತಿದೆ ನಮ್ಮೀ ಜೀವ ಎಂದು ಕರಗುವಂತಾಗಿದೆ. ಭವದ ನಿತ್ಯ ಸಂತೆಯೊಳಗೆ ಸ್ಥಾಯೀ ಹಾಗೂ ಸಂಚಾರಿ ಭಾವಶಿಶುಗಳನ್ನು ಕಟ್ಟಿಕೊಂಡು ಅವರಾಡುವ ಹಠದ ಆಟದೊಳಗೆ ಮುಳುಗಿ, ಅವರ ಮಧ್ಯೆ ಸಂಭವಿಸುವ ಬಾಲಜಗಳಗಳನ್ನು ಬಿಡಿಸಲಾಗದೇ ಹೊರಬರಲು ಹೆಣಗಾಡುವಾಗ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೋ ನಿಲ್ಲದಾಯಿತೋ ಎಂಬ ಭಾವಕವಿಯ ಹಾಡು ನನ್ನನ್ನು ಮೇಲೆತ್ತಿ ಧ್ಯಾನದ ಪೀಠದ ಮೇಲೆ ಕುಳ್ಳಿರಿಸುವ ಸಂಜೀವಿನಿಯಾಗಿ ಒದಗಿಬರುತ್ತಿತ್ತು.

ನನ್ನೆದೆಯೊಳಗಿನ ಭಾವಶರಧಿಯುಕ್ಕಿ ಸುನಾಮಿಯನ್ನು ಸೃಷ್ಟಿಸಿದಾಗ, ಭೂತಾಕಾರದ ಭೀತಿಯನ್ನು ಹೊತ್ತು ತಂದ
ಅಲೆಗಳಿಗೆ, ಕವಿವರ್ಯ ಲಕ್ಷ್ಮೀನಾರಾಯಣರ ಭಾವಗೀತೆಗಳ ಗಾಯನ ಕೇಳಿಸಿ ಶಾಂತಗೊಳಿಸಿ ಸಮಾಧಾನ ಮಾಡಿ ನಿರಮ್ಮಳ
ನಾಗಿಬಿಡುತ್ತಿದ್ದೆ. ಅಧ್ಯಾತ್ಮದ ಶೋಧನೆಗಿಳಿದಾಗ ಇವರ ಗೀತೆಗಳು ಭಾವಸಮಾಧಿಯ ಉದ್ಯಾನವನವನ್ನು ದರ್ಶಿಸುವಂತೆ ಮಾಡಿವೆ. ಇಂತಹುದೇ ಭಾವತನ್ಮಯತೆಯನ್ನು ನಾನು ಗಾಲೀಬನ ಕವಿತೆಗಳಲ್ಲಿ ಹುಡುಕಿ ನನ್ನದಾಗಿಸಿಕೊಂಡಿದ್ದೇನೆ.
ಅಲ್ಲಿಯ ಭಾವಬಂಧ ಬೇರೆ. ಇಲ್ಲಿಯ ಪ್ರಶಾಂತ ಹೃದಯಸಮುದ್ರ ವಿಭಿನ್ನ.

ಬಾನಿನಲ್ಲಿ ಒಂಟಿ ತಾರೆ ಸೊನೆ ಸುರಿವ ಇರುಳ ಮೋರೆ ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೊ ನೀರೆ ಹೀಗೆ ಹಾಡುತ್ತಾ ಕಳೆಯಿಲ್ಲದ ಇರುಳಮೊಗದಲ್ಲಿ ಮೂಡಿದ ಒಂಟಿತಾರೆಯ ದುಃಖವೇ ನಮ್ಮ ಪಾಲಿಗೆ ಉಳಿದ ಜೀವನಮಂತ್ರ. ಇಂತಹ ಕವಿರಾಜರನ್ನು ಕಳೆದುಕೊಂಡು ಬಿಕ್ಕುವ ನೀರೆಗಿನ್ನೆಲ್ಲಿ ಸಂತಸದ ಭರವಸೆಯನ್ನು ಹೆಕ್ಕಿ ತರುವುದು ಎನ್ನುವುದೇ ಈಗ ಯಕ್ಷಪ್ರಶ್ನೆ.

ನನ್ನ ಇನಿಯನ ನೆಲೆಯ ಬಲ್ಲೆಯೇನು ಹೇಗೆ ತಿಳಿಯಲಿ ಅದನು ಬಲ್ಲೆಯೇನು ಎಂದು ಹಾಡುವ ಗೆಳತಿಯ ಇಂಪಿಗೆ ಹೇಗೆ ಕಂಪನ್ನೆರೆದು ಸಮಾಧಾನ ಹೇಳುವುದಿನ್ನು? ಇದು ಆಕೆ ಹಾಡುವ ಪ್ರಶ್ನೆಯಾಗಿ ಕಾಡುವುದಲ್ಲದೇ, ಡಾ.ಎನ್.ಎಸ್.ಎಲ್. ರವರ
ಅಮರತ್ವದ ನೆಲೆಯ ಕುರಿತಾಗಿ ನಾವು ಆಲಾಪಿಸಬಹುದಾದ ಶೋಕದ ಮಡುವಾಗಿಯೂ ಪರಿಣಮಿಸಬಲ್ಲದು.

ಭಾವಪುನರುಜ್ಜೀವನ ಇವರ ಕವಿತೆಗಳ ಮುಖ್ಯ ಲಕ್ಷಣ. ಭಾವಯುಗದ ಶ್ರೇಷ್ಠ ಕವಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಬೆಳಗುತ್ತಿರುವ ನಂದಾದೀಪವೆಂದರೆ ಅದು ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು. ಇರುವೆ ಸರಿಯುವ ಸದ್ದು ಮೊಗ್ಗು ತೆರೆಯುವ ಸದ್ದು ಮಂಜು ಸುರಿಯುವ ಸದ್ದುಗಳನ್ನು ಕೇಳುತ್ತಲೇ ಕಾವ್ಯವಾಗಿ ಪಸರಿಸಿ ನಮ್ಮೆದೆಗಳನ್ನಾಳಿದ ಕವಿಗೆ ಸದ್ದಿಲ್ಲದ ಬಿಕ್ಕಳಿಕೆಯೊಂದೇ ಸದ್ಯ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿಯೆನಿಸುತ್ತಿದೆ ನನಗೆ.

ಇಂತಹ ಭಾವಜೀವಿಯನ್ನು ಹೇಳದೇ ಕರೆದೊಯ್ದ ‘ನಿನ್ನ ನೀತಿ ಅದಾರಿಗೋ ಪ್ರೀತಿಯೋ’ ಎಂದು ಭಗವಂತನಿಗೆ ಸಲ್ಲಿಸುವ ಕವಿಯ ಗೀತೆಯಲ್ಲಿನ ಆಕ್ಷೇಪಣೆಯೊಂದೇ ನಮಗೆ ತರಬಹುದಾದ ಸಮಾಧಾನ. ಭೌತಿಕವಾಗಿ ನಮ್ಮನ್ನಗಲಿದ ಕವೀಂದ್ರರನ್ನು ನೆನೆದಾಗಯಾಕೆ ಕಾಡುತಿದೆ ಈ ರಾಗ ಸುಮ್ಮನೆ ನನ್ನನು ಎಂಬ ಅವರದೇ ಗೀತೆಯ ಸಾಲುಗಳು ಮನದ ಮೂಲೆಯಿಂದ ತೂರಿಬಂದವು. ಹಿಂದೆ ಬೆನ್ನುಬಿದ್ದಿದ್ದ ಬಿಸಿಲರಾಣಿಯೊಂದಿಗೆ ಮತ್ತೆ ಮಾತಿಗಿಳಿದೆ.

ಮಧ್ಯಾಹ್ನವು ನಿಧಾನವಾಗಿ ಜಾರಿಕೊಳ್ಳುತ್ತಿದ್ದುದರಿಂದ ಆಕೆ ಸಂಜೆಯ ಗೆಳೆಯನಾದ ತಂಗಾಳಿಯನ್ನು ಹುಡುಕಿ ಲೀನವಾಗುತ್ತಿದ್ದಳು. ಅವರ ಭಾವಗೀತೆಗಳೊಂದಿಗೆ ನಾನು ಒಡನಾಡಿದ ಮಸುಕು ನೆನಪುಗಳ ಮಳೆಯಲ್ಲಿ ಮನಸು ಒಂದೇ ಸಮನೆ ತೋಯಲಾರಂಭಿಸಿತು. ಅತ್ತ ನೆಳಲು ಬೆಳಕಿನಾಟದೊಳಗೆ ಸಿಲುಕಿ ಬಿಸಿಲ ಷೋಡಶಿ ಮಾಯವಾಗುತ್ತಿದ್ದರೆ, ಇತ್ತ ಭಾವ ಕವಿಚಂದ್ರರನ್ನು ಕುರಿತು ಅವರದೇ ಗೀತೆಯನ್ನು ಹೊತ್ತ ತಂಗಾಳಿ ಅಂತರಂಗದೊಳಗೆ ಪ್ರವೇಶಿಸಿ ಒಣಗಿದ ಕಾಷ್ಠಕ್ಕೆ ಅಗ್ನಿ ಆವರಿಸಿಕೊಳ್ಳುವಂತೆ,

ಶೋಕದ ಬೇಗೆಯು
ಮಲಗು ಮಲಗೆನ್ನ ಕವಿಯೇ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಈ ಭುವಿಗೆ
ಜೋ…ಜೋ..ಜೋ…

ಎಂದು ವ್ಯಾಪಿಸಿಬಿಟ್ಟಿತ್ತು ಕ್ಷಣಾರ್ಧದಲ್ಲಿ. ಈ ಸುದ್ದಿಯನ್ನು ಕೇಳಿದ ಸಂಜೆಯ ನೇಸರನೂ ಕೆಂಬಣ್ಣದ ಪಟ್ಟಿ ಕಟ್ಟಿಕೊಂಡು
ಪ್ರತಿಭಟನೆಗಿಳಿದಿದ್ದ. ದಂಡಿಯಾಗಿ ಬರದೇ ಅಲ್ಲೊಂದು ಇಲ್ಲೊಂದು ಮಾತ್ರ ಇಣುಕುತ್ತಿದ್ದ ತಾರೆಗಳಿಗಿನ್ನೂ ವಿಷಯ
ತಲುಪಿರಲಿಲ್ಲವೆನಿಸಿತು. ಕತ್ತಲಾವರಿಸುತ್ತಾ ಬಂತು.

ನೋಡನೋಡುತ್ತಿದ್ದಂತೆ ನಕ್ಷತ್ರಗಳ ಲಕ್ಷದೀಪೋತ್ಸವವೇ ನೆರೆದುಬಿಟ್ಟಿತು. ಇದೇ ಅಲ್ಲವೇ ಪ್ರಕೃತಿ ಭಾವಕವಿಯೊಬ್ಬರಿಗೆ
ಸಲ್ಲಿಸಬಹುದಾದ ಜ್ಯೋತಿಯ ಶ್ರದ್ಧಾಂಜಲಿ. ತಮಗೆಲ್ಲಾ ಜೀವಚೈತನ್ಯವನ್ನು ತುಂಬಿದ್ದ ಕವಿಯ ಮರಣದ ವಾರ್ತೆಯೆಂಬ
ಗಾಳಿಯ ಹೊಡೆತಕ್ಕೆ ಸಿಲುಕಿದ ಮರಗಿಡದೆಲೆಗಳು ನೆಲೆಯನ್ನು ಕಳೆದುಕೊಂಡು ನೆಲದೊಳಗೆ ತಮ್ಮಷ್ಟಕ್ಕೆ ತಾವೇ ಸಮಾಧಿ
ಯಾಗುತ್ತಿದ್ದವು ಹೇಳಹೆಸರಿಲ್ಲದ ಜೋಳದ ಪಾಳಿಯವರಂತೆ.

ತೆವಳಿದರೂ ಏನಂತೆ
ಚೆಲ್ಲದೇ ಕಂಪನ್ನು ದಾರಿಯಲ್ಲಿ

ಗಾಳಿ ಹೀಗೆ ತೆವಳುತ್ತಿತ್ತು ಹೇಳದೇ ಎದ್ದು ಹೊರಟುಹೋದ
ಕವಿಯ ವಾರ್ತೆಯನ್ನು ಆಲಿಸಿ ಭಾರವಾದ ಹೃದಯದಿಂದ,
ಅದೇ ಸೂತಕದ ಕಂಪನ್ನು ದಾರಿಯುದ್ದಕ್ಕೂ ಹರಡುತ್ತಾ.
ಮನಸು ಹಸಿಯಾಗುತ್ತಿತ್ತು. ಭಾವ ಬಿಸಿಯಾಗುತ್ತಿತ್ತು. ಮೈ
ಕಸಿವಿಸಿಗೊಳ್ಳುತ್ತಿತ್ತು. ಚಿತ್ತ ಚಿತ್ತಾರಗೊಳ್ಳುತ್ತಿತ್ತು ಹೀಗೆ,
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ….