Monday, 14th October 2024

ಬದುಕಿನ ಆನಂದ ಸವಿಯೋಣ

ನಾಗೇಶ್ ಜೆ.ನಾಯಕ

ಬದುಕು ಮಾಯೆಯ ಮಾಟ ಎಂದರು ಕವಿಗಳು. ಬಾಳು ನೀರ ಮೇಲಣ ಗುಳ್ಳೆ ಎಂದರು ದಾಸರು. ಸಂಸಾರ ‘‘ನಾಯಿ ತಲೀ ಮ್ಯಾಲಿನ ಬುತ್ತಿ’’ ಎಂದರು ತಿಳಿದವರು. ಹೀಗೆ ತಮ್ಮ ಅನುಭವಕ್ಕೆ ತಕ್ಕಂತೆ ಮಹಾಮಹಿಮರೆಲ್ಲ ಬದುಕಿನ ಗೂಢಾರ್ಥವನ್ನು
ತೆರೆದಿಟ್ಟಿದ್ದಾರೆ. ಆದರೂ ಬದುಕಿನ ಒಳಗುಟ್ಟುಗಳು ಯಾರಿಗೂ ಗೊತ್ತಿಲ್ಲ.

ಅದು ಅಷ್ಟು ಸುಲಭವಾಗಿ ಗುಟ್ಟು ಬಿಟ್ಟು ಕೊಡುವುದೂ ಇಲ್ಲ. ಹುಟ್ಟು- ಸಾವುಗಳ ಮಧ್ಯೆ ಬಂದು ಹೋಗುವ ನಾಲ್ಕು ದಿನ ಗಳಲ್ಲಿ ನಾವು ನೆಮ್ಮದಿಗಾಗಿ, ಸಮಾಧಾನಕ್ಕಾಗಿ, ಸಂತೃಪ್ತಿಗಾಗಿ ಹಪಹಪಿಸುತ್ತೇವೆ. ನಾವು ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಬೇಕೆಂದು ಗೊತ್ತಿದ್ದರೂ ಸಂಪತ್ತಿನ ಸಂಗ್ರಹದಲ್ಲಿ ತೊಡಗಿಕೊಳ್ಳುತ್ತೇವೆ. ಕ್ಷಣಿಕ ಮೋಹದ ಬೆನ್ನು ಬೀಳುತ್ತೇವೆ.

ಗೊತ್ತಿದ್ದೊ ಗೊತ್ತಿಲ್ಲದೆಯೋ ಇತರರಿಗೆ ನೋವು ನೀಡುತ್ತೇವೆ. ಹಾಗಿದ್ದರೆ ಬದುಕಿನ ಅಂತಿಮ ಸತ್ಯ ಏನು? ಗೊತ್ತಾಗಬೇಕೆಂದರೆ ಅದರ ಒಳಾರ್ಥಗಳನ್ನು, ಹೊಳಹುಗಳನ್ನು ಅರಿಯಬೇಕಾಗುತ್ತದೆ. ತೋಟಗಾರ ಅತ್ಯಂತ ಶೃದ್ಧೆೆಯಿಂದ ಹಲವು ಗುಲಾಬಿ ಗಿಡಗಳನ್ನು ಬೆಳೆಸುತ್ತಾನೆ. ಅದಕ್ಕಾಗಿ ಅಗೆದು ಗುಂಡಿ ತೋಡಿ, ಸಸಿ ನೆಡುತ್ತಾನೆ. ಗೊಬ್ಬರ ಹಾಕುತ್ತಾನೆ. ಕಾಲ ಕಾಲಕ್ಕೆ ನೀರುಣಿಸು ತ್ತಾನೆ. ಅರಳುವ ಗುಲಾಬಿಯ ಅಂದ ಸವಿಯಲು ಅದರಡಿಯ ಮುಳ್ಳಿನ ತಿವಿತವನ್ನೂ ಸಹಿಸುತ್ತಾನೆ. ಬೆಳಗು ಮುಂಜಾನೆ ಅರಳಿದ ಗುಲಾಬಿ ನಗುನಗುತ್ತಲೆ ಸಂಜೆಗೆ ಬಾಡಿ ಮುದುಡಿ ಹೋಗುತ್ತದೆ. ಅದರ ನಗು ಕ್ಷಣಕಾಲ ಮಾತ್ರ. ಆದರೆ ತೋಟದ ಮಾಲಿಗೆ ಕ್ಷಣ ಕಾಲವಾದರೂ ಆ ಗುಲಾಬಿಯ ನಗುವನ್ನು ಸವಿದ ಸಂತೃಪ್ತಿ ಶಾಶ್ವತವಾಗಿರುತ್ತೆ.

ನಾವಿಂದು ಇಂತಹ ಸಣ್ಣ ಪುಟ್ಟ ಖುಷಿಗಳ ಸಲುವಾಗಿಯಾದರೂ ಬದುಕಿನ ಆನಂದವನ್ನು ಸವಿಯಬೇಕಿದೆ. ಮಕ್ಕಳನ್ನು ಎಷ್ಟು ಅಕ್ಕರೆಯಿಂದ ಬೆಳೆಸುತ್ತೇವೆ ನೋಡಿ. ಅವರು ಬೆಳೆದು ದೊಡ್ಡವರಾದ ಮೇಲೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಎಂಬ ಸ್ವಾರ್ಥದಿಂದ ನಾವು ಅವರನ್ನು ಬೆಳೆಸಿರುವುದಿಲ್ಲ, ಬೆಳೆಸಬಾರದು. ಅವರು ಬಾಲ್ಯದಲ್ಲಿ ನಮಗೆ ಕೊಡುವ ಖುಷಿ, ತೊದಲು ನುಡಿ, ಹಿತಸ್ಪರ್ಶ, ಅವಲಂಬನೆ ನೂರು ಜನ್ಮಕ್ಕಾಗುವಷ್ಟು. ಹಾಗೆಂದ ಬಳಿಕ ನಾವೇ ಅವರಿಂದ ಪಡೆದಂತಾಯ್ತಲ್ಲವೇ? ಮಕ್ಕಳ
ಜೊತೆ ಬೆರೆತು ಆಡಿದ, ನಲಿದಾಡಿದ, ಇನ್ನೆೆಂದೂ ಮರಳಿ ಬಾರದ ದಿನಗಳ ಬೆಚ್ಚನೆಯ ನೆನಪಿನ ವಾರಸುದಾರರಲ್ಲವೇ ನಾವು. ಬದುಕಿಡೀ ಸಂತೃಪ್ತಿಯಿಂದಿರಲಿಕ್ಕೆ ಇಷ್ಟು ಸಾಕು ಎಂಬುದು ನನ್ನ ಭಾವನೆ. ಬದುಕಿನ ಬಲ ಹೆಚ್ಚಿಸುವಲ್ಲಿ ಇಂತಹ ಬೆಲೆ ಕಟ್ಟದ ಪ್ರಾಮಾಣಿಕ ಸಂತೃಪ್ತಿ ಬೇಕು.

ಸಂಜೆಗೆ ತಾನು ಸಾಯುತ್ತೇನೆ ಎಂದು ಕುಸುಮಕ್ಕೆ ಗೊತ್ತಿದ್ದರೂ, ನಗುವುದನ್ನು ಮರೆಯುವುದಿಲ್ಲ. ದೀಪ ಆರಿ ಹೋಗುವೆನೆಂಬ ಅರಿವಿದ್ದರೂ, ಬೆಳಗುವುದನ್ನು ನಿಲ್ಲಿಸುವುದಿಲ್ಲ. ಕಬ್ಬು ಗಾಣದಲ್ಲಿ ಸಿಕ್ಕು ನರಳಿದರೂ, ಅದು ನೀಡುವ ಸಿಹಿ ಕೊಂಚವೂ ಕಡಿಮೆ ಯಾಗುವುದಿಲ್ಲ. ಪ್ರತಿಫಲ ಬಯಸದ ದುಡಿಮೆ ನಮ್ಮದಾಗಿರಲಿ. ಅದು ಇತರರಿಗೂ ಮಾದರಿಯಾಗುತ್ತದೆ.