Sunday, 24th November 2024

ಎಲ್ಲರಿಗೂ ಬೇಕಾಗಿ ಬದುಕೋಣ

ನಾಗೇಶ್ ಜೆ.ನಾಯಕ್ ಉಡಿಗೇರಿ

ಹುಟ್ಟು-ಸಾವುಗಳ ಗುಟ್ಟು ಬಲ್ಲವರಿಲ್ಲ. ಹುಟ್ಟಿದ ಪ್ರತಿ ಮನುಷ್ಯನಿಗೂ ಸಾವು ಕಟ್ಟಿಟ್ಟ ಬುತ್ತಿ. ಸಾವು ಯಾವುದೇ ರೂಪದಲ್ಲಾ ದರೂ ಬರಬಹುದು. ಬರುವ ಸಾವಿಗೆ ಬೆದರಿ ಬಾಳು ಕೊನೆಗೊಳಿಸಿಕೊಂಡವರುಂಟೆ? ಇಲ್ಲ. ನಮ್ಮ ನಮ್ಮ ಬದುಕಿನ ಋಣ ಇರುವವರೆಗೂ ಭೂಮಿಯ ಮೇಲೆ ನಾವು ಬದುಕಿರಲೇಬೇಕು. ಇರುವಷ್ಟು ದಿನ ಎಲ್ಲರಿಗೆ ಬೇಕಾಗಿ, ಎಲ್ಲರಿಗೂ ನೆರವಾಗಿ, ಕಾಲನ ಕರೆ ಬಂದೊಡನೆ ಮರು ಮಾತಾಡದೆ ತೆರಳುವುದಷ್ಟೇ ನಮ್ಮ ಕಾಯಕ. ಒಂದು ಸತ್ಯದ ಅರಿವು ಸದಾ ನಮಗಿರಲೇಬೇಕು. ಲೋಕದ ಇರುವಿಕೆ ಸ್ಥಿರವಲ್ಲ. ಇಲ್ಲಿ ನಾವು ಶಾಶ್ವತವಾಗಿ ಇರಲು ಬಂದವರಲ್ಲ.

ಮನುಷ್ಯ ಜನ್ಮ ನಮಗೆ ದೊರಕಿದ್ದೇ ಒಂದು ಸೌಭಾಗ್ಯ. ಈ ಭಾಗ್ಯದ ಫಲವನ್ನು ಇರುವಷ್ಟು ದಿನ ಅನುಭವಿಸಬೇಕು,  ಸಂಭ್ರಮಿಸ ಬೇಕು. ಅದರಲ್ಲಿಯೇ ಸಾರ್ಥಕ್ಯ ಕಾಣಬೇಕು. ದೇವನ ಮನೆಯಿದು ಈ ಜಗವೆಲ್ಲ, ಬಾಡಿಗೆದಾರರು ನಾವು-ನೀವೆಲ್ಲಾ. ಅವನು ಖಾಲಿ ಮಾಡೆಂದಾಗ ತುಟಿಪಿಟಕ್ಕೆೆನ್ನದೆ ಬಿಟ್ಟು ತೆರಳುವುದೇ ಎಲ್ಲಾ ಎನ್ನುವ ಕವಿವಾಣಿಯಂತೆ ಆಯಸ್ಸು ಮುಗಿದಾಗ ಅವನನ್ನು ಹಿಂಬಾಲಿಸುವುದಷ್ಟೇ ನಮ್ಮ ಕೆಲಸ. ತಮ್ಮ ಕಹಿ ಮಾತ್ರೆಗಳ ಮೂಲಕ ಜನಪ್ರಿಯರೆನಿಸಿಕೊಂಡ ಜೈನ ಸಂತರಾದ ತರುಣಶ್ರೀ ಮುನಿಸಾಗರಜೀ ಅವರು ಹೇಳುತ್ತಾರೆ – ಮನುಷ್ಯ ಸ್ಮಶಾನದ ಪಕ್ಕ ಮನೆ ಮಾಡಿಕೊಂಡಿರಬೇಕು. ದಿನನಿತ್ಯ ಅಲ್ಲಿಗೆ ಬರುವ ಶವ ಯಾತ್ರೆಗಳು ಅವನಿಗೆ ಜೀವನದ ಅಂತಿಮ ಸತ್ಯವನ್ನು ನೆನಪಿಸಿ ಕೊಡಬೇಕು. ಶವದ ಸಂಬಂಧಿಕರ ರೋದನ ಕಿವಿಗೆ ಬಿದ್ದಾಗ ಬದುಕಿನ ನಶ್ವರತೆ ಅವನಿಗೆ ಅರಿವಾಗಬೇಕು. ಆಗ ಅವನಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವ ಅರಿವು ಉಂಟಾಗುತ್ತದೆ. ಕ್ಷಣಿಕ ಸುಖಕ್ಕೋಸ್ಕರ ಜೀವನ ಪೂರ್ತಿ ಕೂಡಿ ಹಾಕುವ ಐಶ್ವರ್ಯದ ನಿರರ್ಥಕತೆ ಅರ್ಥವಾಗುತ್ತದೆ. ಅದಕ್ಕೆೆಂದೇ ಮುನಿಗಳು ಸ್ಮಶಾನದ ಪಕ್ಕ ಮನೆ ಕಟ್ಟಿಕೊಳ್ಳಿ ಎನ್ನುತ್ತಾರೆ.

ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೊನೆ ಗಳಿಗೆಯಲ್ಲಿ ತನ್ನ ಖಾಯಿಲೆ ವಾಸಿ ಮಾಡದ ವೈದ್ಯರಿಗೆ ತನ್ನ ಶವಪೆಟ್ಟಿಗೆ ಹೊರುವಂತೆ
ತಿಳಿಸುತ್ತಾನೆ. ತಾನು ಗಳಿಸಿದ ಮುತ್ತು ರತ್ನ, ವಜ್ರ-ವೈಢೂರ್ಯಗಳೆಲ್ಲ ನನ್ನ ಖಾಯಿಲೆಯನ್ನು ವಾಸಿ ಮಾಡಲಾಗಲೇಯಿಲ್ಲ ಎಂಬ ಕಾರಣಕ್ಕೆ ಶವಯಾತ್ರೆಯ ದಾರಿಯಲ್ಲಿ ಅವನ್ನೆಲ್ಲ ಸುರಿಯುಂತೆ ಆದೇಶಿಸುತ್ತಾನೆ. ತನ್ನನ್ನು ಸಮಾಧಿ ಮಾಡುವಾಗ ನನ್ನ ಎರಡೂ ಕೈಗಳನ್ನು ಜನರಿಗೆ ಕಾಣಿಸುವಂತೆ ಮೇಲ್ಮುಖ ಮಾಡಿ ಹೂಳಿ ಎನ್ನುತ್ತಾನೆ. ಯಾಕೆಂದರೆ ‘‘ಜಗತ್ತನ್ನೇ ಜಯಿಸಿದ ಅಲೆಕ್ಸಾಂಡರ್ ಕೊನೆಯಲ್ಲಿ ಖಾಲಿ ಕೈಯಿಂದಲೇ ನಿರ್ಗಮಿಸಿದ. ಏನನ್ನೂ ಹೊತ್ತುಕೊಂಡು ಹೋಗಲಿಲ್ಲ’’ ಎನ್ನುವ ಸತ್ಯ ಪ್ರಜೆಗಳಿಗೆ ಅರಿವಾಗಲಿ ಎಂದು. ಇಂದು ಮನುಷ್ಯ ವಾಸ್ತವತೆಯ ಅರಿವಿದ್ದೂ ಲಾಲಸಿತನಕ್ಕೆೆ ಗುರಿಯಾಗಿ ಎಲ್ಲವೂ ನನಗೆ ಬೇಕು ಎಂದು ರಾಶಿ ರಾಶಿ ಸಂಪತ್ತನ್ನು ಗುಡ್ಡೆ ಹಾಕುತ್ತಾನೆ. ಹೊಟ್ಟೆೆ-ಬಟ್ಟೆೆ ಕಟ್ಟಿಯಾದರೂ ಎಷ್ಟೋ ತಲೆಮಾರುಗಳು ಕೂತು ತಿನ್ನುವಷ್ಟು ಆಸ್ತಿ ಮಾಡಿಡುತ್ತಾನೆ. ಕೊನೆಗೆ ಏನನ್ನೂ ಅನುಭವಿಸದೆ ಅಬ್ಬೇಪಾರಿಯಂತೆ ಮರಣ ಹೊಂದುತ್ತಾನೆ.

ಬದುಕಿರುವಾಗಲೇ ಎಲ್ಲರಿಗೂ ಬೇಕಾಗಿ ಬದುಕೋಣ. ನಮ್ಮ ಕೈಲಾದಷ್ಟು ನಿರ್ಗತಿಕರಿಗೆ ಸಹಾಯ ಮಾಡೋಣ. ನಾಲ್ಕು ಒಳ್ಳೆಯ
ಮಾತಾಡೋಣ. ಬೇಂದ್ರೆ ಅವರು ಹೇಳುವಂತೆ

ಹುಸಿ ನಗುತ ಬಂದೇವ

ನಸುನಗುತ ಬಾಳೋಣ

ತುಸು ನಗುತ ತೆರಳೋಣ
ಬಡ ನೂರು ವರುಷಾನ

ಹರುಷಾದಿ ಕಳೆಯೋಣ
ಯಾಕಾರೆ ಕೆರಳೋಣ!
ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ ಎಂಬ ವಾಸ್ತವವನ್ನು ಮರೆಯದಿರೋಣ.