Sunday, 15th December 2024

ಹೆಸರಿನಲ್ಲಿ ಲಕ್ಷ್ಮೀ ಸಾಧನೆಯಲ್ಲಿ ಸರಸ್ವತಿ

ಸಾಮಾನ್ಯ ಮನೆತನದಲ್ಲಿ ಹುಟ್ಟಿದ ಹೆಣ್ಣು ಮಗಳೊಬ್ಬಳು ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂಬ  ಗುರಿ ಯನ್ನಿಟ್ಟುಕೊಂಡು, ಅಸಮಾನ್ಯವಾದ ಸಾಧನೆ ಮಾಡಿ ನಗರ, ರಾಜ್ಯ, ದೇಶಗಳ ಗಡಿಗಳಾಚೆಗೂ ತನ್ನ ಕಲೆಯ ನೆಲೆಯನ್ನು ವಿಸ್ತರಿಸಿ ಕೊಂಡು, ವಿದೇಶಗಳಲ್ಲೂ ನಮ್ಮ ಸಂಸ್ಕೃತಿಯನ್ನು ಪಸರಿಸಿ, ಕಲೆಯ ಕೀರ್ತಿಪತಾಕೆಯನ್ನು ದಿಗಂತದವರೆಗೆ ವಿಸ್ತರಿಸಿ, ಸಾಧನೆಯ ಮೇರು ಶಿಖರವನ್ನೇರಿ ಬೆಳೆದು ನಿಂತಿರುವ ಪರಿ ಬೆರಗುಗೊಳಿಸುವಂತಹುದು.

ಮಣ್ಣೆ ಮೋಹನ್

ಅನೇಕ ಸಾಧಕರು ಭರತನಾಟ್ಯ ನೃತ್ಯ ಪ್ರಕಾರವನ್ನು ತಮ್ಮ ಅದ್ಭುತವಾದ ಅಭಿನಯಗಳಿಂದ ಉನ್ನತ ಸ್ತರಕ್ಕೆ ಕೊಂಡೊಯ್ದಿ ದ್ದಾರೆ. ಅವರಲ್ಲಿ ವಿದೂಷಿ ಡಾ.ಎಂ.ಎಸ್.ಶ್ರೀಲಕ್ಷ್ಮಿ ಒಬ್ಬರು. ಕೆ. ಶಾರದಾಮಣಿ ಮತ್ತು ಸತ್ಯನಾರಾಯಣ ಸಿಂಹರವರ ಪುತ್ರಿ ಯಾಗಿ 1975ರಲ್ಲಿ ಬೆಂಗಳೂರಿ ನಲ್ಲಿ ಜನಿಸಿದರು.

ಅವರ ತಂದೆ ತಾಯಿಗಳಿಬ್ಬರೂ ಸರಕಾರಿ ನೌಕರರಾಗಿದ್ದರು. ಶ್ರೀಲಕ್ಷ್ಮಿಯವರು ತನ್ನ ಮೂರನೇ ವಯಸ್ಸಿನಿಂದಲೇ ತಾಯಿ ಯೆಂಬ ಮೊದಲ ಗುರುವಿನಿಂದ ನೃತ್ಯಾಭ್ಯಾಸ ಪ್ರಾರಂಭ ಮಾಡಿದರು. ಶಾರದಾಮಣಿಯವರು ಸಹ ಒಳ್ಳೆಯ ಭರತ ನಾಟ್ಯ ಕಲಾವಿದೆಯಾಗಿದ್ದರು. ಶ್ರೀ ಕಣ್ಣನ್ ಮಾರರ್ ಮತ್ತು ಪದ್ಮಭೂಷಣ ಡಾ. ವೆಂಕಟಲಕ್ಷಮ್ಮರವರ ಬಳಿ ಗುರುಕುಲ ಪದ್ಧತಿ ಯಲ್ಲಿ ಭರತನಾಟ್ಯವನ್ನು ಕಲಿತಿದ್ದರು.

ಶ್ರೀಲಕ್ಷ್ಮಿಯವರು ಸಂಪ್ರದಾಯನುಸಾರವಾಗಿ ಬಿ. ಆರ್.ಮಂಜುಳ ಪರಮೇಶ್ ರವರ ಬಳಿ ಸೀನಿಯರ್ ನೃತ್ಯ ಪರೀಕ್ಷೆ ಮತ್ತು ರಂಗಪ್ರವೇಶವನ್ನು ಮುಗಿಸಿ, ಖ್ಯಾತ ನೃತ್ಯ ಗುರುಗಳಾದ ಶ್ರೀಮತಿ ನರ್ಮದಾರವರ ಬಳಿ ತರಬೇತಿ ಪಡೆದು, ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾರೆ. ನಂತರ ಶ್ರೀ ಕೆ.ಪಿ.ಕಿಟ್ಟಪ್ಪ ಪಿಳ್ಳೈರವರ ಬಳಿ ಭರತ ನಾಟ್ಯದಲ್ಲಿ ಹೆಚ್ಚಿನ ತರಬೇತಿ ಪಡೆದು, ಕಲಾಕ್ಷೇತ್ರದ ಪ್ರಖ್ಯಾತ ಕಮಲರಾಣಿ ರವರಲ್ಲಿ ನಟ್ಟುವಂಗದ ತರಬೇತಿ ಮುಗಿಸುತ್ತಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆರಾಧ್ಯ, ಜಯಲಕ್ಷ್ಮಿ ಮತ್ತು ವಿಜಯ ವರದರಾಜನ್‌ರ ಬಳಿ ಅನೇಕ ವರ್ಷ ಅಭ್ಯಾಸ ಮಾಡಿದರು. ಈ ನಡುವೆ ಬೆಂಗಳೂರು ಯೂನಿವರ್ಸಿಟಿಯ ಬಿ. ಎಸ್.ಸಿ ಪದವಿಯನ್ನು ಪಡೆಯುತ್ತಾರೆ. ಏಕ ವ್ಯಕ್ತಿ ಪ್ರದರ್ಶನ
ನಮ್ಮ ನಾಡಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಸಮ್ಮೇಳನ, ಪಟ್ಟದಕಲ್ಲು ಉತ್ಸವ, ಮೈಸೂರು ದಸರಾ ಉತ್ಸವ , ಹಳೇಬೀಡು ಉತ್ಸವ ಮುಂತಾದ ಪ್ರಖ್ಯಾತ ನೃತ್ಯೋತ್ಸವಗಳಲ್ಲಿ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ದ್ದಾರೆ.

ಮುಂಬೈ, ನಾಗಪುರ, ಕಾಕಿನಾಡ, ಹೈದ್ರಾಬಾದ್, ದೆಹಲಿ ಮುಂತಾದ ಕಡೆಗಳಲ್ಲಿ ನೂರಾರು ಪ್ರದರ್ಶನಗಳನ್ನು ಸಾದರಪಡಿಸಿದ್ದಾರೆ. 1997 ನಲ್ಲಿ ಶ್ರೀ ಬಿ.ಕೆ.ಅರುಣ್ ರವರ ಜತೆ ಸಾಂಸಾರಿಕ ಜೀವನ ಆರಂಭಿಸುತ್ತಾರೆ. 2000 ನೇ ಇಸವಿಯಲ್ಲಿ ನಾಟ್ಯರಂಜಿನಿ  ನೃತ್ಯ ಸಂಸ್ಥೆ ಯನ್ನು ಸ್ಥಾಪಿಸಿದರು. ಎರಡು ವರ್ಷಗಳ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯದ ತರಬೇತಿ ನೀಡಿದರು. ಆ ಮೂಲಕ ಪೌರಾಣಿಕ ಹಿನ್ನೆಲೆಯ, ಐತಿಹಾಸಿಕ ಮಹತ್ವದ ಈ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.

ಮಲೇಶಿಯಾ ಬದುಕು
2002 ರಲ್ಲಿ ಶ್ರೀಲಕ್ಷ್ಮಿಯವರ ಪತಿಗೆ ಬೆಂಗಳೂರಿನಿಂದ ಮಲೇಷಿಯಾದ ಜೊಹೋರ್ ಬಹ್ರುಗೆ ವರ್ಗಾವಣೆಯಾಗುತ್ತದೆ. ಸಂಸಾರ ಮಲೇಷಿಯಾದಲ್ಲಿ ನೆಲೆಸುತ್ತದೆ. ಅಲ್ಲಿ ಸುಮಾರು 6 ವರ್ಷಗಳ ಕಾಲ ಗೌರವ ಶಿಕ್ಷಕಿಯಾಗಿ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಾರೆ. ಸಿಂಗಪುರ ದಲ್ಲಿ ನಡೆದ ಭಾರತಮ್ ಭರತನಾಟ್ಯದ ಸ್ಪರ್ಧೆಗೆ ಶ್ರೀ ಲಕ್ಷ್ಮಿಯವರನ್ನು ಮಲೇಷಿಯದಿಂದ ಆಹ್ವಾನಿಸಿ, ತೀರ್ಪುಗಾರರನ್ನಾಗಿಸುತ್ತಾರೆ.

2008 ರಲ್ಲಿ ಪ್ರಖ್ಯಾತ ಅಂತಾರಾಷ್ಟ್ರೀಯ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾರೆ. ಅದೇ ವರ್ಷ ಅವರ ಪತಿ ಅರುಣ್‌ರವರು ಸಿಂಗಪುರದಲ್ಲ ವ್ಯವಹಾರ ಸ್ಥಾಪಿಸುತ್ತಾರೆ. ಆ ಮೂಲಕ ಅವರ ಸಂಸಾರ ಸಿಂಗಪುರಕ್ಕೆ ವರ್ಗಾವಣೆಗೊಳ್ಳುತ್ತದೆ.
ಸಿಂಗಪುರದಲ್ಲಿ ಕಲಾರಾಧನೆ ಸಿಂಗಪುರದಲ್ಲಿ ನೆಲೆಯೂರಿದ ಶ್ರೀಲಕ್ಷ್ಮಿರವರು ಅಲ್ಲಿಯೇ ತಮ್ಮ ಕಲೆಗೆ ಬೆಲೆಯನ್ನು  ಕಂಡು ಕೊಳ್ಳುತ್ತಾರೆ.

2008 ರಿಂದ ಇಲ್ಲಿಯವರೆಗೆ ಕನ್ನಡ ಸಂಘದ ಹಲವಾರು ಕಾರ್ಯಕ್ರಮಗಳಿಗೆ, ಕನ್ನಡದ ಹಾಡುಗಳಿಗೆ ನೃತ್ಯ ಸಂಯೋಜನೆ ಗಳನ್ನು ಮಾಡಿದ್ದಾರೆ. ನಾಟ್ಯರಂಜಿನಿ, ಸೆಂಟರ್ – ಡ್ಯಾನ್ಸ್ ಎಕ್ಸಲೆನ್ಸ್‌ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾಗಿ ವಿದೇಶದಲ್ಲೂ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಆರಾಧಿಸಲು ಸೌಭಾಗ್ಯ ಸಿಕ್ಕಿತು ಎಂಬುದು ಅವರ ಮನದಾಳದ ಮಾತು.

ಸಿಂಗಪುರದ ಯೂತ್ ಫೆಸ್ಟಿವಲ್‌ಗೆ ತೀರ್ಪುಗಾರರಾಗಿ ಸೇವೆ, ಸಿಂಗಪುರವನ್ನು ಕಟ್ಟಿದ ಲೀಕ್ವಾನ್ ಯೂರವರ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, 1000 ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ಕೊಟ್ಟು, ಕನ್ನಡ, ತಮಿಳು, ಮರಾಠಿ, ಆಂಗ್ಲ, ಮಲಯ, ಚೈನೀಸ್, ತೆಲುಗು, ಮಲಯಾಳಂ ಮತ್ತು ಹಲವಾರು ಭಾಷೆಗಳ 5000 ಕ್ಕೂ ಹೆಚ್ವು ಹಾಡಿಗೆ ನೃತ್ಯ ಸಂಯೋಜನೆ ಮಾಡಿ ತಮ್ಮ ಪ್ರಬುದ್ಧತೆಯನ್ನು ಸಾರಿದ್ದಾರೆ.

ನ್ಯಾಷನಲ್ ಹೆರಿಟೇಜ್ ಫೆಸ್ಟ್, ಚಿಂಗೆ ಪೆರೇಡ್, ಸಿಂಗಪುರ ಪೊಲೀಸ್ ಫೋರ್ಸ್, ಕಮ್ಯುನಿಟಿ ಸೆಂಟರ್‌ಗಳ ಸಾಂಸ್ಕೃತಿಕ ಕಾರ್ಯ ಕ್ರಮಗಳು ಸಹ ಇವರ ನೃತ್ಯ ಸಂಯೋಜನೆಯಲ್ಲಿಯೇ ಜರುಗಿವೆ. ಹಲವಾರು ಶಾಸೀಯ ನೃತ್ಯ ಪರೀಕ್ಷೆಗಳಿಗೆ ಬಾಹ್ಯ ಪರೀಕ್ಷಕಳಾಗಿ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ನಾಟ್ಯರಂಜಿನಿಯ ಕಲಾ ಕೊಡುಗೆ ಶ್ರೀ ಲಕ್ಷ್ಮಿಯವರ ಕನಸಿನ ಕೂಸಾದ ನಾಟ್ಯರಂಜಿನಿ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಅನೇಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವಾರು ಪ್ರಶಸ್ತಿಗಳನ್ನು ಪಡೆದು, ರಂಗಪ್ರವೇಶವನ್ನು ಮಾಡಿರುತ್ತಾರೆ. 3 ವರ್ಷ ದಿಂದ ನಾಟ್ಯರಂಜಿನಿ ಸಂಸ್ಥೆಯು ಸಿಂಗಪುರದ ಕನ್ನಡ ಸಂಘದ ನೆರವಿನಿಂದ, ಸಿಂಗಪುರದಲ್ಲಿ ನೆಲೆಸಿರುವ ಕನ್ನಡದ ಮ
ಕ್ಕಳಲ್ಲಿ ನಮ್ಮ ಭಾರತೀಯ ಶಾಸೀಯ ನೃತ್ಯಕಲೆಯನ್ನು ಪ್ರೋತ್ಸಾಹಿಸಲು ಸಿಂಗಾರ ನಾಟ್ಯರಂಜಿನಿ ಪುರಸ್ಕಾರವನ್ನು ಯುವ ಕಲಾವಿದರಿಗೆ ಕೊಡುತ್ತಿದ್ದಾರೆ.