Thursday, 12th December 2024

ಲಂಕೆಗೆ ಪ್ರೇಕ್ಷಕರ ಮೆಚ್ಚುಗೆ

ಗಣೇಶ ಚತುರ್ಥಿಯಂದು ತೆರೆಗೆ ಬಂದ ಲಂಕೆ, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇಪ್ಪತ್ತೈದನೆ ದಿನದತ್ತ ಮುನ್ನುಗ್ಗುತ್ತಿದೆ. ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಆರಂಭಿಸಿದ್ದ ಲಂಕೆ, ಈ ವಾರದಿಂದ ಮತ್ತಷ್ಟು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ.

ಕೋವಿಡ್ ಭಯದ ನಡುವೆಯೂ ಪ್ರೇಕ್ಷಕರು ಸಿನಿಮಾ ಮೆಚ್ಚಿದ್ದು ಲಂಕೆ ಚಿತ್ರತಂಡಕ್ಕೆ ಸಂತಸ ತಂದಿದೆ. ಕರೋನಾ ಹಿನ್ನೆಲೆಯಲ್ಲಿ ಸ್ಟಾರ್ ನಟರ ಹೈಬಜೆಟ್ ಸಿನಿಮಾಗಳು ತೆರೆಗೆ ಬರಲು ಹಿಂದೇಟು ಹಾಕಿದ್ದವು. ಆದರೂ ಈ ನಡುವೆ ಧೈರ್ಯ ಮಾಡಿದ ಲಂಕೆ, ಭರ್ಜರಿಯಾಗಿಯೇ ಬಿಡುಗಡೆಯಾಯಿತು. ಲಂಕೆ ಕೂಡ ಹೈಬಜೆಟ್ ಚಿತ್ರವಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಕೈಹಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ತೆರೆಕಂಡಿತು. ಆದರೂ ಚಿತ್ರದ ನಿರೀಕ್ಷೆ ಹುಸಿಯಾ ಗಿಲ್ಲ. ಚಿತ್ರ ತಂಡದ ನಿರೀಕ್ಷೆ ಮೀರಿ, ಲಂಕೆ ಪ್ರದರ್ಶನ ಕಾಣುತ್ತಿದೆ. ಉತ್ತಮ ಗಳಿಕೆಯನ್ನು ಮಾಡುತ್ತಿದೆ.

ಚಿತ್ರದ ನಾಯಕ ಯೋಗಿ ಚಿಕ್ಕಂದಿನಲ್ಲೇ ಕೊಲೆ ಮಾಡಿ ಜೈಲು ಸೇರಿರುತ್ತಾನೆ. ಜೈಲಿನಿಂದ ಬಂದ ಬಳಿಕವೂ ಸಮಾಜಘಾತುಕರನ್ನು ಹೆಡೆಮುರಿ ಕಟ್ಟುವುದೇ ಆತನ ಕಾಯಕವಾಗಿರುತ್ತದೆ. ಅಷ್ಟಕ್ಕೂ ಯೋಗಿ ಚಿಕ್ಕಂದಿನಲ್ಲೆ ಕೊಲೆ ಮಾಡಿದ್ದು ಯಾಕೆ ಎಂಬುದೇ ಚಿತ್ರದ ಕಥೆ. ಇನ್ನು ಫ್ಲ್ಯಾಶ್ ಬ್ಯಾಕ್‌ನಲ್ಲಿ ಸಂಚಾರಿ ವಿಜಯ್ ಪ್ರತ್ಯಕ್ಷವಾಗು ತ್ತಾರೆ. ತಾನಾಯಿತು ತನ್ನ ಪಾಡಾಯಿತು ಎಂದು ಜೀವನ ಸಾಗಿಸುತ್ತಿರುವ ಸಂಚಾರಿ ವಿಜಯ್, ತನ್ನ ತಂಟೆಗೆ ಬಂದ ದುರುಳರನ್ನು ಬಡಿದಟ್ಟು ತ್ತಾರೆ. ಸಿಂಪಲ್ ಪಾತ್ರದಲ್ಲಿ ಸಂಚಾರಿ ವಿಜಯ್ ಗಮನ ಸೆಳೆಯುತ್ತಾರೆ. ವೇಶ್ಯವಾಟಿಕೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಕಾವ್ಯಾ ಶೆಟ್ಟಿ ನೆಗಿಟಿವ್ ರೋಲ್‌ನಲ್ಲಿ ಗಮನ ಸೆಳೆಯುತ್ತಾರೆ.

ಇನ್ನು ಲೂಸ್‌ಮಾದ ಯೋಗಿ ಆಕ್ಷನ್‌ನಲ್ಲಿ ಮಿಂಚಿದ್ದಾರೆ. ಜತೆಗೆ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಕಾರ್ತಿಕ್ ಶರ್ಮಾ ಅವರ ಸಂಗೀತ ಚಿತ್ರಕ್ಕೆ
ಪೂರಕವಾಗಿದೆ. ಚಿತ್ರದ ಪ್ರತಿ ಸನ್ನಿವೇಶವೂ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ.

***

ಒಳ್ಳೆಯ ಚಿತ್ರಗಳನ್ನು ಕನ್ನಡಿಗರು ಕೈ ಹಿಡಿಯುತ್ತಾರೆ ಎಂಬುದು ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿದೆ. ಆ ಮಾತು ಇಂದು ನಿಜವಾಗಿದೆ. ನಮ್ಮ ಲಂಕೆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಗೆಲ್ಲಿಸಿಕೊಟ್ಟಿದ್ದಾರೆ. ಈ ಯಶಸ್ಸಿನಿಂದ ಮತ್ತಷ್ಟು ಚಿತ್ರಗಳನ್ನು ನಿರ್ದೇಶಿಸಲು ಪ್ರೇರಣೆ ಸಿಕ್ಕಿದೆ.
-ರಾಮ್ ಪ್ರಸಾದ್ ನಿರ್ದೇಶಕ