Thursday, 12th December 2024

ಲಂಕೆ ಬಿಡುಗಡೆಗೆ ರೆಡಿ

ಪ್ರಶಾಂತ್ ಟಿ.ಆರ್‌

ತೆರೆಯಲ್ಲಿ ಲಂಕಾ ದಹನಕ್ಕೆ ಯೋಗಿ ರೆಡಿಯಾಗಿದ್ದಾರೆ. ಲಂಕೆ ಚಿತ್ರದ ಟೈಟಲ್‌ನಲ್ಲೇ ಪಂಚಿಂಗ್ ಇದೆ. ಚಿತ್ರದ ಹೆಸರು ಹೀಗೆದೆಯಲ್ಲ, ಇದು ಪೌರಾಣಿಕ ಕಥೆಯ ಚಿತ್ರವೇ ಎಂದು ಅನ್ನಿಸಬಹುದು ಲಂಕೆಯ ಟ್ರೇಲರ್ ನೋಡಿದ ಮೇಲೆ ಇದು ಪ್ರಸ್ತುತ ಕಾಲಘಟ್ಟದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಂತ ಲಂಕೆಯಲ್ಲಿ ರಾಮ-ರಾವಣರ ಕಥೆ ಹೇಳುತ್ತಿಲ್ಲ. ಬದಲಾಗಿ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ. ಶಿಕ್ಷಣದಿಂದ ವಂಚಿತರಾದ ಯುವಕರ, ಮಹಿಳೆಯರ ವ್ಯಥೆ ಇವೆಲ್ಲವು ಚಿತ್ರದ ಕಥೆಯಲ್ಲಿದೆ. ಅದಕ್ಕಾಗಿಯೇ ಚಿತ್ರದಲ್ಲಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಅಡಿಬರಹವೂ ಇದೆ. ಲಂಕೆ ಚಿತ್ರದ ಬಗ್ಗೆ ನಿರ್ದೇಶಕ ರಾಮ್ ಪ್ರಸಾದ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ಲಂಕೆ ಶಿರ್ಷಿಕೆಯಲ್ಲೇ ಪಂಚಿಂಗ್ ಇದೆ. ಇದು ರಾಮಾಯಣದ ಕಥೆಯೇ ?
ರಾಮ್ ಪ್ರಸಾದ್ : ಇದು ರಾಮಾಯಣದ ಕಥೆಯಲ್ಲ. ಇದು ಇಂದಿನ ಕಾಲಘಟ್ಟದಲ್ಲಿಯೇ ನಡೆಯುವ ಕಥೆ. ಟೈಟಲ್‌ನಲ್ಲಿ ಪಂಚಿಂಗ್ ಇರಲಿ ಎಂದು ಈ ಶೀರ್ಷಿಕೆ ಇಟ್ಟಿದ್ದೇವೆ. ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣ ಇಂದಿಗು, ಎಂದೆಂದಿಗೂ ಪ್ರಸ್ತುತ. ಅಲ್ಲಿ ಬರುವ ಪಾತ್ರಗಳು ಇಂದಿನ ದಿನಗಳಿಗೂ
ಅನ್ವಯಿಸುತ್ತವೆ. ಅವು ರಾಮ-ರಾವಣನ ಕಥೆ ಹೇಳುತ್ತವೆ. ಅದಕ್ಕಾಗಿಯೇ ಚಿತ್ರದಲ್ಲಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಅಡಿಬರಹವಿದೆ.

ವಿ.ಸಿ: ಲಂಕೆಯ ಮೂಲಕ ಯಾವ ಸಂದೇಶ ಹೇಳಲು ಹೊರಟ್ಟಿದ್ದೀರ?
ಪ್ರಸಾದ್ : ಶಿಕ್ಷಣದ ಮಹತ್ವವನ್ನು ಸಾರುವುದೇ ಈ ಚಿತ್ರದ ಮುಖ್ಯ ಉದ್ದೇಶ. ನಾವೆಲ್ಲಾ ಆಧುನಿಕತೆಯ ಕಾಲ ಘಟ್ಟದಲ್ಲಿದ್ದರು, ಇಂದಿಗೂ ಅದೆಷ್ಟೋ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹವರು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ವಿಫಲವಾಗಿದ್ದು, ಹೊಟ್ಟೆ ಪಾಡಿಗಾಗಿ ಅಡ್ಡದಾರಿ ಹಿಡಿದಿದ್ದಾರೆ. ಇದೇ ವಿಚಾರವನ್ನು ಚಿತ್ರದಲ್ಲಿ ಹೇಳಿದ್ದೇವೆ. ಇಂತಹ ಒಳ್ಳೆಯ ಸಂದೇಶವನ್ನು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಇದರ ಜತೆಗೆ ಮಾಸ್ ಎಲಿಮೆಂಟ್ಸ್ ಕೂಡ ಸೇರಿಸಲಾಗಿದೆ.

ವಿ.ಸಿ : ಚಿತ್ರದ ಕಥೆ ಹೊಳೆದಿದ್ದು ಹೇಗೆ ?
ರಾಮ್ ಪ್ರಸಾದ್ : ವೇಶ್ಯಾವಾಟಿಕೆ ದೊಡ್ಡ ದಂಧೆಯಾಗಿದೆ. ಅದು ಯಾಕೆ ಅದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯಲು ತಡಕಾಡಿದೆ. ಅದಕ್ಕೆ
ಪೂರಕವಾದ ಕೆಲವು ಸಿನಿಮಾಗಳನ್ನು ನೋಡಿದೆ. ಅದೇ ರೀತಿಯ ಕಥೆಯನ್ನು ಹೆಣೆದು ತೆರೆಗೆ ತರಬೇಕು ಎಂದು ಕೊಂಡೆ. ಕಥೆ ಬರೆಯುತ್ತಾ ಈ ಎಲ್ಲಾ ಸಮಸ್ಯೆ ಗಳಿಗೂ ಶಿಕ್ಷಣದ ಕೊರತೆಯೇ ಕಾರಣ ಎಂದು ತಿಳಿಯಿತು. ಶಿಕ್ಷಣದ ಮಹತ್ವ ಸಾರುವ ನಿಟ್ಟಿನಲ್ಲಿ ಲಂಕೆಯ ಕಥೆ ಸಿದ್ಧವಾಯಿತು. ಅದಕ್ಕೂ ಹೆಚ್ಚಾಗಿ ಲಂಕೆ ನೈಜ ಘಟನೆಯಾಧಾರಿತ ಸಿನಿಮಾ ಎಂಬುದು ವಿಶೇಷ. ಆ ಘಟನೆ ಯಾವುದು ಎಂದು ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ.

ವಿ.ಸಿ: ಸಿನಿಮಾದ ಕಥೆಯಲ್ಲಿ ರಾಮ ಯಾರು? ರಾವಣ ಯಾರು?
ಪ್ರಸಾದ್ : ನಮ್ಮಲ್ಲಿಯೇ ರಾಮ-ರಾಣವನ ಗುಣಗಳು ಅಡಕವಾಗಿರುತ್ತವೆ. ಸಂದರ್ಭ ಬಂದಾಗ ಆ ಗುಣಗಳು ವ್ಯಕ್ತವಾಗುತ್ತವೆ. ಲಂಕೆಯಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆಗೆ ಯೋಗಿ ಜೀವವಾದರೆ, ಸಂಚಾರಿ ವಿಜಯ್ ಜೀವಾಳವಾಗಿದ್ದಾರೆ. ಯೋಗಿ ಮಾಸ್ ಲುಕ್‌ನಲ್ಲಿ ಮಿಂಚಿದರೆ, ವಿಜಯ್ ಸಿಂಪಲ್ ಆಗಿ ಕಂಗೊಳಿಸುತ್ತಾರೆ. ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಈ ಹೊತ್ತಿನಲ್ಲಿ ಅವರು ನಮ್ಮೊಂದಿಗೆ ಇಲ್ಲ ಎಂಬ ದುಃಖವಿದೆ. ನಾಯಕಿಯಾಗಿ ಕೃಷಿ ತಾಪಂಡ ಬಣ್ಣಹಚ್ಚಿದ್ದಾರೆ. ಕಥೆ ರಚಿಸುವಾಗಲೇ ಪಾತ್ರಗಳಿಗೆ ತಕ್ಕ, ಪಾತ್ರಧಾರಿ ಗಳು ಮನಸ್ಸಿನಲ್ಲಿ ಹೊಳೆಯುತ್ತಿದ್ದರು. ಅಂದುಕೊಂಡ ನಟರೇ ಚಿತ್ರದ ಪಾತ್ರಗಳನ್ನು ನಿರ್ವಹಿಸಿದರು. ಸಂಗಮ ಅರಣ್ಯ ಪ್ರದೇಶ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ.