Thursday, 12th December 2024

ಹಳ್ಳಿಗಳನ್ನು ಬೆಳೆಸೋಣ

ಹಳ್ಳಿಗಳೆಲ್ಲಾ ನಗರೀಕರಣಕ್ಕೆ ಒಳಗಾಗುತ್ತಿವೆ. ಹಿಂದೆ ಇದ್ದ ಆತ್ಮೀಯತೆ, ಬಾಂಧವ್ಯ ಮರೆಯಾಗಿ, ಕೃತಕ ಸಂಬಂಧಗಳೇ
ಪ್ರಧಾನವಾಗುತ್ತಿವೆ. ಇದು ತಪ್ಪಲ್ಲವೆ!

ರಾಘವೇಂದ್ರ ಈ ಹೊರಬೈಲು

ಚಂದ್ರಣ್ಣ ಆ ಊರಿನ ಒಬ್ಬ ಬಡ ರೈತ. ಒಂದೆಕರೆ ಜಮೀನಿನಲ್ಲಿ ತುಂಬಾ ಕಷ್ಟ ಪಟ್ಟು ದುಡಿದು, ಬೆಳೆದು ನಿಂತ ಮಗಳನ್ನು
ಹೇಗಾದರೂ ಒಂದೊಳ್ಳೆ ಮನೆಗೆ ಕಳುಹಿಸಬೇಕೆಂದು ಆಸೆಪಟ್ಟ. ಅವನಾಸೆಯಂತೆಯೇ ಒಳ್ಳೆಯ ಸಂಬಂಧ ಸಿಕ್ಕಿ, ಮದುವೆಯ ಸಿದ್ಧತೆಗೆ ಹೊರಟ.

ತಾನು ಎಷ್ಟೇ ಕಷ್ಟಪಟ್ಟು ಸಂಪಾದಿಸಿದರೂ ಹೆಣ್ಣು ಮಗಳನ್ನು ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸಲು ಬೇಕಾದ ಹಣದ ಕೊರತೆಯಾಗತೊಡಗಿತು. ಊರಿನ ಅಕ್ಕಪಕ್ಕದ ಮನೆಯವರೆಲ್ಲ ಸೇರಿ, ಅಯ್ಯೋ ಬಡಪಾಯಿ, ಹೆಣ್ಣು ಮಗಳ ಮದುವೆ ಮಾಡಾಕ ಹೊಂಟ್ಯಾನೆ.

ಕೈಲಾಗಿದ್ದು ಸಹಾಯ ಮಾಡಾನಪ್ಪ ಅಂದುಕೊಂಡು, ತಮ್ಮ ಕೈಲಾದಷ್ಟು ಹಣವನ್ನು ಹೊಂದಿಸಿ ಕೊಟ್ಟು, ಚಂದ್ರಣ್ಣನ ಮಗಳ ಮದುವೆಗೆ ತಾವೇ ಮುಂದೆ ನಿಂತು, ಬಂಧು-ಬಳಗಕ್ಕೆಲ್ಲ ಆಮಂತ್ರಣ ಪತ್ರವನ್ನು ಹಂಚುವುದರಿಂದ ಹಿಡಿದು, ದಿನಸಿ ಸಾಮಾನು ಗಳನ್ನು, ಬಟ್ಟೆ-ಬರೆ, ಬಂಗಾರ ತರುವಲ್ಲಿ, ಮದುವೆಗೆ ಬೇಕಾದ ಧಾನ್ಯ ಹಸನು ಮಾಡುವಲ್ಲಿ, ಚಪ್ಪರಕ್ಕೆಂದು ಕಂಬ, ಎಳೆ, ಸೊಪ್ಪು, ಹೂವುಗಳನ್ನು ಹೊಂದಿಸುವಲ್ಲಿ, ಕೊನೆಗೆ ಮದುವೆ ದಿನ ಅಡುಗೆಯವರೊಂದಿಗೆ ಅಡುಗೆಯವರಾಗಿ, ಬಂದವರಿಗೆಲ್ಲ ಊಟ ಬಡಿಸಿ, ಎಂಜಲೆಲೆ ಎತ್ತುವವರೆಗೆ ಊರಿನವರ, ಅಕ್ಕಪಕ್ಕದ ಮನೆಯವರ ಪಾತ್ರವೇ ಬಹುಮುಖ್ಯವಾಗಿತ್ತು.

ಹಾಗಿದ್ದರೆ ಅವರೆಲ್ಲ ಚಂದ್ರಣ್ಣನ ಜಾತಿಯವರೋ, ಹತ್ತಿರದ ಸಂಬಂಽಕರೋ ಮಾತ್ರವೆಂದುಕೊಂಡರೆ ಆ ಊಹೆ ತಪ್ಪು. ಯಾಕೆಂದರೆ ಊರಿನ ಎಲ್ಲಾ ಜಾತಿ- ಧರ್ಮದವರೂ ಅಲ್ಲಿ ಒಂದು ಮನೆಯವರಂತೆ ಸೇರಿದ್ದರು. ಅವರಿಗೆ ಜಾತಿ-ಧರ್ಮಗಳ
ಹಂಗಿಲ್ಲ. ಚಂದ್ರಣ್ಣ ಮಾತ್ರವಲ್ಲ, ಊರಿನ ಬೇರೆ ಯಾರದೇ ಮನೆಯಾದರೂ ಇದೇ ರೀತಿ. ಆ ಊರಿನ ಬಡಪಾಯಿ ಕೆಂಪಣ್ಣ. ಎಷ್ಟೋ ವರ್ಷಗಳ ಹಿಂದೆ ಅವನ ತಾತನೋ, ಮುತ್ತಾತನೋ ಕಟ್ಟಿಸಿ, ಬಿಟ್ಟು ಹೋದ ಹುಲ್ಲು ಹೊದೆಸಿದ, ಮಣ್ಣಿನ ಮನೆಯೊಂದೇ ಅವನ ಆಸ್ತಿ.

ಅದರ ಹೊರತಾಗಿ ಅವನ ತಾತನಾಗಲೀ, ಅಪ್ಪನಾಗಲೀ ಏನೊಂದು ಇವನಿಗಾಗಿ ಉಳಿಸಿ ಹೋಗಿರಲಿಲ್ಲ, ವಿದ್ಯೆಯನ್ನೂ ಕಲಿಸಿ ಹೋಗಿರಲಿಲ್ಲ. ಕೂಲಿ ಮಾಡಿ ಬದುಕುವುದೇ ಅವರ ಬದುಕಾಗಿತ್ತು. ತನ್ನ ಜೀವನವೇನೋ ಸೂತ್ರವಿಲ್ಲದ ಗಾಳಿಪಟದಂತಾಯ್ತು, ತನಗಿರುವ ಒಬ್ಬನೇ ಮಗನಿಗೂ ಮುಂದೆ ತನ್ನದೇ ಗತಿಯಾಗುವುದು ಬೇಡವೆಂದು ತಾನು ಕೂಲಿ ಮಾಡುತ್ತಲೇ, ಮಗನನ್ನು ಓದಿಸುತ್ತಾ, ಅವನ ಏಳ್ಗೆಯಲ್ಲಿ ತನ್ನ ಏಳ್ಗೆಯನ್ನು ಕಾಣುತ್ತಿದ್ದ.

ಮಗನೂ ತಂದೆಯ ಕಷ್ಟವನ್ನರಿತು, ಚೆನ್ನಾಗಿಯೇ ಓದುತ್ತಿದ್ದ. ಓದು ಒಂದು ಹಂತಕ್ಕೆ ತಲುಪಿ, ಇನ್ನೇನು ಮಗ ಕೈಗೆ ಬಂದ ಎನ್ನುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ಅವನಿಗೆ ಆಘಾತ ಕಾದಿತ್ತು. ಊರಿಗೆ ಬಂದ ಮಗ ನದಿ ದಂಡೆಯಲ್ಲಿ ನಿಂತುಕೊಂಡಿದ್ದಾಗ, ಬಲಭಾಗಕ್ಕೆ ಜೋರಾಗಿ ಬಂದ ಒಂದು ವಾಹನ ಗುದ್ದಿ, ನದಿಗೆ ಬೀಳಿಸಿತ್ತು. ಈಜು ಕಲಿತಿರದ ಆ ಹುಡುಗ
ಭೋರ್ಗರೆಯುತ್ತಾ ಹರಿಯುತ್ತಿದ್ದ ನದಿಯ ಸೆಳವಿಗೆ ಸಿಕ್ಕಿ, ಮೇಲೆ ಬರಲಾಗದೆ, ನೀರಿನಲ್ಲಿ ಕೊಚ್ಚಿಹೋದವನು ಸಿಗಲೇಯಿಲ್ಲ.

ಇಡೀ ಊರಿನವರೆಲ್ಲ ತಮ್ಮ ಮನೆಯ, ಸ್ವಂತ ಮಗನಿಗೇ ದೊಡ್ಡ ಅನಾಹುತವಾಯಿತೆಂಬಂತೆ, ಹೃದಯಾಳದ ನೋವು ತುಂಬಿಕೊಂಡು, ಅವೆಷ್ಟೇ ಮುಖ್ಯ ಕೆಲಸಗಳಿದ್ದರೂ, ಅವುಗಳನ್ನು ಬಿಟ್ಟು ಸಾಗರೋಪಾದಿಯಲ್ಲಿ ನದಿಯಲ್ಲಿ ಕೊಚ್ಚಿಹೋದ
ಅವನ ಮಗನನ್ನು ಹುಡುಕಲು ಹೊರಟರು. ವಾರಗಟ್ಟಲೆ ಹುಡುಕಾಡಿದರು. ಕೊನೆಗೂ ಆ ಹುಡುಗ ಸಿಗಲಿಲ್ಲವೆಂಬುದೇ ದುರಂತ.

ಮರೆಯಾಗುತ್ತಿರುವ ಬಾಂಧವ್ಯ ಊರಿನ ಯಾರದೋ ಒಂದು ಮನೆಯ ಸಾವು, ಇಡೀ ಊರಿಗೇ ದುಃಖ-ಸೂತಕದ ಛಾಯೆಯನ್ನು ಮೂಡಿಸುತ್ತದೆ. ಒಂದು ಮನೆಯ ಹಬ್ಬ ಇಡೀ ಊರಿಗೇ ಸಂಭ್ರಮ-ಸಡಗರ ತರುತ್ತದೆ. ಒಂದು ಮನೆಯ ಮದುವೆ ಪ್ರತಿಯೊಬ್ಬರ
ಮನೆಯಲ್ಲೂ ತನ್ನದೇ ಮನೆಯ ಮದುವೆಯ ಗಡಿಬಿಡಿ, ತಯಾರಿಯಾಗಿರುತ್ತದೆ. ಸಂಪೂರ್ಣ ನಗರೀಕರಣವಾಗುತ್ತಿರುವ, ನಗರೀಕರಣದ ಕಡೆಗೆ ಮುಖ ಮಾಡಿರುವ ಹೆಚ್ಚಿನ ಜನತೆಯ ನಡುವೆಯೇ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕಡೆ ಇಂತಹ ಒಂದು ಅದ್ಭುತ ಸಂಬಂಧವನ್ನು ನೋಡಬಹುದು.

ಎಷ್ಟೋ ವರ್ಷಗಳಿಂದ ಅಕ್ಕಪಕ್ಕದ ಮನೆಯ ವಾಸಿಸುತ್ತಿದ್ದರೂ ಪಕ್ಕದ ಮನೆಯವರ ಹೆಸರೇ ಗೊತ್ತಿಲ್ಲದೆ ಬದುಕುತ್ತಿರುವ, ಕಣ್ಣೆದುರೇ ಅಪಘಾತವಾದರೂ ತಮಗೂ ಅಪಘಾತವಾದ ವ್ಯಕ್ತಿಗೂ ಸಂಬಂಧವಿಲ್ಲವೆಂದುಕೊಂಡು ಮುಂದೆ ಹೋಗುವ, ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿರುವವರನ್ನು ರಕ್ಷಿಸಲು ಮುಂದಾಗುವ ಬದಲು ತಮ್ಮ ಮೊಬೈಲು ಗಳಲ್ಲಿ ಅಲ್ಲಿಯ ದೃಶ್ಯವನ್ನು ಸೆರೆಹಿಡಿದು ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಯಬಿಡುವ ಮನಸ್ಥಿತಿಯಿರುವ ಅದೆಷ್ಟೋ
ಜನರಿಗೂ, ತನ್ನೂರಿನ ಹಾಗೆಯೇ ಸುತ್ತಮುತ್ತಲಿನ ಇನ್ಯಾವುದೋ ಊರಿನ ದುಃಖಕ್ಕೂ ಸ್ಪಂದಿಸುವ ಜನರ ಮನಸ್ಥಿತಿಗೂ ವ್ಯತ್ಯಾಸವನ್ನು ಕಾಣಬಹುದು.

ಸಂಬಂಧಗಳಿಗೆ, ಮಾನವೀಯತೆಗೆ ಸ್ಪಂದಿಸುವ ಮನಸ್ಥಿತಿ ಮಾತ್ರ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಎಲ್ಲರನ್ನೂ ತನ್ನವರು
ಎನ್ನುವಂತೆ ಮಾಡುತ್ತದೆ. ಇಂದಿನ ಹಳ್ಳಿಯ ಯುವಕರೆಲ್ಲ ನಗರಗಳ ವ್ಯಾಮೋಹಕ್ಕೊಳಗಾಗಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೊರಟಿರುವುದರಿಂದ ಬಹುತೇಕ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ದುರಂತ. ಸುಂದರ ಬಾಂಧವ್ಯವನ್ನು ಬೆಳೆಸುವ,
ಪರಸ್ಪರ ಸಹಕಾರ-ಸಹಾಯದಿಂದ ಬದುಕುತ್ತಿದ್ದ ಹಳ್ಳಿಯ ಮಂದಿ ನಗರಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ.

ಹಾಗೆಯೇ ಬಹುತೇಕ ಹಳ್ಳಿಗಳೂ ನಗರ ಸಂಸ್ಕೃತಿಯ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತವೆಂದರೆ ಹಳ್ಳಿಗಳ ದೇಶ ಎಂಬುವಂತಿದ್ದುದು ನಿಧಾನವಾಗಿ ನಗರಗಳ ದೇಶವಾಗಿ ಬದಲಾಗುತ್ತಿದೆ. ಜಾಗತೀಕರಣ, ನಗರೀಕರಣ, ಕೈಗಾರಿಕೀಕರಣಗಳ ಹೆಸರಿನಲ್ಲಿ ಗ್ರಾಮ ಸಂಸ್ಕೃತಿ, ಸಂಬಂಧ, ಆಚಾರ-ವಿಚಾರಗಳೆಲ್ಲವೂ ನಶಿಸಿಹೋಗುತ್ತಾ, ನಿಧಾನವಾಗಿ ಹಳ್ಳಿಗಳು ತಮ್ಮ ಅಸ್ತಿತ್ವ ವನ್ನೇ ಕಳೆದುಕೊಳ್ಳುತ್ತಿವೆ. ಹಾಗೆ ಗ್ರಾಮಗಳ ಅವನತಿ ಅನೇಕ ಸಂಸ್ಕೃತಿಗಳ ಮತ್ತು ಸಂಬಂಧಗಳ ನಾಶಕ್ಕೆ ಬುನಾದಿಯಾಗುತ್ತದೆ.

ಹಾಗಾಗಿ ಹಳ್ಳಿಗಳನ್ನು ಉಳಿಸುವ, ಗ್ರಾಮ ಸಂಸ್ಕೃತಿಯನ್ನು ಬೆಳೆಸುವ ಜರೂರತ್ತಿದೆ